ಜಮಖಂಡಿ ಶುಗರ್ಸ್‌ಗೆ ತಕ್ಷಣ ನೋಟಿಸ್ ಜಾರಿ ಮಾಡಿ: ಕಾಶಪ್ಪನವರ

KannadaprabhaNewsNetwork |  
Published : Oct 22, 2026, 02:45 AM IST
(ಫೋಟೊಬಿಕೆಟಿ1,(1) ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಅವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತಿಯ ನೂತನ ಸಭಾಭವನದಲ್ಲಿ ನಡೆದ ಕಬ್ಬು ಬೆಳೆಗಾರರು ಹಾಗೂ ರೈತ ಮುಖಂಡರ ಸಭೆಯಲ್ಲಿ  ಪಾಲ್ಗೋಂಡ ಕಬ್ಬು ಬೆಳೆಗಾರರು ಹಾಗೂ ರೈತ ಮುಖಂಡರು) | Kannada Prabha

ಸಾರಾಂಶ

ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಅವರು ಜಿಲ್ಲಾ ಪಂಚಾಯತಿಯ ನೂತನ ಸಭಾಭವನದಲ್ಲಿ ರೈತ ಮುಖಂಡರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕಾರ್ಖಾನೆಯಿಂದ ಪ್ರತಿ ಮಟ್ರಿಕ್ ಟನ್‌ಗೆ ನೀಡಬೇಕಾದ ₹50ರಂತೆ ಒಟ್ಟು ₹434.64 ಲಕ್ಷ ಬಾಕಿ ಉಳಿಸಿಕೊಂಡಿರುವ ಜಮಖಂಡಿ ಶುಗರ್ಸ್‌ಗೆ ತಕ್ಷಣ ನೋಟಿಸ್ ಜಾರಿ ಮಾಡಿ, ರೈತರಿಗೆ ಪಾವತಿಸಬೇಕಾದ ಕಬ್ಬಿನ ಬಿಲ್ ಕೂಡಲೇ ಪಾವತಿಸುವಂತೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಸೂಚಿಸಿದರು.ಜಿಲ್ಲಾ ಪಂಚಾಯತಿ ನೂತನ ಸಭಾಭವನದಲ್ಲಿ ರೈತ ಮುಖಂಡರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ಬೆಳೆದ ಕಬ್ಬಿಗೆ ಸಕಾಲದಲ್ಲಿ ಹಣ ಪಾವತಿಯಾಗಬೇಕು. ರೈತರು ತಮ್ಮ ಉತ್ಪನ್ನದ ಹಣಕ್ಕಾಗಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಬಾರದು. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ವ್ಹೇ-ಬ್ರಿಡ್ಜ್‌ ಸ್ಥಾಪನೆಗೆ ಕ್ರಮ:

ಕಬ್ಬು ಸಾಗಾಟ ಮತ್ತು ತೂಕದ ವಿಚಾರದಲ್ಲಿ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಜಿಲ್ಲೆಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ತೂಕ ಮಾಪನಾ ಕೇಂದ್ರ (ವ್ಹೇ-ಬಿಡ್ಜ್‌) ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. ರೈತರ ಬೇಡಿಕೆಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಸಂಬಂಧಿಸಿದ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಒದಗಿಸಬೇಕು. ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ಯಾವುದೇ ಸಮಸ್ಯೆಗಳು ಉಂಟಾದಲ್ಲಿ, ಅವುಗಳನ್ನು ಮಾತುಕತೆಯ ಮೂಲಕ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಕಾಶಪ್ಪನವರ ಸೂಚಿಸಿದರು.

ಬರ ಪರಿಹಾರಕ್ಕೆ ತುರ್ತು ಕ್ರಮ:

ಜಿಲ್ಲೆಯ ಎಲ್ಲಾ 10 ತಾಲೂಕುಗಳನ್ನು ತೀವ್ರ ಬರಪೀಡಿತ ಪ್ರದೇಶಗಳೆಂದು ಸರ್ಕಾರ ಘೋಷಿಸಿದ್ದು, ಬರದಿಂದ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ತುರ್ತುಪರಿಹಾರವಾಗಿ ತಲಾ ₹2,500 ಜಮೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತೀವ್ರವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಅಗತ್ಯ ನೆರವು ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ರೈತರಿಗೆ ಸೂಕ್ತ ಬರ ಪರಿಹಾರ ದೊರಕಿಸುವ ಉದ್ದೇಶದಿಂದ ಮುಖ್ಯಮಂತ್ರಿ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರ ಪರಿಹಾರದ ಪಾಲು ಬಿಡುಗಡೆಯಾದ ಬಳಿಕ, ರಾಜ್ಯ ಸರ್ಕಾರ ತನ್ನ ಪಾಲನ್ನು ಸೇರಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ವಿಜಯಾನಂದ ಕಾಶಪ್ಪನವರ ಭರವಸೆ ನೀಡಿದರು.

ಸಭೆಯಲ್ಲಿ ರೈತ ಮುಖಂಡರು ಕಬ್ಬು ಬೆಳೆಗಾರರ ಸಮಸ್ಯೆಗಳು, ಬಾಕಿ ಬಿಲ್ ಪಾವತಿ, ಕಬ್ಬಿನ ದರ, ತೂಕದ ವ್ಯವಸ್ಥೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸಚಿವರ ಗಮನಕ್ಕೆ ತಂದರು. ರೈತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಉಪ ವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಶ್ವೇತಾ ಬೀಡಿಕರ, ಸುಗರ ಕೇನ್ ಇಲಾಖೆಯ ಅಧಿಕಾರಿ ರಾಜಗೋಪಾಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಿಎಂಗೆ ಕರೆ ಮಾಡಿದ ಸಚಿವ ಕಾಶಪ್ಪನವರ: ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಸಭೆಯಲ್ಲಿಯೇ ಮುಖ್ಯಮಂತ್ರಿಗೆ ಕರೆ ಮಾಡಿ ಜಿಲ್ಲೆಯ ರೈತ ಮುಖಂಡರಾದ ಬಸವಂತಪ್ಪ ಕಾಂಬಳೆ ಮತ್ತು ಸುಭಾಷ ಸಿರಬೂರ ಅವರೊಂದಿಗೆ ನೇರವಾಗಿ ಮಾತನಾಡಿಸಿದರು. ಈ ವೇಳೆ ರೈತ ಮುಖಂಡರ ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳು ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ರೈತರ ಬೇಡಿಕೆಗಳ ಕುರಿತು ಚರ್ಚಿಸುವ ನಿಟ್ಟಿನಲ್ಲಿ ಅಕ್ಟೋಬರ 26ರಂದು ಬೆಳಗಾವಿಯಲ್ಲಿ ಸಭೆ ನಡೆಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕಾಪುರ; ವೈಭವದ ವೆಂಕಟೇಶ್ವರ ರಥೋತ್ಸವ
ಬೆಳಗಾವಿಯಲ್ಲಿ ಅದ್ಧೂರಿ ದಸರಾ ಮಹೋತ್ಸವ