ವಿಶೇಷ ವರದಿ
ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ೮೧ ಅಡಿಗೆ ಕುಸಿದಿದೆ. ಮೂರು ವರ್ಷಗಳ ಹಿಂದೆ ಜೂನ್ ತಿಂಗಳಲ್ಲಿ ಅಣೆಕಟ್ಟೆಯೊಳಗೆ ಈ ಪ್ರಮಾಣದ ನೀರಿನ ಮಟ್ಟ ದಾಖಲಾಗಿತ್ತು. ಮುಂಗಾರು ಆಗಮನ ವಿಳಂಬವಾದರೆ ಜಲಾಶಯದ ನೀರಿನ ಮಟ್ಟ ಅಪಾಯದ ಮಟ್ಟ ತಲುಪುವ ಆತಂಕ ವ್ಯಕ್ತವಾಗುತ್ತಿದೆ.
ಪ್ರಸ್ತುತ ಜಲಾಶಯದಲ್ಲಿ ೮೧.೩೬ ಅಡಿ ನೀರಿದ್ದು, ಅಣೆಕಟ್ಟೆಗೆ ೫೨೮ ಕ್ಯುಸೆಕ್ ನೀರು ಹರಿದುಬರುತ್ತಿದೆ. ಜಲಾಶಯದಿಂದ ಹೊರಕ್ಕೆ ನದಿ ಮತ್ತು ನಾಲೆ ಸೇರಿ ೮೫೨ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಅಣೆಕಟ್ಟೆಯಲ್ಲಿ ೧೧.೩೯೯ ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ ೧೦೭.೬೮ ಅಡಿ ನೀರು ಸಂಗ್ರಹವಾಗಿತ್ತು. ಆ ಸಮಯದಲ್ಲಿ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಹೆಚ್ಚಾಗಿ ಸುರಿದಿತ್ತು. ಜೊತೆಗೆ ಮುಂಗಾರು ಮಳೆಯೂ ನಿರೀಕ್ಷೆಯಂತೆ ಆಗಮನವಾಗಿದ್ದರಿಂದ ಅಂದು ಜಲಾಶಯಕ್ಕೆ ೬೫೧೩ ಕ್ಯುಸೆಕ್ ನೀರು ಹರಿದುಬರುತ್ತಿತ್ತು. ಅಂದು ಜಲಾಶಯದಲ್ಲಿ ೨೯.೪೫೪ ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.
೨೦೨೩ರಲ್ಲಿ ಮುಂಗಾರು ಆಗಮನದ ವಿಳಂಬದಿಂದಾಗಿ ಜಲಾಶಯದ ನೀರಿನ ಮಟ್ಟ ಜೂನ್ ತಿಂಗಳಲ್ಲಿ ೭೮ ರಿಂದ ೭೯ ಅಡಿಗೆ ತಲುಪಿತ್ತು. ಮುಂಗಾರು ಮಳೆಯ ಕೊರತೆ ಹಾಗೂ ಬರಗಾಲದ ಛಾಯೆಯಿಂದ ಆ ವರ್ಷ ಅಣೆಕಟ್ಟು ಭರ್ತಿಯಾಗಲೇ ಇಲ್ಲ. ಮಳೆಯ ಅಭಾವದಿಂದ ಜಲಾಶಯದ ನೀರಿನ ಮಟ್ಟ ಆ ವರ್ಷ ೧೦೭.೧೮ ಅಡಿಗೆ ತಲುಪುವಲ್ಲಿ ಮಾತ್ರ ಶಕ್ತವಾಗಿತ್ತು.
ಹಾಲಿ ಅಣೆಕಟ್ಟೆಯ ನೀರಿನ ಮಟ್ಟ ೮೧ ಅಡಿಗೆ ತಲುಪಿರುವುದು ಅಪಾಯದ ಮುನ್ಸೂಚನೆಯಾಗಿದೆ. ೭೦ ಅಡಿಯವರೆಗಷ್ಟೇ ನೀರನ್ನು ಪಡೆಯಲು ಸಾಧ್ಯ. ಆನಂತರ ಉಳಿದಿದ್ದೆಲ್ಲವೂ ಡೆಡ್ ಸ್ಟೋರೇಜ್ ಆಗಿದೆ. ಮುಂಗಾರು ಮಳೆ ಆರಂಭವಾಗಿ ಜಲಾಶಯಕ್ಕೆ ನೀರು ಹರಿದುಬರುವಂತಾದರೆ ನೀರಿನ ಸಮಸ್ಯೆ ಸುಧಾರಿಸಬಹುದು. ಒಮ್ಮೆ ಮಳೆ ನಿರೀಕ್ಷೆಯಂತೆ ಬಾರದಿದ್ದರೆ ಪರಿಸ್ಥಿತಿ ಇನ್ನಷ್ಟು ಸಂಕಷ್ಟಮಯವಾಗಲಿದೆ.
ಕಳೆದ ಮೂರು ವರ್ಷದಿಂದ ಹೆಚ್ಚುವರಿ ಮಳೆ ಸುರಿದಾಗಲೆಲ್ಲಾ ಮಳೆಯಿಂದ ಬಿದ್ದ ಹೆಚ್ಚುವರಿ ನೀರನ್ನೆಲ್ಲಾ ಯಾವುದೇ ಅಡೆತಡೆಗಳಿಲ್ಲದೆ ತಮಿಳುನಾಡಿಗೆ ಹರಿಸಲಾಯಿತು. ಕೆರೆಗಳಲ್ಲಿ ತುಂಬಿರುವ ಹೂಳೆತ್ತಿಸಿ ನೀರಿನ ಸಂಗ್ರಹವನ್ನು ಹೆಚ್ಚಿಸುವ, ಹೊಸ ಕೆರೆಗಳನ್ನು, ಮಿನಿ ಬ್ಯಾರೇಜ್‌ಗಳನ್ನು ನಿರ್ಮಿಸಿಕೊಂಡು ನೀರು ಶೇಖರಣೆಗೆ ಆದ್ಯತೆ ನೀಡುವ ಯೋಜನೆಗಳು ರಾಜ್ಯದ ಕಾವೇರಿ ಕಣಿವೆಯಲ್ಲೆಲ್ಲೂ ನಡೆಯಲೇ ಇಲ್ಲ. ಪರಿಣಾಮ ಮಳೆ ಅಭಾವ ಎದುರಾದಾಗಲೆಲ್ಲಾ ತಮಿಳುನಾಡಿನೊಂದಿಗೆ ಕದನಕ್ಕಿಳಿಯುವುದು ಸರ್ವೇಸಾಮಾನ್ಯವಾಗಿದೆ. ಇದು ಎರಡು-ಮೂರು ದಶಕಗಳಿಂದಲೂ ಸಂಪ್ರದಾಯಬದ್ಧವಾಗಿ ನಡೆದುಕೊಂಡೇ ಬರುತ್ತಿದೆ.