ಕನ್ನಡಪ್ರಭ ವಾರ್ತೆ ಚೇಳೂರು
ನೂತನ ಚೇಳೂರು ತಾಲೂಕಿಗೆ ಸೇರಿದ ಚಿಲಕಲನೇರ್ಪು ಹೋಬಳಿಯ ಜನತೆಗೆ ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯ ಹಾಗೂ ಜನರಿಗೆ ಕಂದಾಯ ಇಲಾಖೆಯ ಮೂಲ ದಾಖಲಾತಿಗಳನ್ನು ಪಡೆದುಕೊಳ್ಳಲು ನಾಡ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆಯಾದರೂ, ಅಲ್ಲಿ ಸಿಬ್ಬಂದಿ ಬೇಜವಾಬ್ದಾರಿಯಿಂದ ಹಾಗೂ ಕೊರತೆಯಿಂದಾಗಿ ಸಾರ್ವಜನಿಕರಿಗೆ ಸರಿಯಾದ ವೇಳೆಗೆ ಕೆಲಸ- ಕಾರ್ಯಗಳು ಆಗುತ್ತಿಲ್ಲ.ದೂರದ ಹಳ್ಳಿಗಳಿಂದ ಬರುವ ಜನ ಬೆಳಗ್ಗೆಯಿಂದಲೇ ನಾಡ ಕಚೇರಿಗೆ ಬಂದರೂ ಬೇಕಾದ ಸೌಲಭ್ಯ ದೊರಕದಾಗಿದೆ. ಜತೆಗೆ ಬಡವರು ಅಂದಿನ ದಿನಗೂಲಿ ಬಿಟ್ಟು ಅಲೆಯುವಂತಾಗಿದೆ.
ಕಚೇರಿಗೆ ಅಲೆದಾಟ: ಜನರು ಕೈಯಲ್ಲಿ ಅರ್ಜಿ ಹಿಡಿದು ಕಚೇರಿಗೆ ಬಂದರೆ ದಿನಪೂರ್ತಿ ಕಾಯಬೇಕಾಗಿದೆ. ಕೆಲವೊಮ್ಮೆ ಕಾದರೂ ಯಾವುದೇ ಕೆಲಸವಾಗದೇ ಮತ್ತೆ ಮತ್ತೆ ಕಚೇರಿಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸಕಾಲ ಯೋಜನೆಯ ಲಾಭ ಜನತೆಗೆ ಇನ್ನೂ ಸಿಗದಿರುವುದು ಚರ್ಚೆಗೆ ಗ್ರಾಸವಾಗಿದೆ.ನಾಡ ಕಚೇರಿಯಲ್ಲಿ ರೈತರಿಗೆ, ಪಹಣಿ, ಜಮೀನು, ದೃಢೀಕರಣ ಪತ್ರ, ಹಕ್ಕು ಪತ್ರ, ಸಾರ್ವಜನಿಕರಿಗೆ ಆದಾಯ, ಜಾತಿ ಪ್ರಮಾಣ ಪತ್ರ, ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರಿಗೆ ಸೌಲಭ್ಯ ವೇತನಕ್ಕೆ ಈ ಕಚೇರಿಯಲ್ಲಿಯೇ ಅರ್ಜಿ ಸಲ್ಲಿಸಬೇಕಾಗಿದೆ. ಮೂಲ ದಾಖಲಾತಿಗಳನ್ನು ಪಡೆಯಲು ನಾಡಕಚೇರಿಗೆ ಹೋಗಬೇಕಾಗಿದ್ದು, ಅಲ್ಲಿನ ಸಿಬ್ಬಂದಿ ಅವ್ಯವಸ್ಥೆ ಮತ್ತು ನಿರ್ವಹಣೆಯಿಲ್ಲದ ಕಾರಣ ಜನರು ತೊಂದರೆ ಅನುಭವಿಸಬೇಕಾಗಿದೆ.
ಕಚೇರಿಗೆ ಒಂದಲ್ಲಾ ಒಂದು ಕೆಲಸದ ಮೇಲೆ ಬರುವವರ ಸಂಖ್ಯೆ ಹೆಚ್ಚಿದ್ದು, ಬಂದವರಿಗೆಲ್ಲಾ ಕೆಲಸವಾಗುತ್ತಿಲ್ಲ. ಜನಸಾಮಾನ್ಯರು ತಮಗೆ ಬೇಕಾದ ದಾಖಲೆ ಹಾಗೂ ಪ್ರಮಾಣ ಪತ್ರಗಳನ್ನು ಪಡೆಯಲು ಬಂದರೆ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂಬ ದೂರು ಇದೆ.ಇನ್ನೊಂದೆಡೆ ಸರ್ವರ್ ಡೌನ್, ಇಂಟರ್ ನೆಟ್ ಸೆಂಟರ್ ಸರಿಯಿಲ್ಲ. ಕಂಪ್ಯೂಟರ್ ಕೆಟ್ಟಿದೆ ಎಂಬ ಸಬೂಬು ಹೇಳುವುದರಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹೋಗಬೇಕಾಗಿದೆ, ಇದರಿಂದ ಜನತೆಗೆ ತೊಂದರೆ ಎದುರಾಗಿದೆ. ಇದಕ್ಕೆ ಸಿಬ್ಬಂದಿಯ ಕೊರತೆ ಹಾಗೂ ಸರ್ವರ್ ಸಮಸ್ಯೆ ಮುಖ್ಯ ಕಾರಣವಾಗಿದೆ ಎಂಬುದು ಜನರಿಂದಲೇ ಕೇಳಿ ಬರುತ್ತದೆ.
‘ಸರ್ಕಾರ ಕಂದಾಯ ಇಲಾಖೆ ಮೂಲಕ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ, ನಾಡಕಚೇರಿಯಲ್ಲಿನ ಸಿಬ್ಬಂದಿ ಮತ್ತು ಕೇಂದ್ರದ ನಿರ್ವಹಣೆ ಇಲ್ಲದೆ ಇಲಾಖೆ ವಿಶ್ವಾಸ ಕಳೆದುಕೊಳ್ಳುತ್ತಿದೆ.’ಮಿಂಚನಹಳ್ಳಿ ನರಸಿಂಹ (ಬಳ್ಳಾರಿ)
‘ನಾಡಕಚೇರಿಯಲ್ಲಿ ಹಳೆಯ ಪಹಣಿ ದಾಖಲೆಗಳು ಬೇಕೆಂದು ವಾರದಿಂದ ಅಲೆದಾಡುತ್ತಿದ್ದರೂ,ಇಲ್ಲಿನ ಅಧಿಕಾರಿಗಳು ಬಂದಾಗೆಲ್ಲ ಯಾವುದೋ ಒಂದು ನೆಪ ಹೇಳಿ ಕಳುಹಿಸುತ್ತಿದ್ದಾರೆ. ಅದರಲ್ಲೂ ದಾಖಲೆಗಳ ಪ್ರತಿಗಳನ್ನು ನೀಡಲು ಚಿಲಕಲನೇರ್ಪು ನಾಡಕಚೇರಿಯಲ್ಲಿನ ಸಿಬ್ಬಂದಿಯೊಬ್ಬರು ಮೂನ್ನೂರು ರೂಪಾಯಿ ಹಣ ಕೇಳಿದ್ದರು.’- ಹೆಸರು ಹೇಳಲು ಇಚ್ಛಿಸದ ವ್ಯಕ್ತಿ