ವೇಶ್ಯಾವಾಟಿಕೆ ಅಡ್ಡವಾಗುತ್ತಿದೆಯೇ ಮಂಡ್ಯ...!

KannadaprabhaNewsNetwork | Published : May 18, 2025 11:57 PM
18ಕೆಎಂಎನ್‌ಡಿ-1ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಮಂಡ್ಯದ ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದ ಕ್ಲೌಡ್‌-11 ಸಲೂನ್‌  | Kannada Prabha

ಮಂಡ್ಯ ವೇಶ್ಯಾವಾಟಿಕೆ ಅಡ್ಡವಾಗುತ್ತಿರುವಂತೆ ಕಂಡುಬರುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ. ಕಾಲೇಜು ವಿದ್ಯಾರ್ಥಿನಿಯರು ಹಾಗೂ ಗ್ರಾಮೀಣ ಯುವತಿಯರನ್ನೇ ದಂಧೆ ನಡೆಸುತ್ತಿರುವವರು ಟಾರ್ಗೆಟ್ ಮಾಡಿಕೊಂಡಿರುವುದು ಆಘಾತಕಾರಿಯೂ ಆಗಿದೆ.

- ಕಾಲೇಜು, ಗ್ರಾಮೀಣ ಯುವತಿಯರೇ ದಂಧೆಕೋರರ ಟಾರ್ಗೆಟ್

- ಮೈಸೂರು ಬಿಟ್ಟು ಮಂಡ್ಯವನ್ನು ಕೇಂದ್ರಸ್ಥಾನವಾಗಿಸಿಕೊಳ್ಳುತ್ತಿರುವ ತಂಡ

ವೇಶ್ಯಾವಾಟಿಕೆ, ಗ್ರಾಮೀಣ ಯುವತಿಯರೇ ಟಾರ್ಗೆಟ್, ಸಲೂನ್, ಸ್ಪಾ

ವೇಶ್ಯಾವಾಟಿಕೆ, ಗ್ರಾಮೀಣ ಯುವತಿಯರೇ ಟಾರ್ಗೆಟ್, ಸಲೂನ್, ಸ್ಪಾ, ಮಂಡ್ಯಮಂಡ್ಯ ವೇಶ್ಯಾವಾಟಿಕೆ ಅಡ್ಡವಾಗುತ್ತಿರುವಂತೆ ಕಂಡುಬರುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ. ಕಾಲೇಜು ವಿದ್ಯಾರ್ಥಿನಿಯರು ಹಾಗೂ ಗ್ರಾಮೀಣ ಯುವತಿಯರನ್ನೇ ದಂಧೆ ನಡೆಸುತ್ತಿರುವವರು ಟಾರ್ಗೆಟ್ ಮಾಡಿಕೊಂಡಿರುವುದು ಆಘಾತಕಾರಿಯೂ ಆಗಿದೆ.ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವೇಶ್ಯಾವಾಟಿಕೆ ಅಡ್ಡವಾಗುತ್ತಿರುವಂತೆ ಕಂಡುಬರುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ. ಕಾಲೇಜು ವಿದ್ಯಾರ್ಥಿನಿಯರು ಹಾಗೂ ಗ್ರಾಮೀಣ ಯುವತಿಯರನ್ನೇ ದಂಧೆ ನಡೆಸುತ್ತಿರುವವರು ಟಾರ್ಗೆಟ್ ಮಾಡಿಕೊಂಡಿರುವುದು ಆಘಾತಕಾರಿಯೂ ಆಗಿದೆ. ಸಲೂನ್, ಸ್ಪಾ ಹೆಸರಿನಲ್ಲಿ ತಲೆ ಎತ್ತುವ ಹೈಟೆಕ್ ಕೇಂದ್ರಗಳು ವೇಶ್ಯಾವಾಟಿಕೆಯನ್ನು ಗುಪ್ತವಾಗಿ ನಡೆಸುತ್ತಾ ಹೆಣ್ಣು ಮಕ್ಕಳನ್ನು ಬೆಲೆವೆಣ್ಣುಗಳಾಗಿ ಪರಿವರ್ತಿಸುತ್ತಿರುವ ಬಗ್ಗೆ ಎಚ್ಚರ ವಹಿಸುವ ತುರ್ತು ಅಗತ್ಯವಿದೆ.

ನಗರದ ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲೇ ಕ್ಲೌಡ್-೧೧ ಹೆಸರಿನ ಸಲೂನ್-ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ಒಡನಾಡಿ ಸಂಸ್ಥೆ ಹಾಗೂ ಪಶ್ಚಿಮ ಠಾಣೆ ಪೊಲೀಸರು ನಡೆಸಿದ ದಾಳಿಯಿಂದ ಬೆಳಕಿಗೆ ಬಂದಿದೆ. ಇದರ ಹಿಂದಿನ ಮತ್ತೊಂದು ಸತ್ಯಸಂಗತಿ ಎಂದರೆ ಸಲೂನ್‌ನ ಮಾಲಕಿ ಮೈಸೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ಇದೇ ದಂಧೆಯನ್ನು ನಡೆಸಿ ಜೈಲು ವಾಸ ಅನುಭವಿಸಿದ್ದಳು.

ಮಂಡ್ಯ ಕೇಂದ್ರಸ್ಥಾನ:

ತದನಂತರದಲ್ಲಿ ಮೈಸೂರನ್ನು ಬಿಟ್ಟು ಮಂಡ್ಯವನ್ನು ಕೇಂದ್ರಸ್ಥಾನವಾಗಿಸಿಕೊಂಡು ಮತ್ತೆ ಅದೇ ದಂಧೆಯನ್ನು ಶುರು ಮಾಡಿದ್ದಳು. ಕಳೆದ ಆರು ತಿಂಗಳ ಹಿಂದಷ್ಟೇ ಸಲೂನ್ ಮೇಲೆ ದಾಳಿ ನಡೆದಾಗಲೂ ವೇಶ್ಯಾವಾಟಿಕೆ ನಡೆಯುತ್ತಿರುವುದು ಬಯಲಾಗಿತ್ತು. ಆದರೂ ಕಾನೂನಿನ ಭಯವಿಲ್ಲದೆ ಮತ್ತೆ ವಿಕೃತ ದಂಧೆಯನ್ನು ಮುಂದುವರೆಸಿದ್ದಾರೆ.

ಸಲೂನ್ ಪಕ್ಕದಲ್ಲೇ ಪ್ರತಿಷ್ಠಿತ ಕಾಲೇಜು ಇದೆ. ಸಲೂನ್ ಮೇಲಂತಸ್ತಿನ ಮಹಡಿಯಲ್ಲಿ ಟ್ಯುಟೋರಿಯಲ್ ತರಗತಿಗಳು ನಡೆಯುತ್ತಿವೆ. ಒಂದೇ ಮಟ್ಟಿಲುಗಳಲ್ಲಿ ಬೆಲೆವೆಣ್ಣುಗಳು, ಗಿರಾಕಿಗಳು, ಅಪ್ರಾಪ್ತ ವಯಸ್ಸಿನ ಮಕ್ಕಳು ಓಡಾಡುತ್ತಿದ್ದಾರೆ. ಇಂತಹ ಗೊಂದಲದ ಪ್ರದೇಶದಲ್ಲೇ ಈ ಮೋಸದಾಟವನ್ನು ರಹಸ್ಯವಾಗಿ ನಡೆಸುತ್ತಾ ಅಮಾಯಕ ಹೆಣ್ಣುಮಕ್ಕಳನ್ನು ಬಲಿಪಶುಗಳನ್ನಾಗಿ ಮಾಡುತ್ತಾ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದಾರೆ. ದಂಧೆಯ ಕಬಂಧ ಬಾಹುಗಳು ಎಲ್ಲೆಲ್ಲಿ ಹರಡಿವೆ ಎನ್ನುವುದು ತನಿಖೆಯಿಂದಷ್ಟೇ ಹೊರಬರಬೇಕಿದೆ.

ವಿದ್ಯಾರ್ಥಿನಿಯರು, ಹಳ್ಳಿ ಯುವತಿಯರು ಟಾರ್ಗೆಟ್:

ವಿದ್ಯಾಭ್ಯಾಸಕ್ಕಾಗಿ ಕಾಲೇಜಿಗೆ ಬರುವ ವಿದ್ಯಾರ್ಥಿನಿಯರು, ಹಳ್ಳಿಗಾಡಿನ ಯುವತಿಯರನ್ನೇ ದಂಧೆಕೋರರು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಅಮಾಯಕ ಯುವತಿಯರನ್ನು ಗುರುತಿಸಿ ಅವರನ್ನು ಸಲೂನ್‌ಗೆ ಬರುವಂತೆ ಮಾಡಿಕೊಳ್ಳುವುದು. ಆರಂಭದಲ್ಲಿ ಒಳ್ಳೆಯ ತಿನಿಸುಗಳು, ಒಳ್ಳೆಯ ಬಟ್ಟೆಗಳನ್ನು ಕೊಡಿಸುವುದು. ಬೆಂಗಳೂರು, ಮೈಸೂರಿಗೆ ಕರೆದುಕೊಂಡು ಹೋಗುವುದು. ಒಳ್ಳೆಯ ಉದ್ಯೋಗ, ಅವಕಾಶಗಳನ್ನು ದೊರಕಿಸುವುದಾಗಿ ನಂಬಿಸಿ, ವಿಲಾಸಿ ಜೀವನವನ್ನು ಪರಿಚಯಿಸಿ ಆಕರ್ಷಿಸುತ್ತಾರೆ. ಇದಕ್ಕೆ ಮನಸೋತು ಬರುವ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ದೂಡುವುದು ದಂಧೆಕೋರರ ಒಳಸಂಚಾಗಿದೆ.

ಈ ಆಕರ್ಷಣೆಗೆ ಒಳಗಾದವರಲ್ಲಿ ಕೆಲವು ಯುವತಿಯರು ಕೊನೆಯ ಹಂತದಲ್ಲಿ ಎಚ್ಚೆತ್ತುಕೊಳ್ಳುವರೆಂಬುದು ಕಂಡುಬಂದರೆ ಅವರ ನಗ್ನ, ಅರೆನಗ್ನ ಫೋಟೋ, ವೀಡಿಯೋಗಳನ್ನು ಮಾಡಿಕೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಡುವುದಾಗಿ ಹೆದರಿಸಿ ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡುವಂತಹ ಪ್ರಯತ್ನಗಳೂ ನಡೆಯುತ್ತಿರುವುದಾಗಿ ತಿಳಿದುಬಂದಿದೆ.

ಶಿಕ್ಷಣ ಕಲಿಯುವ ಮಹತ್ವಾಕಾಂಕ್ಷೆಯೊಂದಿಗೆ ಕಾಲೇಜಿಗೆ ಬರುವ ವಿದ್ಯಾರ್ಥಿನಿಯರು ದಂಧೆಕೋರರ ಜಾಲಕ್ಕೆ ಸಿಲುಕಿದರೆ ಅತ್ತ ಶಿಕ್ಷಣದಿಂದಲೂ ವಂಚಿತರಾಗಿ ಸಮಾಜದಲ್ಲಿ ಘನತೆ ಇಲ್ಲದೆ, ಮನೆಯವರಿಂದಲೂ ದೂರವಾಗಿ, ಸಮಾಜದಿಂದ ನಿಂದನೆಗೊಳಗಾಗಿ ಬೆಲೆವೆಣ್ಣುಗಳನ್ನಾಗಿ ಮಾಡುವ ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆಯುತ್ತಿದೆ.

ಸಲೂನ್, ಸ್ಪಾ ಎನ್ನುವುದು ಹೆಸರಿಗಷ್ಟೇ:

ಸಲೂನ್, ಸ್ಪಾ ಎನ್ನುವುದು ಸಮಾಜದ ಕಣ್ಣಿಗೆ ಮಣ್ಣೆರಚುವ ತಂತ್ರವಷ್ಟೇ. ಹೊರನೋಟಕ್ಕೆ ಕಾಣುವ ಮುಖ ಒಂದು ರೀತಿಯಾದರೆ, ಇವುಗಳ ಒಳನೋಟದ ಚಿತ್ರಣವೇ ಬೇರೆಯದ್ದಾಗಿರುತ್ತದೆ. ಇವುಗಳಿರುವ ಕಡೆಗಳಲ್ಲಿ ಸಮಾಜಮುಖಿ ಕಾರ್ಯಗಳಿಗಿಂತ ಹೆಚ್ಚಾಗಿ ಸಮಾಜದ್ರೋಹಿ ಕೆಲಸಗಳೇ ಹೆಚ್ಚಾಗಿ ನಡೆಯುತ್ತವೆ ಎನ್ನುವುದು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಅವರು ಹೇಳುವ ಮಾತಾಗಿದೆ.

ಕ್ಲೌಡ್-೧೧ ಸಲೂನ್ ಎಂದಿದ್ದರೂ ಒಳಗೆ ಸಲೂನ್ ನಡೆಯುತ್ತಲೇ ಇರಲಿಲ್ಲ. ಕಳೆದೊಂದು ವಾರದಿಂದ ಸಲೂನ್ ಕಾರ್ಯಚಟುವಟಿಕೆಗಳ ಮೇಲೆ ಒಡನಾಡಿ ಸಂಸ್ಥೆ ಹದ್ದಿನ ಕಣ್ಣಿಟ್ಟಿತ್ತು. ಅಲ್ಲಿಗೆ ಬರುವವರೆಲ್ಲಾ ವಿಟಪುರುಷರೇ ಆಗಿದ್ದರು. ಹೆಣ್ಣು ಮಕ್ಕಳು ಒಳಗೆ ಹೋಗುವುದು, ಬರುವುದು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಲಾಗುತ್ತಿತ್ತು. ಅಮಾಯಕ ಹೆಣ್ಣು ಮಕ್ಕಳನ್ನು ಯಾವ ರೀತಿ ಆಕರ್ಷಿಸಿ ದಂಧೆಯಲ್ಲಿ ತೊಡಗಿಸಲಾಗುತ್ತಿದೆ ಎಂಬುದನ್ನು ಅರಿತು ದಾಳಿ ನಡೆಸಲಾಗಿದೆ.

ಅಮಾಯಕರಾಗಿರುವ ಮಂಡ್ಯದ ಜನರು ತಮ್ಮ ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈಗಲೇ ಎಚ್ಚರಗೊಳ್ಳಬೇಕಿದೆ. ಇಂತಹ ದಂಧೆಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿ ಅವರ ಚಲನ-ವಲನಗಳ ಮೇಲೆ ನಿಗಾ ಇಡಬೇಕು. ಇಂತಹ ವಿಕೃತ, ಮೋಸದ ಜಾಲಕ್ಕೆ ಸಿಲುಕದಂತೆ ರಕ್ಷಣೆ ಮಾಡುವುದಕ್ಕೆ ಮುಂದಾಗಬೇಕಾದ ಅನಿವಾರ್ಯತೆ ಎದುರಾಗಿದೆ.

--------------------------------

ಜವಾಬ್ದಾರಿ ಮರೆತ ಸಂಸ್ಥೆಗಳು

ವಿದ್ಯಾರ್ಥಿಗಳು ಕಲಿಯಲು ಬರುವ ಸ್ಥಳದ ಮೂಗಿನ ಕೆಳಗೇ ಇಂತಹ ವಿಕೃತಿಗಳು ನಡೆಯುತ್ತಿವೆ ಎಂದಾದರೆ ನಗರಸಭೆ, ಮಾನವ ಹಕ್ಕುಗಳ ಆಯೋಗ, ಮಕ್ಕಳ ಕಲ್ಯಾಣ ಸಮಿತಿ ಯಾವ ಜವಾಬ್ದಾರಿ ನಿರ್ವಹಿಸುತ್ತಿವೆ ಎಂಬುದು ಪ್ರಶ್ನೆಯಾಗಿದೆ.

ವಾಣಿಜ್ಯ ತೆರಿಗೆಯನ್ನು ಸಂಗ್ರಹಿಸುವ ನಗರಸಭೆ ಸಲೂನ್, ಸ್ಪಾಗೆ ಪರವಾನಗಿ ಪಡೆದಿವೆಯೇ, ಇಲ್ಲವೇ, ಪರವಾನಗಿಯನ್ನು ನವೀಕರಿಸಲಾಗಿದೆಯೇ ಎಂಬ ಬಗ್ಗೆ ಗಮನಹರಿಸಬೇಕು. ಯಾವುದೇ ಅನುಮತಿಯನ್ನು ಪಡೆಯದೆ ಸಲೂನ್, ಸ್ಪಾ ನಡೆಯಲು ಅವಕಾಶ ನೀಡಿರುವುದೇಕೆ. ಪರವಾನಗಿ ನೀಡುವುದಷ್ಟೇ ನಗರಸಭೆ ಕೆಲಸವೇ. ಒಳಗಡೆ ಏನು ಬೇಕಾದರೂ ನಡೆಸುವುದಕ್ಕೆ ಅವಕಾಶವಿದೆಯೇ ಎನ್ನುವುದು ಪ್ರಶ್ನೆಯಾಗಿದೆ. ಈ ವಿಚಾರದಲ್ಲಿ ನಗರಸಭೆ ಅಧಿಕಾರಿಗಳು ಸಾಮಾಜಿಕ ಜವಾಬ್ದಾರಿ, ಬದ್ಧತೆ, ಕಾಳಜಿ ಮರೆತಿರುವುದು ಸ್ಪಷ್ಟವಾಗಿ ಕಂಡುಬಂದಿದೆ.

ಮಾನವ ಹಕ್ಕುಗಳ ಆಯೋಗ ವೇಶ್ಯಾವಾಟಿಕೆ ದಂಧೆಗೆ ಸ್ಥಳಾವಕಾಶ ಒದಗಿಸುವಂತಹ ಬಾಡಿಗೆಯ ಕ್ಷೇತ್ರವನ್ನು ಜಪ್ತಿಗೊಳಿಸುವ ಅಧಿಕಾರವನ್ನು ನೀಡಲಾಗಿದೆ. ಎಲ್ಲಾ ಜಿಲ್ಲೆಗಳಿಗೂ ಆದೇಶವನ್ನು ತಲುಪಿಸಲಾಗಿದೆ. ಮಾನವ ಹಕ್ಕುಗಳ ಆಯೋಗವೂ ಇಂತಹ ಕೇಂದ್ರಗಳು ಹಾಗೂ ಅವುಗಳ ಕಾರ್ಯಚಟುವಟಿಕೆಗಳ ಮೇಲೆ ನಿಗಾ ವಹಿಸಿ ಕ್ರಮ ಜರುಗಿಸಬೇಕಿದೆ.

ಮಕ್ಕಳು ಶಿಕ್ಷಣ ಕಲಿಯುವ ಸ್ಥಳದ ಕೆಳಭಾಗದಲ್ಲೇ ಇಂತಹ ವಿಕೃತಿ ನಡೆಯುತ್ತಿರುವ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಯವರು ನಗರಸಭೆಯವರಿಗೆ ನೋಟೀಸ್ ನೀಡಿ ಪರವಾನಗಿ ನೀಡಿರುವ ಕ್ರಮವನ್ನು ಪ್ರಶ್ನಿಸಬೇಕಿದೆ. ಇಲ್ಲಿ ಯಾರೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸದಿರುವುದರಿಂದಲೇ ವೇಶ್ಯಾವಾಟಿಕೆ ದಂಧೆ ನಿರಾತಂಕವಾಗಿ ಶಿಕ್ಷಣ ಸಂಸ್ಥೆಗಳ ಆಸು-ಪಾಸಿನಲ್ಲೇ ನಡೆಯುವುದಕ್ಕೆ ಪ್ರಮುಖ ಕಾರಣವಾಗಿದೆ ಎನ್ನುವುದು ಸ್ಪಷ್ಟವಾಗಿದೆ.

--------------------------------

ವೇಶ್ಯಾವಾಟಿಕೆಗೆ ಮಂಡ್ಯ ಈಗ ಅಡ್ಡ. ಮೈಸೂರಿಗಿಂತ ಮಂಡ್ಯವನ್ನು ಅಡ್ಡ ಮಾಡಿಕೊಳ್ಳುತ್ತಿರುವ ಮಾಹಿತಿ ಬಂದಿದೆ. ಮಂಡ್ಯದ ಜನರು ಅಮಾಯಕರು. ಇಂತಹ ಅವಮಾನಗಳನ್ನು ಸಹಿಸುವ ಸ್ಥಿತಿಯಲ್ಲಿಲ್ಲ. ಮಕ್ಕಳು ಕಲಿಯುವ ಜಾಗದಲ್ಲಿ ಇಂತಹ ವಂಚಕ ಜಾಲ ನಡೆಯುವುದರಿಂದ ಅದು ಹೆಣ್ಣು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಅದರಿಂದ ಅವರು ಹತಾಶೆಗೊಳಗಾಗುತ್ತಾರೆ. ಇಂತಹ ಜಾಲಗಳಿಗೆ ಸಿಲುಕುತ್ತಾರೆ. ನಾವೂ ಕೂಡ ಇಂತಹ ದಂಧೆಗಳ ವಿರುದ್ಧ ಹೋರಾಡುತ್ತಲೇ ಇದ್ದೇವೆ. ಜನರೂ ಜಾಗೃತಗೊಂಡು ಈ ದಂಧೆಯನ್ನು ಶಾಶ್ವತವಾಗಿ ಕೊನೆಗಾಣಿಸಬೇಕು.

- ಸ್ಟ್ಯಾನ್ಲಿ, ಒಡನಾಡಿ ಸಂಸ್ಥೆ