ಜಡೇಕುಂಟೆ ಮಂಜುನಾಥ್
ದಶಕಗಳಿಂದಲೂ ಚಳ್ಳಕೆರೆಯಲ್ಲಿ ಕಂದಾಯ ಉಪವಿಭಾಗದ ಕಚೇರಿ ಪ್ರಾರಂಭಿಸುವ ಕುರಿತು ಇಲ್ಲಿನ ರೈತರು ಸೇರಿದಂತೆ ಜನಪರ ಸಂಘಟನೆಗಳು ದ್ವನಿ ಎತ್ತುತ್ತಲೇ ಬಂದಿವೆ. ಇಂತಹ ಕೂಗು ಒಂದೂವರೆ ದಶಕಗಳಾದರೂ ಈಡೇರಿಲ್ಲ.ಈ ಭಾಗದ ಜನತೆಗೆ ಇದರಿಂದ ಅನುಕೂಲವಾಗಲಿದೆ ಎಂಬ ಪ್ರಸ್ತಾವಕ್ಕೆ ಆಡಳಿತಾತ್ಮಕ ಮಂಜೂರಾತಿ ಇನ್ನೂ ಸಿಕ್ಕಿಲ್ಲದಿರುವುದು ಜನತೆಯಲ್ಲಿ ನಿರಾಸೆಯ ಕಾರ್ಮೋಡ ಕವಿದಂತಾಗಿದೆ.
ಚಳ್ಳಕೆರೆಯಲ್ಲಿ ಕಂದಾಯ ಉಪ ವಿಭಾಗದ ಕಚೇರಿ ಆರಂಭವಾದಲ್ಲಿ ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮೂರು ಈ ಮೂರು ತಾಲೂಕಿಗೆ ಚಳ್ಳಕೆರೆ ಕೇಂದ್ರ ಸ್ಥಾನವಾಗಲಿದೆ. ಮೊಳಕಾಲ್ಮೂರು ಪಟ್ಟಣದಿಂದ ಚಿತ್ರದುರ್ಗದ ಎಸಿ ಕಚೇರಿಗೆ ಹೋಗಿಬರಲು ಒಂದು ದಿನ ಪೂರ್ತಿ ಬೇಕಾಗುತ್ತದೆ. ಅಲ್ಲದೇ ಪ್ರಯಾಣದ ಅವಧಿ, ಭತ್ಯೆ, ಸಮಯ ಎಲ್ಲವನ್ನೂ ತುಲನೆ ಮಾಡಿ ನೋಡಿದರೆ ಈ ಭಾಗದ ಜನರಿಗೆ ತಮ್ಮ ಜಮೀನಿನ ವ್ಯಾಜ್ಯಗಳು, ಭೂಪರಿವರ್ತನೆ, ಅತಿಕ್ರಮಣ ಇಂತಹ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಚಿತ್ರದುರ್ಗದ ಉಪವಿಭಾಗಾಧಿಕಾರಿಗಳ ಕಚೇರಿಗೆ ಹೋಗುವುದು ಅನಿವಾರ್ಯ.ಚಳ್ಳಕೆರೆಯನ್ನು ಕೇಂದ್ರ ಸ್ಥಾನ ಮಾಡಿಕೊಂಡು ಇಲ್ಲಿ ಕಂದಾಯ ಉಪವಿಭಾಗವನ್ನು ಪ್ರಾರಂಭಿಸುವ ಪ್ರಸ್ತಾವಕ್ಕೆ ಕಳೆದ ಒಂದೂವರೆ ದಶಕಗಳಿಂದಲೂ ಪ್ರಯತ್ನ ನಡೆಯುತ್ತಿದೆಯಾದರೂ ಫಲಿತಾಂಶ ಇನ್ನೂ ಲಭ್ಯವಾಗಿಲ್ಲ. ಇದಕ್ಕೆ ಕಾರಣಗಳು ಏನು ಎಂಬುದೇ ಯಕ್ಷಪ್ರಶ್ನೆಯಾಗಿದೆ.
ಆದರೆ, ಇಂತಹ ಜನೋಪಯೋಗಿ ಕಾರ್ಯಕ್ಕೆ ಸರ್ಕಾರಗಳು, ಆರಿಸಿ ಹೋಗಿರುವ ಜನಪ್ರತಿನಿಧಿಗಳು ಮಾತ್ರ ಯಾಕೋ ಮುಂದಾಗುತ್ತಿಲ್ಲ. ಗಡಿಭಾಗದ ರೈತರು, ಜನಸಾಮಾನ್ಯರು ಎಸಿ ಕೋರ್ಟ್‌ಗಳಿಗೆ ಅಲೆದಾಡುವುದು ಇಂದಿಗೂ ನಿಂತಿಲ್ಲ. ಇದಲ್ಲದೇ ಮೂರು ತಾಲೂಕುಗಳಿಗೆ ಒಂದು ಕಂದಾಯ ಉಪವಿಭಾಗ ಇದ್ದಿದ್ದರೆ, ತಾಲೂಕಿನ ತಹಸೀಲ್ದಾರ್‌ಗಳ ಕಾರ್ಯವೈಖರಿ ಸೇರಿ ಕೆಲಸ-ಕಾರ್ಯಗಳ ತುರ್ತು ಕ್ರಮಕ್ಕೆ ಅನುಕೂಲವಾಗುತ್ತಿತ್ತು ಎಂಬ ಅಭಿಪ್ರಾಯಗಳು ಹಾಗೆಯೇ ಉಳಿದಿವೆ.
ಚಳ್ಳಕೆರೆ ನಗರ ದಿನದಿಂದ ದಿನಕ್ಕೆ ವ್ಯಾಪಕ ವಿಸ್ತಾರದೊಂದಿಗೆ ಬೆಳವಣಿಗೆ ಕಾಣುತ್ತಿದೆ. ಇಲ್ಲಿನ ಸರ್ಕಾರಿ ಕಚೇರಿಗಳು ಹೊಸ ಹೊಳಪನ್ನು ಪಡೆಯುತ್ತಿವೆ. ಇಲ್ಲಿನ ತಾಲೂಕು ಕಚೇರಿ ಮಿನಿ ವಿಧಾನ ಸೌಧದಂತೆ ಕಂಗೊಳಿಸುತ್ತಿದೆ. ಜಿಲ್ಲಾ ಕೇಂದ್ರದಲ್ಲಿ ಇರಬೇಕಾದಂತಹ ಕಟ್ಟಡಗಳು ಇಲ್ಲಿ ತಲೆ ಎತ್ತಿವೆ. ಕಂದಾಯ ಉಪವಿಭಾಗದ ಕಚೇರಿಯನ್ನು ಆರಂಭಿಸಲು ಇಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳ ಕೊರತೆ ಕಾಡಲಾರದು. ಶಾಸಕ ಟಿ. ರಘುಮೂರ್ತಿ ಅವರ ಹ್ಯಾಟ್ರಿಕ್ ಗೆಲುವಿನ ಈ ಅವಧಿಯಲ್ಲಾದರೂ ಚಳ್ಳಕೆರೆಗೆ ಕಂದಾಯ ಉಪವಿಭಾಗ ಆರಂಭವಾಗುವುದೇ? ಎಂಬ ನಿರೀಕ್ಷೆಗಳು ಇನ್ನೂ ಜೀವಂತವಾಗಿವೆ.