- ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶ । ಜನಾಕ್ರೋಶ, ವಿರೋಧಗಳಿಂದಾಗಿ ತಾತ್ಕಾಲಿಕ ತಡೆ : ಚಾಲನೆಗೆ ಚಿಂತನೆ ?
ಆನಂದ್ ಎಂ. ಸೌದಿ
ಕನ್ನಡಪ್ರಭ ವಾರ್ತೆ ಯಾದಗಿರಿಈಗಾಗಲೇ 27 ಫಾರ್ಮಾ ಕಂಪನಿಗಳು ಉಸಿರುಗಟ್ಟಿಸುವ ವಾತಾವರಣ ಉಂಟುಮಾಡಿ, ಜನ-ಜಲ ಜೀವನಕ್ಕೆ ಕುತ್ತು ತರುತ್ತಿರುವ ಮಧ್ಯೆಯೇ, ಮತ್ತೇ 32 ಫಾರ್ಮಾ ಕಂಪನಿಗಳಿಗೆ ಅನುಮತಿ ನೀಡಲು ಸದ್ದಿಲ್ಲದೆ ಸಿದ್ಧತೆಗಳು ನಡೆದಿವೆ. ಕಳೆದ ಮೂರ್ನಾಲ್ಕು ತಿಂಗಳಿಂದ ಮಾಧ್ಯಮಗಳಲ್ಲಿ ವರದಿಗಳು, ಜನರ ವ್ಯಾಪಕ ವಿರೋಧ ಹಾಗೂ ಸರ್ಕಾರದ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದರಿಂದ ಕೆಲ ದಿನಗಳ ಕಾಲ ಸ್ಥಗಿತಗೊಂಡಿದ್ದ ಹೊಸ ಕಂಪನಿಗಳಿಗಾಗಿ ಚಟುವಟಿಕೆಗಳು ಸದ್ದಿಲ್ಲದೆ ನಡೆದಿವೆ.
"ಕನ್ನಡಪ್ರಭ "ಕ್ಕೆ ಲಭ್ಯ ಮೂಲಗಳ ಪ್ರಕಾರ, ಹಾಲಿ ಕಾರ್ಖಾನೆಗಳಲ್ಲಿ ನಡೆದ ವಿವಿಧ ಅಹಿತಕರ ಘಟನೆಗಳು, ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿಯಿಂದಾಗಿ ಜಲಚರಗಳ ಸಾವು, ತ್ಯಾಜ್ಯ ಘಾಟಿನಿಂದಾಗಿ ಜನರ ವಿರೋಧ, ಜಿಲ್ಲಾಡಳಿತದಿಂದ ನೋಟಿಸ್ ಜಾರಿ, ಮಕ್ಕಳ ಹಾಗೂ ಮಾನವ ಹಕ್ಕಗಳ ಆಯೋಗದಲ್ಲಿ ದೂರು ದಾಖಲಾಗಿದ್ದ ಹಿನ್ನೆಲೆ ಕೆಲ ದಿನಗಳ ಕಾಲ ಹೊಸ ಕಂಪನಿಗಳ ಅನುಮತಿ ವಿಚಾರವನ್ನು ಮೌನವಾಗಿಸಿದ್ದ ಸರ್ಕಾರ, ಅಧಿವೇಶನದ ನಂತರ ವಿರೋಧಗಳ ಮಧ್ಯೆಯೂ ಮತ್ತೇ 32 ಹೊಸ ಕಂಪನಿಗಳಿಗೆ ಅನುಮತಿ ಪ್ರಸ್ತಾವವನ್ನು ಚುರುಕುಗೊಳಿಸುವ ಚಿಂತನೆಗೆ ಮುಂದಾಗಿವೆ. ಈಗಾಗಲೇ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಅರ್ಜಿ ಸಲ್ಲಿಸಿದ ಉದ್ದೇಶಿತ ಫಾರ್ಮಾ ಕಂಪನಿಗಳು, ಚಟುವಟಿಕೆಗಳ ಶುರುಮಾಡುವ ಸಲುವಾಗಿ ರಾಜ್ಯಮಟ್ಟದಲ್ಲಿ ಭಾರಿ ಲಾಬಿಗೆ ಮುಂದಾಗಿದೆ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಹೆಸರೇಳಲಿಚ್ಛಿಸದ ಅಧಿಕಾರಿಯೊಬ್ಬರು ಸೂಚ್ಯ ನೀಡಿದರು.ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಬೇಕಾಬಿಟ್ಟಿಯಾಗಿ ಅನುಮತಿ ನೀಡುವ ಹಂತಕ್ಕೆ ತಲುಪಿದೆ. ಅನೇಕ ಅರ್ಜಿಗಳು ವಿಲೇವಾರಿ ಹಂತದಲ್ಲಿವೆ ಎಂದ ಅವರು, ಕೈಗಾರಿಕೆಗಳ ವಿರುದ್ಧ ಕಡೇಚೂರು ಭಾಗದಲ್ಲಿ ವಿರೋಧಗಳು ವ್ಯಕ್ತವಾಗಿದ್ದರಿಂದ ಸ್ವಲ್ಪ ದಿನ ತಡೆಯುವಂತೆ ಸಹೆ ನೀಡಲಾಗಿತ್ತು. ಅದಕ್ಕೆಂದೇ ಕೆಲ ದಿನಗಳ ಮಾಲಿನ್ಯ-ತ್ಯಾಜ್ಯ ದುರ್ನಾತಕ್ಕೆ ತಡೆ ನೀಡಿದಂತಿತ್ತು. ಈಗ ಜನರು ಸಹಜವಾಗಿ ಮರೆತಿದ್ದರಿಂದ ಸಣ್ಣದಾಗಿ ಹೊಸ ಅನುಮತಿಗಳ ಕುರಿತು ಕಾರ್ಯಚಟುವಟಿಕೆಗಳು ಶುರುವಾಗಿವೆ ಎನ್ನಲಾಗುತ್ತಿದೆ.
2011 ರಲ್ಲಿ ಸ್ವಾಧೀನಪಡಿಸಿಕೊಂಡಿದ್ದ 3232 ಎಕರೆ ಹಾಗೂ ಹೆಚ್ಚುವರಿಯಾಗಿ ಅಧಿಸೂಚನೆ ಹೊರಡಿಸಿದ್ದ 3169 ಎಕರೆ ಜಮೀನುಗಳಲ್ಲಿ ಸುಮಾರು ಹಾಲಿ ಹಾಗೂ ಉದ್ದೇಶಿತ ಸೇರಿ 75ಕ್ಕೂ ಹೆಚ್ಚು ಫಾರ್ಮಾ ಕಂಪನಿಗಳು ಚಟುವಟಿಕೆಗಳು ಶುರು ಮಾಡಲಿವೆ. ಉತ್ತರ ಭಾರತ ಹಾಗೂ ನೆರೆ ರಾಜ್ಯಗಳಲ್ಲಿ ಫಾರ್ಮಾ ಕಂಪನಿಗಳ ವಿರುದ್ಧ ಜನರ ಭಾರಿ ವಿರೋಧದಿಂದಾಗಿ ಮುಚ್ಚಲ್ಪಟ್ಟ ಕಂಪನಿಗಳಿಗೆ ಕಡೇಚೂರಿನಲ್ಲಿ ಕೆಂಪು ಹಾಸು ಹಾಕಲಾಗುತ್ತಿದೆ. ಜನರ ವಿರೋಧ ತಗ್ಗಿದ್ದರಿಂದ ಹಾಗೂ ಮಧ್ಯವರ್ತಿಗಳ ಮೂಲಕ ಕೆಲವು ಪ್ರಭಾವಿಗಳ ಬಾಯ ಮುಚ್ಚಿಸಿದ್ದರಿಂದ ಕಂಪನಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಗೆ ಕಾರಣವಾಗಿದೆ ಎಂಉ ಹೇಳಲಾಗುತ್ತಿದೆ. ಆರಂಭದಲ್ಲಿ ಬಿಗಿ ಮಾಡುವ ಪರಿಸರ ಮಂಡಳಿ, ನಂತರದಲ್ಲಿ ಒಂದೊಂದಾಗಿ ಚಾಲನೆಗೆ ಹಸಿರು ನಿಶಾನೆ ತೋರಿಸಲಿದೆ.-
ಕೋಟ್-1 : ಕಲ್ಯಾಣ ಕರ್ನಾಟಕದಲ್ಲಿಯೇ ಅತ್ಯಂತ ಹಿಂದುಳಿದ ಜಿಲ್ಲೆಯಾಗಿರುವ ಯಾದಗಿರಿಯಲ್ಲಿ ಜನರ ಪ್ರಾಣ ಹಿಂಡುವ ಕೈಗಾರಿಕೆಗಳನ್ನು ನೀಡಿ, ಮತ್ತಷ್ಟೂ ಹಿಂದಕ್ಕೆ ತಳ್ಳುತ್ತಿದ್ದಾರೆ. ಜನಪರ ಮತ್ತು ಜನರ ಹಿತಾಶಕ್ತಿಯನ್ನು ಕಾಪಾಡಬೇಕಾದ ಅಧಿಕಾರಿಗಳ ವರ್ಗವು ಸಂಪೂರ್ಣವಾಗಿ ಪ್ರಭಾವಿ ರಾಜಕಾರಣಿಗಳ ಪ್ರಭಾವಕ್ಕೆ ಒಳಗಾಗಿ ಇಲ್ಲಿನ ಉದ್ಯಮಿಗಳ ಹಿತವನ್ನು ಕಾಯುತ್ತಿದ್ದಾರೆ. ಸರಕಾರ, ಉದ್ಯಮಿದಾರರು ಮತ್ತು ಸರ್ಕಾರಿ ಅಧಿಕಾರಿಗಳು ಇಲ್ಲಿನ ಜನರ ಜೀವ ಜತೆ ಚೆಲ್ಲಾಟವಾಡುತ್ತಿದ್ದಾರೆ. ನಮ್ಮ ಪೀಳಿಗೆ ಸಂಪೂರ್ಣವಾಗಿ ನಶಿಸಿ ಹೋಗುತ್ತದೆ.- ಪ್ರಭು ಗೂಗಲ್, ಸೈದಾಪುರ. (25ವೈಡಿಆರ್7)
-25ವೈಡಿಆರ್6 : ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ನೋಟ.