ಕೆಆರ್‌ಎಸ್‌ಗೆ ಬಿಜೆಪಿಯಿಂದ ಮುತ್ತಿಗೆ ಯತ್ನ

KannadaprabhaNewsNetwork |  
Published : Aug 01, 2026, 02:00 AM IST
BJP

ಸಾರಾಂಶ

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ ಎಂದು ಆರೋಪಿಸಿ, ನೀರು ಬಿಡಲು ಆದೇಶ ನೀಡಿರುವ ಸಮಿತಿ   ಪ್ರಾಧಿಕಾರದ ಕ್ರಮ ಖಂಡಿಸಿ ರಾಜ್ಯ ಬಿಜೆಪಿ ವತಿಯಿಂದ ಕೆಆರ್‌ಎಸ್‌ಗೆ ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.

  ಶ್ರೀರಂಗಪಟ್ಟಣ (ಮಂಡ್ಯ): ರಾಜ್ಯ ಸರ್ಕಾರ ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ ಎಂದು ಆರೋಪಿಸಿ, ನೀರು ಬಿಡಲು ಆದೇಶ ನೀಡಿರುವ ಸಮಿತಿ ಹಾಗೂ ಪ್ರಾಧಿಕಾರದ ಕ್ರಮ ಖಂಡಿಸಿ ರಾಜ್ಯ ಬಿಜೆಪಿ ವತಿಯಿಂದ ಕೆಆರ್‌ಎಸ್‌ಗೆ ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು. 

ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ನ ಗೇಟ್‌ನ ಮುಂಭಾಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಸಾವಿರಾರು ಮುಖಂಡರು ಹಾಗೂ ಕಾರ್ಯಕರ್ತರು ಕೆಆರ್‌ಎಸ್ ಚಲೋ ಜಾಥಾ ನಡೆಸಿದರು.ಈ ಹಿಂದೆ ತಮಿಳುನಾಡಿಗೆ ಸರ್ಕಾರ ನೀರು ಹರಿಸಿದೆ. ಸೋಮವಾರದಿಂದ ನೀರು ಬಿಡುವ ಸೂಚನೆಯೂ ಇದೆ. ಇದರಿಂದ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶವನ್ನು ಕಾವೇರಿ ನಿರ್ವಹಣಾ ಪ್ರಾಧಿಕಾರದ ಎತ್ತಿ ಹಿಡಿಯಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಯಾವುದೇ ಕಾರಣಕ್ಕೂ ನೀರು ಬಿಡುಗಡೆ ಮಾಡದಂತೆ ಆಗ್ರಹಿಸಿ ಕೆಆರ್‌ಎಸ್ ಬೃಂದಾವನದ ಪ್ರದೇಶ ದ್ವಾರದ ಎದುರು ಕೆಲಕಾಲ ಧರಣಿ ನಡೆಸಿ ಪ್ರತಿಭಟಿಸಿದರು.  

ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸುತ್ತಿದೆ ಎಂದು ಕೆಆರ್‌ಎಸ್ ಅಣೆಕಟ್ಟೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಯಡಿಯೂರಪ್ಪ, ವಿಜಯೇಂದ್ರ, ಅಶೋಕ್ , ಛಲವಾದಿ ನಾರಾಯಣಸ್ವಾಮಿ, ಸಿ.ಟಿ.ರವಿ, ಸುಮಲತಾ, ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಇಂಡುವಾಳು ಸಚ್ಚಿದಾನಂದ ಸೇರಿದಂತೆ ಬಿಜೆಪಿ ಶಾಸಕರು, ನಾಯಕರು ಹಾಗೂ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಬೇರೆಡೆ ಕರೆದೊಯ್ದುರು. ನಂತರ ಬಿಡುಗಡೆ ಮಾಡಿದರು.

ಕಾವೇರಿ ಹೋರಾಟಕ್ಕೆ ಇಳಿದ ತುಮಕೂರಿನ 104ರ ವೃದ್ಧೆ:

ನೀರಿಲ್ಲದೆ ನಮ್ಮ ರೈತರು ಕಣ್ಣೀರಿಡುತ್ತಿದ್ದಾರೆ. ಗೋವುಗಳನ್ನು ಸಾಕುವುದಕ್ಕೂ ಶಕ್ತಿ ಇಲ್ಲ. ಬೆಳೆ ಬೆಳೆಯಲಾಗುತ್ತಿಲ್ಲ. ಹೀಗಿರುವಾಗ ತಮಿಳುನಾಡಿನವರು ನಮಗೇಕೆ ಕಷ್ಟ ಕೊಡುತ್ತಿದ್ದಾರೆ. ನಮಗೇ ನೀರಿಲ್ಲದಿರುವಾಗ ತಮಿಳುನಾಡಿನವರಿಗೆ ಎಲ್ಲಿಂದ ನೀರು ಕೊಡೋದು? ಎಂದು ೧೦೪ ವರ್ಷದ ಅಜ್ಜಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ತುಮಕೂರು ಮೂಲದ ಶಿವಮ್ಮ ನೀರಿಗಾಗಿ ಪೀಡಿಸುತ್ತಿರುವ ತಮಿಳುನಾಡಿನ ವಿರುದ್ಧ ಹರಿಹಾಯ್ದರು.ಕಾವೇರಿ ಕಿಚ್ಚು ಬಗ್ಗೆ ನನಗೇನೂ ಗೊತ್ತಿಲ್ಲ ಎಂದ ನಟಿ ರಾಗಿಣಿ:

ಕಾವೇರಿ ಹೋರಾಟದ ಬಗ್ಗೆ ನನಗೇನೂ ಗೊತ್ತಿಲ್ಲ. ಸದ್ಯ ನನ್ನ ಸಿನಿಮಾ ಪ್ರಮೋಷನ್‌ಗೆ ಇಲ್ಲಿಗೆ ಬಂದಿದ್ದೇನೆ. ಕಾವೇರಿ ಬಗ್ಗೆ ನೋ ರಿಯಾಕ್ಷನ್ ಎಂದು ನಟಿ ರಾಗಿಣಿ ಹೇಳುವ ಮೂಲಕ ರೈತರ ಆಕ್ರೋಶಕ್ಕೆ ಗುರಿಯಾದರು. ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ ಪ್ರಮೋಷನ್‌ಗಾಗಿ ರಾಗಿಣಿ ಮಂಡ್ಯಕ್ಕೆ ಆಗಮಿಸಿದ್ದರು. ಪ್ರತಿಭಟನೆ ನಡೆಯುತ್ತಿದ್ದ ಜೆ.ಸಿ.ವೃತ್ತದ ಪಕ್ಕದಲ್ಲಿರುವ ಸಂಜಯ ಚಿತ್ರಮಂದಿರಕ್ಕೆ ತೆರಳುವವರಿದ್ದರು. ಈ ವೇಳೆ ಪ್ರತಿಭಟನಾಕಾರರು ಕಾವೇರಿ ಹೋರಾಟದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಗಿಣಿ, ಕಾವೇರಿ ಹೋರಾಟದ ಬಗ್ಗೆ ವೈಯಕ್ತಿಕವಾಗಿ ಕಮೆಂಟ್ ಮಾಡಲ್ಲ. ಹೋರಾಟದ ಬಗ್ಗೆ ನನಗೇನೂ ಗೊತ್ತಿಲ್ಲ. ಕುಡಿಯುವ ನೀರು ಪ್ರತಿಯೊಬ್ಬರ ಹಕ್ಕು ಎಂದಷ್ಟೇ ನಾನು ಹೇಳೋದು ಎಂದರು.

ಕಾವೇರಿಗಾಗಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ತಮಿಳುನಾಡು ನಿರ್ಧಾರ:ತಮಿಳುನಾಡಿಗೆ 15 ದಿನಗಳ ಕಾಲ ನಿತ್ಯ 3500 ಕ್ಯುಸೆಕ್‌ ನೀರು ಹರಿಸುವಂತೆ ಕಾವೇರಿ ನದಿ ನೀರು ನಿಯಂತ್ರಣಾ ಮಂಡಳಿ (ಸಿಡಬ್ಲ್ಯುಆರ್‌ಸಿ) ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಆದೇಶದ ಹೊರತಾಗಿಯೂ ನೀರು ಬಿಡದೇ ಇರಲು ನಿರ್ಧರಿಸಿದ ಕರ್ನಾಟಕ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್‌ ಮೆಟ್ಟಿಲೇರಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಕಾನೂನು ಸಚಿವ ಆರ್‌.ನಿರ್ಮಲ್‌ ಕುಮಾರ್‌, ‘ಕಾವೇರಿ ನೀರಿನ ಪಾಲಿಗಾಗಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಲಿದೆ. ಕಾನೂನು ಹೋರಾಟದ ಮೂಲಕ ನೀರಿನ ಪಾಲು ಪಡೆಯುತ್ತೇವೆ’ ಎಂದಿದ್ದಾರೆ.

‘ಕರ್ನಾಟಕ ರಾಜಕೀಯವು ಕಾವೇರಿ ವಿವಾದದ ಮೇಲೆಯೇ ನಿರ್ಮಾಣವಾಗಿದೆ. ಮುಂದಿನ 20, 40 ಅಥವಾ 100 ವರ್ಷಗಳ ವರೆಗೂ ಅವರ ಸಂಪೂರ್ಣ ರಾಜಕೀಯವು ಕಾವೇರಿ ನೀರು ಹರಿಸದಿರುವ ನಿರ್ಧಾರದ ಮೇಲೆಯೇ ನಿರ್ಮಾಣವಾಗಲಿದೆ. ಆದರೆ, ತಮಿಳುನಾಡು ಸರ್ಕಾರಕ್ಕೆ ಈ ವಿವಾದ ರಾಜಕೀಯ ವಿಚಾರ ಅಲ್ಲ. ತಮಿಳುನಾಡಿನ ರೈತರ ಹಿತರಕ್ಷಣೆಗಾಗಿ ರಾಜ್ಯ ಸರ್ಕಾರ ಎಲ್ಲಾ ರೀತಿಯ ಕಾನೂನು ಕ್ರಮಗಳಿಗೆ ಸಿದ್ಧತೆ ನಡೆಸುತ್ತಿದೆ’ ಎಂದು ಹೇಳಿದ್ದಾರೆ.

ಸದ್ಯದಲ್ಲೇ ಸಮಗ್ರ ಕಾನೂನು ಹೋರಾಟ ನಿರ್ಧಾರ

ಸಿಎಂ ವಿಜಯ್‌ ಅವರು ಕಾನೂನು ತಜ್ಞರು, ಹಿರಿಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟವರ ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ. ಸದ್ಯದಲ್ಲೇ ಸಮಗ್ರ ಕಾನೂನು ಹೋರಾಟದ ಕುರಿತು ನಿರ್ಧಾರ ಮಾಡಲಿದ್ದಾರೆ. ಈ ಬಗ್ಗೆ ವಾರದಲ್ಲಿ ಅಂತಿಮ ನಿರ್ಧಾರ ಘೋಷಣೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.ಸರ್ಕಾರವು ಇದೀಗ ಈ ವಿವಾದಕ್ಕೆ ಸಂಬಂಧಿಸಿ ಶಾಶ್ವತ ಕ್ರಮಗಳಿಗಾಗಿ ಚಿಂತನೆ ನಡೆಸುತ್ತಿದೆ. ಸುಪ್ರೀಂ ಕೋರ್ಟ್‌ಗೆ ಮತ್ತೆ ಅರ್ಜಿ ಸಲ್ಲಿಕೆ, ಹೊಸ ಜಲ ವಿವಾದ ಪ್ರಾಧಿಕಾರ ರಚನೆ, ಸಂಬಂಧಪಟ್ಟ ರಾಜ್ಯಗಳ ಜತೆ ನೇರ ಮಾತುಕತೆ ಅಥವಾ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಕರ್ನಾಟಕವು ನೀರು ಬಿಡುಗಡೆ ಆದೇಶ ಪಾಲಿಸುವಂತೆ ನೋಡಿಕೊಳ್ಳುವುದು ಇದರಲ್ಲಿ ಸೇರಿದೆ ಎಂದರು.

ಇದೇ ವೇಳೆ ಮೇಕೆದಾಟು ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್‌ ಭೂಷಣ್‌ ಚೌಧರಿ ಅವರ ಹೇಳಿಕೆಗೆ ಸಂಬಂಧಿಸಿ ನಿರ್ಮಲ್‌ ಕುಮಾರ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋರ್ಟ್‌ನ 2018ರ ಅಂತಿಮ ಆದೇಶವು ಮೇಕೆದಾಟುವಿನಂಥ ಡ್ಯಾಂ ನಿರ್ಮಿಸಲು ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿ ರಾಜ್ಯಗಳ ಒಪ್ಪಿಗೆ ಕರ್ನಾಟಕಕ್ಕೆ ಬೇಕಿಲ್ಲ ಎಂದು ಹೇಳಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕನ್ನಡ ನಾಡಿಗೆ ವಿಶ್ವೇಶ್ವರಯ್ಯ ಕೊಡುಗೆ ಅಪಾರ
ಉ.ಪಾಲಿಕೆ ವ್ಯಾಪ್ತಿ ರಾತ್ರಿ ಆಯುಕ್ತ ದಿಢೀರ್‌ ಭೇಟಿ