ನೀರಾವರಿ ನಿಗಮದ ಬಫರ್‌ ಜೋನ್ ಜಾಗ ಅತಿಕ್ರಮಣ..!

KannadaprabhaNewsNetwork |  
Published : Jun 07, 2026, 01:30 AM IST
೬ಕೆಎಂಎನ್‌ಡಿ-೩ಮಂಡ್ಯ ಹೊರವಲಯದಲ್ಲಿರುವ ಚಿಕ್ಕಮಂಡ್ಯ ಕೆರೆಯಂಗಳದ ಬೀಡಿ ಕಾಲೋನಿ ಬಳಿ ಹಳ್ಳ ಹರಿಯುವ ಪಕ್ಕದ ಜಾಗ ಒತ್ತುವರಿಯಾಗಿರುವ ದೃಶ್ಯ. | Kannada Prabha

ಸಾರಾಂಶ

ಮಂಡ್ಯ ನಗರದ ಕೆರೆಯಂಗಳ ಸಮೀಪ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ಬಫರ್‌ಜೋನ್ ಜಾಗವನ್ನು ಖಾಸಗಿ ವ್ಯಕ್ತಿಗಳು ಅಕ್ರಮ ನಿವೇಶನಕ್ಕೆ ಕಲ್ಲು ನೆಟ್ಟಿ ಒತ್ತುವರಿ ಮಾಡಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ. ಸರ್ಕಾರಿ ಜಾಗದಲ್ಲಿ ಕಲ್ಲುಗಳನ್ನು ನೆಟ್ಟು ಅಕ್ರಮ ನಿವೇಶನಗಳನ್ನು ರಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಕೆರೆಯಂಗಳ ಸಮೀಪ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ಬಫರ್‌ಜೋನ್ ಜಾಗವನ್ನು ಖಾಸಗಿ ವ್ಯಕ್ತಿಗಳು ಅಕ್ರಮ ನಿವೇಶನಕ್ಕೆ ಕಲ್ಲು ನೆಟ್ಟಿ ಒತ್ತುವರಿ ಮಾಡಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.

ಬೀಡಿ ಕಾಲೋನಿ ಪಕ್ಕದಲ್ಲಿ ಹರಿಯುವ ಹಳ್ಳದ ಪಕ್ಕದ ಜಾಗವನ್ನು ಖಾಸಗಿಯವರು ಅತಿಕ್ರಮಿಸಿಕೊಂಡಿದ್ದಾರೆ. ಸರ್ಕಾರಿ ಜಾಗದಲ್ಲಿ ಕಲ್ಲುಗಳನ್ನು ನೆಟ್ಟು ಅಕ್ರಮ ನಿವೇಶನಗಳನ್ನು ರಚಿಸಿದ್ದಾರೆ. ಈ ಬಫರ್‌ಜೋನ್ ಜಾಗವು ಚಿಕ್ಕಮಂಡ್ಯ ಕೆರೆಯಂಗಳ ಸರ್ವೆ ನಂ.೫೦೭ರ ಆಟೋಚಾಲಕರ ಬಡಾವಣೆಯ ಎದುರು ಇದ್ದು ಈ ಜಾಗವನ್ನು ಕೆಲವರು ಅಕ್ರಮವಾಗಿ ರಚನೆ ಮಾಡಿ ನಿವೇಶನಗಳನ್ನು ಹಂಚಿಕೆ ಮಾಡಿಕೊಂಡಿರುವ ಬಗ್ಗೆ ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ, ಆಟೋ ಚಾಲಕರ ವೇದಿಕೆ ಅಧ್ಯಕ್ಷ ಟಿ.ಕೃಷ್ಣ ಹಾಗೂ ಇತರರು ನಗರಸಭೆ, ಕೊಳಚೆ ನಿರ್ಮೂಲನಾ ಮಂಡಳಿ, ನೀರಾವರಿ ಇಲಾಖೆ, ತಹಸೀಲ್ದಾರ್, ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಈ ಹಿಂದೆಯೇ ಹಲವು ಇಲಾಖೆಗಳ ಗಮನಸೆಳೆದಿದ್ದರು.

ಇದರಿಂದ ಎಚ್ಚೆತ್ತ ನೀರಾವರಿ ಇಲಾಖೆಯವರು ಹಳ್ಳದ ಪಕ್ಕದ ಜಾಗ ಬಫರ್‌ಜೋನ್ ಆಗಿದ್ದು, ಹಳ್ಳ ನಿರ್ವಹಣೆಗೋಸ್ಕರ ಬಫರ್ ಜೋನ್‌ಗಳನ್ನು ಕಾಯ್ದಿರಿಸಲಾಗಿದೆ. ಈ ಜಾಗದಲ್ಲಿ ಯಾವುದೇ ನಿವೇಶನ ಅಥವಾ ಇನ್ನಿತರ ಶಾಶ್ವತ ಕಾಮಗಾರಿಗಳನ್ನು ನಿರ್ವಹಿಸುವುದು ರಾಷ್ಟ್ರೀಯ ಹಸಿರು ಪ್ರಾಧಿಕಾರ ಹಾಗೂ ಕರ್ನಾಟಕ ನೀರಾವರಿ ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಆದ್ದರಿಂದ ಕೂಡಲೇ ಬಫರ್‌ಜೋನ್ ಜಾಗದಲ್ಲಿ ನಿವೇಶನಗಳಿಗೆ ನೆಟ್ಟಿರುವ ಕಲ್ಲುಗಳನ್ನು ತೆರವುಗೊಳಿಸಿ ಬಫರ್‌ಜೋನ್ ಜಾಗವನ್ನು ಖಾಲಿ ಉಳಿಸುವಂತೆ ನಗರಸಭೆ ಪೌರಾಯುಕ್ತರಿಗೆ ಹಿಂದೆಯೇ ಪತ್ರ ಬರೆದಿದ್ದರೂ ತೆರವಿಗೆ ಸಂಬಂಧಿಸಿದಂತೆ ಯಾರೊಬ್ಬರೂ ಕ್ರಮ ವಹಿಸದಿರುವುದು ಅಚ್ಚರಿಯ ಸಂಗತಿಯಾಗಿದೆ.

ಕೊನೆಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ದೂರು ನೀಡಿದ ಪರಿಣಾಮ ಅವರು ತಹಸೀಲ್ದಾರ್ ಅವರಿಗೆ ಈ ಕುರಿತು ಪರಿಶೀಲನೆ ನಡೆಸಿ ಕ್ರಮ ವಹಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದ್ದು, ನಗರಸಭೆ, ತಹಸೀಲ್ದಾರ್, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಪರಸ್ಪರ ಹೊಂದಾಣಿಕೆಯಿಂದ ಒತ್ತುವರಿ ತೆರವು ಪ್ರಕ್ರಿಯೆ ನಡೆಸಿದಲ್ಲಿ ಬಫರ್‌ಜೋನ್ ಜಾಗವನ್ನು ಉಳಿಸಬಹುದು. ಆದರೆ, ಇಲಾಖಾ ಅಧಿಕಾರಿಗಳ ನಡುವೆ ಹೊಂದಾಣಿಕೆ ಕೊರತೆ ಇರುವುದರಿಂದ ಒತ್ತುವರಿ ತೆರವು ಕೆಲ ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದೆ.

ಅಲ್ಲದೇ, ಬಫರ್‌ಜೋನ್ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮ ನಿವೇಶನಗಳಿಗೆ ಕಲ್ಲು ನೆಟ್ಟವರು ಯಾರು. ನಿವೇಶನಗಳನ್ನು ಈಗಾಗಲೇ ಬೇರೆಯವರಿಗೆ ಮಾರಾಟ ಮಾಡಲಾಗಿದೆಯೇ ಅಥವಾ ಇನ್ನೂ ಮಾರಾಟಕ್ಕೆ ಸಿದ್ಧತೆ ನಡೆಸಿದ್ದಾರೆಯೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಆರೋಗ್ಯಕ್ಕಾಗಿ ಗಿಡಗಳನ್ನು ಬೆಳೆಸಿ: ಮಹೇಶ್ ಕುಮಾರ್
ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಉಂಟಾಗಬೇಕು