ರಾಜಕಾರಣದಿಂದ ಬಿಆರ್‌ಟಿಎಸ್‌ ರಸ್ತೆ ಕಡಿತವಾಯಿತೇ?

KannadaprabhaNewsNetwork |  
Published : Sep 20, 2024, 01:47 AM IST
454 | Kannada Prabha

ಸಾರಾಂಶ

ಸಿಟಿ ವ್ಯಾಪ್ತಿಯಲ್ಲಿ ಬರೀ 35 ಮೀಟರ್‌ ರಸ್ತೆ ಆಗಲು ಏನು ಕಾರಣ? ಕಾರಿಡಾರ್‌ ನಿರ್ಮಿಸುವಾಗಲೇ 44 ಮೀಟರ್‌ ರಸ್ತೆಯನ್ನೇ ಮಾಡಲು ಅಧಿಕಾರಿ ವರ್ಗ ಮುಂದಾಗಿತ್ತಂತೆ. ಅದಕ್ಕೆ ತಕ್ಕಂತೆ ಭೂಸ್ವಾಧೀನ ಮಾಡಿಕೊಳ್ಳಲು ಯೋಚಿಸಿತ್ತು.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಭಾರೀ ಅಚ್ಚುಮೆಚ್ಚಿನ ಬಿಆರ್‌ಟಿಎಸ್‌ ಇದೀಗ ಬೇಡವಾಗಿದೆ. ಇದನ್ನು ಬದಲಿಸಿ ಎಲ್‌ಆರ್‌ಟಿ ವ್ಯವಸ್ಥೆ ಜಾರಿಗೊಳಿಸುವ ಚಿಂತನೆ ಶುರುವಾಗಿದೆ. ಇದಕ್ಕೆ ಮೂಲಕಾರಣ ಮಿಶ್ರಪಥದಲ್ಲಿನ ಟ್ರಾಫಿಕ್‌ ಕಿರಿಕಿರಿ ಹಾಗೂ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂಬ ಆರೋಪ ಸಾಮಾನ್ಯವಾಗಿದೆ. ಆದರೆ ಆಗಿನ ರಾಜಕಾರಣದಿಂದಾಗಿ ಮಿಶ್ರಪಥದ ರಸ್ತೆ ಕಡಿತವಾಗಿದೆಯೇ?

ಇಂತಹದೊಂದು ಪ್ರಶ್ನೆ ಇದೀಗ ಪ್ರಜ್ಞಾವಂತರಲ್ಲಿ ಎದ್ದಿದೆ. ಬಿಆರ್‌ಟಿಎಸ್‌ ಬೇಡ ಎನ್ನಲು ಟ್ರಾಫಿಕ್‌ ಕಿರಿಕಿರಿ ಕೂಡ ಪ್ರಮುಖ ಕಾರಣ. ಹುಬ್ಬಳ್ಳಿ- ಧಾರವಾಡ ಮಧ್ಯೆ ಪ್ರತಿನಿತ್ಯ 3-4 ಲಕ್ಷ ಜನ ಓಡಾಡುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಪೈಕಿ 80-90 ಸಾವಿರ ಜನ ಬಿಆರ್‌ಟಿಎಸ್‌ನಲ್ಲಿ ಓಡಾಡುತ್ತಾರೆ. ಅಂದರೆ ಶೇ.20-22ರಷ್ಟು ಜನ ಬಿಆರ್‌ಟಿಎಸ್‌ ಬಸ್‌ ಅವಲಂಬಿಸಿದ್ದಾರೆ. ಇನ್ನುಳಿದ ಶೇ. 78-80ರಷ್ಟು ಜನರು ಕಾರು, ಇತರೆ ಖಾಸಗಿ ಬಸ್‌, ಸಾರಿಗೆ ಸಂಸ್ಥೆಯ ಕೆಂಪು ಬಸ್‌, ಬೈಕ್‌ನಲ್ಲಿ ಓಡಾಡುತ್ತಾರೆ. ಶೇ. 20ರಷ್ಟು ಜನರಿಗೆ ಓಡಾಡಲು ಪ್ರತ್ಯೇಕ ಕಾರಿಡಾರ್‌ ಬೇಕಿತ್ತಾ ಎಂಬ ಪ್ರಶ್ನೆ ಸಾರ್ವಜನಿಕರದ್ದು. ಇದರಿಂದ ಮಿಶ್ರಪಥದಲ್ಲಿ ಪ್ರತಿಕ್ಷಣ ಟ್ರಾಫಿಕ್‌ ಜಾಮ್‌ ಆಗುತ್ತಲೇ ಇರುತ್ತದೆ. ಆದಕಾರಣ ಈ ಬಿಆರ್‌ಟಿಎಸ್‌ ಬೇಡವೇ ಬೇಡ. ಎಲ್ಲರಿಗೂ ಅನುಕೂಲವಾಗುವಂತೆ ಇದನ್ನು ಸ್ಥಗಿತಗೊಳಿಸಿಬಿಡಿ ಎಂಬ ಬೇಡಿಕೆಯನ್ನು ಕೆಲವರು ಮುಂದಿಟ್ಟಿದ್ದಾರೆ.

ನಿರ್ಮಾ ಹಂತದಲ್ಲೇ ರಾಜಕಾರಣ?

ಹುಬ್ಬಳ್ಳಿ ಹೊಸೂರನಿಂದ ನವೀನ ಹೋಟೆಲ್‌ ವರೆಗೆ ಹಾಗೂ ಧಾರವಾಡದ ಗಾಂಧಿನಗರದಿಂದ ಜ್ಯುಬಿಲಿ ಸರ್ಕಲ್‌ವರೆಗೂ ಸಿಟಿ ವ್ಯಾಪ್ತಿ ಬರುತ್ತದೆ. ಇಲ್ಲೇ ಜಾಸ್ತಿ ಟ್ರಾಫಿಕ್‌ ಜಾಮ್‌ ಆಗುತ್ತದೆ. ಕನಿಷ್ಠ ಪಕ್ಷ ಇಲ್ಲಿವರೆಗಾದರೂ ಕಾರಿಡಾರ್‌ನ ಬ್ಯಾರಿಕೇಡ್‌ ತೆರವುಗೊಳಿಸಿ ಎಂಬ ಬೇಡಿಕೆ ಇದೆ. ಆದರೆ ಇಲ್ಲಷ್ಟೇ ಏಕೆ ಟ್ರಾಫಿಕ್‌ ಜಾಮ್‌ ಆಗುತ್ತದೆ. ಸಿಟಿ ವ್ಯಾಪ್ತಿ ಬರುವ ಪ್ರದೇಶದಲ್ಲಿ ರಸ್ತೆ ಕಡಿತಗೊಂಡಿದೆ. ಈ ಪ್ರದೇಶದಲ್ಲಿ ಬರೀ 35 ಮೀಟರ್‌ ರಸ್ತೆಯಲ್ಲಿ ಕಾರಿಡಾರ್‌ ಹಾಗೂ ಮಿಶ್ರಪಥ ಎರಡೂ ಇವೆ. ಇನ್ನು ಸಿಟಿ ವ್ಯಾಪ್ತಿ ಮೀರಿ ಅಂದರೆ ಹುಬ್ಬಳ್ಳಿಯ ನವೀನ ಹೋಟೆಲ್‌ನಿಂದ ಧಾರವಾಡದ ಗಾಂಧಿನಗರದ ವರೆಗೆ 44 ಮೀಟರ್‌ ರಸ್ತೆ ಇದೆ. ಹೀಗಾಗಿ ಅಲ್ಲಿ ಅಷ್ಟೊಂದು ಟ್ರಾಫಿಕ್‌ ಜಾಮ್‌ ಕಿರಿಕಿರಿಯಾಗಲ್ಲ.

ಹಾಗಾದರೆ ಸಿಟಿ ವ್ಯಾಪ್ತಿಯಲ್ಲಿ ಬರೀ 35 ಮೀಟರ್‌ ರಸ್ತೆ ಆಗಲು ಏನು ಕಾರಣ? ಕಾರಿಡಾರ್‌ ನಿರ್ಮಿಸುವಾಗಲೇ 44 ಮೀಟರ್‌ ರಸ್ತೆಯನ್ನೇ ಮಾಡಲು ಅಧಿಕಾರಿ ವರ್ಗ ಮುಂದಾಗಿತ್ತಂತೆ. ಅದಕ್ಕೆ ತಕ್ಕಂತೆ ಭೂಸ್ವಾಧೀನ ಮಾಡಿಕೊಳ್ಳಲು ಯೋಚಿಸಿತ್ತು. ಅದಾಗಿದ್ದರೆ ಹುಬ್ಬಳ್ಳಿ-ಧಾರವಾಡ ಮಧ್ಯೆ ಬರೋಬ್ಬರಿ 44 ಮೀಟರ್‌ ರಸ್ತೆ ಆಗುತ್ತಿತ್ತು. ಕಾರಿಡಾರ್‌, ಮಿಶ್ರಪಥ ಇದ್ದರೂ ಅಷ್ಟೊಂದು ಟ್ರಾಫಿಕ್‌ ಜಾಮ್‌ ಆಗುತ್ತಿರಲಿಲ್ಲ. ಆದರೆ ಆಗ ಕೆಲ ಪ್ರಭಾವಿಗಳು ಎಲ್ಲಿ ತಮ್ಮ ವ್ಯಾಪಾರ-ವಹಿವಾಟುಗಳಿಗೆ ಧಕ್ಕೆಯಾಗುತ್ತದೆಯೋ? ಎಲ್ಲಿ ತಮ್ಮ ಜಾಗೆ ಹೋಗುತ್ತದೆಯೋ ಎಂದುಕೊಂಡು ಭೂಸ್ವಾಧೀನ ಆಗದಂತೆ ನೋಡಿಕೊಂಡರು ಎಂಬ ಮಾತು ಕೇಳಿ ಬರುತ್ತದೆ. ಸಿಟಿ ಬಿಟ್ಟು ಹೊರವಲಯದಲ್ಲಿ 44 ಮೀಟರ್‌ ರಸ್ತೆಯಾದರೆ, ಸಿಟಿ ಪ್ರದೇಶದಲ್ಲಿ 35 ಮೀಟರ್‌ಗೆ ರಸ್ತೆ ಸೀಮಿತಗೊಳಿಸಲಾಯಿತು. ಈ ಕಾರಣದಿಂದಾಗಿ ಈ ಭಾಗದಲ್ಲಿ ಟ್ರಾಫಿಕ್‌ ಕಿರಿಕಿರಿ ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ.

ನಷ್ಟವೇನು ದೊಡ್ಡದಲ್ಲ:

ಹಾಗೆ ನೋಡಿದರೆ ಯಾವುದೇ ಸಾಮೂಹಿಕ ಸಾರಿಗೆ ವ್ಯವಸ್ಥೆಯಿಂದ ಆ ಸಂಸ್ಥೆ ಲಾಭದತ್ತ ಕೊಂಡೊಯ್ಯಲು ಸಾಧ್ಯವಿಲ್ಲ. ಕೆಎಸ್‌ಆರ್‌ಟಿಸಿ, ವಾಯವ್ಯ ಸಾರಿಗೆ, ಬಿಎಂಟಿಸಿ ಸೇರಿದಂತೆ ಯಾವೊಂದು ನಿಗಮವೂ ಲಾಭದಲ್ಲಿ ಈವರೆಗೂ ಬಂದೇ ಇಲ್ಲ. ಇದೊಂದು ಸೇವಾ ಮನೋಭಾವದಿಂದಲೇ ಓಡಿಸಲಾಗುತ್ತದೆ. ಬಿಆರ್‌ಟಿಎಸ್‌ ಬಸ್‌ ನಿರ್ವಹಣೆಗೆ (ಸಂಚಾರ, ರಿಪೇರಿ, ಡ್ರೈವರ್‌, ಸೇರಿದಂತೆ ಸಿಬ್ಬಂದಿ ಸಂಬಳ ಸೇರಿ) ಪ್ರತಿನಿತ್ಯ ₹ 21.5 ಲಕ್ಷ ಬೇಕಾಗುತ್ತದೆ. ಆದರೆ ಆದಾಯ ಬರೀ ₹ 15 ಲಕ್ಷ. ಪ್ರತಿದಿನ ₹ 6ರಿಂದ ₹ 6.5 ಲಕ್ಷ ನಷ್ಟವಾಗುತ್ತಿದೆ. ಇಷ್ಟು ನಷ್ಟ ಭರಿಸುವುದು ಸರ್ಕಾರಕ್ಕೇನೂ ಕಷ್ಟವಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ