- ಮಾನಸಿಕ ಅಸ್ವಸ್ಥನ ಮೇಲಿನ ಹಲ್ಲೆ ಪ್ರಕರಣ
- ಈ ಕುರಿತು ತೀವ್ರ ಆಘಾತ ವ್ಯಕ್ತಪಡಿಸಿದ ಕೋರ್ಟ್‌ಕನ್ನಡಪ್ರಭ ವಾರ್ತೆ ಬೆಂಗಳೂರು
ಚಾಮರಾಜನಗರ ತಾಲೂಕಿನ ಮಸಣಾಪುರ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿನ ನಾಮಫಲಕಕ್ಕೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು ಅವರನ್ನು ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಅವರೇನು ಪೊಲೀಸ್ ಅಧಿಕಾರಿಯೋ ಇಲ್ಲ, ರಾಜಕಾರಣಿಯೋ? ಎಂದು ಹೇಳಿದೆ.ಅಂಬೇಡ್ಕರ್ ಫಲಕಕ್ಕೆ ಅಪಮಾನ, ಆರೋಪಿಗೆ ಥಳಿತ ಪ್ರಕರಣವನ್ನು ನ್ಯಾ.ಎಂ. ನಾಗಪ್ರಸನ್ನ ಅವರ ಪೀಠ ವಿಚಾರಣೆಗೆ ತೆಗೆದುಕೊಂಡಿತು. ದೀಪಗಳನ್ನು ಹೊಡೆದುಹಾಕಿ ಅವಮಾನ ಮಾಡಿದ ಆರೋಪ ಸಂಬಂಧ 19 ವರ್ಷದ ಮಾನಸಿಕ ಅಸ್ವಸ್ಥನನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ಬಗ್ಗೆ ದಿಗ್ಭ್ರಾಂತಿ ವ್ಯಕ್ತಪಡಿಸಿದ ಹೈಕೋರ್ಟ್ ರಾಜ್ಯದಲ್ಲಿ ಅರಾಜಕತೆ ತಲೆ ಎತ್ತಿದೆ ಎಂದು ಕಿಡಿಕಾರಿದೆ.
100 ಜನರ ಗುಂಪಿನಿಂದ ಹಲ್ಲೆ:ಇದೇ ವೇಳೆ ಸುಮಾರು 100 ಜನರ ಗುಂಪು ಮಾನಸಿಕ ಅಸ್ವಸ್ಥ ಯುವಕನನ್ನು ಕಲ್ಲಿನ ಕಂಬಕ್ಕೆ ಕಟ್ಟಿ ಮನಸೋಇಚ್ಛೆ ಥಳಿಸಿದೆ. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯು, ಆರೋಪಿಯ ಗಡಿಪಾರಿಗೆ ಆದೇಶಿಸುತ್ತೇನೆ, ರೌಡಿ ಶೀಟರ್ ತೆರೆಯುತ್ತೇನೆ. ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸುತ್ತೇನೆ ಎಂದು ಬೆದರಿಕೆವೊಡ್ಡಿ ಬಹಿರಂಗವಾಗಿ ನೀಡಿದ ವಿಡಿಯೋವನ್ನು ನೋಡಿದ ನ್ಯಾಯಮೂರ್ತಿಗಳು, ಇವರೇನು ಪೊಲೀಸ್ ಅಧಿಕಾರಿಯೋ? ರಾಜಕಾರಣಿಯೋ? ರಾಜಕಾರಣಿಗಳ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ಹೀಗೆಲ್ಲಾ ಮಾತನಾಡುವುದಾದರೆ ಅವರಿಗೆ ಖಾಕಿ ಸಮವಸ್ತ್ರ ಬಿಚ್ಚಿ ಬಿಳಿ ಬಣ್ಣದ ಧಿರಿಸು ಧರಿಸಿಕೊಳ್ಳಲಿ. ಇನ್ನು ಮುಂದೆ ಪೊಲೀಸರ ಉಪಸ್ಥಿತಿ ಇರುವೆಡೆ ರಾಜ್ಯದಾದ್ಯಂತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದರೆ, ಪೊಲೀಸ್ ಅಪರಾಧಗಳು ಕಡಿಮೆಯಾಗುತ್ತವೆ ಎಂದು ತರಾಟೆಗೆ ತೆಗೆದುಕೊಂಡರು.ಹಾಗೆಯೇ, ಯುವಕನನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಿರುವುದ ನಿಜಕ್ಕೂ ಅಕ್ಷಮ್ಯ ಅಪರಾಧ. ನಾವು ಯಾವ ಯುಗದಲ್ಲಿ ಬದುಕುತ್ತಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂಥ ಘಟನ ನಡೆಯುತ್ತಿದೆ. ರಾಜ್ಯದಲ್ಲಿ ಅರಾಜಕತೆ ತಾಂಡವಾಡುತ್ತಿದೆ. ಇಲ್ಲಿ ಜಗಳ ಮುಖ್ಯವಲ್ಲ. ಒಬ್ಬ ಯುವಕನನ್ನು ಬೆತ್ತಲೆಗೊಳಿಸಿ ಥಳಿಸಲಾಗಿದೆ. ಜನ ಸಹ ಬೇಡದ ವಿಚಾರಕ್ಕೆ ಗಲಾಟೆ ಮಾಡ್ತಾ ಇದ್ದರೆ ದೇಶವೂ ಉದ್ಧಾರವಾಗುವುದಿಲ್ಲ. ಜನರೂ ಉದ್ಧಾರ ಆಗಲ್ಲ ಎಂದು ಮಾರ್ಮಿಕವಾಗಿ ನುಡಿಯಿತು.