ಕಾಂಗ್ರೆಸ್‌ ಪರಿಷತ್‌ ಹಿನ್ನೆಡೆಗೆಸಮನ್ವಯ ಕೊರತೆ ಕಾರಣ?

KannadaprabhaNewsNetwork |  
Published : Oct 28, 2026, 01:45 AM IST
27ಹೆಲ್ತ್‌ | Kannada Prabha

ಸಾರಾಂಶ

ವಿಧಾನ ಪರಿಷತ್ತಿನ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳು ಸೇರಿ ಒಟ್ಟು ನಾಲ್ಕು ಕ್ಷೇತ್ರಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಕೂಟದ ಅಭ್ಯರ್ಥಿಗಳೇ ಎಲ್ಲೆಡೆ ಭರ್ಜರಿ ಗೆಲುವು ಸಾಧಿಸಿರುವುದು ಕಾಂಗ್ರೆಸ್‌ ಪಕ್ಷ ಮುಖಭಂಗ ಅನುಭವಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

ವಿಧಾನ ಪರಿಷತ್ತಿನ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳು ಸೇರಿ ಒಟ್ಟು ನಾಲ್ಕು ಕ್ಷೇತ್ರಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಕೂಟದ ಅಭ್ಯರ್ಥಿಗಳೇ ಎಲ್ಲೆಡೆ ಭರ್ಜರಿ ಗೆಲುವು ಸಾಧಿಸಿರುವುದು ಕಾಂಗ್ರೆಸ್‌ ಪಕ್ಷ ಮುಖಭಂಗ ಅನುಭವಿಸಿದೆ.

2024ರಲ್ಲಿ ವಿಧಾನ ಪರಿಷತ್‌ನ ಮೂರು ಶಿಕ್ಷಕರು, ಮೂರು ಪದವೀಧರ ಕ್ಷೇತ್ರಗಳು ಸೇರಿ ಆರು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಮೂರರಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಆದರೆ, ಈ ಬಾರಿ ನಾಲ್ಕಕ್ಕೆ ನಾಲ್ಕೂ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ವಿಜಯ ಸಾಧಿಸಿದ್ದು ಆಡಳಿತಾರೂಢ ಕಾಂಗ್ರೆಸ್‌ ಘಟನಾನುಘಟಿ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದ್ದರೂ ಸೋಲನುಭವಿಸಿದೆ.

ಪಕ್ಷ ಹಾಗೂ ಸರ್ಕಾರದ ನಡುವಿನ ಸಮನ್ವಯ ಕೊರತೆ ಹಾಗೂ ರಾಜ್ಯ ನಾಯಕರು ಮಾತ್ರವಲ್ಲದೆ, ಹೈಕಮಾಂಡ್‌ ಕೂಡ ಈ ಬಾರಿಯ ಮೇಲ್ಮನೆ ಚುನಾವಣೆ ಬಗ್ಗೆ ಗಮನ ಕೊಡದಿರುವುದು ಸೋಲಿಗೆ ಬಹುದೊಡ್ಡ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರತಿ ಚುನಾವಣೆಯಲ್ಲೂ ಎಐಸಿಸಿ ಉಸ್ತುವಾರಿಗಳು ರಾಜ್ಯಕ್ಕೆ ಆಗಮಿಸಿ ಅಭ್ಯರ್ಥಿಗಳ ಆಯ್ಕೆಯಿಂದ, ಪ್ರಚಾರ, ಮತದಾನದವರೆಗೂ ಎಲ್ಲವನ್ನೂ ವ್ಯವಸ್ಥಿತವಾಗಿ ಗಮನಿಸುತ್ತಿದ್ದರು. ಪಕ್ಷ ಹಾಗೂ ಸರ್ಕಾರದ ನಾಯಕರೊಂದಿಗೆ ಸಭೆಗಳನ್ನು ನಡೆಸಿ ಸಮನ್ವಯದೊಂದಿಗೆ ಗೆಲುವು ಸಾಧಿಸಲು ಕಾರ್ಯತಂತ್ರ ರೂಪಿಸುವಲ್ಲಿ ಯಶಸ್ವಿಯಾಗುತ್ತಿದ್ದರು. ಆದರೆ, ಈ ಬಾರಿ ಹೈಕಮಾಂಡ್‌ ಯಾವುದೇ ನಾಯಕರನ್ನು ರಾಜ್ಯಕ್ಕೆ ಕಳುಹಿಸದೆ ರಾಜ್ಯ ನಾಯಕರಿಗೇ ಬಿಟ್ಟಿದ್ದು ಎಡವಟ್ಟಿಗೆ ಕಾರಣವಾಯಿತಾ ಎನ್ನುವ ಪ್ರಶ್ನೆಗಳು ಪಕ್ಷದಲ್ಲಿ ಕಾಡಲಾರಂಭಿಸಿವೆ.

ಸ್ಟಿಂಗ್‌ ಆಪರೇಷನ್‌ ವಿವಾದದ ಪರಿಣಾಮ?:

ಮತ್ತೊಂದೆಡೆ ರಾಜ್ಯ ನಾಯಕರು ಕೂಡ ಪಕ್ಷದ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ, ಗೆಲುವಿನ ಕಾರ್ಯತಂತ್ರ ರೂಪಿಸುವ ಕಡೆ ಹೆಚ್ಚಿನ ಗಮನ ಹರಿಸಲಿಲ್ಲ. ಎಲ್ಲವನ್ನೂ ಅಭ್ಯರ್ಥಿಗಳ ಹೆಗಲಿಗೇ ಹಾಕಿ ಕೈಕಟ್ಟಿ ಕೂತರು. ಮತ್ತೊಂದೆಡೆ ಇದೇ ವೇಳೆಗೆ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಸ್ಟಿಂಗ್‌ ಆಪರೇಷನ್‌ ವಿವಾದವೂ ಕಾಂಗ್ರೆಸ್‌ ಹಿನ್ನಡೆಗೆ ಕಾರಣ ಎನ್ನಲಾಗುತ್ತಿದೆ.2024ರಲ್ಲಿ ಕೈಗೆ 3 ಗೆಲುವು: ಈ ಬಾರಿ ಶೂನ್ಯ:

2024ರ ಜೂನ್‌ನಲ್ಲಿ ವಿಧಾನ ಪರಿಷತ್‌ನ ಮೂರು ಶಿಕ್ಷಕರ ಕ್ಷೇತ್ರ, ಮೂರು ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಈ ಆರು ಕ್ಷೇತ್ರಗಳ ಪೈಕಿ ಬೆಂಗಳೂರು ಪದವೀಧರ ಕ್ಷೇತ್ರ, ಈಶಾನ್ಯ ಪದವೀಧರ ಕ್ಷೇತ್ರ ಮತ್ತು ಆಗ್ನೇಯ ಶಿಕ್ಷಕರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದ ಕ್ರಮವಾಗಿ ರಾಮೋಜಿಗೌಡ, ಡಾ.ಚಂದ್ರಶೇಖರ ಬಿ.ಪಾಟೀಲ್ ಮತ್ತು ಡಿ.ಟಿ. ಶ್ರೀನಿವಾಸ್‌ ಗೆಲುವು ಸಾಧಿಸಿದ್ದರು. ಉಳಿದ ಮೂರು ಕ್ಷೇತ್ರಗಳ ಪೈಕಿ ದಕ್ಷಿಣ ಶಿಕ್ಷಕರ ಕ್ಷೇತ್ರ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಕ್ರಮವಾಗಿ ಕೆ.ವಿವೇಕಾನಂದ ಮತ್ತು ಎಸ್.ಎಲ್.ಭೋಜೇಗೌಡ ಜಯ ಗಳಿಸಿದ್ದರು. ಮತ್ತೊಂದು ಕ್ಷೇತ್ರ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಧನಂಜಯ ಸರ್ಜಿ ಗೆಲುವು ಸಾಧಿಸಿದ್ದರು. ವಿಪರ್ಯಸವೆಂದರೆ ಈ ಬಾರಿ ಚುನಾವಣೆ ನಡೆದ ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸೋತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡಿಗರ ನೌಕರಿಗಾಗಿ ಮಹಿಷಿ ವರದಿ ಮಂಡಿಸುವಂತೆ ಒತ್ತಾಯ
ಮಹಿಳೆ, ಮಕ್ಕಳ ಸುರಕ್ಷತೇಲಿ ಬೆಂಗ್ಳೂರು 1ನೇ ಸ್ಥಾನ: ಸೀಮಂತ್‌