ಖಿಳೇಗಾವಿ ಬಸವೇಶ್ವರ ಏತ ನೀರಾವರಿ ಯೋಜನೆ ಸಾಕಾರ ಎಂದು ?

KannadaprabhaNewsNetwork |  
Published : Dec 16, 2024, 12:45 AM IST
ಫೋಟೋ ಶೀರ್ಷಿಕೆ: ಅರ್ಧಕ್ಕೆ ನಿಂತಿರುವ ಖಿಳೇಗಾವಿ ಬಸವೇಶ್ವರ ಎತ ನೀರಾವರಿ ಯೋಜನೆಯ ದೃಶ್ಯ.. | Kannada Prabha

ಸಾರಾಂಶ

ಅಥಣಿ ತಾಲೂಕಿನ ಗಡಿಭಾಗದ ಸು. 22 ಹಳ್ಳಿಗಳ ರೈತರ ಬಹುದಿನಗಳ ಕನಸಾಗಿರುವ ಖಿಳೇಗಾವಿ ಬಸವೇಶ್ವರ ಏತ ನೀರಾವರಿ ಯೋಜನೆಯ ಕಾಮಗಾರಿ ಅರ್ಧಕ್ಕೆ ನಿಂತಿದ್ದು , ಗುತ್ತಿಗೆದಾರ ಕಂಪನಿಯು ಮಾಡಿದ ಎಡವಟ್ಟಿನಿಂದ ಕಾಮಗಾರಿ ತಾರ್ಕಿಕ ಅಂತ್ಯ ಕಾಣದೆ ಈ ಭಾಗದ ರೈತಾಪಿ ಜನರಿಗೆ ಗಗನ ಕುಸುಮವಾಗಿ ಉಳಿದುಕೊಂಡಿದೆ.

ಅಣ್ಣಾಸಾಬ ತೆಲಸಂಗ

ಕನ್ನಡಪ್ರಭ ವಾರ್ತೆ ಅಥಣಿ

ತಾಲೂಕಿನ ಗಡಿಭಾಗದ ಸು. 22 ಹಳ್ಳಿಗಳ ರೈತರ ಬಹುದಿನಗಳ ಕನಸಾಗಿರುವ ಖಿಳೇಗಾವಿ ಬಸವೇಶ್ವರ ಏತ ನೀರಾವರಿ ಯೋಜನೆಯ ಕಾಮಗಾರಿ ಅರ್ಧಕ್ಕೆ ನಿಂತಿದ್ದು , ಗುತ್ತಿಗೆದಾರ ಕಂಪನಿಯು ಮಾಡಿದ ಎಡವಟ್ಟಿನಿಂದ ಕಾಮಗಾರಿ ತಾರ್ಕಿಕ ಅಂತ್ಯ ಕಾಣದೆ ಈ ಭಾಗದ ರೈತಾಪಿ ಜನರಿಗೆ ಗಗನ ಕುಸುಮವಾಗಿ ಉಳಿದುಕೊಂಡಿದೆ.

ಹೌದು.. ಕಳೆದ 2023ರ ಚಳಿಗಾಲ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು, ನೀರಾವರಿ ಸಚಿವರು, ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸಭೆಯಲ್ಲಿ 2024ರ ಸೆಪ್ಟಂಬರ್ ಒಳಗಾಗಿ ಈ ಭಾಗದ ರೈತರ ಜಮೀನುಗಳಿಗೆ ನೀರು ಹರಿಸುವುದಾಗಿ ಒಪ್ಪಿಕೊಂಡಿದ್ದ ಗುತ್ತಿಗೆದಾರ ಕಂಪನಿ ಈಗ ಸಾಲದ ಸುಳಿಯಲ್ಲಿ ಸಿಲುಕಿಕೊಂಡು ಕೊಟ್ಟಮಾತು ಉಳಿಸಿಕೊಳ್ಳದೆ, ಅಧಿಕಾರಿಗಳು ಹಾಗೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 2020ರಲ್ಲಿ ಪೂರ್ಣಗೊಳ್ಳಬೇಕಾದ ಈ ಕಾಮಗಾರಿ ಹಲವು ವರ್ಷಗಳು ಗತಿಸಿದರೂ ಅನುಷ್ಠಾನ ಗೊಳ್ಳದೇ ಇರುವುದು ಈ ಭಾಗದ ರೈತರ ಅಕ್ರೋಶಕ್ಕೆ ಕಾರಣವಾಗಿದೆ.

ಈ ಕಾಮಗಾರಿಯನ್ನ ಗುತ್ತಿಗೆ ಪಡೆದುಕೊಂಡಿರುವ ಗಾಯತ್ರಿ ಕನ್ಸಟ್ರಕ್ಷನ್ ಕಂಪನಿ 36 ತಿಂಗಳಲ್ಲಿ ಕಾಮಗಾರಿ ಮುಗಿಸಿ ತಾಲೂಕಿನ ಉತ್ತರ ಭಾಗದ ಸುಮಾರು 22 ಹಳ್ಳಿಗಳ 27,462 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಬೇಕಾಗಿತ್ತು. ಸುಮಾರು ₹1368. 48 ಕೋಟಿ ವೆಚ್ಚದ ಕಾಮಗಾರಿಗೆ 2017ರಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದರು. 2020ರ ವೇಳೆಗೆ ಮುಕ್ತಾಯಗೊಳ್ಳಬೇಕಿತ್ತು. ಶೇ.70ರಷ್ಟು ಮಾತ್ರ ಕಾಮಗಾರಿ ಪೂರ್ಣಗೊಂಡಿದ್ದು, ಸರ್ಕಾರ ಗುತ್ತಿಗೆದಾರನಿಗೆ ₹1067 ಕೋಟಿ ಸಂದಾಯ ಮಾಡಿದ್ದರೂ ಆಗಿರುವ ಕಾಮಗಾರಿಗೆ ಮತ್ತು ಖರ್ಚು ಮಾಡಿರುವ ಅನುದಾನದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ನೆರೆಹಾವಳಿ ಮತ್ತು ಕೊರೊನಾ ಸಂದರ್ಭದಲ್ಲಿ ಆಗಿರುವ ವಿಳಂಬ ಪರಿಗಣಿಸಿ ಸರ್ಕಾರ ಮತ್ತೆ ಎರಡು ವರ್ಷ ಈ ಗುತ್ತಿಗೆದಾರರ ಅವಧಿ ವಿಸ್ತರಣೆ ಮಾಡಿದೆ.

2022ರ ವೇಳೆಗೆ ಈ ಕಾಮಗಾರಿ ಪೂರ್ಣಗೊಳಿಸಿಕೊಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದ್ದಾರೆ.ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತರುವುದಲ್ಲದೆ ಗುತ್ತಿಗೆದಾರನಿಗೂ ನೋಟಿಸ್ ಜಾರಿ ಮಾಡಿದ್ದಾರೆ. ಅದ್ಯಾವುದಕ್ಕೂ ಗುತ್ತಿಗೆದಾರ ಕ್ಯಾರೆ ಎನ್ನದಿರುವುದು ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಗುತ್ತಿಗೆದಾರ ಮಾಡಿರುವ ಎಡವಟ್ಟಿನಿಂದ, ನೀರಾವರಿ ಇಲಾಖೆಯ ಅಧಿಕಾರಿಗಳು ಇಕ್ಕಟ್ಟಿನಲ್ಲಿ ಸಿಲುಕಿದ್ದು, ರೈತರಿಗೆ ಹಲವು ಬಾರಿ ಭರವಸೆ ನೀಡಿದ ಜನಪ್ರತಿನಿಧಿಗಳಿಗೂ ಕೂಡ ರೈತಾಪಿ ಜನರಿಗೆ ಸುಳ್ಳು ಭರವಸೆ ನೀಡುವಂತಾಗಿದೆ.

ಸಾಲದ ಸುಳಿಯಲ್ಲಿ ಗುತ್ತಿಗೆದಾರ ಕಂಪನಿ :

ಕಾಮಗಾರಿಯನ್ನು ಗುತ್ತಿಗೆ ಪಡೆದಿರುವ ಗಾಯತ್ರಿ ಕನ್ಸಟ್ರಕ್ಷನ್ ಕಂಪನಿ ಸಾಲದ ಸುಳಿಗೆ ಸಿಲುಕಿರುವುದರಿಂದ ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ ಮುಂದೆ ಪ್ರಕರಣ ಇದ್ದು, ಟ್ರಿಬ್ಯುನಲ್ ಕಂಪನಿಗೆ ವಿಶೇಷ ಅಧಿಕಾರಿ ನೇಮಿಸಿದ್ದು, ಅವರ ಮುಖಾಂತರ ಸರ್ಕಾರದಿಂದ ನೀರಾವರಿ ಇಲಾಖೆಗೆ ಬಂದಿರುವ ಅನುದಾನ ನೇರವಾಗಿ ಗಾಯತ್ರಿ ಕನ್ಸಟ್ರಕ್ಷನ್ ಕಂಪನಿಯ ಸಾಲದ ಖಾತೆಗೆ ಜಮೆ ಆಗುತ್ತಿದೆ. ಇದರಿಂದ ಕಾಮಗಾರಿಗೆ ಅನುದಾನವಿಲ್ಲದೆ ವಿಳಂಬವಾಗುತ್ತಿದೆ ಎನ್ನಲಾಗಿದೆ.

ತಾಂತ್ರಿಕ ಅಡಚಣೆ ಏನು..?

ಗುತ್ತಿಗೆದಾರ ಕಂಪನಿಯನ್ನುನೀರಾವರಿ ಇಲಾಖೆ ಬದಲಾಯಿಸಲು ಪ್ರಯತ್ನಿಸಿದರೂಕೆಲವೊಂದು ಕಾನೂನಿನ ತೊಡಕುಗಳು ಅಡೆತಡೆಯಾಗುತ್ತಿದ್ದು, ಈ ಅಡತಡೆಯಿಂದ ಹೊರಬರದೆ, ಇತ್ತ ಕಾಮಗಾರಿಯೂ ಕೈಗೊಳ್ಳದ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುವುದು ಗಗನಕುಸುಮವಾಗಿದೆ.

ರೈತರಿಗೆ ಬಾರದ ಪರಿಹಾರಧನ :

ಈ ನೀರಾವರಿ ಯೋಜನೆಯ ಕಾಮಗಾರಿ ಕೈಗೊಂಡ ಸಂದರ್ಭದಲ್ಲಿ ಅನೇಕ ರೈತರು ತಮ್ಮ ಜಮೀನು ಕಳೆದುಕೊಂಡಿದ್ದು, ಅವರಿಗೆ ಬರಬೇಕಾದ ಪರಿಹಾರ ಧನವೂ ಇನ್ನೂ ಬಂದಿಲ್ಲ. ರಾಜ್ಯ ಸರ್ಕಾರ ನೀರಾವರಿ ಕಾಮಗಾರಿ ಅನುಷ್ಠಾನಕ್ಕಾಗಿ ಸ್ವಾಧೀನ ಪಡಿಸಿಕೊಂಡ ರೈತರ ಭೂಮಿಗಳಿಗೆ ಪರಿಹಾರ ರೂಪದಲ್ಲಿ ಕೊಡಬೇಕಾದ ₹240 ಕೋಟಿ ಪರಿಹಾರಧನ ನೀಡದೇ ಬಾಕಿ ಉಳಿಸಿಕೊಂಡಿದೆ. ಇದರಿಂದ ರೈತರ ಬದುಕು ಕೂಡ ಸಂಕಷ್ಟಕ್ಕೆ ದೂಡಿದಂತಾಗಿದೆ.

ಕಳೆದ ಬೆಳಗಾವಿ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ನೀರಾವರಿ ಇಲಾಖೆ ಸಚಿವರು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸಭೆ ನಡೆಸಿದಾಗ ಗುತ್ತಿಗೆದಾರ ಕಂಪನಿಯು 2024 ಸೆಪ್ಟೆಂಬರ್ ಒಳಗಾಗಿ ಕಾಮಗಾರಿಗೆ ಸಂಬಂಧಿಸಿದಂತೆ ರೈತರ ಭೂಮಿಗಳಿಗೆ ನೀರು ಹರಿಸುವುದಾಗಿ ಒಪ್ಪಿಕೊಂಡಿದ್ದು, ಈಗ ಹುಸಿಯಾಗಿದೆ. ಈಗ ಮತ್ತೆ ಅಧಿವೇಶನ ಆರಂಭಗೊಂಡಿದ್ದು, ಈ ಅವಧಿಯಲ್ಲಿಯಾದರೂ ಮುಖ್ಯಮಂತ್ರಿಗಳು, ನೀರಾವರಿ ಸಚಿವರು ಅಧಿಕಾರಿಗಳ ಮತ್ತು ಗುತ್ತಿಗೆದಾರರ ಸಭೆ ನಡೆಸಿ ಈ ಯೋಜನೆಗೆ ತಾರ್ಕಿಕ ಅಂತ್ಯ ಕಾಣಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಷ್ಟೆ..!ಹಿಂದಿನ ಶಾಸಕರು ಮತ್ತು ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಕಾಮಗಾರಿ ಅನುಷ್ಠಾನ ವಿಳಂಬವಾಗುತ್ತಿದೆ. ಈ ಕಾಮಗಾರಿ ಟೆಂಡರ್ ಪ್ರಕ್ರಿಯೆ ಸರಿಯಾಗಿ ಆಗಿಲ್ಲ, ಗುತ್ತಿಗೆದಾರ ಕಂಪನಿಯು ಮಾಡಿದ ಎಡವಟ್ಟನ್ನ ಸರಿದೂಗಿಸಲು ಬಹಳಷ್ಟು ತಾಂತ್ರಿಕ ತೊಂದರೆಗಳಿವೆ. ಮುಖ್ಯಮಂತ್ರಿಗಳೊಂದಿಗೆ ಮತ್ತು ನೀರಾವರಿ ಸಚಿವ ಸಚಿವರೊಂದಿಗೆ ಮಾತನಾಡಿ ಮತ್ತೊಮ್ಮೆ ನೀರಾವರಿ ಇಲಾಖೆಯ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಸಭೆ ನಡೆಸಿ ವಾಸ್ತವ ಸಮಸ್ಯೆಯನ್ನು ಇತ್ಯರ್ಥ ಗೊಳಿಸಿ ಕಾಮಗಾರಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ.

- ರಾಜು ಕಾಗೆ, ಕಾಗವಾಡ ಶಾಸಕರು.ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದು ಪ್ರಮುಖ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸದೇ ರೈತ ಕುಲಕ್ಕೆ ಅನ್ಯಾಯ ಮಾಡುತ್ತಿದೆ. ಖಿಳೇಗಾವಿ ಬಸವೇಶ್ವರ ಏತ ನೀರಾವರಿ ಯೋಜನೆಯ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇಲ್ಲವಾದರೆ ರಾಜ್ಯ ರೈತ ಸಂಘದಿಂದ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ.

- ಮಹದೇವ ಮಡಿವಾಳ, ಅಧ್ಯಕ್ಷರು ರೈತ ಸಂಘ ಅಥಣಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ