ಕಸ ವಾಹನ ದುರಸ್ತಿ, ಇಂಧನ ಹೆಸರಲ್ಲಿ ಅಕ್ರಮ!

KannadaprabhaNewsNetwork |  
Published : Aug 04, 2026, 02:15 AM IST
ಗದಗ ನಗರದ ರಸ್ತೆ ಬಿದ್ದಿರುವ ತ್ಯಾಜ್ಯವನ್ನು ವಿಲೇವಾರಿ ಮಾಡದೇ ಬಿಟ್ಟಿರುವುದು. | Kannada Prabha

ಸಾರಾಂಶ

ನಿಯಮಾವಳಿಗಳ ಪ್ರಕಾರ ಸರ್ಕಾರಿ ವಾಹನಗಳ ದುರಸ್ತಿಗೆ ಸ್ಥಳೀಯ ಆರ್‌ಟಿಒ ಅಧಿಕಾರಿಗಳ ಪೂರ್ವಾನುಮತಿ ಮತ್ತು ಪರಿಶೀಲನೆ ಕಡ್ಡಾಯವಾಗಿದ್ದರೂ, ಅದನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಬರೋಬ್ಬರಿ ₹68.66 ಲಕ್ಷ ದುರಸ್ತಿ ವೆಚ್ಚ ಬರೆಯಲಾಗಿದೆ.

ಶಿವಕುಮಾರ ಕುಷ್ಟಗಿ

ಗದಗ: ಗದಗ- ಬೆಟಗೇರಿ ಅವಳಿ ನಗರದ 2 ಲಕ್ಷಕ್ಕೂ ಅಧಿಕ ಜನಸಂಖ್ಯೆಗೆ ಶುಚಿತ್ವದ ಸೇವೆ ನೀಡಬೇಕಾದ ನಗರಸಭೆಯಲ್ಲಿ ಘನತ್ಯಾಜ್ಯ ನಿರ್ವಹಣೆ ಹಾಗೂ ವಾಹನಗಳ ನಿರ್ವಹಣೆ ಹೆಸರಿನಲ್ಲಿ ಬೃಹತ್ ಮಟ್ಟದ ಆಡಳಿತಾತ್ಮಕ ದುರಾಡಳಿತ ಮತ್ತು ಸಾರ್ವಜನಿಕ ಹಣದ ದುರುಪಯೋಗ ನಡೆದಿರುವುದು ಬೆಳಕಿಗೆ ಬಂದಿದೆ.

ನಿಯಮಾವಳಿಗಳ ಪ್ರಕಾರ ಸರ್ಕಾರಿ ವಾಹನಗಳ ದುರಸ್ತಿಗೆ ಸ್ಥಳೀಯ ಆರ್‌ಟಿಒ ಅಧಿಕಾರಿಗಳ ಪೂರ್ವಾನುಮತಿ ಮತ್ತು ಪರಿಶೀಲನೆ ಕಡ್ಡಾಯವಾಗಿದ್ದರೂ, ಅದನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಬರೋಬ್ಬರಿ ₹68.66 ಲಕ್ಷ ದುರಸ್ತಿ ವೆಚ್ಚ ಬರೆಯಲಾಗಿದೆ. ಅಲ್ಲದೆ, ಡೀಸೆಲ್ ಮತ್ತು ಪೆಟ್ರೋಲ್ ಹೆಸರಿನಲ್ಲಿಯೂ ₹1.14 ಕೋಟಿ ವಿನಿಯೋಗಿಸಿ, ಕಾಗದದ ಮೇಲೆ ವಾಹನಗಳ ಮೈಲೇಜ್ ಹೆಚ್ಚಿಸಿ ತೋರಿಸಿರುವ ಗಂಭೀರ ಆರೋಪಗಳು ಕೇಳಿಬಂದಿದ್ದು, ಈ ಇಡೀ ಜಾಲದ ವಿರುದ್ಧ ಲೋಕಾಯುಕ್ತದಲ್ಲಿ ಪೂರ್ಣ ಪ್ರಮಾಣದ ತನಿಖೆ ಮುಂದುವರಿದಿದೆ.

ಕಾಗದದಲ್ಲೇ ವಾಹನ ದುರಸ್ತಿ: ಕರ್ನಾಟಕ ಮೋಟಾರ್ ವಾಹನ ನಿಯಮಗಳು ಹಾಗೂ ಪೌರಸಭೆಗಳ ಕಾಯ್ದೆ 1964ರ ಪ್ರಕಾರ, ನಗರಸಭೆಗೆ ಸೇರಿದ ಯಾವುದೇ ವಾಹನವನ್ನು ದುರಸ್ತಿಗೆ ಒಳಪಡಿಸುವ ಮುನ್ನ ಸ್ಥಳೀಯ ಆರ್‌ಟಿಒಗಳಿಂದ ತಪಾಸಣೆ ನಡೆಸಬೇಕು. ದುರಸ್ತಿ ಮುಗಿದ ನಂತರವೂ ಆರ್‌ಟಿಒ ಅಧಿಕಾರಿಗಳು ಪರಿಶೀಲಿಸಿ ಫಿಟ್‌ನೆಸ್ ಹಾಗೂ ವೆಚ್ಚ ಅನುಮೋದನೆ ಪ್ರಮಾಣಪತ್ರ ನೀಡಿದ ಮೇಲಷ್ಟೇ ಬಿಲ್ ಮಂಜೂರು ಮಾಡಬೇಕಿದೆ. ಆದರೆ, ಗದಗ- ಬೆಟಗೇರಿ ನಗರಸಭೆ ಅಧಿಕಾರಿಗಳು ಯಾವುದೇ ಅನುಮತಿ ಪಡೆಯದೇ ಲಕ್ಷಾಂತರ ರುಪಾಯಿ ದುರಸ್ತಿ ವೆಚ್ಚ ತೋರಿಸಿದ್ದಾರೆ. ಜತೆಗೆ, ಪ್ರತಿಯೊಂದು ಘನತ್ಯಾಜ್ಯ ವಾಹನವು ನಗರದಲ್ಲಿ ಪ್ರತಿದಿನ ಬರೋಬ್ಬರಿ 80 ಕಿಮೀ ಸಂಚರಿಸುತ್ತದೆ ಎಂದು ಲಾಗ್‌ಬುಕ್‌ನಲ್ಲಿ ಲೆಕ್ಕ ಬರೆದಿದ್ದಾರೆ.

ತೆರಿಗೆದಾರರ ಹಣ ಪೋಲು: ನಗರಸಭೆಯು ಸಾರ್ವಜನಿಕರಿಂದ ಮತ್ತು ಉದ್ಯಮಿಗಳಿಂದ ಪ್ರತಿವರ್ಷ ತಪ್ಪದೇ ಘನತ್ಯಾಜ್ಯ ಸಂಗ್ರಹಣಾ ಕರ ಹಾಗೂ ಆಸ್ತಿ ತೆರಿಗೆಯನ್ನು ಕಡ್ಡಾಯವಾಗಿ ಸಂಗ್ರಹಿಸುತ್ತಿದೆ. ಆದರೆ, ನಗರದ ಬಹುತೇಕ ವಾರ್ಡ್‌ಗಳಲ್ಲಿ ದಿನನಿತ್ಯ ಕಸದ ವಾಹನಗಳು ಬರುವುದೇ ಇಲ್ಲ ಎಂಬುದು ಸಾರ್ವಜನಿಕರ ದೂರು. ಸಾರ್ವಜನಿಕರು ಕಷ್ಟಪಟ್ಟು ನೀಡಿದ ತೆರಿಗೆಯ ಕೋಟ್ಯಂತರ ರು. ಹಣವು ನಗರದ ನೈರ್ಮಲ್ಯೀಕರಣಕ್ಕೆ ಬಳಕೆಯಾಗುವ ಬದಲು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ಅಕ್ರಮ ಜೇಬು ಸೇರುತ್ತಿರುವುದು ಬಹಿರಂಗ ಸತ್ಯವಾಗಿದೆ.

ಕಸ ಸಂಗ್ರಹಣೆ, ವಿಲೇವಾರಿ ಕಾನೂನು ಏನು ಹೇಳುತ್ತೆ?

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಸ್ವಚ್ಛ ಹಾಗೂ ನೈರ್ಮಲ್ಯಯುತ ವಾತಾವರಣ ಪಡೆಯುವುದು ಭಾರತೀಯ ಸಂವಿಧಾನದ ವಿಧಿ 21ರ ಅಡಿಯಲ್ಲಿ ಜೀವಿಸುವ ಮೂಲಭೂತ ಹಕ್ಕಾಗಿದೆ. ಕರ್ನಾಟಕ ಪೌರಸಭೆಗಳ ಕಾಯ್ದೆ, 1964 (ವಿಭಾಗ 225-227) ಹಾಗೂ ರಾಷ್ಟ್ರೀಯ ಘನತ್ಯಾಜ್ಯ ನಿರ್ವಹಣೆ ನಿಯಮಾವಳಿಗಳು 2016ರ ಪ್ರಕಾರ ಪ್ರತಿ ಮನೆ ಹಾಗೂ ವಾಣಿಜ್ಯ ಮಳಿಗೆಗಳಿಂದ ಪ್ರತಿದಿನ ಮೂಲದಲ್ಲೇ ವಿಂಗಡಿಸಿದ(ಹಸಿ ಮತ್ತು ಒಣ) ಕಸವನ್ನು ಉಚಿತವಾಗಿ ಅಥವಾ ನಿಗದಿತ ತೆರಿಗೆ ಸಂಗ್ರಹಿಸಿ ವಿಲೇವಾರಿ ಮಾಡುವುದು ನಗರಸಭೆಯ ಶಾಸನಬದ್ಧ ಕರ್ತವ್ಯವಾಗಿದೆ.

ಅಧಿಕಾರಿಗಳು ಸೇವೆ ನೀಡುವಲ್ಲಿ ಕಾಯಂ ಲೋಪ ಕಂಡುಬಂದಲ್ಲಿ ಸಾರ್ವಜನಿಕರು ಲೋಕಾಯುಕ್ತ ಅಥವಾ ಪರಿಸರ ಸಂರಕ್ಷಣಾ ಕಾಯ್ದೆ, 1986ರ ಅಡಿಯಲ್ಲಿ ಹಸಿರು ನ್ಯಾಯಾಧಿಕರಣಕ್ಕೆ(ಎನ್‌ಜಿಟಿ) ನೇರವಾಗಿ ದೂರು ಸಲ್ಲಿಸಿ ನ್ಯಾಯ ಪಡೆಯಬಹುದು ಎನ್ನುತ್ತಾರೆ ನ್ಯಾಯವಾದಿಗಳು.

ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ವಾಹನಗಳ ಲಾಗ್ ಬುಕ್, ಜಿಪಿಎಸ್ ಟ್ರ್ಯಾಕಿಂಗ್ ದಾಖಲೆ ಹಾಗೂ ಇಂಧನ ಬಿಲ್ಲುಗಳನ್ನು ಪಡೆದು ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದೇವೆ. ಆದರೆ ಅಧಿಕಾರಿಗಳು ಮಾತ್ರ ಸಮರ್ಪಕ ಮಾಹಿತಿ ನೀಡದೇ ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ಸರ್ಕಾರಿ ಹಣವನ್ನು ದುರುಪಯೋಗಪಡಿಸಿಕೊಂಡ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತರಿಗೆ ಜನಪರ ಕಾಳಜಿ ಅಗತ್ಯ: ದೇಸಾಯಿ
ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆ ಖಚಿತ: ಸುಮತಿ