ಎತ್ತಿನಹೊಳೆ ನೀರಾವರಿ ಜುಲೈ ಅಂತ್ಯಕ್ಕೆ ನೀರು ಪೂರೈಕೆ ಸಾಧ್ಯವೇ?

KannadaprabhaNewsNetwork |  
Published : Jul 25, 2024, 01:17 AM IST
ಸುರೇಶಗೌಡ | Kannada Prabha

ಸಾರಾಂಶ

ಎತ್ತಿನಹೊಳೆ ಯೋಜನೆಯಡಿ ಇದುವರೆಗೆ ಒಂದು ಹನಿ ನೀರು ಕೂಡ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮುಂತಾದ ಜಿಲ್ಲೆಗಳಿಗೆ ಪೂರೈಕೆಯಾಗಿಲ್ಲ

ಕನ್ನಡಪ್ರಭ ವಾರ್ತೆ ತುಮಕೂರುಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ಆರಂಭವಾದ ಎತ್ತಿನಹೊಳೆ ಯೋಜನೆಯಡಿ ಇದುವರೆಗೆ ಒಂದು ಹನಿ ನೀರು ಕೂಡ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮುಂತಾದ ಜಿಲ್ಲೆಗಳಿಗೆ ಪೂರೈಕೆಯಾಗಿಲ್ಲ. ಈ ಯೋಜನೆಯ ವೆಚ್ಚ ಆರಂಭದಲ್ಲಿ ಇದ್ದ 12,000 ಕೋಟಿ ರೂಪಾಯಿಗಳಿಂದ ಈಗ 25,000 ಕೋಟಿ ರೂಪಾಯಿಗಳಿಗೆ ಏರಿದೆ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ್‌ ಗೌಡರು ವಿಧಾನಸಭೆಯಲ್ಲಿ ಆಕ್ಷೇಪಿಸಿದರು.ಈ ಯೋಜನೆಯ ಒಟ್ಟು ಉದ್ದ 149 ಕಿಲೋ ಮೀಟರ್‌. ಇದರಲ್ಲಿ 94 ಕಿಲೋ ಮೀಟರ್‌ ವರೆಗೆ ಈಗ ಕೆಲಸ ಆಗಿದೆ. ಈಗಾಗಲೇ 15,000 ಕೋಟಿ ರೂಪಾಯಿ ವೆಚ್ಚವಾಗಿದೆ. ಇನ್ನೂ 7,500 ಕೋಟಿ ರೂಪಾಯಿಗಳು ಬೇಕಾಗುತ್ತವೆ. ಆದರೆ, ಈ ಯೋಜನೆಯಿಂದ ಇದುವರೆಗೆ ಒಂದು ಹನಿ ನೀರೂ ಕಾಲುವೆಯಲ್ಲಿ ಹರಿದಿಲ್ಲ. ಭೂಮಿ ಸ್ವಾಧೀನವೇ ಇನ್ನೂ ಪೂರ್ಣಗೊಂಡಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ತಮ್ಮ ಪ್ರಶ್ನೆಗೆ ಜಲಸಂಪನ್ಮೂಲ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೊಟ್ಟ ಉತ್ತರದ ಮೇಲೆ ಅವರು ಮಾತನಾಡುತ್ತಿದ್ದರು. ʻಜಲಸಂಪನ್ಮೂಲ ಸಚಿವರು ನುಡಿದಂತೆ ನಡೆಯುವವರು. ಆದರೆ, ಜುಲೈ ತಿಂಗಳ ಅಂತ್ಯಕ್ಕೆ ಈ ಯೋಜನೆಯಡಿ ಎಲ್ಲ ಏತ ಕಾಮಗಾರಿಗಳನ್ನು ಪೂರ್ಣಗೊಳಿಸಿ ಏಳು ಲಿವರ್‌ಗಳಿಂದ 42 ಕಿ.ಮೀ ವರೆಗೆ ನೀರು ಪೂರೈಕೆ ಮಾಡುವುದಾಗಿ ಅವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ. ಆದರೆ, ಇದು ಹೇಗೆ ಸಾಧ್ಯ? ಸದನದಲ್ಲಿ ನಡೆಯುವ ಚರ್ಚೆಯನ್ನು ನಾಡಿನ ಆದ್ಯಂತದ ಏಳು ಕೋಟಿ ಜನರು ನೋಡುತ್ತಲಿರುತ್ತಾರೆ. ಮುಂದಿನ ನವೆಂಬರ್‌ ಒಳಗೆ ಅಂದರೆ ಇನ್ನು ಕೇವಲ ನಾಲ್ಕು ತಿಂಗಳಲ್ಲಿ ಮಧುಗಿರಿ-ಪಾವಗಡ ಫೀಡರ್‌ ಒಳಗೊಂಡಂತೆ 42 ಕಿ.ಮೀ ನಿಂದ 231 ಕಿ.ಮೀ ವರೆಗೆ ನೀರು ಪೂರೈಸುವುದಾಗಿಯೂ ಅವರು ಭರವಸೆ ಕೊಟ್ಟಿದಾರೆ. ಆದರೆ ಇದು ವಾಸ್ತವದಲ್ಲಿ ಆಗುತ್ತದೆಯೇʼ ಎಂದು ಅವರು ಕೇಳಿದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ಈ ಯೋಜನೆಗೆ ಚಾಲನೆ ಸಿಕ್ಕಿದೆ. ಈಗ ಮತ್ತೆ ಅವರು ಮುಖ್ಯಮಂತ್ರಿಯಾಗಿದ್ದಾರೆ. ಅವರ ಅವಧಿಯಲ್ಲಿಯೇ ಯೋಜನೆ ಜಾರಿಯಾದರೆ ಈ ಭಾಗದ ಜನರಿಗೆ ಅನುಕೂಲವಾಗುತ್ತದೆ. ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರೂ ಆದ ಡಾ.ಜಿ.ಪರಮೇಶ್ವರ್‌ ಅವರು ಈ ವಿಚಾರದಲ್ಲಿ ಜಲಸಂಪನ್ಮೂಲ ಸಚಿವರ ಮೇಲೆ ಒತ್ತಡ ಹಾಕಬೇಕು ಎಂದು ಸುರೇಶ್‌ ಗೌಡರು ಆಗ್ರಹಿಸಿದರು.ಇದಕ್ಕೆ ಉತ್ತರಿಸಿದ ಶಿವಕುಮಾರ್‌ ಅವರು, ಸುರೇಶ್‌ ಗೌಡರು ಜುಲೈ ಅಂತ್ಯದ ವೇಳೆಗೆ ಈ ಕೆಲಸ ಆಗುತ್ತದೆಯೇ ಎಂದು ಅನುಮಾನ ವ್ಯಕ್ತಪಡಿಸಿರುವುದು ಸರಿಯಿದೆ. ಆದರೆ, ಸದನದಲ್ಲಿ ಸರ್ಕಾರ ಹೀಗೆ ವಚನ ಕೊಟ್ಟರೆ ಅದರಿಂದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ವೇಗದಿಂದ ಕೆಲಸ ಮಾಡುತ್ತಾರೆʼ ಎಂದು ಸ್ಪಷ್ಟಪಡಿಸಿದರು. ಕಾಲುವೆಯಲ್ಲಿ ನೀರು ಹರಿಸಲು ಏನೇನು ಕ್ರಮ ತೆಗೆದುಕೊಳ್ಳಬೇಕೋ ಆ ಎಲ್ಲ ಕ್ರಮ ತೆಗೆದುಕೊಳ್ಳಲು ಸರ್ಕಾರ ಬದ್ಧವಾಗಿದೆ. ಅಲ್ಲಿ ನೀರೂ ಸಂಗ್ರಹವಾಗಿದೆ. ಈ ದಿಸೆಯಲ್ಲಿ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ತಾವು ಚರ್ಚಿಸಿರುವುದಾಗಿಯೂ ಸಚಿವರು ತಿಳಿಸಿದರು. ಈ ವಿಚಾರದಲ್ಲಿ ಇಡೀ ದಿನ ಸದನದಲ್ಲಿ ತಾವು ಚರ್ಚೆ ಮಾಡಲು ಸಿದ್ಧ ಎಂದು ಅವರು ಹೇಳಿದರು. ಸುರೇಶ್‌ ಗೌಡರ ಪ್ರಶ್ನೆಗೆ ಉತ್ತರವಾಗಿ ಅನುಬಂಧ ರೂಪದಲ್ಲಿ ಅರಣ್ಯ ಭೂಮಿಯ ಹಸ್ತಾಂತರ, ರೈತರ ಜಮೀನಿನ ಸ್ವಾಧೀನ ಮುಂತಾದ ವಿಚಾರಗಳಲಿ ಉಂಟಾದ ತೊಡಕುಗಳನ್ನು ಪ್ರಸ್ತಾಪಿಸಿದ ಶಿವಕುಮಾರ್‌ ಅವರು ಟೆಂಡರ್‌ ಕರಾರಿನಂತೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಂಡು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ, ಅವು ಪ್ರಗತಿಯಲ್ಲಿ ಇವೆ ಎಂದು ತಿಳಿಸಿದರು.ತುಮಕೂರು ಗ್ರಾಮಾಂತರ ಕ್ಷೇತ್ರದ ಬೆಳಧರ, ದುರ್ಗದಹಳ್ಳಿ, ತಿಮ್ಮನಾಯಕನಹಳ್ಳಿ, ಹಾಲುಗೊಂಡನಹಳ್ಳಿ (ಇವು ಮೂರೂ ಹೊಸ ಕೆರೆಗಳು), ಚನ್ನಮುದ್ದನಹಳ್ಳಿ ಕೆರೆಗೆ ಮತ್ತು ಹಿರೇದೊಡ್ಡವಾಡಿ ಕೆರೆ (ಒಟ್ಟು ಸಾಮರ್ಥ್ಯ 43.53 ದಶಲಕ್ಷ ಕ್ಯುಬಿಕ್‌ ಮೀಟರ್‌)ಗಳನ್ನು ಸಣ್ಣ ನೀರಾವರಿ ಯೋಜನೆಯಡಿ ತುಂಬಿಸಿಕೊಡುವುದಾಗಿ ಉಪಮುಖ್ಯಮಂತ್ರಿ ಶಿವಕುಮಾರ್‌ ಅವರು ಸದನಕ್ಕೆ ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!