ಆಯುಷ್ಮಾನ್‌ ನೋಂದಣಿ ಮಾಡದ ಆಸ್ಪತ್ರೆಗಳಿಗೆ ನೋಟಿಸ್‌ ನೀಡಿ

KannadaprabhaNewsNetwork |  
Published : Sep 03, 2026, 01:15 AM IST
ಸಸಸ | Kannada Prabha

ಸಾರಾಂಶ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಆಯುಷ್ಮಾನ್‌ ಯೋಜನೆಯಡಿ ನೋಂದಣಿ ಮಾಡಿಕೊಳ್ಳದ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್‌ ಜಾರಿಗೊಳಿಸಿ ಎಂದು ಸಂಸದ ಕೋಟ ಶ್ರೀನಿವಾಸ್‌ ಪೂಜಾರಿ ನಿರ್ದೇಶಿಸಿದರು.

-ಸಂಸದ ಕೋಟ ಶ್ರೀನಿವಾಸ್‌ ಪೂಜಾರಿ ನಿರ್ದೇಶನ । ಜಿಲ್ಲಾ ಅಭಿವೃದ್ಧಿ ಸಮನ್ವಯ, ಉಸ್ತುವಾರಿ ಸಮಿತಿ (ದಿಶಾ)ಸಭೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಆಯುಷ್ಮಾನ್‌ ಯೋಜನೆಯಡಿ ನೋಂದಣಿ ಮಾಡಿಕೊಳ್ಳದ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್‌ ಜಾರಿಗೊಳಿಸಿ ಎಂದು ಸಂಸದ ಕೋಟ ಶ್ರೀನಿವಾಸ್‌ ಪೂಜಾರಿ ನಿರ್ದೇಶಿಸಿದರು.

ಕುವೆಂಪು ಕಲಾಮಂದಿರದಲ್ಲಿ ಬುಧವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ)ಸಭೆಯಲ್ಲಿ ಮಾತನಾಡಿ ಆಯುಷ್ಮಾನ್‌ ಯೋಜನೆಯಡಿ ನೋಂದಣಿ ಮಾಡದ ಹತ್ತು ಹಾಗೂ ಅದಕ್ಕಿಂತ ಹೆಚ್ಚಿನ ಹಾಸಿಗೆ ಸಾಮರ್ಥ್ಯದ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್‌ ಜಾರಿಗೊಳಿಸಲು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಿಎಚ್‌ಒ ಮಂಜುನಾಥ್‌ ಉತ್ತರಿಸಿ ಜಿಲ್ಲೆಯಲ್ಲಿ ಒಟ್ಟು 103 ಸರ್ಕಾರಿ , 26 ಖಾಸಗಿ ಆಸ್ಪತ್ರೆ ಇವೆ. ಸರ್ಕಾರಿ ಆಸ್ಪತ್ರೆಗಳು ಆಯುಷ್ಮಾನ್‌ ನೋಂದಣಿ ಮಾಡಿವೆ. 26 ಖಾಸಗಿ ಆಸ್ಪತ್ರೆ ಪೈಕಿ ಚಿಕ್ಕಮಗಳೂರಿನ ಆಶ್ರಯ, ಕೆಆರ್‌ಎಸ್‌, ಕಡೂರಿನ ಮಧು ಆರ್ಥೋಪಿಡಿಕ್, ಬಾಲಾಜಿ ಸೇರಿದಂತೆ ಆರು ಪ್ರಮುಖ ಆಸ್ಪತ್ರೆ ಮಾತ್ರ ನೋಂದಣಿ ಮಾಡಿದ್ದು, ಎಬಿಆರ್‌ಕೆಯಡಿ ಶಿಫಾರಸು ಮಾಡಿದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿವೆ. ಆದರೆ. ಉಳಿದ ಆಸ್ಪತ್ರೆ ಗಳು ನೋಂದಣಿ ಮಾಡಿಲ್ಲ ಎಂದು ಮಾಹಿತಿ ನೀಡಿದರು. ಈ ಬಗ್ಗೆ ಪರಿಶೀಲನೆ ನಡೆಸಿ 10 ಹಾಸಿಗೆಗಿಂತ ಹೆಚ್ಚಿರುವ ಆಸ್ಪತ್ರೆಗಳಿಗೆ ನೋಟಿಸ್‌ ಜಾರಿಗೊಳಿಸಿ ನೋಂದಣಿ ಮಾಡಲು ಸೂಚಿಸಲಾಗುವುದು ಎಂದು ತಿಳಿಸಿದರು.

ಇಎಸ್‌ಐ ಶಿಫಾರಸ್ಸಿಗೆ ಪರದಾಟ: ವಿಧಾನಪರಿಷತ್ತು ಸದಸ್ಯ ಡಾ. ಧನಂಜಯ್‌ ಸರ್ಜಿ ಮಾತನಾಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 8,600ಕ್ಕೂ ಅಧಿಕ ಇಎಸ್‌ಐ ಫಲಾನುಭವಿ ಕುಟುಂಬಗಳಿವೆ. ಈ ಕುಟುಂಬಗಳ ಸದಸ್ಯರು ಆಸ್ಪತ್ರೆಗೆ ಚಿಕಿತ್ಸೆಗಾಗಿ ಇಎಸ್‌ಐ ಅಧಿಕಾರಿಗಳಿಂದ ಶಿಫಾರಸು ಪಡೆಯಲು ದಾವಣಗೆರೆ, ಶಿವಮೊಗ್ಗ ಅಥವಾ ಮೈಸೂರಿಗೆ ಹೋಗಬೇಕಾದ ಪರಿಸ್ಥಿತಿ ಇದೆ ಎಂದು ಸಭೆ ಗಮನಕ್ಕೆ ತಂದರು.

ಈ ಬಗ್ಗೆ ಇಎಸ್‌ಐ ಆಯುಕ್ತರು ಸೇರಿದಂತೆ ಮೊದಲಾದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಕೇಂದ್ರ ಸರ್ಕಾರ ಅನು ಮತಿ ನೀಡಬೇಕಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕಿಂದು ಕೋಟ ಶ್ರೀನಿವಾಸ್‌ ಪೂಜಾರಿಗೆ ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಸಂಸದರು ಸೆ.14 ರಂದು ಈ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಆನ್‌ಲೈನ್‌ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳೋಣ ಎಂದರು.------- ಬಾಕ್ಸ್‌--

ಮೂಡಿಗೆರೆ- ಮೂಗುತಿಹಳ್ಳಿ ಕಾಮಗಾರಿಗೆ ಸೆ.16 ಗಡುವುಮೂಡಿಗೆರೆಯಿಂದ ಮೂಗುತಿಹಳ್ಳಿವರೆಗೆ ರಾ.ಹೆ. ಕಾಮಗಾರಿಯನ್ನು ಸೆ.16ಕ್ಕೆ ಆರಂಭಿಸ ಬೇಕೆಂದು ದಿಶಾ ಸಭೆಯಲ್ಲಿ ಜಿಲ್ಲಾಡಳಿತ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಬಾಕಿ ಇರುವ ಕಾರ್ಯ ಸೆ.15ರ ಒಳಗೆ ಪೂರ್ಣಗೊಳಿಸಲು ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ನಿರ್ದೇಶಿಸಿದ್ದು ದಾಖಲಾತಿ ನೀಡಿದ ಸಂತ್ರಸ್ತರಿಗೆ ಬ್ಯಾಂಕ್‌ ಖಾತೆಗೆ ಪರಿಹಾರದ ಹಣ ಪಾವತಿಸಿ, ದಾಖಲಾತಿ ನೀಡದವರ ಪರಿಹಾರದ ಹಣ ನ್ಯಾಯಾಲಯಕ್ಕೆ ಠೇವಣಿ ಮಾಡಿ ಹೆದ್ದಾರಿ ಪ್ರಾಧಿಕಾರದಿಂದ ಕಾಮಗಾರಿ ಶುರು ಮಾಡಿ ಎಂದು ಕೋಟ ಶ್ರೀನಿವಾಸ್‌ ಪೂಜಾರಿ ಸೂಚಿಸಿದರು.

ಹ್ಯಾಂಡ್‌ ಪೋಸ್ಟ್‌ನಿಂದ ಕಾಮಗಾರಿ ಮಾಡಿ: ನಯನಾಭೂಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸಿ ವಿಳಂಬ ಸಹಿಸುವುದಿಲ್ಲ. ಮೂಡಿಗೆರೆ ಹ್ಯಾಂಡ್‌ ಪೋಸ್ಟ್‌ ಕಡೆಯಿಂದ ಕಾಮಗಾರಿಗೆ ಆರಂಭಿಸಬೇಕೆಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಒತ್ತಾಯಿಸಿದರು.

ಬೇಲೂರು- ಚಿಕ್ಕಮಗಳೂರು ಹೆದ್ದಾರಿ ಸಭೆ ಸೆ.10ಕ್ಕೆ: ಬೇಲೂರು- ಚಿಕ್ಕಮಗಳೂರು ಹೆದ್ದಾರಿ ಅಭಿವೃದ್ಧಿ ಯೋಜನೆ ಅಲೈನ್‌ ಮೆಂಟ್‌ ಸರಿ ಇಲ್ಲ ಎಂಬ ಕಾರಣಕ್ಕೆ ವಿಳಂಬ ವಾಗುತ್ತಿದೆ ಎಂದು ಶಾಸಕ ತಮ್ಮಯ್ಯ ಆರೋಪಿಸಿದರು.ರಸ್ತೆ ಅಗಲೀಕರಣ ಸಂಬಂಧ ತಪ್ಪು ಮಾಹಿತಿ ನೀಡಿ ಅಲೈನ್‌ ಮೆಂಟ್‌ ಸರಿ ಇಲ್ಲ ಎಂಬ ತಮ್ಮಿಂದ (ಕೋಟಾ ಶ್ರೀನಿವಾಸ್‌ ಪೂಜಾರಿ) ಕೇಂದ್ರ ಸರ್ಕಾರಕ್ಕೆ ಪತ್ರ ಬರೆಸಲಾಗಿದೆ. ಅಲೈನ್‌ಮೆಂಟ್‌ ಬದಲಾವಣೆ ಮಾಡಿ ಯಾವುದೇ ತೊಂದರೆ ಇಲ್ಲ. ಆದರೆ, ತ್ವರಿತ ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಕೋಟಾ ಶ್ರೀನಿವಾಸ್‌ ಪೂಜಾರಿ ಸೆ.10 ರಂದು ಇದರ ಸಭೆ ನಡೆಸುವುದಾಗಿ ತಿಳಿಸಿದರು.2023ದಲ್ಲಿ ಡಿಪಿಆರ್‌ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಕೆ ಮಾಡಲಾಗಿತ್ತು. ಇತ್ತೀಚಿಗೆ ಪುನರ್‌ ಪರಿಶೀಲನಾ ವರದಿ ಸಲ್ಲಿಸ ಲಾಗಿದೆ. ಆದರೆ ಯಾವುದೇ ಅನುಮೋದನೆ ಸಿಕ್ಕಿಲ್ಲ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಭೆ ಗಮನಕ್ಕೆ ತಂದರು.

ಹೆಚ್ಚಿನ ಪರಿಹಾರ ಕೊಟ್ಟು ಭೂಸ್ವಾಧೀನ ಮಾಡಿ: ತಮ್ಮಯ್ಯ

ಚಿಕ್ಕಮಗಳೂರು ಬೈಪಾಸ್‌ ರಸ್ತೆ ಚಿಕ್ಕಕುರುಬರ ಹಳ್ಳಿಯಲ್ಲಿ ಹೆದ್ದಾರಿ ಆಗಲೀಕರಣಕ್ಕೆ ಸುಮಾರು 9 ಕುಟುಂಬ ಜಾಗ ಬಿಟ್ಟು ಕೊಡದೇ ಕೋರ್ಟ್‌ ಮೊರೆ ಹೋಗಿವೆ. ಸ್ವಲ್ಪ ಹೆಚ್ಚಿನ ಪ್ರಮಾಣದ ಪರಿಹಾರ ನೀಡಿ ಅವರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಕಾಮಗಾರಿ ನಡೆಸಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.

---ಬಾಕ್ಸ್‌---ಪಿಡಬ್ಲ್ಯೂಡಿಯಿಂದ ಕಳಪೆ ಕಾಮಗಾರಿ

ಮಳೆಗಾಲ ಆರಂಭಕ್ಕೂ ಮುನ್ನ ಲೋಕೋಪಯೋಗಿ ಇಲಾಖೆ ದುರಸ್ತಿ ಕಾಮಗಾರಿ ನಡೆಸಿದ ರಸ್ತೆಗಳಲ್ಲಿ ಮತ್ತೆ ಗುಂಡಿ ನಿರ್ಮಾಣವಾಗಿವೆ ಎಂದು ವಿಧಾನ ಪರಿಷತ್ತು ಸದಸ್ಯೆ ಗಾಯತ್ರಿ ಶಾಂತೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಶೃಂಗೇರಿ- ಚಿಕ್ಕಮಗಳೂರಿನ ರಸ್ತೆ ದುರಸ್ತಿ ಕಾಮಗಾರಿ ಕಳೆದ 6 ತಿಂಗಳ ಹಿಂದೆಯಷ್ಟೇ ಮಾಡಲಾಗಿದೆ. ಹೆಚ್ಚಿನ ಮಳೆ ಬಂದಿಲ್ಲ. ಆದರೂ ರಸ್ತೆಯಲ್ಲಿ ಮತ್ತೆ ಗುಂಡಿ ಬಿದ್ದಿವೆ ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ದಿನೇಶ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದೇ ವೇಳೆ ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಗೆ ರಾಜ್ಯ ಸರ್ಕಾರದ ಅಧಿಕಾರಿಗಳು ಭಾಗ ವಹಿಸದಿರುವ ಬಗ್ಗೆಯೂ ಅಸಮಾಧಾನ ಗೊಂಡು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಡಿಸಿಗೆ ಸೂಚಿಸಿದರು.

---ಬಾಕ್ಸ್‌---ಕಾಮಗಾರಿ ಗುಂಡಿಗೆ ಬಿದ್ದು ಕೈ ಮುರಿತ

ಅಜ್ಜಂಪುರ ವ್ಯಾಪ್ತಿಯ ಅಮೃತ್‌ ಯೋಜನೆ ಕಾಮಗಾರಿ ಮಾಡಿ ಸರಿಯಾಗಿ ಗುಂಡಿ ಮುಚ್ಚಿಲ್ಲ. ಈ ಗುಂಡಿಯಲ್ಲಿ ಬಿದ್ದು ಕೈ ಮುರಿದಿದೆ ಎಂದು ಅಜ್ಜಂಪುರ ಪಪಂ ಅಧ್ಯಕ್ಷ ರೇವಣ್ಣ ಸಭೆ ಗಮನಕ್ಕೆ ತಂದರು. ಗುಂಡಿ ಮುಚ್ಚುವಂತೆ ಹಲವು ಬಾರಿ ಅಧಿಕಾರಿಗಳಿಗೆ ಫೋನ್‌ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.-- ಬಾಕ್ಸ್‌ --ಕೇಂದ್ರದಿಂದ ಅನುದಾನ ಬಂದಿಲ್ಲ: ಅಸಮಾಧಾನ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಕೈಗೊಳ್ಳುವ ಜೆಜೆಎಂ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಕಳೆದ 2 ವರ್ಷದಿಂದ ಕೇಂದ್ರ ಸರ್ಕಾರ ಅನುದಾನ ನೀಡಿಲ್ಲ ಎಂದು ಶಾಸಕ ಎಚ್‌.ಡಿ.ತಮ್ಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಹಣ ನೀಡದೇ ಪ್ರಗತಿ ಪರಿಶೀಲನೆ ಸಭೆ ಮಾಡುವುದರಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಇದೇ ವೇಳೆ ಗ್ರಾಪಂ ಅಧಿಕಾರಾವಧಿ ಇದೀಗ ಮುಕ್ತಾಯಗೊಂಡಿದೆ. ಆದರೆ, ಕೇಂದ್ರ ಸರ್ಕಾರ ಕಳೆದ 2 ಸಾಲಿನಿಂದ 15ನೇ ಹಣಕಾಸು ಆಯೋಗದ ಅನುದಾನ ನೀಡಿಲ್ಲ ಎಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಪ್ರಶ್ನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಬುರಗಿ ಬರಪೀಡಿತ ಘೋಷಣೆಗೆ ಆಗ್ರಹಿಸಿ ಪ್ರತಿಭಟನೆ
ಡಾ. ಅಪ್ಪಾಜಿ ಪುಣ್ಯಸ್ಮರಣೆ: ಭಾವಪೂರ್ಣ ನುಡಿನಮನ