ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದ ಕನ್ನಡಪರ ಸಂಘಟನೆಗಳ ಮುಖಂಡರು ಹೇಳುತ್ತಿರುವಂತೆ, ತಮ್ಮ ಮತ್ತು ತಮ್ಮ ಸಂಘಟನೆಗಳ ಕಾರ್ಯಕರ್ತರ ಮೇಲೆ ದಾಖಲಾಗಿರುವ ಕೇಸುಗಳ ಸಂಖ್ಯೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು. ಆದರೆ ಸರ್ಕಾರದ ಲೆಕ್ಕದಲ್ಲಿ ನೂರಕ್ಕೂ ಕಡಿಮೆ!ಹೌದು. ಇದು 2023ರ ಡಿಸೆಂಬರ್ 14ರಂದು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ನೀಡಿರುವ ಅಧಿಕೃತವಾದ ಹೇಳಿಕೆ. 2021ರಿಂದ 2023ರವರೆಗೆ ಒಟ್ಟು 46 ಪ್ರಕರಣಗಳು ಮಾತ್ರ ಕನ್ನಡ ಪರ ಚಳವಳಿ, ಹೋರಾಟಗಾರರ ವಿರುದ್ಧ ದಾಖಲಾಗಿವೆ. 2024ರಿಂದ 2025(ಈವರೆಗೆ) ಕನ್ನಡ ನಾಮಫಲಕ ಅಳವಡಿಕೆ, ಬಾಗಲಕೋಟೆಯ ಕಾಂಚನ ಪಾರ್ಕ್ ಬಳಿ ರಾತ್ರೋರಾತ್ರಿ ಅಪರಿಚಿತರು ಶಿವಾಜಿ ಪ್ರತಿಮೆ ಕೂರಿಸಿದ ಪ್ರಕರಣದ ವಿವಾದ, ಬೆಳಗಾವಿಯಲ್ಲಿ ಮರಾಠಿ ಪುಂಡರು ಕನ್ನಡದ ಸಾರಿಗೆ ನೌಕರನ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ನಡೆದ ಬಂದ್, ಪ್ರತಿಭಟನೆ, ಹಿಂದಿ ದಿವಸ್ ಆಚರಣೆಗೆ ಅಡ್ಡಿ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ 30ಕ್ಕೂ ಹೆಚ್ಚು ಕೇಸುಗಳನ್ನು ದಾಖಲು ಮಾಡಿರುವುದಾಗಿ ಹೇಳಲಾಗುತ್ತಿದೆ.
ಆದರೆ, ಸರ್ಕಾರದ ಮೂಲಗಳು ಹೇಳುವಂತಹ ಈ ಅಂಕಿ- ಅಂಶಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ. ‘ನನ್ನ ವಿರುದ್ಧವೇ ಚಿಕ್ಕೋಡಿ ಹೋರಾಟ, ಗಜೇಂದ್ರಗಢ, ಬೆಳಗಾವಿ, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ 47 ಕೇಸುಗಳು ಇವೆ. ನಮ್ಮ ಕಾರ್ಯಕರ್ತರದ್ದೂ ಸೇರಿದಂತೆ ಬರೋಬ್ಬರಿ 250ಕ್ಕೂ ಅಧಿಕ ಪ್ರಕರಣಗಳು ಇದ್ದು, ಕೋರ್ಟಿಗೆ ಅಲೆದಾಡುತ್ತಿದ್ದೇವೆ’ ಎಂದು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.ಪ್ರವೀಣ್ ಶೆಟ್ಟಿ ಮೇಲೆ 35 ಕೇಸ್:
‘ಕನ್ನಡಪರ ಹೋರಾಟಗಳಿಂದ ನನ್ನ ಮೇಲೆ ಈವರೆಗೂ 35ಕ್ಕೂ ಹೆಚ್ಚು ಕೇಸುಗಳು ದಾಖಲಾಗಿವೆ. ಕರವೇ ಕಾರ್ಯಕರ್ತರ ಮೇಲೆ 100ಕ್ಕೂ ಅಧಿಕ ಪ್ರಕರಣಗಳು ಇವೆ. ಕೆಲವೊಂದು ಇತ್ಯರ್ಥವಾಗಿದ್ದು, ಹಲವು ಕೇಸುಗಳು ಬಾಕಿ ಇವೆ’ ಎನ್ನುತ್ತಾರೆ ಕರವೇ ರಾಜ್ಯಾಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ. ಯುವ ಕರ್ನಾಟಕ ವೇದಿಕೆಯ ರೂಪೇಶ್ ರಾಜಣ್ಣ ಅವರು ಪ್ರತಿಕ್ರಿಯಿಸಿ, ನಮ್ಮ ಸಂಘಟನೆ ವಿರುದ್ಧವೂ 10ಕ್ಕೂ ಹೆಚ್ಚು ಕೇಸು ಇದ್ದು, ಕೆಲವು ಕಳೆದ ತಿಂಗಳು ಇತ್ಯರ್ಥಗೊಂಡಿವೆ. ಕನ್ನಡ, ಕನ್ನಡಿಗರು, ಕರ್ನಾಟಕದ ಹೋರಾಟದಲ್ಲಿ ಇಂಥದ್ದಕ್ಕೆ ಹೆದರುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.ಇನ್ನು ಕನ್ನಡಪರ ಹಿರಿಯ ಹೋರಾಟಗಾರರಾದ ವಾಟಾಳ್ ನಾಗರಾಜ್ ಅವರ ವಿರುದ್ಧ 7ರಿಂದ 8, ಸಾ.ರಾ.ಗೋವಿಂದು ವಿರುದ್ಧ ನಾಲ್ಕೈದು ಸೇರಿದಂತೆ ಇತರೆ ಹೋರಾಟಗಾರರ ವಿರುದ್ಧ ಹತ್ತಾರು ಪ್ರಕರಣಗಳು ದಾಖಲಾಗಿವೆ. ಹೀಗಿದ್ದರೂ ರಾಜ್ಯ ಸರ್ಕಾರದ ಖಾತೆಯಲ್ಲಿ ಕೇವಲ 70ರಿಂದ 80 ಕೇಸುಗಳು ಮಾತ್ರ ಹೋರಾಟಗಾರರ ಮೇಲಿವೆ. ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಪ್ರವೀಣ್ ಶೆಟ್ಟಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲತಾಯಿ ಧೋರಣೆ ಬೇಡ:ಸರ್ಕಾರ ಉದ್ದೇಶಪೂರ್ವಕವಾಗಿ ಹೋರಾಟಗಾರರ ಮೇಲಿನ ಕೇಸುಗಳನ್ನು ಮುಚ್ಚಿಡುತ್ತಿದೆ. ಇಲ್ಲವೇ ಅಧಿಕಾರಿಗಳು ಸರಿಯಾದ ಉತ್ತರ ನೀಡದೆ ಸರ್ಕಾರದ ದಾರಿ ತಪ್ಪಿಸುತ್ತಿದ್ದಾರೆ. ಏನೇ ಇದ್ದರೂ ಸರ್ಕಾರ ಮೇಕೆದಾಟು ಪಾದಯಾತ್ರೆ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ನಾಯಕರು, ಕಾರ್ಯಕರ್ತರನ್ನೊಳಗೊಂಡ ಕೇಸುಗಳನ್ನು ಹಿಂಪಡೆದಂತೆ ಕನ್ನಡಪರ ಹೋರಾಟಗಾರರ ಕೇಸುಗಳನ್ನು ಕೂಡ ವಾಪಸ್ ಪಡೆಯಬೇಕು. ಸರ್ಕಾರ ಮಲತಾಯಿ ಧೋರಣೆ ಮಾಡಬಾರದು ಎಂಬುದು ಕನ್ನಡ ಹೋರಾಟಗಾರರ ಆಗ್ರಹ.
ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಹಿರಿಯ ಕನ್ನಡಪರ ಹೋರಾಟಗಾರ, ಅಖಿಲ ಕರ್ನಾಟಕ ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಅವರು, 2025ರ ಜನವರಿ 28ರಂದು ಭುವನೇಶ್ವರಿ ಪ್ರತಿಮೆ ಉದ್ಘಾಟನೆ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಸುಗಳನ್ನು ಹಿಂಪಡೆಯುವಂತೆ ಮನವಿ ಕೊಟ್ಟಿದ್ದೆವು. ರಾಜ್ಯೋತ್ಸವದ ದಿನವೂ ಕೂಡ ಕೇಸು ವಾಪಸ್‌ಗೆ ಆಗ್ರಹಿಸಿದ್ದೇವೆ. ಮುಖ್ಯಮಂತ್ರಿಯವರು ಕೇಸು ವಾಪಸ್ ಪಡೆಯುತ್ತೇವೆ ಎನ್ನುತ್ತಿದ್ದಾರೆ. ಆದರೆ ಏಕೆ ತಡ ಆಗುತ್ತಿದೆ ಎನ್ನುವುದು ಸ್ಪಷ್ಟವಾಗಿಲ್ಲ ಎಂದರು.ಹೋರಾಟದ ಸಂದರ್ಭದಲ್ಲಿ ಆಸ್ತಿ ಹಾನಿ, ಬೆದರಿಕೆ ಇತ್ಯಾದಿ ಸಣ್ಣಪುಟ್ಟ ಘಟನೆಗಳು ನಡೆದಿರಬಹುದು. ಬೇಕು ಬೇಕೆಂದು ಯಾರೂ ಮಾಡಿರುವುದಿಲ್ಲ. ಹಲವು ಬಾರಿ ಮನವಿ ಮಾಡಿದ್ದರೂ ಸ್ಪಂದಿಸದಿದ್ದಾಗ, ಇಂತಹ ಘಟನೆಗಳು ನಡೆದಿರಬಹುದು. ಅದನ್ನೇ ಪೊಲೀಸರು ತಿರುಚಿ ಕೇಸು ದಾಖಲು ಮಾಡಿರುತ್ತಾರೆ. ಕನ್ನಡದ ನಾಡು, ನುಡಿಗಾಗಿ ಹೋರಾಟ ನಡೆಸಿದವರ ಪರವಾಗಿ ಸರ್ಕಾರಗಳು ಕೈಜೋಡಿಸಬೇಕು ಎಂದು ಆಗ್ರಹಿಸಿದರು.
--ಕೋಟ್...
ಕೇಸ್ ವಾಪಸ್ ಪಡೆಯಲಿಕನ್ನಡದ ಹೆಸರೇಳಿ ಲೂಟಿ ಮಾಡಿದ್ದರೆ, ವೈಯಕ್ತಿಕ ಬೆದರಿಕೆ ಹಾಕಿದ್ದರೆ ಕ್ರಮಕೈಗೊಳ್ಳಲಿ. ಅದಕ್ಕೆ ನಮ್ಮ ಬೆಂಬಲವೂ ಇದೆ. ಆದರೆ, ಕನ್ನಡಪರ, ಕನ್ನಡದ ಅಸ್ಮಿತೆಯ ಉಳಿವಿಗಾಗಿ ಚಳವಳಿ ಮಾಡಿದ್ದರೆ ಕೇಸು ವಾಪಸ್ ತೆಗೆದುಕೊಳ್ಳಬೇಕು. ಸರ್ಕಾರ ಮೀನಮೇಷ ಎಣಿಸಬಾರದು.
-ಸಾ.ರಾ.ಗೋವಿಂದು, ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ----ಕೋಟ್..
ಹೋರಾಟ ಸ್ವಹಿತಾಸಕ್ತಿಗಲ್ಲಕನ್ನಡ ಪರ ಹೋರಾಟಗಾರರು ಕನ್ನಡದ ಕೆಲಸ ಮಾಡುತ್ತಾರೆ. ಕನ್ನಡದ ಏಳಿಗೆ ಬಯಸುತ್ತಾರೆ. ಅವರ ಕಷ್ಟ ಕಾರ್ಪಣ್ಯದಲ್ಲಿ ತಂಪನ್ನು ಎರೆಯುತ್ತಾರೆ. ಅವರ ಹೋರಾಟ ಸ್ವಹಿತಾಸಕ್ತಿಗಲ್ಲ. ಯಾರೋ ಕಿಡಿಗೇಡಿಯೊಬ್ಬ ಮಾಡಿದ ತಪ್ಪಿಗೆ ಗಲಾಟೆ ಆದರೆ, ಹೋರಾಟಗಾರರನ್ನು ಹೊಣೆ ಮಾಡುವುದು ಸರಿಯಲ್ಲ.
-ಮನು ಬಳಿಗಾರ್, ಕಸಾಪ ಮಾಜಿ ಅಧ್ಯಕ್ಷ