ಮಂಗಳೂರು : ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಆವರಣದಲ್ಲಿ ಸಂಭವಿಸಿದ ಭೀಕರ ಸ್ಫೋಟ ಅವಘಡದ ಬೆನ್ನಲ್ಲೇ ಕರಾವಳಿಯಾದ್ಯಂತ ಹೊಸದೊಂದು ಧಾರ್ಮಿಕ ಚರ್ಚೆ ಮುನ್ನೆಲೆಗೆ ಬಂದಿದೆ. ಮಂಗಳೂರು ವಿಶೇಷ ಆರ್ಥಿಕ ವಲಯದ (ಎಂಎಸ್‌ಇಝೆಡ್) ವ್ಯಾಪ್ತಿಯಲ್ಲಿರುವ ೮೦೦ ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ ಬಜಪೆ ಗ್ರಾಮದ ನೆಲ್ಲಿದಡಿ ಗುತ್ತುವಿನ ‘ಕಾಂತೇರಿ ಜುಮಾದಿ’ ದೈವದ ಆಕ್ರೋಶವೇ ಈ ಅಗ್ನಿ ದುರಂತಕ್ಕೆ ಕಾರಣವಾಯಿತೇ ಎಂಬ ಪ್ರಶ್ನೆ ಕರಾವಳಿ ಭಾಗದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ. ಈ ವಿಚಾರ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆಗೆ ಒಳಗಾಗುತ್ತಿದೆ. ‘ನನ್ನ ಸ್ಥಾನ ಕೆಡವಿದರೆ ಬೆಂಕಿ ಸುರಿಸುತ್ತೇನೆ, ಒಂದು ವರ್ಷದೊಳಗೆ ತೀರ್ಮಾನ ಕೊಡುತ್ತೇನೆ’ ಎಂದು ದೈವ ನೀಡಿದ್ದ ಎಚ್ಚರಿಕೆಯ ನುಡಿಗೂ, ಬುಧವಾರ ಸಂಭವಿಸಿದ ಭೀಕರ ಸ್ಫೋಟಕ್ಕೂ ನಿಕಟ ಸಂಬಂಧವಿದೆ ಎಂದು ಸ್ಥಳೀಯರು ಹಾಗೂ ದೈವಾರಾಧಕರು ಭಾವಿಸುತ್ತಿದ್ದಾರೆ. ೨೦೦೬ರಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯ ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ಸರ್ಕಾರವು ಬಜ್ಪೆ, ಬಾಳ, ಕುತ್ತೆತ್ತೂರು, ಪೆರ್ಮುದೆ ಹಾಗೂ ಕಳವಾರು ಗ್ರಾಮಗಳ ಸಾವಿರಾರು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಈ ವೇಳೆ ಗದ್ದೆಗಳು, ಮನೆಗಳು, ನಾಗಬನ ಹಾಗೂ ದೈವಸ್ಥಾನಗಳು ನೆಲಸಮಗೊಂಡಿದ್ದರೂ, ೮೦೦ ವರ್ಷಗಳ ಇತಿಹಾಸವಿದ್ದ ನೆಲ್ಲಿದಡಿ ಗುತ್ತುವಿನ ಕಾಂತೇರಿ ಜುಮಾದಿ ದೈವಸ್ಥಾನವನ್ನು ಕಂಪನಿಯಿಂದ ಮುಟ್ಟಲು ಸಾಧ್ಯವಾಗಿರಲಿಲ್ಲ.೨೦೧೬ರಲ್ಲೂ ಈ ಜಾಗವನ್ನು ನೆಲಸಮ ಮಾಡಲು ಯತ್ನಿಸಿದಾಗ ವಿಫಲವಾಗಿ, ಕೊನೆಗೆ ಅಂದಿನ ಜಿಲ್ಲಾಧಿಕಾರಿಗಳ ಮಧ್ಯಪ್ರವೇಶದಿಂದ ದೈವಸ್ಥಾನವನ್ನು ಉಳಿಸಿಕೊಂಡು ನಿತ್ಯ ಪೂಜೆಗೆ ಅವಕಾಶ ನೀಡಲಾಗಿತ್ತು.
ಈ ಹಿಂದೆ ೨೦೨೧ರಲ್ಲೂ ಎಂಎಸ್‌ಇಝಡ್ ಆವರಣದೊಳಗಿದ್ದ ‘ಕ್ಯಾಟಸಿಂಥ್’ ಫ್ಯಾಕ್ಟರಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ ಇಡೀ ಕಾರ್ಖಾನೆ ಉರಿದು ಭಸ್ಮವಾಗಿತ್ತು. ಇದೀಗ ಎಂಆರ್‌ಪಿಎಲ್‌ನಲ್ಲಿ ಸಂಭವಿಸಿದ ಭೀಕರ ಸ್ಫೋಟ ಮತ್ತು ಬೆಂಕಿ ದುರಂತವು ದೈವದ ಕಾರಣಿಕ ಮತ್ತು ಕೋಪಕ್ಕೆ ಸಾಕ್ಷಿ ಎಂಬ ಮಾತುಗಳು ಕರಾವಳಿಯುದ್ದಕ್ಕೂ ಕೇಳಿಬರುತ್ತಿವೆ. ಆದ್ದರಿಂದ ಸರ್ಕಾರ ಹಾಗೂ ಕಂಪನಿ ಆಡಳಿತ ಮಂಡಳಿಯು ತಕ್ಷಣವೇ ದೈವದ ಜಾಗವನ್ನು ದೈವಸ್ಥಾನಕ್ಕೇ ಹಸ್ತಾಂತರಿಸಬೇಕು ಮತ್ತು ದೈವಾರಾಧನೆಗೆ ಯಾವುದೇ ಅಡೆತಡೆ ಮಾಡಬಾರದು ಎಂದು ದೈವಾರಾಧಕರು ಹಾಗೂ ಗ್ರಾಮಸ್ಥರು ಬಲವಾಗಿ ಒತ್ತಾಯಿಸಿದ್ದಾರೆ.
-