ಸಿಎಂ ಸಿದ್ದರಾಮಯ್ಯ ಒಂದು ಮತಕ್ಕೆ ಸೀಮಿತನಾ?

KannadaprabhaNewsNetwork | Published : Jan 1, 2024 1:15 AM

ಸಾರಾಂಶ

ರೈತರಿಗೆ ಬೆಳೆ ಹಾನಿ ಪರಿಹಾರ ಕೇಳಿದರೆ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವ ಸಿದ್ದರಾಮಯ್ಯ ರೈತರಿಗೆ ಬಿಡಿಗಾಸನ್ನೂ ನೀಡಲಿಲ್ಲ. ಅಲ್ಪಸಂಖ್ಯಾತರ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಭಾಗ ಎರಡು ಎಂಬಂತೆ ಸಾವಿರ ಕೋಟಿ ರು. ಬಿಡುಗಡೆಗೆ ಸೂಚಿಸಿದ್ದಾರೆ.

ಅಲ್ಪಸಂಖ್ಯಾತರು ಕೇಳಿದ್ದಕ್ಕೆಲ್ಲಾ ತಥಾಸ್ತು ಎಂದು ಓಲೈಸುವುದೇಕೆ?: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತರಾಟೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಹುಬ್ಬಳ್ಳಿ ಸಮಾವೇಶದಲ್ಲಿ ₹10 ಸಾವಿರ ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದ ಸಿಎಂ ಸಿದ್ದರಾಮಯ್ಯ ಅಲ್ಪಸಂಖ್ಯಾತರು ಹೇಳಿದಕ್ಕೆಲ್ಲಾ ತಥಾಸ್ತು ಎನ್ನುತ್ತಿದ್ದು, ನೀವೇನು ಒಂದು ಮತ, ಧರ್ಮಕ್ಕೆ ಸೀಮಿತವಾದ ಮುಖ್ಯಮಂತ್ರಿನಾ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತರಾಟೆಗೆ ತೆಗೆದುಕೊಂಡು ಪ್ರಶ್ನಿಸಿದ್ದಾರೆ.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರೈತರಿಗೆ ಬೆಳೆ ಹಾನಿ ಪರಿಹಾರ ಕೇಳಿದರೆ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವ ಸಿದ್ದರಾಮಯ್ಯ ರೈತರಿಗೆ ಬಿಡಿಗಾಸನ್ನೂ ನೀಡಲಿಲ್ಲ. ಅಲ್ಪಸಂಖ್ಯಾತರ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಭಾಗ ಎರಡು ಎಂಬಂತೆ ಸಾವಿರ ಕೋಟಿ ರು. ಬಿಡುಗಡೆಗೆ ಸೂಚಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಭಾಗ -1ನ್ನು ಘೋಷಿಸಿದ್ದರು. ನೀವೇನು ಒಂದು ಮತ, ಧರ್ಮಕ್ಕೆ ಸೀಮಿತವಾಗಿರುವ ಮುಖ್ಯಮಂತ್ರಿನಾ ಸಿದ್ದರಾಮಯ್ಯನವರೇ? ಅಲ್ಪಸಂಖ್ಯಾತರ ಓಲೈಕೆಗೆ ಏನೆಲ್ಲಾ ಮಾಡುತ್ತಿದ್ದೀರಿ ಎಂದು ಟೀಕಿಸಿದರು.

ರೈತರಿಗೆ ಬಿಡುಗಡೆ ಮಾಡಲು ಹಣವಿಲ್ಲವೆನ್ನುವ ಸಿದ್ದರಾಮಯ್ಯ ಅಲ್ಪಸಂಖ್ಯಾತರು ಕೇಳಿದ್ದಕ್ಕೆಲ್ಲಾ ತಥಾಸ್ತು ಎನ್ನುವಷ್ಟರ ಮಟ್ಟಿಗೆ ಅಲ್ಪಸಂಖ್ಯಾತರ ಓಲೈಕೆಗೆ ಇಳಿದಿದ್ದಾರೆ. ರಾಜ್ಯದಲ್ಲಿ ಭಗವಾ ಧ್ವಜ ಹಾರಿಸಿದರೆ ಕಠಿಣ ಕ್ರಮ ಎಂಬುದಾಗಿ ಹೇಳುತ್ತೀರಿಲ್ಲವೇ? ಇದೇರೀತಿ ನೀವು, ನಿಮ್ಮ ಆಡಳಿತ ಮುಂದುವರಿದರೆ ರಾಜ್ಯವ್ಯಾಪಿ ತೀವ್ರ ಸ್ವರೂಪದ ಹೋರಾಟ ಮಾಡುತ್ತೇವೆ ಎಂದು ರೇಣುಕಾಚಾರ್ಯ ಎಚ್ಚರಿಸಿದರು.

............................

ಸಚಿವ ಸುಧಾಕರ್‌ಗೆ ತಲೆಯೇ ಸರಿ ಇಲ್ಲ

* ಭಯೋತ್ಪಾದಕರನ್ನು ಬೆಳೆಸಿದ್ದೇ ಕಾಂಗ್ರೆಸ್ ಪಕ್ಷ

ಸಚಿವನಾಗಿದ್ದಕ್ಕೆ ಡಿ.ಸುಧಾಕರ್ ತಲೆ ತಿರುಗಿದ್ದು, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲವೆಂದು ಗೊತ್ತಾಗಿಯೇ ಹಾಗೆಲ್ಲಾ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಲೇವಡಿ ಮಾಡಿದರು.

ರಾಮ ಮಂದಿರ ಉದ್ಘಾಟನೆ ಎಲೆಕ್ಷನ್ ಗಿಮಿಕ್‌, ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಬಗ್ಗೆ ಹಗುರವಾಗಿ ಮಾತನಾಡಿರುವ ಸಚಿವ ಡಿ.ಸುಧಾಕರ್ ಗೆ ತಲೆ ಸರಿ ಇಲ್ಲ. ಅದಕ್ಕೆ ಬಾಯಿಗೆ ಬಂದಂತೆಲ್ಲಾ ಮಾತನಾಡುತ್ತಿದ್ದಾರೆ ಎಂದರು.

ತಾಯಿ ಯಾರು ಅಂತಾ ತೋರಿಸು ಅಂದರೆ ಅಪಮಾನ ಆಗಲ್ವಾ? ಅದೇ ರೀತಿ ಸೈನಿಕರ ಕುರಿತಂತೆ ಸಾಕ್ಷಿ ಕೇಳಿದರೆ ಹೇಗೆ? ಭಯೋತ್ಪಾದಕರನ್ನು ಬೆಳೆಸಿದ್ದೇ ಕಾಂಗ್ರೆಸ್ ಪಕ್ಷ. ನಮ್ಮ ಮಂದಿರಗಳನ್ನೆಲ್ಲಾ ದೋಚಿ, ಅದೇ ಮಂದಿರಗಳ ಮಸೀದಿಯಾಗಿ ನಿರ್ಮಾಣ ಮಾಡಿದ್ದರು. ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕ ಮೇಲೆ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣ ಆಗಿದೆ ಎಂದು ತಿರುಗೇಟು ನೀಡಿದರು.

............................

ಯತ್ನಾಳ್ ಗಾಳಿಯಲ್ಲಿ ಗುಂಡು ಹೊಡೆಯುವುದು ಸರಿಯಲ್ಲ

* ಬಿಎಸ್‌ವೈ ಅಧಿವೇಶನದಲ್ಲೇ ದಾಖಲೆಗಳ ಸಹಿತ ಲೆಕ್ಕ ನೀಡಿದ್ದಾರೆ

ವಿಜಯಪುರದ ಬಿಜೆಪಿ ಕಾರ್ಯಕ್ರಮ ಶನಿವಾರ ಸರಾಗವಾಗಿ ನಡೆದಿದ್ದು, ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕೂಡ ಸರಿಯಾಗಿದ್ದಾರೆ. ಮೌನಂ ಸಮ್ಮತಿ ಲಕ್ಷಣಂ ಎಂಬಂತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಂದೇ ಎಲ್ಲಾ ಲೆಕ್ಕ ಕೊಟ್ಟಿದ್ದಾರೆ. ಅಧಿವೇಶನದಲ್ಲೇ ದಾಖಲೆಗಳ ಸಮೇತ ಚರ್ಚೆಯೂ ಆಗಿದೆ. ಮಾಸ್ಕ್, ಆಕ್ಸಿಜನ್‌ ಸೇರಿ ಎಲ್ಲವನ್ನು ಅಂದಿನ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂದೆಯೇ ಲೆಕ್ಕ ನೀಡಲಾಗಿದೆ. ವಾಸ್ತವ ಹೀಗಿದ್ದರೂ ಯಾರೇ ಆಗಲಿ, ಗಾಳಿಯಲ್ಲಿ ಗುಂಡು ಹೊಡೆಯುವುದು ಸರಿಯಲ್ಲ. ಕಾಂಗ್ರೆಸ್ ಜೊತೆ, ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಹೊಂದಾಣಿಕೆ ಮಾಡಿಕೊಂಡು ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಕೊರೋನಾ ಸಂದರ್ಭದಲ್ಲೂ ಬಸವನಗೌಡ ಯತ್ನಾಳ್ ವಿಜಯಪುರದ ಶಾಸಕರಾಗಿದ್ದರಲ್ಲವೇ? ಅವಾಗಲೇ ಆರೋಪ ಮಾಡಬಹುದಿತ್ತಲ್ಲವೇ? ಎಲ್ಲದಕ್ಕೂ ದಾಖಲೆಗಳಿವೆ ಅಂತೆಲ್ಲಾ ಗಾಳಿಯಲ್ಲಿ ಗುಂಡು ಹೊಡೆಯಬಾರದು ಎಂದು ರೇಣುಕಾಚಾರ್ಯ ಕಿವಿಮಾತು ಹೇಳಿದರು.

..........

ಕಾಂಗ್ರೆಸ್‌ನವರಿಗೆ ಸಹಿಸಲು ಆಗುತ್ತಿಲ್ಲ

ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಬಿಡಿಗಾಸೂ ನೀಡಿಲ್ಲ. ಎಲ್ಲರೂ ಸ್ವಯಂ ಪ್ರೇರಣೆಯಿಂದ ದೇಣಿಗೆ ನೀಡಿ ಭವ್ಯ ರಾಮಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿದೆ. ಇದನ್ನೆಲ್ಲಾ ಸಹಿಸಿಕೊಂಡಿರಲು ಸುಧಾಕರ್‌ ಸೇರಿ ಕಾಂಗ್ರೆಸ್‌ನ ಕೆಲವರಿಗೆ ಆಗುತ್ತಿಲ್ಲ. ಹಿಂದುತ್ವ, ಬಿಜೆಪಿಯನ್ನು ಹಾಗೂ ದೇಶಕ್ಕಾಗಿ ತಮ್ಮ ಸರ್ವಸ್ವವನ್ನೂ ಪಣಕ್ಕಿಟ್ಟು ದೇಶ ರಕ್ಷಣೆಯಲ್ಲಿ ತೊಡಗುವ ಯೋಧರ ಬಗ್ಗೆಯೇ ಕೊಂಕು ಮಾತನಾಡುವ ಕಾಂಗ್ರೆಸ್‌ಗೆ ಉಳಿಗಾಲವೂ ಇಲ್ಲ.

ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ ...............

Share this article