ಅಭಿವೃದ್ಧಿ ಹಣದ ಶ್ವೇತಪತ್ರ ಹೊರಡಿಸಿ : ನಿಖಿಲ್ ಕುಮಾರಸ್ವಾಮಿ

KannadaprabhaNewsNetwork |  
Published : Jun 27, 2025, 12:48 AM ISTUpdated : Jun 27, 2025, 10:45 AM IST
Nikhil kumaraswamy

ಸಾರಾಂಶ

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಎಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ಶ್ವೇತಪತ್ರ ಹೊರಡಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

 ರಾಯಚೂರು :  ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಎಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ಶ್ವೇತಪತ್ರ ಹೊರಡಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಗುರುವಾರ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಪ್ರವಾಸ ಹಾಗೂ ಪಕ್ಷದ ಸದಸ್ಯತ್ವದ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಇಟ್ಟಿರುವಂಥ ಹಣವನ್ನು ಎಲ್ಲೆಲ್ಲಿ ಕಲ್ಯಾಣ ಮಾಡಿದ್ದೀರಿ, ಯಾವ ರಸ್ತೆ ಅಭಿವೃದ್ಧಿ ಆಗಿದೆ, ಯಾವ ಶಾಲೆ ಕಟ್ಟಡ ಕಟ್ಟಿದ್ದೀರಿ, ಯಾವ ಬಸ್ ಸ್ಟ್ಯಾಂಡ್ ನಿರ್ಮಾಣ ಮಾಡಿದ್ದೀರಿ, ಕಲ್ಯಾಣ ಕರ್ನಾಟಕಕ್ಕೆ ಏನೇನು ಅಭಿವೃದ್ಧಿ ಕೆಲಸಗಳು ಆಗಿವೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಹೇಳಿದರು.

ಕಳೆದ ಹತ್ತು ದಿನಗಳಿಂದ ಸರ್ಕಾರದಲ್ಲಿರುವ ಹಿರಿಯ ಸ್ವಪಕ್ಷಿಯ ಶಾಸಕರೇ ಸರ್ಕಾರ ವಿರುದ್ಧ ಗರಂ ಆಗಿದ್ದಾರೆ. ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ವೈಫಲ್ಯಗಳ ಬಗ್ಗೆ ಹಾಗೂ ಸರ್ಕಾರದಲ್ಲಿರುವ ಶಾಸಕರನ್ನು ಆಡಳಿತ ಪಕ್ಷ ಕಡೆಗಣಿಸುತ್ತಿದೆ ಎಂಬ ಬೇಸರ ಹೊರ ಹಾಕಿದ್ದಾರೆ. ಮಧ್ಯವರ್ತಿಗಳನ್ನ ಇಟ್ಕೊಂಡು ಕಮಿಷನ್ ಪಡೆದುಕೊಂಡು ಅಧಿಕಾರ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.

ಡಿಸೆಂಬರ್‌ನಲ್ಲಿ ಕ್ರಾಂತಿಯಾಗುತ್ತೆ ಎಂಬ ಸಚಿವ ಕೆ.ಎನ್‌.ರಾಜಣ್ಣ ಹೇಳಿಕೆ ಉಲ್ಲೇಖಿಸಿದ ನಿಖಿಲ್‌, ಅದರಲ್ಲಿ ಆಶ್ಚರ್ಯಪಡುವಂಥದ್ದು ಏನೂ ಇಲ್ಲ. ಆ ಕ್ರಾಂತಿ ಯಾವ ರೀತಿ ಆಗುತ್ತದೆ ಕಾದು ನೋಡಬೇಕು. ಇತ್ತೀಚಿಗೆ ರಾಜಕೀಯ ವಿದ್ಯಾಮಾನಗಳ ಲೆಕ್ಕಾಚಾರ ಮಾಡುವುದಾದರೆ ಬೇರೆ ಬೇರೆ ಬೆಳವಣಿಗೆಗಳು ನಡೆಯುತ್ತಿದೆ. ಕ್ರಾಂತಿ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.

ರಾಜ್ಯದ ಹಿತಾಸಕ್ತಿ ಕಾಪಾಡಿಕೊಳ್ಳುವ ದೃಷ್ಟಿಯಿಂದ ಪಕ್ಷದ ಕಡೆಯಿಂದ ಎಲ್ಲ ಜಿಲ್ಲಾಧ್ಯಕ್ಷರುಗಳಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರದ ಅವ್ಯವಹಾರ, ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸಿ ಎಂಬ ಸೂಚನೆ ನೀಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು.

ಕುಮಾರಸ್ವಾಮಿ ಅವರು ಕೇಂದ್ರದ ಮಂತ್ರಿ ಆದ ಮೇಲೆ ಕರ್ನಾಟಕ ರಾಜ್ಯಕ್ಕೆ ಏನು ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಲಘುವಾಗಿ ಮಾತಾಡಿದ್ದಾರೆ. ತಂಬಾಕು ಬೆಳೆಗಾರರಿಗೆ ಉತ್ತಮ ದರ ಮತ್ತು ತಂಬಾಕು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಪರಿಹಾರ ಹಾಗೂ ಮಾವು ಬೆಳೆಗಾರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಕೇಂದ್ರದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕುಮಾರಸ್ವಾಮಿ ಅವರು ಪತ್ರ ಬರೆದು 2.5 ಲಕ್ಷ ಮೆಟ್ರಿಕ್ ಟನ್ ಮಾವು ಖರೀದಿಗೆ ಒತ್ತಾಯಿಸಿದ್ದರಿಂದ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮೊದಲು ನಿಖಿಲ್ ಕುಮಾರಸ್ವಾಮಿ ಅವರು ವರಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿನಾಯಕನ ಆಶೀರ್ವಾದ ಪಡೆದರು. ಬಳಿಕ ನೂರಾರು ಕಾರ್ಯಕರ್ತರ ಜತೆಗೂಡಿ ಟ್ರ್ಯಾಕ್ಟರ್‌ ರ್‍ಯಾಲಿ ನಡೆಸಿದರು.

ಸಭೆಯಲ್ಲಿ ಮಾಜಿ ಸಚಿವರಾದ ವೆಂಕಟರಾವ್‌ ನಾಡಗೌಡ, ಆಲ್ಕೋಡ್ ಹನುಮಂತಪ್ಪ, ಶಾಸಕ ನೇಮಿರಾಜ್ ನಾಯಕ್, ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಮುಖಂಡರಾದ ಸಿ.ವಿ ಚಂದ್ರಶೇಖರ್, ರಶ್ಮಿ ರಾಮೇಗೌಡ ಮೊದಲಾದವರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ