ಭಕ್ತರ ಇಷ್ಟಾರ್ಥಗಳ ಪೂರೈಸುವುದೇ ಇಷ್ಟಲಿಂಗ ಪೂಜೆ
shirahatti, gadag, istalinga pooja, basavajaya mrutyunjaya swamiji, bellatti, ಶಿರಹಟ್ಟಿ, ಬೆಳ್ಳಟ್ಟಿ, ಇಷ್ಟಲಿಂಗ ಪೂಜೆ, ಬಸವಜಯ ಮೃತ್ಯುಂಜಯ ಸ್ವಾಮೀಜಿ
ಶಿರಹಟ್ಟಿ ತಾಲೂಕು ಬೆಳ್ಳಟ್ಟಿ ಗ್ರಾಮದಲ್ಲಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ಶ್ರಾವಣ ಮಾಸ ಪ್ರಯುಕ್ತ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಿತು.ಶಿರಹಟ್ಟಿ: ಭಕ್ತರ ಇಷ್ಟಾರ್ಥಗಳನ್ನು ಪೂರೈಸುವುದೇ ಇಷ್ಟಲಿಂಗ ಪೂಜೆಯ ಮಹತ್ವವಾಗಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.ಅವರು ಬುಧವಾರ ಶಿರಹಟ್ಟಿ ತಾಲೂಕು ಬೆಳ್ಳಟ್ಟಿ ಗ್ರಾಮದಲ್ಲಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶ್ರಾವಣ ಮಾಸ ಪ್ರಯುಕ್ತ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. ಲಿಂಗಾಯತ ಸಮುದಾಯಕ್ಕೆ ಶ್ರಾವಣ ಮಾಸ ಅತ್ಯಂತ ಪವಿತ್ರವಾಗಿದ್ದು, ಮನುಷ್ಯನ ಮನಸ್ಸನ್ನು ಶುದ್ಧೀಕರಣಗೊಳಿಸುವುದಕ್ಕಾಗಿ ಈ ಮಾಸದಲ್ಲಿ ಪ್ರವಚನ ಆಲಿಸಬೇಕು, ದಾಸೋಹ ಮಾಡಬೇಕು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನಿಸ್ವಾರ್ಥ ಸೇವೆ ಮಾಡಬೇಕು. ಬಹುತೇಕ ವೀರಶೈವರು ಹೆಸರಿಗೆ ಮಾತ್ರ ವೀರಶೈವರಾಗಿ ಉಳಿದಿದ್ದು, ಅನೇಕರು ಇಷ್ಟಲಿಂಗ ಪೂಜೆ ಮಾಡುತ್ತಿಲ್ಲ. ಶಿವತತ್ವ, ಶಿವಚಿಂತನೆ ಮಾಡುವ ಮೂಲಕ ಶ್ರಾವಣ ಮಾಸ ಆಚರಣೆ ಮಾಡಿದಾಗ ಬದುಕು ಸುಧಾರಣೆಯಾಗಲಿದೆ ಎಂದರು.
ಹೋರಾಟ ಕೈಬಿಡಲ್ಲ: ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿಗೆ ಕೂಡಲಸಂಗಮದಿಂದ ಬೃಹತ್ ಪಾದಯಾತ್ರೆ ಮಾಡಿದ್ದು, ಇಡೀ ಜಗತ್ತಿಗೆ ಸಮಾಜದ ಸಂಘಟನೆಯನ್ನು ತೋರಿಸಿದಂತಾಗಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವಧಿಯಲ್ಲಿಯೇ ಮೀಸಲಾತಿ ನೀಡಬೇಕಿತ್ತು, ಕೋವಿಡ್‌ನಿಂದ ಅದು ಸಾಧ್ಯವಾಗಲಿಲ್ಲ. ತದನಂತರ ಬಂದಂತಹ ಸರ್ಕಾರಕ್ಕೆ ಸಮಾಜದ ಮಕ್ಕಳ ಶಿಕ್ಷಣಕ್ಕಾಗಿ ೨ಎ ಪಡೆಯಲು ಅನೇಕ ಹೋರಾಟ ಮಾಡಲಾಗುತ್ತಿದೆ. ಸಮಾಜಕ್ಕೆ ಮೀಸಲಾತಿ ದೊರಕುವ ವರೆಗೂ ಹೋರಾಟ ಕೈಬಿಡಲ್ಲ ಎಂದು ಹೇಳಿದರು.
ಇದಕ್ಕೂ ಮೊದಲು ಕೊಟ್ರೇಶ ಅಕ್ಕೂರ ಅವರ ಮಹಾಮನೆಯಲ್ಲಿ ಶ್ರೀಗಳಿಂದ ವಿಶೇಷ ಪೂಜೆ ನೆರವೇರಿತು. ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಕಾರ್ಯಕ್ರಮ ಉದ್ಘಾಟಿಸಿದರು. ಪಂಚಮಸಾಲಿ ಸಂಘದ ತಾಲೂಕಾಧ್ಯಕ್ಷ ಬಿ.ಡಿ. ಪಲ್ಲೇದ ಪ್ರಾಸ್ತಾವಿಕವಾಗಿ ಮಾತನಾಡಿದರು.