ಬಾಕಿ ವೇತನ: ನೀರಾವರಿ ಇಲಾಖೆಯ ಕಾರ್ಮಿಕರ ಧರಣಿ

KannadaprabhaNewsNetwork |  
Published : May 05, 2026, 02:30 AM IST
ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಕ್ಯಾಂಪಿನ ನೀರಾವರಿ ಇಲಾಖೆ ಮುಂದೆ ಕಾರ್ಮಿಕರು ಧರಣಿ ನಡೆಸಿದರು. | Kannada Prabha

ಸಾರಾಂಶ

ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಬಾಕಿ ವೇತನ ನೀಡುವಂತೆ ಒತ್ತಾಯಿಸಿ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ (ಎಐಸಿಸಿಟಿಯು) ವತಿಯಿಂದ ವಡ್ಡರಹಟ್ಟಿ ನೀರಾವರಿ ಇಲಾಖೆಯ ಕಚೇರಿ ಮುಂದೆ ಸೋಮವಾರ ಧರಣಿ ನಡೆಸಲಾಯಿತು.

ಗಂಗಾವತಿ: ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಬಾಕಿ ವೇತನ ನೀಡುವಂತೆ ಒತ್ತಾಯಿಸಿ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ (ಎಐಸಿಸಿಟಿಯು) ವತಿಯಿಂದ ವಡ್ಡರಹಟ್ಟಿ ನೀರಾವರಿ ಇಲಾಖೆಯ ಕಚೇರಿ ಮುಂದೆ ಸೋಮವಾರ ಧರಣಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಕೆ. ನಾಗಲಿಂಗಸ್ವಾಮಿ, ತುಂಗಭದ್ರಾ ನೀರಾವರಿ ಯೋಜನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಜನವರಿ, ಫೆಬ್ರವರಿ, ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ವೇತನ ಪಾವತಿಸದೇ ನಿರ್ಲಕ್ಷ್ಯ ವಹಿಸಲಾಗಿದೆ. ಸಂಧಾನ ಸಭೆಗಳಲ್ಲಿ ಹಾಗೂ ಕಾರ್ಮಿಕ ಇಲಾಖೆಯ ಮುಂದಾಳತ್ವದಲ್ಲಿ ತೆಗೆದುಕೊಳ್ಳಲಾದ ನಿರ್ಧಾರಗಳನ್ನೂ ಜಾರಿಗೊಳಿಸದೇ ಇರುವುದರಿಂದ ಕಾರ್ಮಿಕರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಕಾರ್ಮಿಕರಿಗೆ ಉದ್ಯೋಗ ಭದ್ರತೆ, ಕನಿಷ್ಠ ವೇತನ, ಇಎಸ್‌ಐ, ಪಿಎಫ್ ಸೇರಿದಂತೆ ಕಾನೂನುಬದ್ಧ ಸೌಲಭ್ಯಗಳನ್ನು ನೀಡಬೇಕಾದ ಸರ್ಕಾರದ ಸಂಸ್ಥೆಯೆ ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘಿಸುತ್ತಿರುವುದು ಖಂಡನೀಯ. ಟೆಂಡರ್ ಪ್ರಕ್ರಿಯೆಯ ವಿಳಂಬದ ಹೆಸರಿನಲ್ಲಿ ಕಾರ್ಮಿಕರನ್ನು ಕೆಲಸದಿಂದ ದೂರ ಇಡುವುದು ಹಾಗೂ ಗುತ್ತಿಗೆದಾರರ ಮೂಲಕ ಕೆಲಸ ಮಾಡಿಸುವುದು ಕಾರ್ಮಿಕ ವಿರೋಧಿ ಕ್ರಮವಾಗಿದೆ ಎಂದು ದೂರಿದರು.

ಸಂಘದ ಪ್ರಮುಖ ಬೇಡಿಕೆಗಳಾದ ಬಾಕಿ ಇರುವ ಎಲ್ಲ ವೇತನವನ್ನು ತಕ್ಷಣ ಪಾವತಿಸಬೇಕು, ಕಾರ್ಮಿಕ ನ್ಯಾಯಾಲಯ ಮತ್ತು ಸರ್ಕಾರದ ನಿರ್ದೇಶನಗಳನ್ನು ಜಾರಿಗೊಳಿಸಬೇಕು, ಕಾರ್ಮಿಕ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ವೇತನ ವ್ಯತ್ಯಾಸದ ಮೊತ್ತವನ್ನು ಕಾರ್ಮಿಕರ ಖಾತೆಗೆ ಜಮಾ ಮಾಡಬೇಕು, ಕಾರ್ಮಿಕರಿಗೆ ನಿರಂತರ ಕೆಲಸ ಹಾಗೂ ಉದ್ಯೋಗ ಭದ್ರತೆ ನೀಡಬೇಕು, ಈ ಎಲ್ಲ ಬೇಡಿಕೆಗಳನ್ನು ತಕ್ಷಣ ಈಡೇರಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಧರಣಿ ನೇತೃತ್ವವನ್ನು ವಡ್ಡರಹಟ್ಟಿ ಉಪ ವಿಭಾಗದ ಅಧ್ಯಕ್ಷ ಶರಣಬಸವ ಹೇರೂರು, ಕಾರಟಗಿ ಉಪ ವಿಭಾಗದ ಅಧ್ಯಕ್ಷ ಹುಚ್ಚಯ್ಯ ಸ್ವಾಮಿ, ಎಐಸಿಸಿಟಿಯು ಜಿಲ್ಲಾಧ್ಯಕ್ಷ ವಿಜಯ್ ದೊರೆರಾಜು, ಲಕ್ಷ್ಮಣ ಸಿಂಗನಾಳ, ಚಾಂದ್ ಪಾಷಾ, ಶಿವಕುಮಾರ ತಿಪ್ಪನಾಳ, ಸೈಯದ್ ಸಾಬ್, ಗುಂಡಪ್ಪ, ವೀರಯ್ಯ ಸ್ವಾಮಿ, ಶೇಖರ್ ಕಾರಟಗಿ, ಹನುಮಂತಪ್ಪ ಹೂಗಾರ್, ಯಮನಪ್ಪ ಕುಂಟೋಜಿ, ಶರಣಪ್ಪ ಹಣವಾಳ ಕ್ಯಾಂಪ್, ಖಾಜಾಸಾಬ್, ಲಕ್ಷ್ಮೀ, ಲಕ್ಷ್ಮಮ್ಮ, ನಾಗಮ್ಮ, ಮೆಹಬೂಬ್ ಸಾಬ್, ನಬಿಸಾಬ್, ವೆಂಕಟೇಶ್ ಹಾಗೂ ವಡ್ಡರಹಟ್ಟಿ ಮತ್ತು ಕಾರಟಗಿ ಉಪ ವಿಭಾಗದ ಕಾರ್ಮಿಕರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರೀಕ್ಷಾ ಕೇಂದ್ರಗಳಲ್ಲಿ ಜನಿವಾರ, ಮಂಗಳಸೂತ್ರ ತೆಗಿಸುವುದು ನಿಲ್ಲಲಿ
ಫಸಲ್ ಬಿಮಾ ಯೋಜನೆಯಲ್ಲಿ ಭಾರೀ ಅಕ್ರಮ: ಆರೋಪ