ಸಹಕಾರಿ ಸಂಘಗಳಲ್ಲಿ ಮಹಿಳೆಯರು ತೊಡಗಿಸಿಕೊಳ್ಳಿ: ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಿ.ವೆಂಕಟೇಗೌಡ

KannadaprabhaNewsNetwork | Published : Nov 20, 2024 12:34 AM

ಸಾರಾಂಶ

ಸಹಕಾರ ಸಂಸ್ಥೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಿ. ವೆಂಕಟೇಗೌಡ ಕರೆ ನೀಡಿದರು. ತುಮಕೂರಿನಲ್ಲಿ ನಡೆದ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ 6ನೇ ದಿನದ ಸಹಕಾರ ಸಪ್ತಾಹದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಸಹಕಾರ ಸಂಸ್ಥೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಿ. ವೆಂಕಟೇಗೌಡ ಕರೆ ನೀಡಿದರು.

ನಗರದ ಎಂಜಿ ರಸ್ತೆಯಲ್ಲಿರುವ ಮಹಿಳಾ ಸಮಾಜದ ಜ್ಞಾನಧಾರ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ತುಮಕೂರು ಸಹಕಾರಿ ಹಾಲು ಒಕ್ಕೂಟ, ಸಹಕಾರ ಇಲಾಖೆ ಹಾಗೂ ಜಿಲ್ಲೆಯ ಎಲ್ಲಾ ಮಹಿಳಾ ಸಹಕಾರ ಸಂಘ ಸಂಸ್ಥೆಗಳ ಸಹಯೋಗದಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ 6ನೇ ದಿನದ ಸಹಕಾರ ಸಪ್ತಾಹದಲ್ಲಿ ಹಮ್ಮಿಕೊಂಡಿದ್ದ ಮಹಿಳೆಯರು, ಯುವಕರು ಮತ್ತು ಅಬಲ ವರ್ಗಗಳಿಗಾಗಿ ಸಹಕಾರ ಸಂಸ್ಥೆಗಳ ಎಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ಶೇ. 70 ರಿಂದ 80 ರಷ್ಟು ಮಹಿಳೆಯರು ಶಾಸಕರಾಗುವ ಸಾಧ್ಯತೆಗಳಿವೆ. ಹಾಗಾಗಿ ಈಗಿನಿಂದಲೇ ಮಹಿಳೆಯರು ಸಹಕಾರ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಆರ್ಥಿಕ ಮಟ್ಟವನ್ನು ಮತ್ತಷ್ಟು ಸದೃಢತೆಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಹಕಾರ ಸಂಘಗಳ ನಡುವೆ ಸಹಕಾರದಿಂದ ಒಗ್ಗೂಡಿದಾಗ ಮಾತ್ರ ಸಹಕಾರ ಕ್ಷೇತ್ರವನ್ನು ಬಲಪಡಿಸಲು ಸಾಧ್ಯವಾಗುತ್ತದೆ. ಸಹಕಾರಿ ಸಂಸ್ಥೆಗಳು ಮುಖ್ಯವಾಗಿ ಸೇವೆಗಳ ಜತೆಗೆ ಉದ್ಯೋಗಾವಕಾಶ ನೀಡುವ ಮೂಲಕ ಗಮನ ಸೆಳೆಯುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರಿ ಸಂಘಗಳು ವಿಶೇಷವಾಗಿ ಕೃಷಿ, ಹೈನುಗಾರಿಕೆ ಮತ್ತು ಕರಕುಶಲ ಕಲೆಗಳಲ್ಲಿ, ಸಣ್ಣ ಉತ್ಪಾದಕರು, ಸಣ್ಣ ಹಿಡುವಳಿದಾರರ ಕೆಲಸವನ್ನು ಹೆಚ್ಚಿಸಲು ಮತ್ತು ದೊಡ್ಡ ಮಾರುಕಟ್ಟೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತಿವೆ ಎಂದರು.

ಸಹಕಾರ ಸಪ್ತಾಹದ 6ನೇ ದಿನದ ಕಾರ್ಯಕ್ರಮವನ್ನು ಮಹಿಳಾ ಸಹಕಾರ ಸಂಘಗಳಿಗಾಗಿ ನಡೆಸಲಾಗಿದೆ. ಇದು ಅಖಿಲ ಭಾರತ ಮಟ್ಟದಲ್ಲಿ ನಡೆಯುತ್ತಿರುವ ಸಪ್ತಾಹ ಕಾರ್ಯಕ್ರಮ ಆಗಿದೆ ಎಂದರು.

ಜಿಲ್ಲೆಯ ಎಲ್ಲಾ ತಾಲ್ಲೂಕು ಮಟ್ಟದಲ್ಲೂ ಸಪ್ತಾಹ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಸಪ್ತಾಹ ಕಾರ್ಯಕ್ರಮದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದ ಅವರು ಹೇಳಿದರು.

ಜಿಲ್ಲೆಯಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣನವರ ನೇತೃತ್ವದಲ್ಲಿ ಸಹಕಾರ ಸಂಸ್ಥೆಗಳು ಹೆಚ್ಚಿನ ಗುಣಮಟ್ಟದ ಸೇವೆಯೊಂದಿಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಸಹಕಾರ ಸಂಸ್ಥೆಗಳಲ್ಲಿ ರೈತರಿಗೆ, ಮಹಿಳೆಯರಿಗೆ ಹಲವು ಸೌಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಜಿಲ್ಲೆಯ 13 ಮಂದಿಗೆ ಸಹಕಾರಿ ರತ್ನ ಪ್ರಶಸ್ತಿ ಸಂದಿದೆ. ನ. 29 ರಂದು ಡಾ. ಹೆಚ್.ಎಂ. ಗಂಗಾಧರಯ್ಯ ಆಡಿಟೋರಿಯಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಚಿವರು ಸಹಕಾರ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಿದ್ದಾರೆ ಎಂದು ತಿಳಿಸಿದರು.

ಸಮಾರಂಭ ಉದ್ಘಾಟಿಸಿದ ಇಂದಿರಾ ಮಹಿಳಾ ಕೈ.ಪ.ಬ.ಸ.ಸಂ.ನಿ. ಮಾಜಿ ಅಧ್ಯಕ್ಷೆ ಹಾಗೂ ಹಾಲಿ ನಿರ್ದೇಶಕಿ ಟಿ.ಎನ್. ಶೀಲವತಿ ಮಾತನಾಡಿ, ರಾಜ್ಯದಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ನಡೆಯುತ್ತಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ಸಪ್ತಾಹದಲ್ಲಿ ಪಾಲ್ಗೊಳ್ಳಬೇಕು. ಜತೆಗೆ ಸಹಕಾರಿ ಸಂಸ್ಥೆಗಳಲ್ಲೂ ಮಹಿಳೆಯರು ತೊಡಗಿಸಿಕೊಂಡು ತಮ್ಮ ಆರ್ಥಿಕ ಸಬಲತೆಯನ್ನು ಕಂಡುಕೊಳ್ಳಬಹುದಾಗಿದೆ ಎಂದರು.

ಮುಂದಿನ ವರ್ಷ ನಡೆಯುವ ಸಹಕಾರ ಸಪ್ತಾಹದಲ್ಲಿ ಮಹಿಳಾ ಸಹಕಾರ ಸಂಘಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಬೆಂಬಲವನ್ನು ವ್ಯಕ್ತಪಡಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಹಕಾರ ಯೂನಿಯನ್ ಸಿಇಒ ಮಹಾಂತೇಶ ಹಿರೇಮಠ ಅವರು, ನ. 14 ರಿಂದ 20ರ ವರೆಗೆ ರಾಜ್ಯಾದ್ಯಂತ ಅರ್ಥಪೂರ್ಣವಾಗಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಅರ್ಥಪೂರ್ಣವಾಗಿ ನಡೆಸಲಾಗುತ್ತಿದೆ. ಜಿಲ್ಲಾ ಸಹಕಾರ ಯೂನಿಯನ್ ಸಹ ಸಹಕಾರ ಸಪ್ತಾಹ ಯಶಸ್ವಿಗೆ ಶ್ರಮವಹಿಸಿ ಕೆಲಸ ಮಾಡುತ್ತಿದೆ. ಹಾಗೆಯೇ ಸರ್ಕಾರ ಮತ್ತು ಸಹಕಾರ ಇಲಾಖೆ, ಸಹಕಾರ ಸಂಸ್ಥೆಗಳು ಅಗತ್ಯ ಬೆಂಬಲ, ಪ್ರೋತ್ಸಾಹ ನೀಡಿದೆ ಎಂದರು.

ಈ ಸಂದರ್ಭದಲ್ಲಿ ಟಿ.ಎನ್. ಆಶಾಕಿರಣ್, ಡಾ. ರಾಜೇಶ್ವರಿ ಚಂದ್ರಶೇಖರ್, ನರಸಮ್ಮ ಕವನಯ್ಯ, ಸುನೀತಾ ನಟರಾಜ್, ಉಮಾದೇವಿ ಡಿ.ಎಲ್., ಶಕುಂತಲಾ ದಾಸಪ್ಪ, ಪಿ.ಕೆ.ಉಮಾದೇವಿ, ಜಿಲ್ಲಾ ಯೂನಿಯನ್ ವ್ಯವಸ್ಥಾಪಕ ಎಂ.ಎಲ್. ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.

Share this article