ಐಆರ್‌ಬಿ ಚತುಷ್ಪಥ ರಸ್ತೆ ಕಾಮಗಾರಿ ಅವಾಂತರ

KannadaprabhaNewsNetwork |  
Published : Jun 21, 2025, 12:49 AM IST
ಪೆದ್ರು ಪೊವೆಡಾ ವಿಶೇಷ ಶಾಲೆ ಎದುರು ಐಆರ್‌ಬಿ ಕಾಮಗಾರಿ ವಿಳಂಬ ಆಗಿರುವುದು. | Kannada Prabha

ಸಾರಾಂಶ

ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಐಆರ್‌ಬಿ ಕಂಪನಿ ಕಲ್ಲು, ಮಣ್ಣು ಸುರಿದು ರಸ್ತೆ ಅಗಲೀಕರಣ ಮಾಡಿತ್ತು.

ಹೊನ್ನಾವರ: ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಶ್ರೀದೇವಿ ಆಸ್ಪತ್ರೆ ಎದುರಿನ ಚತುಷ್ಪಥ ರಸ್ತೆ ಕಾಮಗಾರಿಯ ಅವಾಂತರದಿಂದ ಪೆದ್ರು ಪೊವೆಡಾ ವಿಶೇಷ ಶಾಲೆಗೆ ಅಪಾಯ ಎದುರಾಗಿದೆ.

ಪಟ್ಟಣದ ಶರಾವತಿ ಸರ್ಕಲ್ ಹತ್ತಿರವಿರುವ ಪೆದ್ರು ಪೊವೆಡಾ ವಿಶೇಷ ಶಾಲೆ ಎದುರು ಐಆರ್‌ಬಿ ಕಾಮಗಾರಿ ವೇಗ ಪಡೆಯದ ಹಿನ್ನೆಲೆಯಲ್ಲಿ ಶಾಲೆಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೋಗಿ ಬರುವುದು ಕಷ್ಟ ಎನ್ನುವಂತಾಗಿದೆ. ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಐಆರ್‌ಬಿ ಕಂಪನಿ ಕಲ್ಲು, ಮಣ್ಣು ಸುರಿದು ರಸ್ತೆ ಅಗಲೀಕರಣ ಮಾಡಿತ್ತು. ಕೆಲವೆಡೆ ಶಿಲೆ ಕಲ್ಲುಗಳಿಂದ ರಸ್ತೆ ಪಿಚ್ಚಿಂಗ್ ನಿರ್ಮಿಸಿದರೆ, ಇನ್ನು ಕೆಲವೆಡೆ ಕೆಂಪು ಬಂಡೆಕಲ್ಲುಗಳಿಂದ ಪಿಚ್ಚಿಂಗ್ ನಿರ್ಮಿಸಿದ್ದಾರೆ. ಇದು ಕೂಡ ಸಮರ್ಪಕ ರೀತಿಯಲ್ಲಿ ಕಾರ್ಯ ನಡೆಸದೇ ಇರುವ ಕಾರಣ ಈಗಾಗಲೇ ಕೆಲವು ಕಲ್ಲುಗಳು ಪಿಚ್ಚಿಂಗ್‌ನಿಂದ ಹೊರಬಿದ್ದು ರಸ್ತೆ ಪಕ್ಕದ ಮನೆಯ ತೋಟದಲ್ಲಿ ಬಿದ್ದಿದೆ. ಪೆದ್ರು ಪೊವೆಡಾ ವಿಶೇಷ ಶಾಲೆಗೆ ತೆರಳುವ ಕಾಲುಹಾದಿಯ ಮಾರ್ಗವು ಧಾರಾಕಾರ ಮಳೆನೀರಿನಿಂದ ಕಾಲುಹಾದಿಯ ಮಣ್ಣು ಕೊಚ್ಚಿ ಹೋಗಿದೆ. ಅಲ್ಲಲ್ಲಿ ತಗ್ಗು, ಕಂದಕ ನಿರ್ಮಾಣವಾಗಿದೆ. ಪರಿಣಾಮ ವಿಶೇಷ ಶಾಲೆಗೆ ತೆರಳುವ ಮಕ್ಕಳಿಗೂ ಸಮಸ್ಯೆ ಆಗಲಿದೆ. ಶಾಲೆಯ ಜಾರುಬಂಡಿ, ಆಟದ ಮೈದಾನ, ಕಂಪೌಂಡ್‌ಗೂ ಹಾನಿಯಾಗಿದೆ. ಮುಂದಿನ ದಿನಗಳಲ್ಲಿ ಧಾರಾಕಾರ ಮಳೆ ಮುಂದುವರೆದು ರಸ್ತೆಗೆ ಹಾಕಿದ ಮಣ್ಣು ಆಕಸ್ಮಿಕವಾಗಿ ಕುಸಿತ ಕಂಡಲ್ಲಿ ಶಾಲೆಗೆ ಹೆಚ್ಚಿನ ನಷ್ಟ ಆಗುವ ಸಾಧ್ಯತೆ ಇದೆ.

ಪೆದ್ರು ಪೊವೆಡಾ ವಿಶೇಷ ಶಾಲೆಯ ಪ್ರಾಂಶುಪಾಲರಾದ ಫ್ಲಾವಿಯಾ ಗೊನ್ಸಾಲ್ವಿಸ್ ಈ ಬಗ್ಗೆ ಮಾತನಾಡಿ, ಕಳೆದ 39 ವರ್ಷಗಳಿಂದ ಶಾಲೆಯನ್ನು ನಡೆಸಿಕೊಂಡು ಬರಲಾಗಿದೆ. ರಸ್ತೆ ಅಗಲೀಕರಣ ಕಾರಣದಿಂದ ಶಾಲಾ ಮೈದಾನ ಹಾಳಾಗಿದೆ. ಈ ಹಿಂದೆ ಕಾಲು ದಾರಿ ನಿರ್ಮಿಸಲಾಗಿತ್ತು. ಧಾರಾಕಾರ ಮಳೆಯ ಕಾರಣ ಈ ಕಾಲುದಾರಿ ಕೊಚ್ಚಿ ಹೋಗಿ, ಶಾಲಾ ಕಂಪೌಂಡ್ ಕುಸಿದಿದೆ. ರಸ್ತೆಯ ಮಣ್ಣು ಶಾಲಾ ಆವರಣದಲ್ಲಿ ತುಂಬಿ ತೀರಾ ಅನಾನುಕೂಲವಾಗಿದೆ. ಸಾರ್ವಜನಿಕರ ಓಡಾಟಕ್ಕೂ ಕಷ್ಟಕರವಾಗಿದೆ. ಶಾಲಾ ಕಟ್ಟಡಕ್ಕೂ ಹಾನಿ ಆಗುವ ಸಂಭವ ಎದುರಾಗಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳಲು ಶಾಸಕ ದಿನಕರ ಶೆಟ್ಟಿ ಅವರಲ್ಲಿ ಮನವಿ ಮಾಡಲಾಗಿದ್ದು, ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ತಾಲೂಕಿನಲ್ಲಿರುವ ವಿಶೇಷ ಚೇತನರ ಶಾಲೆಗೆ ಸಮಸ್ಯೆ ಆಗಿರುವುದು ಸ್ಥಳೀಯ ಜನರ ಬೇಸರಕ್ಕೆ ಕಾರಣವಾಗಿದೆ. ವಿಶೇಷ ಚೇತನರನ್ನು ಅತ್ಯಂತ ಚೆನ್ನಾಗಿ ನೋಡುಕೊಂಡು ಅವರ ಆರೈಕೆ ಮಾಡುವ ಇಂತಹ ಶಾಲೆಗೆ ತೊಂದರೆ ಆಗಬಾರದು ಎಂದು ಪಟ್ಟಣದ‌ ಸ್ಥಳೀಯರು ಹೇಳಿಕೊಳ್ಳುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು, ಐಆರ್‌ಬಿಯವರು ಈ ಶಾಲೆಗೆ ಹೋಗಲು ಸರಿಯಾದ ರಸ್ತೆಯನ್ನು ನಿರ್ಮಾಣ ಮಾಡಿಕೊಡಬೇಕಿದೆ.

ಈಗ ಮಳೆ ಬೀಳುತ್ತಿರುವುದರಿಂದ ಕೆಲಸ ನಡೆಸಲು ಕಷ್ಟವಾಗಿದೆ‌. ಮಳೆ ಪ್ರಮಾಣ ಕಡಿಮೆಯಾದರೆ ಜುಲೈ ಅಥವಾ ಆಗಸ್ಟ್ ಒಳಗೆ ಕೆಲಸ ಮುಗಿಸುತ್ತೇವೆ ಎನ್ನುತ್ತಾರೆ ಐಆರ್‌ಬಿ ಅಧಿಕಾರಿ ದಯಾನಂದ್.

PREV

Recommended Stories

ಸರ್ಕಾರಿ ನೌಕರರ ಸೊಸೈಟಿಗೆ 50.58 ಲಕ್ಷ ಲಾಭ
ಡಿಸಿಸಿ ಬ್ಯಾಂಕ್‌ಗೆ ಅಣ್ಣಾಸಾಹೇಬ್ ಜೊಲ್ಲೆ ಆಯ್ಕೆ ನಿಶ್ಚಿತ