ಭಟ್ಕಳ: ತಾಲೂಕಿನ ಬೈಲೂರು ಗ್ರಾಪಂ ವ್ಯಾಪ್ತಿಯ ಬಸ್ತಿಮಕ್ಕಿ-ಎಡಬಡ್ರು ರಸ್ತೆ ಬದಿಯ ಅರಣ್ಯ ಇಲಾಖೆಯ ಜಾಗದಲ್ಲಿ ಅಕ್ರಮವಾಗಿ ಕಸ ಹಾಗೂ ಕೋಳಿ ತ್ಯಾಜ್ಯ ಹಾಕುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಜಾನುವಾರುಗಳು ಸಂಚರಿಸುವ ಈ ಪ್ರದೇಶದಲ್ಲಿ ಕಸ ಮತ್ತು ಕೋಳಿ ತ್ಯಾಜ್ಯ ಸುರಿಯುವುದರಿಂದ ದುರ್ವಾಸನೆ ಹರಡಿ ಪರಿಸರ ಮಾಲಿನ್ಯದ ಜತೆಗೆ ಆರೋಗ್ಯ ಸಮಸ್ಯೆಗಳೂ ಉಂಟಾಗುತ್ತಿವೆ. ಗ್ರಾಮಸ್ಥರು ಅನೇಕ ಬಾರಿ ಸ್ವಯಂಪ್ರೇರಿತರಾಗಿ ಕಸ ತೆರವುಗೊಳಿಸಿ ಸ್ವಚ್ಛತೆ ಕಾಪಾಡಿದರೂ, ಕಸ ಸುರಿಯುವವರ ಕೃತ್ಯ ಮಾತ್ರ ಮುಂದುವರಿದಿದೆ. ಹಗಲು ಹೊತ್ತಲ್ಲೇ ಕೋಳಿ ತ್ಯಾಜ್ಯ ತುಂಬಿದ ವಾಹನ ತಂದು ಅರಣ್ಯ ಇಲಾಖೆಯ ಜಾಗದಲ್ಲಿ ಕಸ ಸುರಿಯಲು ಯತ್ನಿಸುತ್ತಿದ್ದ ವೇಳೆ ಗ್ರಾಮಸ್ಥರು ವಾಹನ ತಡೆದು, ಸಂಬಂಧಪಟ್ಟವರನ್ನು ಅರಣ್ಯ ಇಲಾಖೆ ಹಾಗೂ ಬೈಲೂರು ಗ್ರಾಪಂ ಅಧಿಕಾರಿಗಳಿಗೆ ಒಪ್ಪಿಸಿದರು. ಬಳಿಕ ಗ್ರಾಪಂ ತಪ್ಪಿತಸ್ಥರಿಗೆ ದಂಡ ವಿಧಿಸಿ ವಸೂಲಿ ಮಾಡಿತು. ಕೇವಲ ದಂಡ ವಿಧಿಸಿ ಬಿಡುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳದ ಕಾರಣ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿವೆ ಎಂದು ಆರೋಪಿಸಿದ್ದಾರೆ. ಈ ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ವಿದ್ಯುತ್ ಕಂಬ ಹಾಗೂ ಬೀದಿದೀಪಗಳ ವ್ಯವಸ್ಥೆ ಕಲ್ಪಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.
ಇದರ ಪರಿಣಾಮವಾಗಿ ರಾತ್ರಿ ವೇಳೆಯಲ್ಲಿ ಹಾಗೂ ಜನರ ಸಂಚಾರ ಕಡಿಮೆ ಇರುವ ಸಮಯದಲ್ಲಿ ಅಕ್ರಮ ಕಸ ವಿಲೇವಾರಿ ನಿರಂತರವಾಗಿ ನಡೆಯುತ್ತಿದೆ. ಅಕ್ರಮವಾಗಿ ಕಸ, ತ್ಯಾಜ್ಯ ಹಾಕುವುದಕ್ಕೆ ಶಾಶ್ವತ ಕಡಿವಾಣ ಹಾಕಲು ತಕ್ಷಣ ಸಿಸಿ ಕ್ಯಾಮೆರಾ ಅಳವಡಿಸುವುದು, ಬೀದಿದೀಪಗಳ ವ್ಯವಸ್ಥೆ ಕಲ್ಪಿಸುವುದು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಗಳನ್ನು ಒತ್ತಾಯಿಸಿದ್ದಾರೆ.