ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ ಸಭೆಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳು ಪದೇ ಪದೇ ಗೈರಾಗುತ್ತಿದ್ದರಿಂದ ಅವರ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಹಸೀಲ್ದಾರ್ ನೇತ್ರಾವತಿ ಹೇಳಿದರು.
ಕೂಡ್ಲಿಗಿ: ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ ಸಭೆಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳು ಪದೇ ಪದೇ ಗೈರಾಗುತ್ತಿದ್ದರಿಂದ ಅವರ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಹಸೀಲ್ದಾರ್ ನೇತ್ರಾವತಿ ಹೇಳಿದರು.
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತಾಡಿದರು.
ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹಾಗೂ ನಾಡಹಬ್ಬವಾದ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ದೇಶದ ಹಾಗೂ ರಾಜ್ಯದ ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ಆಚರಣೆ ಮಾಡಬೇಕಾಗಿದ್ದು, ಅಧಿಕಾರಿಗಳು ಇನ್ನೂ ಹೆಚ್ಚಿನ ಜವಾಬ್ದಾರಿಯಿಂದ ರಾಷ್ಟ್ರೀಯ ಹಾಗೂ ನಾಡಹಬ್ಬಗಳನ್ನು ಆಚರಣೆ ಮಾಡಬೇಕು. ಆದರೆ, ಇದನ್ನು ಮರೆತ ಅಧಿಕಾರಿಗಳು ಬೇಜವಾಬ್ದಾರಿಯಾಗಿ ಪೂರ್ವಭಾವಿ ಸಭೆಗಳಿಗೆ ಗೈರಾಗುತ್ತಿರುವುದು ವಿಪರ್ಯಾಸ ಎಂದರು.
ಈ ವೇಳೆ ಮಾತನಾಡಿದ ಶಾಲಾಭಿವೃದ್ಧಿ ಸಮನ್ವಯ ಸಮಿತಿಯ ರಾಜ್ಯ ಉಪಾಧ್ಯಕ್ಷ ಗುನ್ನಳ್ಳಿ ರಾಘವೇಂದ್ರ ಅವರು, ರಾಷ್ಟ್ರೀಯ ಹಬ್ಬದ ಸಭೆಗೆ ಗೈರಾಗುತ್ತಿರುವ ಎಷ್ಟು ಅಧಿಕಾರಿಗಳ ವಿರುದ್ಧ ಇಲ್ಲಿ ವರೆಗೂ ಶಿಸ್ತು ಕ್ರಮ ತೆಗೆದುಕೊಂಡಿದ್ದೀರಿ ಎನ್ನುವುದನ್ನು ಸಭೆಯಲ್ಲಿ ತಿಳಿಸಿ ಎಂದು ಆಗ್ರಹಿಸಿದರು. ಆಗ ತಹಸೀಲ್ದಾರ್ ನೇತ್ರಾವತಿ ಮೌನಕ್ಕೆ ಶರಣಾದರು.
ಶಿಷ್ಟಾಚಾರ ಉಲ್ಲಂಘನೆ
ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳ ಹಾಗೂ ಸಂಘಟಕರ ಸಲಹೆ-ಸೂಚನೆ ಪಡೆದು ಅದ್ಧೂರಿ ಆಚರಣೆಗೆ ಕಾರ್ಯಕ್ರಮದ ರೂಪುರೇಷೆ ತಯಾರು ಮಾಡಿರುತ್ತೀರಿ. ಆದರೆ, ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆಯಾಗುವುದಿಲ್ಲ. ಬೇಕಾಬಿಟ್ಟಿಯಾಗಿ ವೇದಿಕೆಯಲ್ಲಿ ಕೆಲವರು ಕುಳಿತುಬಿಡುತ್ತಾರೆ. ಪ್ರತಿ ಕಾರ್ಯಕ್ರಮದಲ್ಲೂ ಈ ರೀತಿಯ ಅಭಾಸಗಳು ಆಗುತ್ತಿದ್ದು, ಪೂರ್ವಭಾವಿ ಸಭೆಯ ತೀರ್ಮಾನದಂತೆ ಕಾರ್ಯಕ್ರಮ ನಡೆಸಲಾಗದಿದ್ದಾಗ ಕಾಟಾಚಾರದ ಪೂರ್ವಸಿದ್ಧತಾ ಸಭೆ ನಡೆಸಬೇಡಿ. ಅದೊಂದು ಗೌರವ ಸೂಚಕ ಕಾರ್ಯಕ್ರಮವಾಗಬೇಕು. ಅಧಿಕಾರಿಗಳೇ ಶಿಷ್ಟಾಚಾರ ಮರೆತರೆ ಹೇಗೆ ಎಂದು ಹಲವು ಮುಖಂಡರು ತಹಸೀಲ್ದಾರರನ್ನು ಪ್ರಶ್ನಿಸಿದರು. ಶೌಚಾಲಯ ಕೊರತೆ:ಕೂಡ್ಲಿಗಿ ಪಟ್ಟಣದ ಮೈಲಾರ ಮಹದೇವ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಜರುಗುತ್ತಿದ್ದು, ಅಂದು ನೂರಾರು ಮಕ್ಕಳು, ಪಾಲಕರು, ಪೋಷಕರು ಕಾರ್ಯಕ್ರಮ ನೋಡಲು ಬರುತ್ತಾರೆ. ಅಂದು ತಾತ್ಕಾಲಿಕವಾಗಿ ಶೌಚಾಲಯ ನಿರ್ಮಿಸಬಹುದು. ಮಹಿಳೆಯರು, ಪುರುಷರು ಮಕ್ಕಳು ಶೌಚಾಲಯಕ್ಕೆ ಎಲ್ಲಿ ಹೋಗಬೇಕು ಎಂದು ಗುನ್ನಳ್ಳಿ ರಾಘವೇಂದ್ರ ಪ್ರಶ್ನೆಗೆ ಅಧಿಕಾರಿಗಳ ಜೊತೆ ಚರ್ಚಿಸುವೆ ಎಂದು ತಹಸೀಲ್ದಾರ್ ನೇತ್ರಾವತಿ ತಿಳಿಸಿದರು.
ಜಾಗೃತಿ ಮೂಡಿಸಿ
ತಾಲೂಕು ಮಟ್ಟದಲ್ಲಿ ಮಾತ್ರ ರಾಷ್ಟ್ರೀಯ ಹಬ್ಬಗಳನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲೂ ಇಂತಹ ಕಾರ್ಯಕ್ರಮ ನಡೆಸಲು ಹಾಗೂ ರಾಷ್ಟ್ರೀಯ ಹಬ್ಬಗಳ ಮಹತ್ವಗಳನ್ನು ತಿಳಿಸಲು ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಲು ತಾಲೂಕು ಮಟ್ಟದ ಅಧಿಕಾರಿಗಳು ಮುಂದಾಗಬೇಕು ಎಂದು ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಸಿ. ಮಾರಪ್ಪ, ಗುನ್ನಳ್ಳಿ ರಾಘವೇಂದ್ರ, ಸಿಪಿಐ ಮುಖಂಡ ವೀರಣ್ಣ ಹಾಗೂ ಇತರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿ ಇಒ ನರಸಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಶ್, ತಹಸೀಲ್ದಾರ್ ನೇತ್ರಾವತಿ ವಿ.ಕೆ., ಬಿಇಒ ಮೈಲೇಶ ಬೇವೂರು, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಸವರೆಡ್ಡಿ, ಪಿಎಸ್ಐ ಪ್ರಕಾಶ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಂಘಟನೆ ಮುಖಂಡರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.