ಶಂಕರ ಜಿ. ಜಾವೂರ
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಸಾರ್ವಜನಿಕರು ನಿತ್ಯ ಹಲವಾರು ರೀತಿಯ ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ನಿತ್ಯ ಅಪಘಾತಗಳು ಸಂಭವಿಸುತ್ತಲೇ ಇದೆ. ಹಲವರು ಕೈ-ಕಾಲು ಮುರಿದುಕೊಂಡಿದ್ದಾರೆ. ಈ ಮಾರ್ಗದಲ್ಲಿ ಪ್ರಯಾಣಿಸುವವರ ಸಂಕಷ್ಟ ಒಂದೆಡೆಯಾದರೆ ರಸ್ತೆ ಅಕ್ಕಪಕ್ಕದ ನಿವಾಸಿಗಳು ಬೇರೆ ಬೇರೆ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ.
ರಸ್ತೆ ಸರಿಪಡಿಸುವಂತೆ ಹಾಗೂ ನೀರು ಸರಾಗವಾಗಿ ಹರಿದು ಹೋಗಲು ಸಿಡಿ ನಿರ್ಮಾಣ ಮಾಡಬೇಕೆಂದು ಗೌಡಳ್ಳಿ ನಿವಾಸಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಾಗೂ ಸ್ಥಳೀಯ ಸಂಸದರಿಗೆ ಈಗಾಗಲೇ ಮನವಿ ಮಾಡಿದ್ದಾರೆ. ಆದರೆ ಯಾವುದೇ ಫಲಿತಾಂಶ ಸಿಕ್ಕಿಲ್ಲ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಸೋಮನಹಳ್ಳಿ ಪ್ರವೇಶ ಮಾಡುವ ರಸ್ತೆಯಲ್ಲಿ ನೀರು ತುಂಬಿತ್ತು. ಸ್ಥಳೀಯರು ಬೇರೆ ಮಾರ್ಗದ ಮೂಲಕ ತಮ್ಮ ದಿನನಿತ್ಯದ ವ್ಯವಹಾರಗಳನ್ನು ನಡೆಸಬೇಕಾಯಿತು.ಅಕಸ್ಮಾತ್ ಇನ್ನೂ ಹೆಚ್ಚಿನ ಮಳೆಯಾಗಿ ನೀರಿನ ಪ್ರಮಾಣ ಹೆಚ್ಚಾದರೆ ರಸ್ತೆ ಕೊರೆದು, ರಸ್ತೆ ಪಕ್ಕದಲ್ಲಿರುವ ಮನೆಗಳಿಗೆ ಹಾನಿ ಆಗುವ ಸಾಧ್ಯತೆ ಇದೆ. ಈಗಾಗಲೇ ನಿವಾಸಿಗಳು ಜೀವ ಭಯದಲ್ಲಿಯೇ ರಾತ್ರಿ ನಿದ್ರೆ ಇಲ್ಲದೆ ಕಳೆಯುವಂತಾಗಿದೆ. ಅತಿ ಶೀಘ್ರವಾಗಿ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಯಾವೊಬ್ಬ ಅಧಿಕಾರಿಯಾಗಲಿ, ಜನಪ್ರತಿನಿಧಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಜನರಿಗೆ ಸಂಕಷ್ಟ ಎದುರಾದಾಗ ಸಂಕಷ್ಟಕ್ಕೆ ಸ್ಪಂದಿಸಲು ಯಾರೂ ಬರುವುದಿಲ್ಲ ಎಂದು ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ.
ಸಿಡಿ ನಿರ್ಮಾಣ: ಮಳೆಗಾಲ ಇರುವುದರಿಂದ ಆ ಸ್ಥಳದಲ್ಲಿ ಸಿಡಿ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಮಳೆಯ ಪ್ರಮಾಣ ಕಡಿಮೆಯಾದ ನಂತರ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಿಡಿ ನಿರ್ಮಾಣ ಮಾಡಿ ಸರಾಗವಾಗಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸಿ ಕೊಡುತ್ತೇವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿವಕುಮಾರ್ ಹೇಳಿದರು.