ಅಪಾಯದ ಅಂಚಿನಲ್ಲಿ ಹೈಕೋರ್ಟ್‌ ಹಿಂಭಾಗದ ಕಬ್ಬಿಣದ ಕಾಂಪೌಂಡ್‌

KannadaprabhaNewsNetwork |  
Published : Jun 14, 2026, 02:00 AM IST
cubban park | Kannada Prabha

ಸಾರಾಂಶ

ನಗರದ ಕಬ್ಬನ್‌ ಉದ್ಯಾನದ ಕಂಠೀರವ ಕ್ರೀಡಾಂಗಣ ಸಮೀಪದ ಕರಗದ ಕುಂಟೆ ಕಾಂಪೌಂಡ್‌ ಹಾಗೂ ಹೈಕೋರ್ಟ್‌ ಹಿಂಭಾಗದ ಕಬ್ಬಿಣದ ಕಾಂಪೌಂಡ್‌ ಅಡಿಪಾಯ ಕುಸಿದಿದ್ದು ಅಪಾಯದ ಅಂಚಿನಲ್ಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಕಬ್ಬನ್‌ ಉದ್ಯಾನದ ಕಂಠೀರವ ಕ್ರೀಡಾಂಗಣ ಸಮೀಪದ ಕರಗದ ಕುಂಟೆ ಕಾಂಪೌಂಡ್‌ ಹಾಗೂ ಹೈಕೋರ್ಟ್‌ ಹಿಂಭಾಗದ ಕಬ್ಬಿಣದ ಕಾಂಪೌಂಡ್‌ ಅಡಿಪಾಯ ಕುಸಿದಿದ್ದು ಅಪಾಯದ ಅಂಚಿನಲ್ಲಿದೆ.

ಉದ್ಯಾನದ ಕೆಲವೆಡೆ ಕಬ್ಬಿಣದ ತಂತಿಯುಳ್ಳ ತಡೆಗೋಡೆಯ ಅಡಿಪಾಯದ ಭಾಗದಲ್ಲಿ ಮಳೆಯಿಂದಾಗಿ ಮಣ್ಣಿನ ಕೊರತದಿಂದ ಕಲ್ಲುಗಳು ಹಾಗೂ ಸಿಮೆಂಟ್‌ ಪದರಗಳು ಬಿದ್ದಿದ್ದು, ತಂತಿಯುಳ್ಳು ತಡೆಗೋಡೆ ಉರುಳುವ ಸಾಧ್ಯತೆ ಇದೆ. ಪ್ರೆಸ್‌ಕ್ಲಬ್‌ ಕಡೆಯಿಂದ ಹೈಕೋರ್ಟ್‌ ಕಡೆಗೆ ಹೋಗುವ ಜಾಗದ ಕಬ್ಬಿಣದ ಕಾಂಪೌಂಡ್‌ ಪಾಯ ಶಿಥಿಲಾವಸ್ಥೆಯಲ್ಲಿದೆ.

ವಾಯುವಿಹಾರಿಗಳು, ಮಕ್ಕಳು, ಹಿರಿಯ ನಾಗರಿಕರು, ಯುವಕರು ಸೇರಿದಂತೆ ಸಾವಿರಾರು ಜನ ಪ್ರತಿದಿನವೂ ಕಬ್ಬನ್‌ ಉದ್ಯಾನಕ್ಕೆ ಆಗಮಿಸುತ್ತಿರುತ್ತಾರೆ. ಕಬ್ಬನ್‌ ಉದ್ಯಾನದ ತಂತಿ ತಡೆಗೋಡೆ ಅಥವಾ ಕಬ್ಬಿಣದ ಕಾಂಪೌಂಡ್‌ ಬಿದ್ದು ಸಮಸ್ಯೆ ಆಗುವುದಕ್ಕೂ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

ಕಳೆದ ಏಪ್ರಿಲ್‌ನಲ್ಲಿ ಶಿವಾಜಿನಗರದ ಬೌರಿಂಗ್‌ ಆಸ್ಪತ್ರೆ ಕಾಂಪೌಂಡ್‌ ಕುಸಿದು 7 ಮಂದಿ ಮೃತಪಟ್ಟಿದ್ದರು. ವಿಜಯನಗರ ಕ್ಲಬ್‌ಗೆ ಸೇರಿದ ಗೋಡೆ ಕುಸಿದು ಆಟೋ ಚಾಲಕರೊಬ್ಬರು ಸಾವನ್ನಪ್ಪಿದ್ದರು. ಇಂತಹ ಘಟನೆಗಳಿಂದ ಎಚ್ಚೆತ್ತುಕೊಂಡ ಜಿಬಿಎ ಅಧಿಕಾರಿಗಳು ಶಿಥಿಲಾವಸ್ಥೆಯಲ್ಲಿರುವ ಕಾಂಪೌಂಡ್‌ಗಳನ್ನು ಗುರುತಿಸಿ ತೆರವುಗೊಳಿಸುತ್ತಿದ್ದಾರೆ. ಹಾಗೆಯೇ ತೋಟಗಾರಿಕೆ ಇಲಾಖೆ ಮತ್ತು ಹೈಕೋರ್ಟ್‌ನ ಲೋಕೋಪಯೋಗಿ ವಿಭಾಗ ಕಬ್ಬನ್‌ ಉದ್ಯಾನದಲ್ಲಿರುವ ಕುಸಿದ ಕಾಂಪೌಂಡ್‌ಅನ್ನು ದುರಸ್ಥಿಗೊಳಿಸಬೇಕಿದೆ.

ಕಬ್ಬನ್‌ ಪಾರ್ಕ್‌ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಎಸ್‌.ಉಮೇಶ್‌ ಅವರು, ‘ಕಬ್ಬನ್‌ ಪಾರ್ಕ್‌ಗೆ ಹೊಂದಿಕೊಂಡಿರುವ ತಡೆಗೋಡೆ ಅಡಿಪಾಯ ಶಿಥಿಲಗೊಂಡಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷ ಣವೇ ಸ್ಥಳ ಪರಿಶೀಲನೆ ನಡೆಸಿ ದುರಸ್ತಿ ಕಾರ್ಯಕೈಗೊಳ್ಳಬೇಕು. ನಿರ್ಲಕ್ಷ್ಯಿಸಿದರೆ ಅಧಿಕಾರಿಗಳೇ ನೇರ ಹೊಣೆ ಎಂದು ಎಚ್ಚರಿಸಿದ್ದಾರೆ.

ಶೀಘ್ರವೇ ದುರಸ್ತಿ: ಕುಸುಮಾ

ಕಂಠೀರವ ಕ್ರೀಡಾಂಗಣ ಸಮೀಪದ ಕರಗದ ಕುಂಟೆ ಕಾಂಪೌಂಡ್‌ ಸರಿಪಡಿಸಲು ಈಗಾಗಲೇ ಕ್ರಮಕೈಗೊಂಡಿದ್ದು ಆರೇಳು ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ಹೈಕೋರ್ಟ್‌ ಸಮೀಪ ಕಾಂಪೌಂಡ್‌ ಅಡಿಪಾಯ ಕುಸಿದಿರುವ ಬಗ್ಗೆ ರಿಜಿಸ್ಟ್ರಾರ್‌ ಅವರ ಗಮನಕ್ಕೆ ತಂದು ಲೋಕೋಪಯೋಗಿ ವಿಭಾಗದಿಂದ ಸರಿಪಡಿಸಲು ತಿಳಿಸಲಾಗುವುದು. ಶೀಘ್ರದಲ್ಲೇ ಉದ್ಯಾನವನ್ನು ಪರಿಶೀಲಿಸಿ ಎಲ್ಲೆಲ್ಲಿ ಕಾಂಪೌಂಡ್‌ ಗೋಡೆಗೆ ಹಾನಿಯಾಗಿದೆಯೋ ಅದನ್ನು ದುರಸ್ತಿಗೊಳಿಸಲು ಕ್ರಮಕೈಗೊಳ್ಳುವುದಾಗಿ ಕಬ್ಬನ್‌ ಉದ್ಯಾನದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಕುಸುಮಾ ಅವರು ಕನ್ನಡಪ್ರಭಕ್ಕೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೆರಿಫೆರಲ್ ರಿಂಗ್ ರೋಡ್‌ಗೆಎಸ್‌ಎನ್‌ಸಿ ಅಧಿಕೃತ ಒಪ್ಪಿಗೆ
2.3 ಲಕ್ಷ ಸ್ಟಾರ್ಟಪ್‌ಗಳಿಂದ 25 ಲಕ್ಷ ಉದ್ಯೋಗ ಸೃಷ್ಟಿ: ಸಿಂಗ್