ಮೂಡುಬಿದಿರೆ ಆಳ್ವಾಸ್ ಕಾಲೇಜು (ಸ್ವಾಯತ್ತ) ವತಿಯಿಂದ 2025-26 ನೇ ಸಾಲಿನ ಪದವಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ ‘ಅಂಕುರ’ ಆಳ್ವಾಸ್ ನ ಕೃಷಿಸಿರಿ ವೇದಿಕೆಯಲ್ಲಿ ನಡೆಯಿತು.
ಮೂಡುಬಿದಿರೆ: ‘ಅಂಕುರ’ ಆಳ್ವಾಸ್ ಪದವಿ ಕಾಲೇಜಿನ ಪ್ರಾರಂಭೋತ್ಸವ
ಕನ್ನಡಪ್ರಭ ವಾರ್ತೆ ಮೂಡುಬಿದಿರೆಆಳ್ವಾಸ್ ಕಾಲೇಜು (ಸ್ವಾಯತ್ತ) ವತಿಯಿಂದ 2025-26 ನೇ ಸಾಲಿನ ಪದವಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ ‘ಅಂಕುರ’ ಆಳ್ವಾಸ್ ನ ಕೃಷಿಸಿರಿ ವೇದಿಕೆಯಲ್ಲಿ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ , ಶಿಕ್ಷಣ ಸಂಸ್ಥೆಗಳು ಬಹುಮಹಡಿ ಕಟ್ಟಡಗಳಿದ್ದ ಮಾತ್ರಕ್ಕೇ ಶ್ರೇಷ್ಠವೆನಿಸಿಕೊಳ್ಳಲಾರವು. ಆ ಕಟ್ಟಡಗಳಿಗೆ ಜೀವಕಳೆ ವಿದ್ಯಾರ್ಥಿಗಳಿಂದ ಮಾತ್ರ ತುಂಬಲು ಸಾಧ್ಯ. ಅಂತಹ ವಿದ್ಯಾರ್ಥಿ ಸಮೂಹ ನೀವಾಗಬೇಕು. ಆಳ್ವಾಸ್ ನ ವಿದ್ಯಾರ್ಥಿಗಳೇ ‘ಆಳ್ವಾಸ್ ಬ್ರ್ಯಾಂಡ್’ ಎಂದರು.ವಿದ್ಯಾರ್ಥಿಗಳು ಪದವಿ ಕಾಲೇಜಿಗೆ ಸೇರುವ ಮೂಲ ಉದ್ದೇಶ ಅರಿಯಬೇಕು. ಆಳ್ವಾಸ್ ಶಿಕ್ಷಣ ಸಂಸ್ಥೆ ತನ್ನ ಸಮಕಾಲೀನ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಿಗೆ ಪ್ರಪಂಚದ ಆಧುನಿಕ ಅಗತ್ಯಗಳಿಗೆ ತಕ್ಕಂತಹ ಜ್ಞಾನ ಮತ್ತು ಕೌಶಲಗಳನ್ನು ಸದಾ ನೀಡುತ್ತಿದೆ. ಸ್ವಾಯತ್ತ ಕಾಲೇಜಿನ ನೆಲೆಯಲ್ಲಿ ನಿತ್ಯ ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆ, ತಂತ್ರಜ್ಞಾನ, ಸಾಮಾಜಿಕ ಬದಲಾವಣೆಗಳಿಗೆ ತಕ್ಕಂತೆ ಪಠ್ಯ ಕ್ರಮವನ್ನು ರೂಪಿಸಲಾಗುತ್ತಿದೆ. ಇವು ವಿದ್ಯಾರ್ಥಿಗಳಲ್ಲಿ ವಾಸ್ತವಿಕ ಜ್ಞಾನ, ತಂತ್ರಜ್ಞಾನಾಧಾರಿತ ಕೌಶಲಗಳು, ಸೃಜನಾತ್ಮಕತೆ ಮತ್ತು ವಿಶ್ಲೇಷಣಾತ್ಮಕ ಚಿಂತನೆಯ ಸಾಮರ್ಥ್ಯಗಳನ್ನು ಬೆಳೆಸುತ್ತದೆ ಎಂದರು.ಆಳ್ವಾಸ್ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಪದವಿ ಹಂತದಲ್ಲಿ ಪೋಷಕರು ಮಕ್ಕಳ ಬೆಳೆವಣಿಗೆಯನ್ನು ಹತ್ತಿರದಿಂದ ಗಮನಿಸುವ ಕೆಲಸವನ್ನು ಮಾಡಬೇಕು. ಈ ಮೂರು ವರ್ಷ ಬರೀ ಶಿಕ್ಷಣ ಮಾತ್ರವಲ್ಲದೇ ಅದರ ಹೊರತಾಗಿ ಸಾಮರ್ಥ್ಯಗಳ ವೃದ್ಧಿಯತ್ತ ಗಮನಕೊಡಬೇಕು. ವಿದ್ಯಾರ್ಥಿಗಳು ದಿನಕ್ಕೆ ಕನಿಷ್ಠ ಎರಡು ಗಂಟೆಯಾದರು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಕಾಲೇಜಿನೊಂದಿಗೆ ವಿದ್ಯಾರ್ಥಿಗಳು ಹಾಗು ಪೋಷಕರು ಸೇರಿಕೊಂಡು ಕೆಲಸ ಮಾಡಿದಾಗ ಅದ್ಭುತವನ್ನು ಸೃಷ್ಟಿಸಬಹುದು ಎಂದರು.ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜು (ಸ್ವಾಯತ್ತ) ಶೈಕ್ಷಣಿಕ ಕುಲಸಚಿವ ಡಾ. ಟಿ.ಕೆ . ರವೀಂದ್ರನ್ , ಪರೀಕ್ಷಾಂಗ ಕುಲಸಚಿವ ಡಾ ನಾರಾಯಣ ಶೆಟ್ಟಿ, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ನಿರೂಪಿಸಿ, ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.