ಪಾಕಿಸ್ತಾನ್ ಜಿಂದಾಬಾದ್ ಎನ್ನುವವರು ನಮ್ಮಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ವಿಧಾನಸೌಧದೊಳಗೆ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುವ ದೇಶದ್ರೋಹಿಗಳು ರಾಜ್ಯ, ದೇಶದಲ್ಲಿದ್ದಾರೆ. ಅಂತವರನ್ನು ಹುಡುಕುವ ಕೆಲಸ ಆಗಬೇಕಿದೆ.
ತುಮಕೂರು : ಪಾಕಿಸ್ತಾನ್ ಜಿಂದಾಬಾದ್ ಎನ್ನುವವರು ನಮ್ಮಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ವಿಧಾನಸೌಧದೊಳಗೆ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುವ ದೇಶದ್ರೋಹಿಗಳು ರಾಜ್ಯ, ದೇಶದಲ್ಲಿದ್ದಾರೆ. ಅಂತವರನ್ನು ಹುಡುಕುವ ಕೆಲಸ ಆಗಬೇಕಿದೆ. ಪ್ರಧಾನಿ ನರೇಂದ್ರ ಮೋದಿಯವರು ಆ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದಲ್ಲಿ ಭಾನುವಾರ ನಡೆದ ಬೃಹತ್ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪಾಕಿಸ್ತಾನದ ಬೆದರಿಕೆಗೆ ಭಾರತ ಜಗ್ಗುವುದಿಲ್ಲ. ಪಾಕಿಸ್ತಾನದ ಸೈನಿಕರನ್ನು ಮಟ್ಟ ಹಾಕುವ ಶಕ್ತಿ ಭಾರತಕ್ಕಿದೆ. ಸಿಂಧೂ ನದಿಯ ನೀರನ್ನು ಕೊಡಬೇಕು ಎಂದರೆ ಕಾಶ್ಮೀರದಲ್ಲಿ ನಡೆಸುತ್ತಿರುವ ಉಗ್ರಗಾಮಿ ಕೃತ್ಯಗಳನ್ನು ಪಾಕಿಸ್ತಾನ ತಕ್ಷಣ ನಿಲ್ಲಿಸಬೇಕು ಎಂದು ತಾಕೀತು ಮಾಡಿದರು.
ಪೆಹಲ್ಗಾಂನಲ್ಲಿ ನಡೆದದ್ದು ಅಮಾನುಷ ಕೃತ್ಯ. ಹಾಗಾಗಿ, ಉಗ್ರಗಾಮಿ ಸಂಘಟನೆಗಳ ವಿರುದ್ಧ ಹಾಗೂ ಉಗ್ರಗಾಮಿ ಸಂಘಟನೆಗಳಿಗೆ ಶಕ್ತಿ ಕೊಡುವಂತಹ ದುಷ್ಟ ರಾಷ್ಟ್ರ ಪಾಕಿಸ್ತಾನದ ವಿರುದ್ಧ ಪ್ರತಿಯೊಬ್ಬ ಸ್ವಾಭಿಮಾನಿ ಭಾರತೀಯನ ರಕ್ತ ಕುದಿಯುತ್ತಿತ್ತು. ಇಂತಹ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಒಂದು ತೀರ್ಮಾನ ಮಾಡಿ, ಆಪರೇಷನ್ ಸಿಂದೂರ ಘೋಷಣೆ ಮಾಡಿದರು ಎಂದರು.
ತಿರಂಗಾಯಾತ್ರೆಯಲ್ಲಿ ಬಿಜೆಪಿ ಬಾವುಟ ಕಾಣಲ್ಲ. ಪಕ್ಷಕ್ಕೆ ಸೀಮಿತವಾಗದೆ, ರಾಜಕೀಯೇತರವಾಗಿ ಸಮಾಜದ ಎಲ್ಲಾ ವರ್ಗದವರನ್ನು ಮುಂಚೂಣಿಯಲ್ಲಿ ಕರೆದುಕೊಂಡು ತಿರಂಗಾ ಯಾತ್ರೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಪಾಕಿಸ್ತಾನ ಶತ್ರು ರಾಷ್ಟ್ರವಲ್ಲ ಎಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆ ಪ್ರಸ್ತಾಪಿಸಿ, ಕಾಂಗ್ರೆಸ್ ಧುರಿಣರಿಗೆ ಪಾಕಿಸ್ತಾನದ ಮೇಲಿನ ಪ್ರೀತಿ ಎಷ್ಟಿದೆ ಅನ್ನೋದು ಹಲವು ಬಾರಿ ಗೊತ್ತಾಗಿದೆ. ಪಾಕಿಸ್ತಾನ ಮೇಲೆ ಯುದ್ಧ ಆರಂಭವಾಗುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಯುದ್ಧ ಬೇಡ ಅಂದಿದ್ದನ್ನು ರಾಜ್ಯದ ಜನ ನೋಡಿದ್ದಾರೆ, ಗಮನಿಸಿದ್ದಾರೆ ಎಂದರು.
ಭಯೋತ್ಪಾದನೆಗೆ ಪಾಕಿಸ್ತಾನ ಕುಮ್ಮಕ್ಕುನೀಡುವುದನ್ನು ನಿಲ್ಲಿಸದಿದ್ದರೆ ಪಾಕ್ ವಿರುದ್ಧ ಯುದ್ಧ ಮಾಡಲು ಭಾರತ ಹಿಂದೆ ಮುಂದೆ ನೋಡುವುದಿಲ್ಲ. ಅಮೆರಿಕ ಮತ್ತು ಭಾರತದ ಹಿಟ್ ಲಿಸ್ಟ್ ನಲ್ಲಿದ್ದ ಉಗ್ರಗಾಮಿಗಳನ್ನು ಹತ್ಯೆ ಮಾಡುವಲ್ಲಿ ಭಾರತದ ವೀರ ಯೋಧರು ಯಶಸ್ವಿಯಾಗಿದ್ದಾರೆ. ಆಪರೇಷನ್ ಸಿಂದೂರ ಯಶಸ್ವಿಯಾಗಿರುವ ಸಂದರ್ಭದಲ್ಲಿ ನಮ್ಮ ವೀರ ಯೋಧರನ್ನು ಬೆಂಬಲಿಸುವುದು ಭಾರತದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಆಪರೇಷನ್ ಸಿಂದೂರ ಯಶಸ್ವಿಗೆ ಕಾರಣೀಕರ್ತರಾಗಿರುವ ವೀರ ಯೋಧರಿಗೆ ಬೆಂಬಲ, ನೈತಿಕ ಸ್ಥೈರ್ಯವನ್ನು ತುಂಬುವ ಕೆಲಸವನ್ನು ನಾವು ಮಾಡಬೇಕು ಎಂದರು.ಹುಬ್ಬಳ್ಳಿ-ಧಾರವಾಡದಲ್ಲಿ ಪಾಕ್ ಪ್ರಜೆ?
ಅಪರಿಚಿತ ಹಾಗೂ ಅನುಮಾನಾಸ್ಪದವಾಗಿರುವ ವ್ಯಕ್ತಿಗಳು ಹುಬ್ಬಳ್ಳಿ-ಧಾರವಾಡ ಮಸೀದಿಗಳಲ್ಲಿ ಓಡಾಡುತ್ತಿದ್ದಾರೆ. ಇವರು ಪಾಕಿಸ್ತಾನ ಸೇರಿದಂತೆ ಬೇರೆ, ಬೇರೆ ದೇಶದ ವ್ಯಕ್ತಿಗಳಿರಬಹುದು ಎಂಬ ಶಂಕೆ ಇದೆ. ಈ ಕುರಿತು ಪರಿಶೀಲನೆ ನಡೆಸಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಹಾಗೂ ಶಾಸಕ ಅರವಿಂದ ಬೆಲ್ಲದ ಆಗ್ರಹಿಸಿದ್ದಾರೆ.
ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಬೆಲ್ಲದ, ಅನುಮಾನಾಸ್ಪದ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅಪರಿಚಿತರ ಓಡಾಟದ ಕುರಿತಂತೆ ಮೇ 17ರಂದು ಪೊಲೀಸ್ ಆಯುಕ್ತರಿಗೆ ಅವರು ಪತ್ರ ಬರೆದಿದ್ದಾರೆ. ಹುಬ್ಬಳ್ಳಿ- ಧಾರವಾಡ ಮಹಾನಗರದ ಕೆಲವು ಮಸೀದಿಗಳಲ್ಲಿ ಅಪರಿಚಿತರ ಓಡಾಟ ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಅವರು ಸ್ಥಳೀಯರು ಅಲ್ಲ ಎಂಬ ಸಂಶಯವನ್ನು ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ. ಹೀಗೆ ಓಡಾಡುತ್ತಿರುವವರು ಹೊಸ ಮುಖ, ಅಪರಿಚಿತರಾಗಿದ್ದು, ಅನುಮಾನಾಸ್ಪದ ವ್ಯಕ್ತಿಗಳೇ ಹೆಚ್ಚಾಗಿದ್ದಾರೆ. ಅವರು ಹೊರದೇಶದ ಪ್ರಜೆಗಳಂತೆ ಭಾಸವಾಗುತ್ತಾರೆ ಎಂದು ಹೇಳಿದ್ದಾರೆ.
ಅವಳಿ ನಗರದ ವಿವಿಧ ಕೊಳಚೆ ಪ್ರದೇಶದಲ್ಲಿ (ಜನ್ನತ್ ನಗರ ಧಾರವಾಡ ಸೇರಿದಂತೆ) ಇವರು ವಾಸವಾಗಿದ್ದಾರೆಂಬ ಮಾಹಿತಿಯೂ ಇದ್ದು, ಅದಕ್ಕಾಗಿ ಈ ಕುರಿತು ಪೊಲೀಸ್ ಇಲಾಖೆ ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಹುಬ್ಬಳ್ಳಿ-ಧಾರವಾಡದಲ್ಲಿರುವ ಅಪರಿಚಿತ, ಹೊಸಮುಖದ ವ್ಯಕ್ತಿಗಳನ್ನು ವಿಚಾರಿಸಿ, ಸೂಕ್ತ ಕ್ರಮ ಜರುಗಿಸಬೇಕು. ಆ ಮೂಲಕ ಮಹಾನಗರದಲ್ಲಿ ಅಹಿತಕರ ಘಟನೆ ಆಗದಂತೆ ತಡೆಯುವ ಕೆಲಸ ಮಾಡಬೇಕು ಎಂದು ಪೊಲೀಸ್ ಆಯುಕ್ತರಿಗೆ ಬರೆದ ಪತ್ರದಲ್ಲಿ ಬೆಲ್ಲದ ಉಲ್ಲೇಖಿಸಿದ್ದಾರೆ.