ಗೂಢಚಾರರ ಸೇವೆ, ತ್ಯಾಗ ಗೌರವಿಸುವಲ್ಲಿ ಇಸ್ರೇಲ್ ಮಾದರಿ

KannadaprabhaNewsNetwork |  
Published : Aug 20, 2026, 01:30 AM IST
19ಕೆಡಿವಿಜಿ12, 13-ದಾವಣಗೆರೆ ಎಸ್ಪಿ ಕಚೇರಿಯಲ್ಲಿ ಬುಧವಾರ ಪಾಕ್‌ನಲ್ಲಿ ನಮ್ಮ ಧುರಂಧರರು-ಬೇಹುಗಾರಿಕೆ ಬದುಕು ಬವಣೆ ಪುಸ್ತಕ ಸಂವಾದದಲ್ಲಿ ನಿವೃತ್ತ ಡಿಜಿಪಿ, ಲೇಖಕ, ಅಂಕಣಕಾರ ಡಾ.ಡಿ.ವಿ.ಗುರುಪ್ರಸಾದ ಮಾತನಾಡಿದರು. | Kannada Prabha

ಸಾರಾಂಶ

ಗೂಢಚಾರರ ಸೇವೆ ಮತ್ತು ತ್ಯಾಗವನ್ನು ಗೌರವಿಸುವಲ್ಲಿ ಇಸ್ರೇಲ್ ಮಾದರಿ ಗಮನಾರ್ಹವಾಗಿದೆ. ದೇಶಕ್ಕಾಗಿ ಕಾರ್ಯ ನಿರ್ವಹಿಸುವ ಗೂಢಚಾರರ ಸ್ಮರಣಾರ್ಥ ಅಲ್ಲಿ ಸ್ಮಾರಕ ಹಾಗೂ ಬೃಹತ್ ಮ್ಯೂಸಿಯಂ ಸ್ಥಾಪಿಸಿ, ಅಂತಹ ಗೂಢಚಾರರ ಸೇವೆ, ಕಾರ್ಯಾಚರಣೆ, ತ್ಯಾಗದ ಬಗ್ಗೆ ಮಾಹಿತಿ ದಾಖಲಿಸುವ ಕೆಲಸವಾಗಿದೆ ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ, ಲೇಖಕ ಡಾ. ಡಿ.ವಿ.ಗುರುಪ್ರಸಾದ ತಿಳಿಸಿದ್ದಾರೆ.

- ಗುಪ್ತಚರ ವ್ಯವಸ್ಥೆಯಲ್ಲಿ ‘ಹನಿಟ್ರ್ಯಾಪ್’, ಬ್ಲ್ಯಾಕ್‌ಮೇಲ್‌ನಂತಹ ಪ್ರಮುಖ ಅಪಾಯಗಳಿವೆ: ಡಾ.ಡಿ.ವಿ.ಗುರುಪ್ರಸಾದ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಗೂಢಚಾರರ ಸೇವೆ ಮತ್ತು ತ್ಯಾಗವನ್ನು ಗೌರವಿಸುವಲ್ಲಿ ಇಸ್ರೇಲ್ ಮಾದರಿ ಗಮನಾರ್ಹವಾಗಿದೆ. ದೇಶಕ್ಕಾಗಿ ಕಾರ್ಯ ನಿರ್ವಹಿಸುವ ಗೂಢಚಾರರ ಸ್ಮರಣಾರ್ಥ ಅಲ್ಲಿ ಸ್ಮಾರಕ ಹಾಗೂ ಬೃಹತ್ ಮ್ಯೂಸಿಯಂ ಸ್ಥಾಪಿಸಿ, ಅಂತಹ ಗೂಢಚಾರರ ಸೇವೆ, ಕಾರ್ಯಾಚರಣೆ, ತ್ಯಾಗದ ಬಗ್ಗೆ ಮಾಹಿತಿ ದಾಖಲಿಸುವ ಕೆಲಸವಾಗಿದೆ ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ, ಲೇಖಕ ಡಾ. ಡಿ.ವಿ.ಗುರುಪ್ರಸಾದ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಬುಧವಾರ ಪಾಕ್‌ನಲ್ಲಿ ನಮ್ಮ ಧುರಂದರರು: ಬೇಹುಗಾರಿಕೆ ಬದುಕು- ಬವಣೆ ಪುಸ್ತಕ ಸಂವಾದದಲ್ಲಿ ಅವರು ಮಾತನಾಡಿದರು. ದೇಶದ ಸುರಕ್ಷತೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಅತ್ಯಂತ ಗೌಪ್ಯವಾಗಿ ಕಾರ್ಯನಿರ್ವಹಿಸುವ ಗೂಢಚಾರರ ಸೇವೆ ಮತ್ತು ತ್ಯಾಗವನ್ನು ಸಮಾಜ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಅಂತಹ ಕೆಲಸ ಇಸ್ರೇಲ್ ಅತ್ಯುತ್ತಮವಾಗಿ ಮಾಡುತ್ತಿದೆ ಎಂದರು.

ಯಾವುದೇ ದೇಶದ ರಾಷ್ಟ್ರೀಯ ಭದ್ರತೆ ಪ್ರಮುಖ ಅಂಗವೆಂದರೆ ಅದು ಗೂಢಚಾರಿಕೆ. ಆದರೆ, ಅಂತಾರಾಷ್ಟ್ರೀಯ ನಿಯಮಗಳು, ರಾಜತಾಂತ್ರಿಕ ಅನಿವಾರ್ಯತೆ, ಗಡಿ ಸಂಬಂಧಗಳ ಹಿನ್ನೆಲೆಯಲ್ಲಿ ಸರ್ಕಾರಗಳು ತಮ್ಮ ಗೂಢಚಾರರನ್ನು ಬಹಿರಂಗವಾಗಿ ಗುರುತಿಸಿ ಗೌರವಿಸಲು ಸಾಧ್ಯವಾಗದ ಸನ್ನಿವೇಶವಿದೆ. ದೇಶಕ್ಕಾಗಿ ಜೀವ ತ್ಯಾಗ ಮಾಡಿದರೂ ಗೂಢಚಾರರಿಗೆ ಪದಕ, ಪ್ರಶಸ್ತಿ ಅಥವಾ ಸಾರ್ವಜನಿಕ ಸನ್ಮಾನದಂತಹ ಗೌರವಗಳೇ ಸಿಗುವುದಿಲ್ಲ ಎಂದು ವಿಷಾದಿಸಿದರು.

ವಿದೇಶಗಳಲ್ಲಿ ಆಕಸ್ಮಾತ್ ಸಿಕ್ಕಿಬಿದ್ದ ಸಂದರ್ಭದಲ್ಲಾಗಲೀ ಅಥವಾ ನಿವೃತ್ತಿಯ ನಂತರವೂ ಅಂತಹವರೊಂದಿಗಿನ ಅಧಿಕೃತ ಸಂಬಂಧವನ್ನು ಸರ್ಕಾರಗಳು ಬಹಿರಂಗಪಡಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಪಾಕಿಸ್ತಾನದ ಜೈಲಿನಲ್ಲಿರುವ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ರಾಜತಾಂತ್ರಿಕ ಕಾರಣಗಳಿಂದಾಗಿ ಸರ್ಕಾರಗಳು ಅಧಿಕೃತ ಸಂಬಂಧವನ್ನು ನಿರಾಕರಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ದೇಶದ ರಕ್ಷಣೆಗೆ ತೆರೆಮರೆಯಲ್ಲಿ ದುಡಿಯುವ ಗೂಢಚಾರರ ಕೊಡುಗೆಯನ್ನು ಜನ ಅರ್ಥೈಸಿಕೊಳ್ಳಬೇಕು. ಅಂತಹವರ ಸೇವೆ ಹಾಗೂ ತ್ಯಾಗವನ್ನು ಗೌರವಿಸುವಂತಹ ವ್ಯವಸ್ಥೆ ಭಾರತದಲ್ಲೂ ರೂಪುಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ದೇಶದ ಭದ್ರತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡುವಲ್ಲಿ ಕೌಂಟರ್ ಇಂಟೆಲಿಜೆನ್ಸ್ ವಿಭಾಗವೂ ಅತ್ಯಂತ ಮಹತ್ವದ್ದು. ದೇಶದ ರಹಸ್ಯ ಸೋರಿಕೆ ಆಗದಂತೆ ಡಬಲ್ ಏಜೆಂಟ್‌ಗಳು ಹಾಗೂ ವಿದೇಶಿ ಗುಪ್ತಚರ ಜಾಲದ ಮೇಲೆ ನಿರಂತರ ನಿಗಾ ವಹಿಸಲಾಗುತ್ತಿದೆ. ಕೌಂಟರ್ ಇಂಟೆಲಿಜೆನ್ಸ್‌ನ ಪ್ರಮುಖ ಕಾರ್ಯವೆಂದರೆ ದೇಶದೊಳಗಿನ ಅಥವಾ ವಿದೇಶಗಳಲ್ಲಿ ಕಾರ್ಯ ನಿರ್ವಹಿಸುವ ಭಾರತೀಯ ಅಧಿಕಾರಿಗಳು, ಗುಪ್ತಚರ ಸಿಬ್ಬಂದಿ ಹಾಗೂ ಸೂಕ್ಷ್ಮ ಮಾಹಿತಿಗೆ ಪ್ರವೇಶ ಹೊಂದಿರುವ ವ್ಯಕ್ತಿಗಳ ಮೂಲಕ ದೇಶದ ರಹಸ್ಯಗಳು ಸೋರಿಕೆ ಆಗದಂತೆ ತಡೆಯುವುದಾಗಿದೆ ಎಂದು ಹೇಳಿದರು.

ಹಣ, ವೈಯಕ್ತಿಕ ಸ್ವಾರ್ಥ, ಬ್ಲ್ಯಾಕ್‌ಮೇಲ್‌ಗೊಳಗಾಗಿ ದೇಶದ ಮಾಹಿತಿಯನ್ನು ವಿದೇಶಗಳಿಗೆ ರವಾನಿಸುವ ಸಾಧ್ಯತೆಗಳ ಮೇಲೂ ನಿಗಾ ಇರಿಸಲಾಗುತ್ತದೆ. ಪಾಕಿಸ್ತಾನದ ಕರಾಚಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಅಧಿಕಾರಿಗಳು ಹಾಗೂ ರಾಯಭಾರಿಗಳ ಮೇಲೆ ಅಲ್ಲಿನ ಕೌಂಟರ್ ಇಂಟೆಲಿಜೆನ್ಸ್ ನಿರಂತರ ನಿಗಾ ಇಡುತ್ತಿತ್ತು. ಭಾರತೀಯ ಅಧಿಕಾರಿಗಳ ವಾಹನ ಚಾಲಕರು, ಅಂತಹವರ ಸಂಚಾರ, ಭೇಟಿಗಳು ಹಾಗೂ ದೂರವಾಣಿ ಸಂಪರ್ಕದ ಮೇಲೂ ನಿಗಾ ವಹಿಸಲಾಗುತ್ತಿತ್ತು. ವಿದೇಶದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಎದುರಿಸುವ ಭದ್ರತಾ ಸವಾಲುಗಳ ತೀವ್ರತೆಯನ್ನು ಇದು ತೋರಿಸುತ್ತದೆ ಎಂದು ತಿಳಿಸಿದರು.

- - -

(ಬಾಕ್ಸ್‌)

* ಡಾ.ಡಿ.ವಿ.ಗುರುಪ್ರಸಾದ ಹೇಳಿಕೆಗಳು

- ಗುಪ್ತಚರ ವ್ಯವಸ್ಥೆಯಲ್ಲಿ ‘ಹನಿ ಟ್ರ್ಯಾಪ್’ ಹಾಗೂ ಬ್ಲ್ಯಾಕ್‌ಮೇಲ್‌ನಂತಹ ಪ್ರಮುಖ ಅಪಾಯಗಳಾಗಿವೆ. 1962ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯೊಬ್ಬರು ಕೊಲಂಬೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ವಿದೇಶಿ ಗುಪ್ತಚರ ಸಂಸ್ಥೆಯ ‘ಹನಿ ಟ್ರ್ಯಾಪ್’ಗೊಳಗಾಗಿ ದೇಶದ ರಹಸ್ಯಗಳನ್ನು ಸೋರಿಕೆಗೆ ಒಪ್ಪಿಕೊಂಡ ಪ್ರಕರಣವಿದೆ. ತನಿಖೆ ನಂತರ ಆ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಲಾಯಿತು.

- ‘ರಾ’ **(R&AW) ** ಅಧಿಕಾರಿಯೊಬ್ಬರು ಸೂಕ್ಷ್ಮ ದಾಖಲೆ ನಕಲು ಮಾಡಿ ಅಮೆರಿಕಕ್ಕೆ ತಲುಪಿಸಿದ ಬಳಿಕ ನೇಪಾಳದ ಮೂಲಕ ಪಲಾಯನ ಮಾಡಿ ನೆಲೆಸಿದ ಪ್ರಕರಣವೂ ಇದೆ. ಇಂತಹ ಘಟನೆಗಳನ್ನು ತಡೆಯಲು ಕೌಂಟರ್ ಇಂಟೆಲಿಜೆನ್ಸ್ ವ್ಯವಸ್ಥೆಯಲ್ಲಿ ಹಲವು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಅಧಿಕಾರಿಯನ್ನು ದೀರ್ಘಕಾಲ ಒಂದೇ ಸೂಕ್ಷ್ಮ ಹುದ್ದೆ ಅಥವಾ ಸ್ಥಳದಲ್ಲಿ ಮುಂದುವರಿಸದೇ, ಅಗತ್ಯಕ್ಕೆ ತಕ್ಕಂತೆ ವರ್ಗಾವಣೆ ಮಾಡುವುದು ಪ್ರಮುಖ ಕ್ರಮವಾಗಿದೆ.

- ವಿದೇಶಗಳಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಅಧಿಕಾರಿಗಳು, ದೇಶದಲ್ಲಿರುವ ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಿದೇಶಿ ಪ್ರಜೆಗಳ ಚಟುವಟಿಕೆ ಮೇಲೂ ಕಾನೂನುಬದ್ಧವಾಗಿ ನಿಗಾ ವಹಿಸಲಾಗುತ್ತಿದೆ. ಸೂಕ್ಷ್ಮ ಸಂವಹನ ವ್ಯವಸ್ಥೆಗಳ ಭದ್ರತೆ, ಫೋನ್ ಹಾಗೂ ಸ್ಯಾಟಲೈಟ್ ಫೋನ್ ಬಳಕೆ ಮೇಲಿನ ನಿಯಂತ್ರಣ ಸೇರಿದಂತೆ ತಾಂತ್ರಿಕ ಭದ್ರತಾ ಕ್ರಮಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ದೇಶದ ಭದ್ರತೆಗೆ ಸವಾಲಾಗುವ ಗುಪ್ತಚರ ಚಟುವಟಿಕೆ ತಡೆಗೆ ಕೌಂಟರ್ ಇಂಟೆಲಿಜೆನ್ಸ್ ವ್ಯವಸ್ಥೆಯನ್ನು ನಿರಂತರ ಬಲಪಡಿಸಲಾಗುತ್ತಿದೆ. ದೇಶದ ರಹಸ್ಯ, ಭದ್ರತೆ ಮತ್ತು ಸಾರ್ವಭೌಮತ್ವದ ರಕ್ಷಣೆಯಲ್ಲಿ ಗುಪ್ತಚರ ಸಿಬ್ಬಂದಿ ಹಗಲಿರುಳು ಕಾರ್ಯ ನಿರ್ವಹಿಸುತ್ತಿದ್ದಾರೆ.

- - -

-19ಕೆಡಿವಿಜಿ12, 13:

ದಾವಣಗೆರೆ ಎಸ್ಪಿ ಕಚೇರಿಯಲ್ಲಿ ಬುಧವಾರ ಪಾಕ್‌ನಲ್ಲಿ ನಮ್ಮ ಧುರಂಧರರು- ಬೇಹುಗಾರಿಕೆ ಬದುಕು-ಬವಣೆ ಪುಸ್ತಕ ಸಂವಾದದಲ್ಲಿ ನಿವೃತ್ತ ಡಿಜಿಪಿ, ಲೇಖಕ, ಅಂಕಣಕಾರ ಡಾ.ಡಿ.ವಿ.ಗುರುಪ್ರಸಾದ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಾವೊಬ್ಬ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತರಾಗದಿರಲಿ: ಶಾಸಕ ಸಿ.ಬಿ.ಸುರೇಶ್‌ಬಾಬು
ರಸ್ತೆ ಮಾರ್ಜಿನ್ ನಿಂದ 30 ಅಡಿ ಬಿಟ್ಟು ಮನೆ ಕಟ್ಟಲು ಅನುಮತಿಸಿ: ಖಾತೆದಾರರ ಆಗ್ರಹ