ಕನ್ನಡಪ್ರಭ ವಾರ್ತೆ ಚಾಮರಾಜನಗರ ವಿದ್ಯಾರ್ಥಿಗಳನ್ನು ಪ್ರೊತ್ಸಾಹಿಸುವುದರಿಂದ ಹೆಚ್ಚಿನ ಸಾಧನೆ ಮಾಡಲು ಸಾಧ್ಯ. ಪೋಷಕರು ಮಕ್ಕಳ ಅಭ್ಯಾಸದ ಕಡೆ ಗಮನಿಸಲು ಮುಂದಾಗಬೇಕು. ಅವರ ಕನಸನ್ನು ನನಸು ಮಾಡಲು ಪ್ರಯತ್ನಿಸಬೇಕು ಎಂದು ಕೆನರಾ ಬ್ಯಾಂಕ್ ಮುಖ್ಯ ಪ್ರಬಂದಕ ಎನ್.ನಂಜುಂಡಸ್ವಾಮಿ ತಿಳಿಸಿದರು. ಈಶ್ವರಿ ಸೋಶಿಯಲ್ ಟ್ರಸ್ಟ್ ವಾರ್ಷಿಕೋತ್ಸವ ಸಮಾರಂಭದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ದೀಪಿಕಾ ಮತ್ತು ರೋಹಿತ್ ಪ್ರಸಾದ್ ಎಂಬ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಓದಿನ ಜೊತೆಗೆ ಸಾಂಸ್ಕೃತಿಕವಾಗಿ ಬೆಳೆಯಲು ಉತ್ತೇಜನ ನೀಡಬೇಕು. ವಿದ್ಯಾರ್ಥಿಗಳ ಇಷ್ಟದಂತೆ ಅವರ ವಿದ್ಯಾಭ್ಯಾಸವನ್ನು ಮುಂದುವರೆಸಲು ಬಿಡಬೇಕು. ಮಕ್ಕಳಿಗೆ ಒತ್ತಡ ಹೇರಬಾರದು ಎಂದು ಹೇಳಿದರು. ಈಶ್ವರಿ ಸೋಶಿಯಲ್ ಟ್ರಸ್ಟ್ ವಿದ್ಯಾರ್ಥಿಗಳನ್ನು ಗೌರವಿಸುತ್ತಿರುವುದು ಶ್ಲಾಘನಿಯ ಎಂದು ತಿಳಿಸಿದರು.ಈಶ್ವರಿ ಸೋಶಿಯಲ್ ಟ್ರಸ್ಟ್ ಸಂಸ್ಥಾಪಕ ವೆಂಕಟೇಶ್ ಮಾತನಾಡಿ, ಜಿಲ್ಲೆಯ ಸುತ್ತ ಮುತ್ತ ಗಿಡಗಳನ್ನು ಪೋಷಿಸುವುದರ ಜೊತೆಗೆ ಸಾಮಾಜಿಕ ಚಟುವಟಿಕೆಗಳನ್ನು ನಮ್ಮ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ವಿದ್ಯಾರ್ಥಿಗಳನ್ನು ಪ್ರೊತ್ಸಾಹಿಸುತ್ತಾ ಬಂದಿದ್ದೇವೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಅನೇಕ ಮಹಾನಿಯರನ್ನು ನಮ್ಮ ಸಂಸ್ಥೆಯ ಪರವಾಗಿ ಗೌರವಿಸಲಾಗಿದೆ. ಸಾಲುಮರದ ತಿಮ್ಮಕ್ಕ, ಸಂಗೀತ ನಿರ್ದೇಶಕ ರಾಜನ್-ನಾಗೇಂದ್ರ, ನಿರ್ದೇಶಕ ಭಾರ್ಗವ, ದೊರೆ-ಭಗವಾನ್, ಗಾಯಕರಾದ ರಾಜು ಅನಂತಸ್ವಾಮಿ, ರಾಜೇಶ್ ರಾಮನಾಥ್ ಹಾಗೂ ಮುಂತಾದವರನ್ನು ಗೌರವಿಸಲಾಗಿದೆ. ನಮ್ಮ ದೇಶದ ಮಹನೀಯರ ಹುಟ್ಟು ಹಬ್ಬದ ಆಚರಣೆ ಅಂಗವಾಗಿ ರಸ್ತೆಗಳಲ್ಲಿ ಗಿಡಗಳನ್ನು ಬೆಳೆಸುವುದು, ಮನೋರಂಜನೆಗಾಗಿ ಗೀತಗಾಯನ ಕಾರ್ಯಕ್ರಮಗಳನ್ನು ನಡೆಸುವುದು ಅಭ್ಯಾಸವಾಗಿದೆ ಎಂದು ತಿಳಿಸಿದರು.
ಈ ವೇಳೆ ಪರಿಸರ ಪ್ರೇಮಿ, ಆಡಿಟರ್ ಸಿಎಂ ವೆಂಕಟೇಶ್ ಅವರ ನೂತನ ಕಚೇರಿ ಉದ್ಘಾಟನೆಯನ್ನು ಉದ್ಯಮಿ ಆರ್.ವಿ.ಶಾಂತಿಪ್ರಸಾದ್ ನೆರವೇರಿಸಿದರು. ಯೋಗರಾಜ್, ರಾಜೇಶ್, ಗಾಯಕ ಬಸವರಾಜು, ಮಹೇಂದ್ರ ಪ್ರಸಾದ್, ಮಂಜು, ಜಯಲಕ್ಷ್ಮಿ ವೆಂಕಟೇಶ್, ವಿಶ್ವಕುಮಾರಸ್ವಾಮಿ, ಪರಮೇಶ್ವರ ಹಾಜರಿದ್ದರು.