ಧಾರವಾಡ: ಇಲ್ಲಿಯ ರೋವರ್ಸ್ ಬಾಸ್ಕೆಟ್ ಬಾಲ್ ಕ್ಲಬ್ ಹಾಗೂ ಕರ್ನಾಟಕ ರಾಜ್ಯ ಬಾಸ್ಕೆಟ್ ಬಾಲ್ ಅಸೋಸಿಯೇಶನ್ ಜಂಟಿಯಾಗಿ ಫೆ. 8ರಿಂದ 11ರ ವರೆಗೆ ರಾಜ್ಯಮಟ್ಟದ ಪುರುಷ ಹಾಗೂ ಮಹಿಳಾ ಆಹ್ವಾನಿತ ಹೊನಲು ಬೆಳಕಿನ ಬಾಸ್ಕೆಟ್ ಬಾಲ್ ಟೂರ್ನಿ ಆಯೋಜಿಸಿವೆ.
ರೋವರ್ಸ್ ಬಾಸ್ಕೆಟ್ ಬಾಲ್ ಕ್ಲಬ್ ಅಧ್ಯಕ್ಷ ರಾಮ ದಾಸಣ್ಣವರ, ಮಹಾಪೋಷಕ ಮಹೇಶ ಶೆಟ್ಟಿ ಮತ್ತು ಉಪಾಧ್ಯಕ್ಷ ವಿಜಯ ಬಳ್ಳಾರಿ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಇಲ್ಲಿಯ ಡಿ.ಸಿ. ಕಾಂಪೌಂಡ್‌ನಲ್ಲಿ ಇರುವ ರೋವರ್ಸ್ ಬಾಸ್ಕೆಟ್ ಬಾಲ್ ಮೈದಾನ ಹಾಗೂ ಮಲ್ಲಸಜ್ಜನ ವ್ಯಾಯಾಮ ಶಾಲೆಯ ಬಾಸ್ಕೆಟ್ ಬಾಲ್ ಮೈದಾನದಲ್ಲಿ ಲೀಗ್ ಕಂ ನಾಕೌಟ್ ಪಂದ್ಯಾವಳಿ ನಡೆಯಲಿದ್ದು, ಫೆ. 8ರಂದು ಬೆಳಗ್ಗೆ 10ಕ್ಕೆ ಹು-ಧಾ ಮಹಾನಗರ ಪಾಲಿಕೆಯ ಮೇಯರ್ ವೀಣಾ ಬರದ್ವಾಡ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಕಲಾಭವನದಿಂದ ಎಲ್ಲ ತಂಡಗಳ ಕ್ರೀಡಾಪಟುಗಳ ಮೆರವಣಿಗೆ ನಡೆಯಲಿದೆ ಎಂದರು.
ಪಂದ್ಯಾವಳಿಯಲ್ಲಿ ರಾಜ್ಯದ ಶ್ರೇಷ್ಠ 24 ಪುರುಷ ಮತ್ತು ಎಂಟು ಮಹಿಳಾ ತಂಡಗಳು ಭಾಗವಹಿಸಲಿವೆ. ಈ ಎಲ್ಲ ಕ್ರೀಡಾಪಟುಗಳಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಪಂದ್ಯಾವಳಿಯಲ್ಲಿ ವಿಜೇತ ಪುರುಷ ತಂಡಕ್ಕೆ ಟ್ರೋಫಿ ಜೊತೆಗೆ ₹50 ಸಾವಿರ ನಗದು ಬಹುಮಾನ, ರನ್ನರ್ ಅಪ್ ತಂಡಕ್ಕೆ ₹35 ಸಾವಿರ ನಗದು ಬಹುಮಾನ ಹಾಗೂ ಮಹಿಳಾ ವಿಜೇತ ತಂಡಕ್ಕೆ ₹40 ಸಾವಿರ ನಗದು ಬಹುಮಾನ ಮತ್ತು ರನ್ನರ್ ಅಪ್ ಗೆ ₹25 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಕ್ಲಬ್ ಪದಾಧಿಕಾರಿಗಳಾದ ಶ್ರೀಕಾಂತ ಕಂಚಿಬೈಲ್, ಹರ್ಷಕುಮಾರ ತುರಮರಿ, ರಾಜೇಂದ್ರ ಜಂಬಗಿ, ವೇಣುಗೋಪಾಲ ಉಡುಪಿ, ಶಿವಯೋಗಿ ಅಮಿನಗಡ, ಅಶೋಕ ಕಂಚಿಬೈಲ್, ರಾಮ ನಾಯಕ, ನವೀನ ಶಿರಹಟ್ಟಿ, ಶಿವಯೋಗಿ ಬಳ್ಳಾರಿ, ಗುರುರಾಜ ಪುರಾಣಿಕ, ಅಶ್ವತ್ಥಾಮ ಕುಬಾಳ, ತೇಜಸ್ ಪೂಜಾರ, ಮಹಾಂತೇಶ ಬೆಲ್ಲದ, ವೈಷ್ಣವಿ ಚಿಂತಾಮಣಿ, ಕುಮಾರ ಚಿನಿವಾಲ ಇದ್ದರು.