ಗ್ರಾಪಂ ಸದಸ್ಯ ಸ್ಥಾನಗಳಿಗೆ ಮೀಸಲಾತಿ ಪ್ರಕಟ: ಆಕಾಂಕ್ಷಿಗಳ ಅಪಸ್ವರ

KannadaprabhaNewsNetwork |  
Published : Aug 04, 2026, 02:15 AM IST
ಹರಪನಹಳ್ಳಿ ತಾಲೂಕಿನಲ್ಲಿ  ಇನ್ನೂ ಅವಧಿ ಮುಗಿಯದಿರುವ ಚುನಾಯಿತ ಮಂಡಳಿ ಇರುವ ಎಕೈಕ ಹಾರಕನಾಳು ಗ್ರಾಮ ಪಂಚಾಯ್ತಿ  | Kannada Prabha

ಸಾರಾಂಶ

ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಮೀಸಲಾತಿ ಅಧಿಸೂಚನೆ ಹೊರಬಿದ್ದಿದ್ದು, ಆಕಾಂಕ್ಷಿಗಳು ಮೀಸಲಾತಿ ಕುರಿತು ಅಪಸ್ವರ ಎತ್ತಿದ್ದಾರೆ. ಹರಪನಹಳ್ಳಿ ತಾಲೂಕಿನ 37 ಗ್ರಾಪಂಗಳ ಪೈಕಿ ಹಾರಕನಾಳು ಗ್ರಾಪಂ ಹೊರತುಪಡಿಸಿ ಉಳಿದ 36 ಗ್ರಾಪಂ ಸದಸ್ಯ ಸ್ಥಾನಗಳಿಗೆ ಮೀಸಲಾತಿ ಹಂಚಿಕೆ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ.

ಬಿ. ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಮೀಸಲಾತಿ ಅಧಿಸೂಚನೆ ಹೊರಬಿದ್ದಿದ್ದು, ಆಕಾಂಕ್ಷಿಗಳು ಮೀಸಲಾತಿ ಕುರಿತು ಅಪಸ್ವರ ಎತ್ತಿದ್ದಾರೆ. ಹರಪನಹಳ್ಳಿ ತಾಲೂಕಿನ 37 ಗ್ರಾಪಂಗಳ ಪೈಕಿ ಹಾರಕನಾಳು ಗ್ರಾಪಂ ಹೊರತುಪಡಿಸಿ ಉಳಿದ 36 ಗ್ರಾಪಂ ಸದಸ್ಯ ಸ್ಥಾನಗಳಿಗೆ ಮೀಸಲಾತಿ ಹಂಚಿಕೆ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ.

ಮೀಸಲಾತಿ ಪಟ್ಟಿ ರಾಜ್ಯ ಗೆಜೆಟ್‌ನಲ್ಲಿ ಪ್ರಕಟವಾದ ಕೂಡಲೇ ವಾಟ್ಸಪ್ ಗ್ರೂಪ್‌ಗಳಲ್ಲಿ ಹರಿದಾಡಲಾರಂಭಿಸಿದೆ. ಈಗಾಗಲೇ ಆಯಾ ಗ್ರಾಪಂ ಕಚೇರಿಗಳ ಸೂಚನಾ ಫಲಕಗಳಲ್ಲಿ ಮೀಸಲಾತಿ ಪಟ್ಟಿ ಪ್ರಕಟಿಸಿ ಪ್ರಚುರಪಡಿಸಲಾಗಿದೆ. ಹಾರಕನಾಳು ಗ್ರಾಪಂ ಹೊರತಾಗಿ 36 ಗ್ರಾಪಂಗಳ ಆಡಳಿತಾವಧಿ ಬಹುತೇಕ 2026ರ ಫೆಬ್ರವರಿ ಅಂತ್ಯಕ್ಕೆ ಪೂರ್ಣಗೊಂಡಿದ್ದು, ಸದ್ಯ ಈ ಎಲ್ಲ ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ.

ಮೀಸಲಾತಿ ನಿಗದಿ ಬಗ್ಗೆ ಅಲ್ಲಲ್ಲಿ ಅಪಸ್ವರ ಕೇಳಿ ಬರುತ್ತಿದ್ದು, ಕೆಲ ಗ್ರಾಪಂ ವಾಡ್೯ಗಳಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಜನರೇ ಇಲ್ಲದಿದ್ದರೂ ಮೀಸಲಾತಿ ಹಂಚಿಕೆ ಮಾಡಲಾಗಿದೆ, ವಾಡ್೯ನ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಪ್ರಕಟಿಸಬೇಕು. ಆದರೆ, ವ್ಯತಿರಿಕ್ತವಾಗಿ ಮೀಸಲಾತಿ ಪ್ರಕಟಿಸಿದ್ದಕ್ಕೆ ಕೆಲವರು ಅಸಮಾಧಾನ ವ್ಯಕ್ತವಾಗಿದೆ. ಇನ್ನೂ ಕೆಲ ಗ್ರಾಪಂನವರು ವಾಡ್೯ ವಿಭಜನೆ, ಸದಸ್ಯರ ಸಂಖ್ಯೆ ಹೆಚ್ಚಳಕ್ಕೆ ಮನವಿ ಮಾಡಿದ್ದರೂ ಯಾವುದೇ ಬದಲಾವಣೆಯಾಗದಿರುವುದರಿಂದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಮೀಸಲಾತಿ ಬಗ್ಗೆ ಏನೇ ಆಕ್ಷೇಪಣೆಗಳಿದ್ದರೂ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಬಹುದು ಎಂದು ತಹಸೀಲ್ದಾರ್ ಬಿ.ವಿ. ಗಿರೀಶ್ ಬಾಬು ತಿಳಿಸಿದ್ದಾರೆ.

ಗ್ರಾಪಂ ಆಡಳಿತಾವಧಿ ಪೂರ್ಣಗೊಂಡು 5 ತಿಂಗಳು ಕಳೆದರೂ ಇನ್ನೂ ಚುನಾವಣೆ ನಡೆದಿಲ್ಲ. ಸರಿಯಾದ ಸಮಯಕ್ಕೆ ಚುನಾವಣೆ ಪ್ರಕ್ರಿಯೆ ನಡೆಯದಿರುವುದಕ್ಕೆ ಗ್ರಾಪಂಗಳಲ್ಲಿ ಅಭಿವೃದ್ಧಿ ಕುಂಠಿತಗೊಂಡಿವೆ. ಗ್ರಾಪಂಗಳಲ್ಲಿ ಆಡಳಿತ ಇಲ್ಲದ ಪರಿಣಾಮ ಹಳ್ಳಿಗಳಲ್ಲಿ ಸಮಸ್ಯೆಗಳನ್ನು ಕೇಳುವವರೂ ಇಲ್ಲದಂತಾಗಿದೆ. ಕುಡಿಯುವ ನೀರು, ಬೀದಿ ದೀಪ, ಸ್ವಚ್ಛತೆಗಾಗಿ ದಿನ ನಿತ್ಯ ಜನರು ಗ್ರಾಪಂಗೆ ಅಲೆದಾಡುವಂತಾಗಿದೆ. ಗ್ರಾಪಂಗೆ ಅನುದಾನದ ಕೊರತೆ ಕಾಡುತ್ತಿರುವ ಪರಿಣಾಮ ಜನರಿಗೆ ಉತ್ತರಿಸಲು ಅಧಿಕಾರಿಗಳು ಹೈರಾಣಾಗಿದ್ದಾರೆ. ಬಹಳ ದಿನಗಳ ನಂತರ ಮೀಸಲಾತಿ ಪ್ರಕಟವಾಗಿದೆ. ಮೀಸಲಾತಿ ಕುರಿತು ಅಪಸ್ವರ ಸಹ ಕೇಳಿ ಬಂದಿದೆ. ಇವೆಲ್ಲವನ್ನು ಸರಿಪಡಿಸಿ ಚುನಾವಣೆ ಯಾವಾಗ ನಡೆಯುತ್ತದೆ ಎಂಬುದು ಕಾದು ನೋಡಬೇಕಿದೆ.

ಗ್ರಾಪಂ ಮೀಸಲಾತಿ ಬಗ್ಗೆ ಆಕ್ಷೇಪಣೆ, ಮನವಿ ಸಲ್ಲಿಸುವವರು, ಜಿಲ್ಲಾಧಿಕಾರಿ ಕಚೇರಿಗೆ ಬಂದು ಸಲ್ಲಿಕೆ ಮಾಡಬಹುದು ಎಂದು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದ್ದಾರೆ.

ನಂದಿಬೇವೂರು ಗ್ರಾಪಂ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪರಿಶಿಷ್ಟ ಪಂಗಡ (ಎಸ್ಟಿ) ಜನಸಂಖ್ಯೆ ಇರುವುದು ಕಣವಿಹಳ್ಳಿ ಗ್ರಾಮದಲ್ಲಿ ಹಿಂದಿನ ಬಾರಿ ಕಣವಿಹಳ್ಳಿ ಗ್ರಾಮಕ್ಕೆ 3 ಎಸ್ಟಿ ಸದಸ್ಯರು ಇದ್ದರು. ಇದೀಗ ಕೇವಲ ಒಂದು ಸ್ಥಾನ ಎಸ್ಟಿಗೆ ನೀಡಲಾಗಿದೆ. ಇದು ಅವೈಜ್ಞಾನಿಕ. ಈ ಸಂಬಂಧ ಜಿಲ್ಲಾಧಿಕಾರಿಗೆ ಆಕ್ಷೇಪಣೆ ಪತ್ರ ಸಲ್ಲಿಸುತ್ತೇವೆ ಎಂದು ನಂದಿಬೇವೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಲಕ್ಷ್ಮೀಚಂದ್ರಶೇಖರ ಕಣವಿಹಳ್ಳಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತರಿಗೆ ಜನಪರ ಕಾಳಜಿ ಅಗತ್ಯ: ದೇಸಾಯಿ
ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆ ಖಚಿತ: ಸುಮತಿ