ಮಡಹಳ್ಳಿ ಸರ್ಕಲ್‌ಲ್ಲಿ ಮಳೆ ನೀರು ನಿಲ್ಲಿಸಲು ಸಾಧ್ಯವಿಲ್ವ: ಜನರ ವ್ಯಂಗ್ಯ

KannadaprabhaNewsNetwork |  
Published : Jun 10, 2024, 12:30 AM IST
9ಜಿಪಿಟಿ2ಗುಂಡ್ಲುಪೇಟೆ ಪಟ್ಟಣದ ಮಡಹಳ್ಳಿ ಸರ್ಕಲ್‌ ನ ಚಿತ್ರ | Kannada Prabha

ಸಾರಾಂಶ

ಮಳೆ ಬಂದಾಗೆಲೆಲ್ಲ, ಸವಾರರು, ಸಾರ್ವಜನಿಕರ ಕಿರಿಕಿರಿ ಉಂಟು ಮಾಡುತ್ತಿರುವ ಪಟ್ಟಣದ ಮಡಹಳ್ಳಿ ಸರ್ಕಲ್‌ ನಲ್ಲಿ ಮಳೆ ನೀರು ನಿಲ್ಲದಂತೆ ಮಾಡಲು ಗುಂಡ್ಲುಪೇಟೆ ಆಡಳಿತದಿಂದ ಸಾಧ್ಯ ಇಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಒತ್ತುವರಿ ತೆರವುಗೊಳಿಸಲು ಆಗದಿದ್ರೆ ಜಾಗ ಖಾಲಿ ಮಾಡಲಿ । ಡೆಕ್‌ ಸ್ಲ್ಯಾಬ್‌ ಕಾಮಗಾರಿ ಮುಗಿದು 6 ತಿಂಗಳು

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮಳೆ ಬಂದಾಗೆಲೆಲ್ಲ, ಸವಾರರು, ಸಾರ್ವಜನಿಕರ ಕಿರಿಕಿರಿ ಉಂಟು ಮಾಡುತ್ತಿರುವ ಪಟ್ಟಣದ ಮಡಹಳ್ಳಿ ಸರ್ಕಲ್‌ ನಲ್ಲಿ ಮಳೆ ನೀರು ನಿಲ್ಲದಂತೆ ಮಾಡಲು ತಾಲೂಕು ಆಡಳಿತದಿಂದ ಸಾಧ್ಯ ಇಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಪಟ್ಟಣದ ಕಾಗೇ ಹಳ್ಳವನ್ನು ಸ್ಥಳೀಯ ಪೊಲೀಸರು ಒತ್ತುವರಿ ಮಾಡಿಕೊಂಡಿರುವುದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣ ಎಂದು ಕನ್ನಡಪ್ರಭ ನಿರಂತರ ವರದಿ ಪ್ರಕಟಿಸಿ ತಾಲೂಕು ಆಡಳಿತ ಗಮನ ಸೆಳೆದಿದೆ.

ಕನ್ನಡಪ್ರಭದ ವರದಿ ಬಳಿಕ ಎಚ್ಚೆತ್ತ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಅವರು ಕಾಗೇಹಳ್ಳದ ನೀರು ಸರಾಗವಾಗಿ ಹೋಗಲು ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮಗ್ಗುಲಿನ ಕಾಗೇಹಳ್ಳಕ್ಕೆ ಸಿಮೆಂಟ್‌ ಡೆಕ್‌ ಸ್ಲ್ಯಾಬ್‌ ಕಾಮಗಾರಿ ಆರಂಭಿಸಿ ಬೇಗ ಮುಗಿಸಿ ಎಂದು ಸೂಚನೆ ನೀಡಿದ್ದರು.

ಇದಾದ ಬಳಿಕ 80 ಲಕ್ಷ ರು. ವೆಚ್ಚದಲ್ಲಿ ಸಿಮೆಂಟ್‌ ಡೆಕ್‌ ಸ್ಲ್ಯಾಬ್‌ ಕಾಮಗಾರಿ ಪೂರ್ಣಗೊಂಡು ಐದು ತಿಂಗಳು ಕಳೆದಿದೆ. ಮತ್ತೆ ಕನ್ನಡಪ್ರಭ ಪತ್ರಿಕೆಯು ಮಳೆಗಾಲ ಆರಂಭಕ್ಕೂ ಮುನ್ನ ಪೊಲೀಸರು ಒತ್ತುವರಿ ಮಾಡಿಕೊಂಡಿರುವ ಕಾಗೇಹಳ್ಳ ತೆರವುಗೊಳಿಸಿ ಎಂದು ತಾಲೂಕು ಆಡಳಿತಕ್ಕೆ ಎಚ್ಚರಿಸಿತ್ತು.

ಕನ್ನಡಪ್ರಭ ವರದಿಯ ಬಳಿಕವೂ ಎಚ್ಚೆತ್ತುಕೊಳ್ಳದ ತಾಲೂಕು ಆಡಳಿತ ಮಳೆ ಬಂದು ಮಡಹಳ್ಳಿ ಸರ್ಕಲ್‌ ನಲ್ಲಿ ನೀರು ನಿಂತು ಚಿಕ್ಕ ಕೆರೆಯಂತಾಗಿ ಸಾರ್ವಜನಿಕರ ಹಿಡಿಶಾಪ ಹಾಕುತ್ತಿದ್ದಾರೆ.

ಮಳೆಗಾಲ ಆರಂಭವಾದ ಬಳಿಕ ಮೂರು ಬಾರಿ ಮಳೆ ಬಂದಾಗ ಮಡಹಳ್ಳಿ ಸರ್ಕಲ್‌ನಲ್ಲಿ ನೀರು ನಿಂತಿದೆ. ಮತ್ತೇ ಅದೇ ಚಾಳಿಯಲ್ಲಿ ತಾಲೂಕು ಆಡಳಿತ ಪೊಲೀಸರು ಒತ್ತುವರಿ ಮಾಡಿಕೊಂಡ ಜಾಗ ಬಿಡಿಸಲು ತಾಲೂಕು ಆಡಳಿತ ವಿಫಲವಾಗಿದೆ.

ಮಳೆ ಬಂದು ಮಡಹಳ್ಳಿ ಸರ್ಕಲ್‌ ನಲ್ಲಿ ನೀರು ನಿಂತಾಗ ಪಾದಚಾರಿಗಳು, ಸೈಕಲ್‌, ಬೈಕ್‌, ಮೊಫೆಡ್‌ ಸವಾರರ ಪಾಡು ಹೇಳ ತೀರದು. ಸಣ್ಣ ಪುಟ್ಟ ಕಾರುಗಳು ನೀರಲ್ಲಿ ಸಿಲುಕಿ ಸವಾರರು ಪರದಾಡಿದ್ದಾರೆ. ಇದೆಲ್ಲ ತಾಲೂಕು ಆಡಳಿತದ ಕಣ್ಣಿಗೆ ಕಾಣುತ್ತಿಲ್ಲವೇ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಎತ್ತಿದ್ದಾರೆ.

ಸ್ಲ್ಯಾಬ್‌ ಆದ್ರೂ…

ಕಾಗೇಹಳ್ಳದಲ್ಲಿ ಮಳೆ ನೀರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಸರಾಗವಾಗಿ ಹೋಗಲು ಡೆಕ್‌ ಸ್ಲ್ಯಾಬ್‌ ಕಾಮಗಾಡಿ ಮುಗಿದರೂ ಪೊಲೀಸರು ಒತ್ತುವರಿ ಮಾಡಿಕೊಂಡ ಜಾಗ ಬಿಡಿಸಲು ಇಷ್ಟು ದಿನಗಳ ಬೇಕಾ ಎಂದು ಕಸಾಪ ಜಿಲ್ಲಾಧ್ಯಕ್ಷ ಎಂ. ಶೈಲಕುಮಾರ್‌(ಶೈಲೇಶ್)‌ ತಾಲೂಕು ಆಡಳಿತವನ್ನು ಪ್ರಶ್ನಿಸಿದ್ದಾರೆ.

ಜಾಗ ಖಾಲಿ ಮಾಡಿ?

ಮಡಹಳ್ಳಿ ಸರ್ಕಲ್‌ ನಲ್ಲಿ ಮಳೆ ಬಂದಾಗಲೆಲ್ಲ ಸಾವಿರಾರು ಜನರಿಗೆ ತೊಂದರೆ ಆಗುತ್ತಿದ್ದರೂ ಕಾಗೇಹಳ್ಳ ಒತ್ತುವರಿ ತೆರವುಗೊಳಿಸಲು ಆಗದಿದ್ದ ಮೇಲೆ ಅಧಿಕಾರಿಗಳು ಜಾಗ ಖಾಲಿ ಮಾಡಲಿ ಎಂದು ಸಾರ್ವಜನಿಕರು ಖಾರವಾಗಿ ಹೇಳಿದ್ದಾರೆ.

ರಾತ್ರಿಯಲ್ಲಂತೂ ಮತ್ತಷ್ಟು ಸಂಕಟ!ಗುಂಡ್ಲುಪೇಟೆ: ಪಟ್ಟಣದ ಮಡಹಳ್ಳಿ ಸರ್ಕಲ್‌ನಲ್ಲಿ ಮಳೆಯ ಬಳಿಯ ನೀರು ನಿಂತು ಚಿಕ್ಕ ಕೆರೆಯಂತಾಗಿ, ರಾತ್ರಿ ವೇಳೆ ನೀರಲ್ಲಿ ವಾಹನಗಳ ಬಂದಾಗ ಪಾದಚಾರಿಗಳು,ದ್ವಿಚಕ್ರ ವಾಹನಗಳ ಸವಾರರಿಗೆ ನೀರು ಮತ್ತು ಕೆಸರು ಎರಚುತ್ತದೆ.

ಈ ಸರ್ಕಲ್‌ ಏನು ಯಾವುದೇ ಹಳ್ಳಿಯ ಸರ್ಕಲ್‌ ಅಲ್ಲ ಅಥವಾ ರಸ್ತೆಯೂ ಅಲ್ಲ, ಇದು ಪಟ್ಟಣದ ಹೃದಯ ಭಾಗವಾದ ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಇರುವ ಸರ್ಕಲ್‌ ಹಾಗೂ ಈ ರಸ್ತೆಯ ಎರಡು ಬದಿ ಪೊಲೀಸ್‌ ಠಾಣೆ,ಅರಣ್ಯ ಇಲಾಖೆ, ವಿದ್ಯಾರ್ಥಿ ನಿಲಯ, ಶಾಲಾ, ಕಾಲೇಜು, ನ್ಯಾಯಾಲಯ, ಚೌಟ್ಟಿಗಳಿರುವ ವೃತ್ತ ಹಾಗೂ ರಸ್ತೆಯಾಗಿದೆ. ಮಡಹಳ್ಳಿ ವೃತ್ತದಲ್ಲಿ ಮಳೆ ನೀರು ನಿಲ್ಲುವುದನ್ನು ತಪ್ಪಿಸಲು ಒತ್ತುವರಿಯಾಗಿರುವ ಕಾಗೇಹಳ್ಳ ತೆರವುಗೊಳಿಸಲು ನಾನು, ಪುರಸಭೆ ಸಿಒ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಕಾಗೇಹಳ್ಳ ಎರಡು ಕಡೆ ಜಾಸ್ತಿ ಒತ್ತುವರಿ ಆಗಿದೆ. ನಾಳೆ ಎಂಜಿನಿಯರ್‌ ಜೊತೆ ಮಾತನಾಡಿ ತೆರವುಗೊಳಿಸಲಾಗುವುದು.ಮಂಜುನಾಥ್‌, ತಹಸೀಲ್ದಾರ್‌, ಗುಂಡ್ಲುಪೇಟೆ

ಕಾಗೇಹಳ್ಳ ಒತ್ತುವರಿ ತೆರವು ಗೊಳಿಸಲು ತಾಲೂಕು ಆಡಳಿಕ್ಕೆ ಇರುವ ಅಡ್ಡಿ ಇದ್ದರೆ ಸಾರ್ವಜನಿಕವಾದರೂ ಹೇಳಲಿ, ಅದು ಬಿಟ್ಟು ಪೊಲೀಸರು ಒತ್ತುವರಿ ಮಾಡಿಕೊಂಡ ಜಾಗ ಬಿಡಿಸಲು ಅಧಿಕಾರಿಗಳು ಕಳ್ಳ, ಪೊಲೀಸ್‌ ಆಟ ಆಡುವುದನ್ನು ಬಿಟ್ಟು ಸಾರ್ವಜನಿಕ ಪರದಾಟ ಕಂಡು ತೆರವುಗೊಳಿಸಲಿ.

ಎಂ.ಶೈಲಕುಮಾರ್‌ (ಶೈಲೇಶ್)‌, ಕಸಾಪ ಜಿಲಾಧ್ಯಕ್ಷ

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ