ಕ್ರಮಬದ್ಧವಲ್ಲದ ಆಹಾರದಿಂದ ಜೀವನ ಶೈಲಿ ಹಾಳು

KannadaprabhaNewsNetwork |  
Published : Dec 23, 2024, 01:03 AM IST
ಫೋಟೋ 22 ಟಿಟಿಎಚ್ 01: ಸುವರ್ಣ ಕರ್ನಾಟಕ ಸಂಭ್ರಮದ ಆಚರಣೆಯ ಭಾಗವಾಗಿ ಪಪಂಯ ವತಿಯಿಂದ ಭಾನುವಾರ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ಆರೋಗ್ಯ ಶಿಬಿರದಲ್ಲಿ ಪಪಂ ಅಧ್ಯಕ್ಷ ರಹಮತ್‍ಉಲ್ಲಾ ಅಸಾದಿ ಮಾತನಾಡಿದರು. | Kannada Prabha

ಸಾರಾಂಶ

ಇತ್ತೀಚಿನ ವರ್ಷಗಳಲ್ಲಿ ಅಶಿಸ್ತಿನ ಜೀವನ ಶೈಲಿ ಮತ್ತು ಕ್ರಮಬದ್ಧವಲ್ಲದ ಆಹಾರ ಕ್ರಮದಿಂದಾಗಿ ರಕ್ತದೊತ್ತಡ, ಮಧುಮೇಹ ಹಾಗೂ ಕ್ಯಾನ್ಸರ್ ರೋಗಿಗಳ ಸಂಖ್ಯೆಯೂ ಅಧಿಕವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಮಧ್ಯ ವಯಸ್ಸಿನ ನಂತರ ಸತತ ತಪಾಸಣೆ ಅಗತ್ಯ ಎಂದು ಉಡುಪಿ ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಚಂದ್ರಶೇಖರ್ ಹೇಳಿದರು.

ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ರೋಗಿಗಳ ಸಂಖ್ಯೆ ಅಧಿಕ । ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಡಾ. ಚಂದ್ರಶೇಖರ್ ಮಾಹಿತಿ

ಕನ್ನಡಪ್ರಭವಾರ್ತೆ ತೀರ್ಥಹಳ್ಳಿ ಇತ್ತೀಚಿನ ವರ್ಷಗಳಲ್ಲಿ ಅಶಿಸ್ತಿನ ಜೀವನ ಶೈಲಿ ಮತ್ತು ಕ್ರಮಬದ್ಧವಲ್ಲದ ಆಹಾರ ಕ್ರಮದಿಂದಾಗಿ ರಕ್ತದೊತ್ತಡ, ಮಧುಮೇಹ ಹಾಗೂ ಕ್ಯಾನ್ಸರ್ ರೋಗಿಗಳ ಸಂಖ್ಯೆಯೂ ಅಧಿಕವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಮಧ್ಯ ವಯಸ್ಸಿನ ನಂತರ ಸತತ ತಪಾಸಣೆ ಅಗತ್ಯ ಎಂದು ಉಡುಪಿ ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಚಂದ್ರಶೇಖರ್ ಹೇಳಿದರು.ಇಲ್ಲಿನ ಪಪಂಯ ವತಿಯಿಂದ ಡೇ ನಲ್ಮ್, ಜಿಲ್ಲಾ ಕೌಶಲ್ಯಾಭಿವೃದ್ದಿ-ಉದ್ಯಮಶೀಲತೆ, ಜೀವನೋಪಾಯ ಹಾಗೂ ಉಡುಪಿಯ ಆದರ್ಶ ಆಸ್ಪತ್ರೆ ಮತ್ತು ಆದರ್ಶ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿ, ಇವೆಲ್ಲದಕ್ಕೂ ಬಹು ಮುಖ್ಯ ಕಾರಣ ಸಿಗರೇಟ್, ಗುಟ್ಕಾ, ಕುಡಿತ, ಕ್ರಮಬದ್ದವಲ್ಲದ ಜೀವನಶೈಲಿ ಕಾರಣ ಎಂದರು.ಮಾನಸಿಕ ಒತ್ತಡ ದೋಷಯುಕ್ತ ಆಹಾರ ಮತ್ತು ಅಶಿಸ್ತಿನ ಜೀವನ ಶೈಲಿಯಿಂದಾಗಿ ಭೀಕರ ರೋಗರುಜಿನಗಳಿಗೆ ಬಲಿಯಾಗುತ್ತಿರವವರ ಸಂಖ್ಯೆ ಹೆಚ್ಚುವುದಕ್ಕೆ ಕಾರಣವಾಗಿದೆ. ಜಂಕ್ ಫುಡ್ ನಿಯಂತ್ರಣದೊಂದಿಗೆ ನಿಯಮಿತ ಶುದ್ಧ ಆಹಾರ ಕ್ರಮವನ್ನು ಪಾಲಿಸುವುದು ಅಗತ್ಯ. ಮಾನಸಿಕ ಏಕಾಗ್ರತೆಯೊಂದಿಗೆ ಶಿಸ್ತುಬದ್ಧ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ಮತ್ತು 40 ರ ನಂತರ ನಿರಂತರ ಆರೋಗ್ಯ ತಪಾಸಣೆ ಮಾಡಿಸುವುದು ಕೂಡಾ ಅನಿವಾರ್ಯ ಎಂದೂ ಹೇಳಿದರು.ಆರೋಗ್ಯ ಶಿಬಿರದ ನೇತೃತ್ವವನ್ನು ವಹಿಸಿದ್ದ ಪಪಂ ಅಧ್ಯಕ್ಷ ರಹಮತ್‍ಉಲ್ಲಾ ಅಸಾದಿ ಮಾತನಾಡಿ, ಪಟ್ಟಣದ ಜನತೆಗೆ ಮೂಲಭೂತ ಸೌಕರ್ಯ ಒದಗಿಸುವ ಜೊತೆಗೆ ಆರೋಗ್ಯದ ಬಗ್ಗೆ ಎಚ್ಚರಿಕೆ ಮೂಡಿಸುವ ಹೊಣೆಗಾರಿಕೆಯೂ ಸ್ಥಳಿಯಾಡಳಿತಕ್ಕಿದೆ. ಸುವರ್ಣ ಕರ್ನಾಟಕ ಸಂಭ್ರಮದ ಆಚರಣೆಯ ಭಾಗವಾಗಿ ಸಾಂಸ್ಕೃತಿಕ ಕ್ರೀಡೆಯ ಜೊತೆಗೆ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.

ಈ ಶಿಬಿರದಲ್ಲಿ 450 ಕ್ಕೂ ಹೆಚ್ಚು ಇಸಿಜಿ ತಪಾಸಣೆ ಸೇರಿದಂತೆ ಫಿಜಿಷಿಯನ್, ನರರೋಗ, ಓಬಿಜಿ, ಕಿವಿ ಮೂಗು ಗಂಟಲು, ಕಣ್ಣಿನ ತಜ್ಞ ವೈದ್ಯರುಗಳು ಇದ್ದು, 750ಕ್ಕೂ ಹೆಚ್ಚು ಜನರು ಇದರ ಸೌಲಭ್ಯ ಪಡೆದಿದ್ದಾರೆ. ಈ ಶಿಬಿರದಲ್ಲಿ ತಪಾಸಣೆ ಮಾಡಿಸಿರುವವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ದೊರೆಯಲಿದೆ ಎಂದು ತಿಳಿಸಿದರು.ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ದೀಪ ಬೆಳಗುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯರುಗಳಾದ ಸಂದೇಶ್ ಜವಳಿ, ಶಬನಂ, ಬಿ. ಗಣಪತಿ, ಜಯಪ್ರಕಾಶ್ ಶೆಟ್ಟಿ, ಜ್ಯೋತಿಮೋಹನ್, ರತ್ನಾಕರ ಶೆಟ್ಟಿ, ಮಂಜುಳಾ ನಾಗೇಂದ್ರ, ಯತಿರಾಜ್, ಸಿಓ ಡಿ. ನಾಗರಾಜ್ ಇದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌