ವಾಣಿಜ್ಯೀಕರಣಗೊಳ್ಳುತ್ತಿದೆ ಧಾರವಾಡ ಕೃಷಿ ಮೇಳ?

KannadaprabhaNewsNetwork |  
Published : Sep 29, 2026, 02:00 AM IST
ಧಾರವಾಡದ ಕೃಷಿ ವಿವಿ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಪ್ಲಾಸ್ಟಿಕ ಬುಟ್ಟಿ ಹಾಗೂ ಇತರೆ ವಸ್ತುಗಳನ್ನು ಒಯ್ಯುತ್ತಿರುವ ಜನರು.  | Kannada Prabha

ಸಾರಾಂಶ

ಇತ್ತೀಚಿನ ವರ್ಷಗಳ ಅದರಲ್ಲೂ ಪ್ರಸಕ್ತ ವರ್ಷದ ನಾಲ್ಕು ದಿನಗಳ ಕೃಷಿ ಮೇಳ ಗಮನಿಸಿದರೆ ಕೃಷಿ ವಿವಿಯು ರೈತರ ಹೆಸರಿನಲ್ಲಿ ಮೇಳವನ್ನು ವಾಣಿಜ್ಯೀಕರಣಗೊಳಿಸುತ್ತಿದೆ ಎನ್ನುವ ಅನುಮಾನ ರೈತರಾದಿಯಾಗಿ ಎಲ್ಲರಿಗೂ ಶುರುವಾಗಿದೆ.

ಬಸವರಾಜ ಹಿರೇಮಠ

ಧಾರವಾಡ:

ಕೃಷಿ ಕ್ಷೇತ್ರದಲ್ಲಾಗುವ ಹೊಸ ಕೃಷಿ ತಂತ್ರಜ್ಞಾನ ಮತ್ತು ಸಂಶೋಧನೆಗಳನ್ನು ರೈತರಿಗೆ ಪರಿಚಯಿಸಿ, ಕೃಷಿ ಉತ್ಪಾದನೆ ಹೆಚ್ಚಿಸುವುದಲ್ಲದೇ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವ ಉದ್ದೇಶದಿಂದ ಇಲ್ಲಿಯ ಕೃಷಿ ವಿಶ್ವವಿದ್ಯಾಲಯವು ಶುರು ಮಾಡಿರುವ ಕೃಷಿ ಮೇಳವು ವರ್ಷದಿಂದ ವರ್ಷಕ್ಕೆ ವಾಣಿಜ್ಯೀಕರಣದತ್ತ ಹೊರಳುತ್ತಿದೆ.

ಇತ್ತೀಚಿನ ವರ್ಷಗಳ ಅದರಲ್ಲೂ ಪ್ರಸಕ್ತ ವರ್ಷದ ನಾಲ್ಕು ದಿನಗಳ ಕೃಷಿ ಮೇಳ ಗಮನಿಸಿದರೆ ಕೃಷಿ ವಿವಿಯು ರೈತರ ಹೆಸರಿನಲ್ಲಿ ಮೇಳವನ್ನು ವಾಣಿಜ್ಯೀಕರಣಗೊಳಿಸುತ್ತಿದೆ ಎನ್ನುವ ಅನುಮಾನ ರೈತರಾದಿಯಾಗಿ ಎಲ್ಲರಿಗೂ ಶುರುವಾಗಿದೆ. ಇದಕ್ಕೆ ಪೂರಕವಾಗಿ ಈ ಬಾರಿ ಮೇಳದಲ್ಲಿ ಹಾಕಲಾಗಿದ್ದ ಬಹುತೇಕ ಮಳಿಗೆಗಳು ವಾಣಿಜ್ಯ ಮಳಿಗೆಗಳೇ ಆಗಿವೆ.

ಈ ಬಾರಿ ಮೇಳದ ಘೋಷವಾಕ್ಯ ಸಶಕ್ತ ಮಹಿಳೆ-ಸುಸ್ಥಿರ ಎಂಬಾದಾಗಿ ಇತ್ತಾದರೂ ಅದು ವಿಚಾರಗೋಷ್ಠಿಗೆ ಮಾತ್ರ ಸೀಮಿತವಾಯಿತೇ ಹೊರತು ಕಾರ್ಯರೂಪದಲ್ಲಿ ಬರಲಿಲ್ಲ. ಇಡೀ ಕೃಷಿ ಮೇಳದ ತುಂಬೆಲ್ಲಾ ಬರೀ ಯಂತ್ರೋಪಕರಣಗಳ ಮಳಿಗೆಗಳೇ ರಾರಾಜಿಸಿದವು. ಸ್ಮಾರ್ಟ್‌ ಫಾರ್ಮಿಂಗ್‌ ಪ್ರಾತ್ಯಕ್ಷಿಕೆ, ಬೀಜ ಮೇಳ ಹೊರತುಪಡಿಸಿ ಉಳಿದೆಲ್ಲ ಮಳಿಗೆಗಳ ಮಾಹಿತಿ ರೈತರಿಗೆ ಹೊಸತು ಎನ್ನಿಸಲಿಲ್ಲ. ಇತ್ತೀಚೆಗೆ ರೈತರ ಹೊಲಗಳ ವಿಸ್ತೀರ್ಣ ಕಡಿಮೆಯಾಗುತ್ತಿದ್ದು, ಸಣ್ಣ -ಸಣ್ಣ ರೈತರು ಕಡಿಮೆ ವೆಚ್ಚದಲ್ಲಿ ಮಾಡಬೇಕಾದ ಕೃಷಿ ತಂತ್ರಜ್ಞಾನಕ್ಕಿಂತ ದೊಡ್ಡ ಕಂಪನಿಗಳ ಮಳಿಗೆಗಳೇ ಈ ಮೇಳವನ್ನು ಆಕ್ರಮಿಸಿದ್ದವು.

ಜೊತೆಗೆ ಕೃಷಿಯೇತರ ಮಳಿಗೆಗಳ ಸಂಖ್ಯೆಯೂ ಈ ಬಾರಿ ಜಾಸ್ತಿಯಾಗಿದ್ದು, ಮೇಳಕ್ಕೆ ಬಂದವರು ಕೃಷಿ ವಸ್ತುಗಳ ಬದಲು ಸಿಹಿ ತಿಂಡಿ-ತಿನಿಸು, ಪ್ಲಾಸ್ಟಿಕ್‌ ಬುಟ್ಟಿ ಹಾಗೂ ಮನೆ ಬಳಕೆ ವಸ್ತುಗಳನ್ನೇ ಹೊತ್ತೊಯ್ಯುತ್ತಿದ್ದ ದೃಶ್ಯಗಳು ಕಂಡು ಬಂದವು. ಹಿಂಗಾರು ಹಂಗಾಮಿನ ಹಿನ್ನೆಲೆಯಲ್ಲಿ ಕೆಲವು ರೈತರು ಮಾತ್ರ ಹಿಂಗಾರು ಬೀಜ ಒಯ್ದರು.

ಪ್ರಮುಖ ಆಕರ್ಷಣೆ ಇಲ್ಲವಾಯಿತು:

ಲಕ್ಷಾಂತರ ಜನರು ಭೇಟಿ ನೀಡುವ ಕೃಷಿ ಮೇಳಕ್ಕೆ ಬಯಲು ವೇದಿಕೆಯು ಪ್ರಮುಖ ಆಕರ್ಷಣೆಯಾಗಿತ್ತು. ಮೇಳದ ಉದ್ಘಾಟನೆ ಸೇರಿದಂತೆ ಶ್ರೇಷ್ಠ ಕೃಷಿಕ, ಕೃಷಿಕ ಮಹಿಳೆ ಪ್ರಶಸ್ತಿ ಪ್ರದಾನ ಹಾಗೂ ಅವರ ಅನುಭವ ಹಂಚಿಕೆ, ಕೃಷಿ ಕುರಿತ ಸಂವಾದ, ಚರ್ಚೆಗಳಾಗುತ್ತಿದ್ದವು. ಜೊತೆಗೆ ಈ ಬಯಲು ವೇದಿಕೆಯು ಒಂದು ರೀತಿಯಲ್ಲಿ ಲಕ್ಷಾಂತರ ಜನರಿಗೆ ಗುರುತಿನ ಸ್ಥಳವಾಗಿತ್ತು. ಆದರೆ, ಈ ಬಾರಿ ಬಯಲು ವೇದಿಕೆ ರದ್ದುಗೊಳಿಸಿ ಆ ಸ್ಥಳದಲ್ಲೂ ವಾಣಿಜ್ಯ ಮಳಿಗೆಗಳನ್ನು ಹಾಕಲಾಗಿತ್ತು.

ಪ್ರತಿಯೊಬ್ಬ ರೈತ ಹಾಗೂ ಸಾರ್ವಜನಿಕರು ಇಡೀ ದಿನ ಮೇಳವನ್ನು ಸುತ್ತು ಹಾಕಿ ಈ ಬಯಲು ವೇದಿಕೆಯಲ್ಲಿ ಕೆಲ ಹೊತ್ತು ಕುಳಿತು ಸುಧಾರಿಸಿಕೊಂಡು ಕಾರ್ಯಕ್ರಮವನ್ನು ಆಲಿಸುತ್ತಿದ್ದರು. ಈ ಬಯಲು ವೇದಿಕೆ ರದ್ದುಗೊಳಿಸಿದ್ದಕ್ಕೆ ಕೃಷಿ ವಿವಿ ಆಡಳಿತ ಮಂಡಳಿಗೆ ರೈತರು ಹಿಡಿಶಾಪ ಹಾಕುತ್ತಿದ್ದರು. ಬಯಲು ವೇದಿಕೆಯಲ್ಲಿ ಈ ಮೊದಲು ನಡೆಯುತ್ತಿದ್ದ ಕಾರ್ಯಕ್ರಮಗಳನ್ನು ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಮಾಡಿದ್ದು, ಅಲ್ಲಿ ಪ್ರೇಕ್ಷಕರ ಕೊರತೆ ಎದುರಿಸುವಂತಾಯಿತು.

ಎಷ್ಟು ರೈತರಿಗೆ ಪ್ರಯೋಜನ:

ಈ ಬಾರಿಯ ಕೃಷಿ ಮೇಳದಲ್ಲಿ ಪ್ರತಿ ವರ್ಷದಂತೆ ಫಲಪುಷ್ಪ ಪ್ರದರ್ಶನ, ಜಾನುವಾರು ಪ್ರದರ್ಶನ ಹಾಗೂ ಕೀಟ ಪ್ರಪಂಚ ತುಸು ಮಟ್ಟಿಗೆ ಜನರನ್ನು ಆಕರ್ಷಿಸಿದವು. ಮೇಳಕ್ಕೆ ಪ್ರತಿ ಬಾರಿಯಂತೆ ಲಕ್ಷಾಂತರ ಜನ ರೈತರು ಹಾಗೂ ಜನರು ಭೇಟಿ ನೀಡಿ ಹೋದರು. ಕೃಷಿ ವಿವಿ ಸಹ ದಾಖಲೆಯ 20 ಲಕ್ಷ ಮೀರಿದ್ದು ಲಿಮ್ಕಾ ದಾಖಲೆ ಮಾಡುವ ಧಾವಂತದಲ್ಲೂ ಇದೆ. ಆದರೆ, ಮೇಳದ ಪ್ರಯೋಜನ ಮಾತ್ರ ಎಷ್ಟು ಜನ ರೈತರಿಗೆ ಆಗಿದೆ ಎಂಬುದು ಮಾತ್ರ ಪ್ರಶ್ನೆಯಾಗಿಯೇ ಉಳಿಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಖಾನೆ ವಿಸ್ತರಣೆ, ಮಾಲಿನ್ಯ ವಿರೋಧಿಸಿ 48 ಗಂಟೆ ಕೊಪ್ಪಳ ಬಂದ್ ಕರೆ
ಸುರಕ್ಷಿತ ಗರ್ಭಪಾತ, ಶ್ರವಣದೋಷ ತಡೆಗೆ ಅರಿವು ಅಗತ್ಯ: ಡಾ. ರಾಜೇಶ್