ಹಾರಂಗಿ ಜಲಾಶಯದಲ್ಲಿ ಅಣಕು ಪ್ರದರ್ಶನ

KannadaprabhaNewsNetwork | Published : May 18, 2025 11:56 PM
Follow Us

ಸಾರಾಂಶ

ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ ಅಣಕು ಕಾರ್ಯಾಚರಣೆ ನಡೆಯಿತು. ವಿವಿಧ ಇಲಾಖೆ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಹಾರಂಗಿ

ಯಾವುದೇ ರೀತಿಯ ವಿಕೋಪಗಳು ಸಂಭವಿಸಿದ್ದಲ್ಲಿ, ಜನ, ಜಾನುವಾರು, ಹಾಗೂ ಆಸ್ತಿ-ಪಾಸ್ತಿ ರಕ್ಷಣೆ ಸಂಬಂಧ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವ ಬಗ್ಗೆ ಹಾರಂಗಿ ಜಲಾಶಯದಲ್ಲಿಅಣಕು ಪ್ರದರ್ಶನ ನಡೆಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ ನಡೆದ ಅಣಕು ಕಾರ್ಯಾಚರಣೆಯಲ್ಲಿ ವಿವಿಧ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಕಾರದಲ್ಲಿ ನಡೆದ ಅಣಕು ಪ್ರದರ್ಶನ ಸಂದರ್ಭದಲ್ಲಿ ಕಂದಾಯ, ಪೊಲೀಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಗ್ನಿ ಶಾಮಕ, ಗೃಹರಕ್ಷಕ ದಳ, ಬೃಹತ್ ನೀರಾವರಿ ಹೀಗೆ ವಿವಿಧ ಇಲಾಖೆಗಳ 200 ಕ್ಕೂ ಹೆಚ್ಚು ಸಿಬ್ಬಂದಿ ಅಣಕು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ವಿಕೋಪ ಸಂದರ್ಭದಲ್ಲಿ ರಕ್ಷಿಸುವುದು, ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡುವುದು, ಕಾರ್ಯಾಚರಣೆ ಸಂದರ್ಭದಲ್ಲಿ ತಮ್ಮ ರಕ್ಷಣೆ ಜೊತೆಗೆ ವಿಕೋಪಕ್ಕೆ ತುತ್ತಾದವರನ್ನು ರಕ್ಷಿಸುವುದು ಅಣಕು ಪ್ರದರ್ಶನದಲ್ಲಿ ಗಮನ ಸೆಳೆಯಿತು. ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ಜನ, ಜಾನುವಾರು, ಆಸ್ತಿ ಪಾಸ್ತಿ ರಕ್ಷಣೆ ಮಾಡುವುದು ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಸಮನ್ವಯತೆ ಅತೀ ಮುಖ್ಯವಾಗಿದೆ ಎಂದರು. ವಿಕೋಪ ಎದುರಿಸುವಲ್ಲಿ ಸರ್ಕಾರದ ಮಾರ್ಗಸೂಚಿಯಂತೆ(ಎಸ್‌ಒಪಿ) ಕಾರ್ಯನಿರ್ವಹಿಸುವುದು ಅತೀ ಮುಖ್ಯ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮಾತನಾಡಿ ವಿಪತ್ತುಗಳು ಸಂಭವಿಸಿದ ಸಂದರ್ಭದಲ್ಲಿ ಕಾರ್ಯಾಚರಣೆ ಮಾಡುವವರು ತಮ್ಮ ರಕ್ಷಣೆ ಮಾಡಿಕೊಳ್ಳುವುದರ ಜೊತೆಗೆ ಇತರರ ರಕ್ಷಣೆ ಮಾಡುವುದು ಅತೀ ಮುಖ್ಯ. ಯಾವುದೇ ಕಾರಣಕ್ಕೂ ಗಾಬರಿಗೆ ಒಳಗಾಗದೆ ರಕ್ಷಣೆ ಕಾರ್ಯದಲ್ಲಿ ಆಯಾಯ ಸಂದರ್ಭದಲ್ಲಿ ತೊಡಗಿಸಿಕೊಳ್ಳುವುದು ಅತ್ಯಗತ್ಯ ಎಂದು ಹೇಳಿದರು. ತಹಸೀಲ್ದಾರ್ ಕಿರಣ್ ಗೌರಯ್ಯ, ಕೃಷ್ಣಮೂರ್ತಿ, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಅನನ್ಯ ವಾಸುದೇವ್, ಅಗ್ನಿಶಾಮಕ ಅಧಿಕಾರಿ ರಾಜೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಇಂದುಧರ, ಗೃಹರಕ್ಷಕ ದಳದ ತರಬೇತಿದಾರರಾದ ಅಕ್ಷಯ್, ಮಡಿಕೇರಿ ಡಿವೈಎಸ್‌ಪಿ ಸೂರಜ್, ಹಾರಂಗಿ ಜಲಾಶಯ ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ, ಕಂದಾಯ, ಪೊಲೀಸ್, ಅಗ್ನಿಶಾಮಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹೀಗೆ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ಪಾಲ್ಗೊಂಡಿದ್ದರು.