ಐಟಿ-ಬಿಟಿ ತರ್ತೀನಿ, ಉಚಿತ ಸೇವೆ ಆಸ್ಪತ್ರೆ ಕಟ್ತೀವಿ: ಎಸ್ಸೆಸ್ಸೆಂ

KannadaprabhaNewsNetwork |  
Published : Sep 23, 2025, 01:03 AM IST

ಸಾರಾಂಶ

ಮಧ್ಯ ಕರ್ನಾಟಕದ ಜನರು, ವಿಶೇಷವಾಗಿ ಯುವಜನರ ಬಹು ದಶಕಗಳ ಬೇಡಿಕೆಯಾದ ಐಟಿ-ಬಿಟಿ ಕಂಪನಿಗಳನ್ನು ಶೀಘ್ರವೇ ತರುವ ಜೊತೆಗೆ ಬಡವರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ಆಸ್ಪತ್ರೆ ನಿರ್ಮಿಸುವುದಾಗಿ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಭರವಸೆ ನೀಡಿದ್ದಾರೆ.

- ಎಸ್ಸೆಸ್ಸೆಂ ಅಭಿಮಾನಿ ಬಳಗದಿಂದ ನಡೆದ ಸಚಿವರ 58ನೇ ವರ್ಷದ ಜನ್ಮದಿನ ಕಾರ್ಯಕ್ರಮ । - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಧ್ಯ ಕರ್ನಾಟಕದ ಜನರು, ವಿಶೇಷವಾಗಿ ಯುವಜನರ ಬಹು ದಶಕಗಳ ಬೇಡಿಕೆಯಾದ ಐಟಿ-ಬಿಟಿ ಕಂಪನಿಗಳನ್ನು ಶೀಘ್ರವೇ ತರುವ ಜೊತೆಗೆ ಬಡವರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ಆಸ್ಪತ್ರೆ ನಿರ್ಮಿಸುವುದಾಗಿ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಭರವಸೆ ನೀಡಿದರು.

ನಗರದ ಬಾಪೂಜಿ ಸಮುದಾಯ ಭವನದಲ್ಲಿ ಸೋಮವಾರ ಎಸ್ಸೆಸ್ಸೆಂ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ತಮ್ಮ 58ನೇ ವರ್ಷದ ಜನ್ಮದಿನಾಚರಣೆಯಲ್ಲಿ ಸನ್ಮಾನಿತ ಸ್ವೀಕರಿಸಿ ಅವರು ಮಾತನಾಡಿದರು. ಲೋಕಸಭೆ ಚುನಾವಣೆ ವೇಳೆ ಡಾ.ಪ್ರಭಾ ಮಲ್ಲಿಕಾರ್ಜುನ ಮತಯಾಚಿಸುವಾಗ ಯುವಜನರು ಐಟಿ-ಬಿಟಿ ತರುವಂತೆ ಒಕ್ಕೊರಲ ಬೇಡಿಕೆ ಇಟ್ಟಿದ್ದರು. ತಾವು ಗೆದ್ದರೆ ಐಟಿ, ಬಿಟಿ ತರುವುದಾಗಿ ಡಾ.ಪ್ರಭಾ ಮಾತು ಕೊಟ್ಟಿದ್ದರು ಎಂದರು.

ತಮ್ಮ ಕ್ಷೇತ್ರದಲ್ಲಿ ಐಟಿ-ಬಿಟಿ ಕಂಪನಿಗಳ ಸ್ಥಾಪಿಸುವ ಬಗ್ಗೆ ಸದನದಲ್ಲಿ ಸಂಸದೆ ಡಾ.ಪ್ರಭಾ ಮಾತನಾಡಿದ ನಂತರ ಇಲ್ಲಿ ಐಟಿ, ಬಿಟಿ ಕಂಪನಿ ಆರಂಭಕ್ಕೆ ಅನೇಕ ಉದ್ಯಮಿಗಳು, ಕಂಪನಿಗಳು ಆಸಕ್ತಿ ತೋರಿ, ಮುಂದೆ ಬಂದಿವೆ. ಶೀಘ್ರದಲ್ಲೇ ಜಾಗ, ಮೂಲಸೌಕರ್ಯ ಕಲ್ಪಿಸುವ ಜೊತೆಗೆ ನಮ್ಮ ಜಿಲ್ಲೆಯಲ್ಲಿ ಎಂಜಿನಿಯರಿಂಗ್ ಮಾಡಿದವರಿಗೆ ಸ್ಥಳೀಯವಾಗಿಯೇ ಉದ್ಯೋಗ ಕಲ್ಪಿಸಲು ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಪ್ರತಿಭಾ ಪಲಾಯನ ತಡೆಯುವುದು, ನಮ್ಮ ಯುವಜನರಿಗೆ ಜಿಲ್ಲೆಯಲ್ಲೇ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸಂಸದೆ ಡಾ.ಪ್ರಭಾ ನಿರಂತರ ಪ್ರಯತ್ನಶೀಲರಾಗಿದ್ದಾರೆ. ಎಸ್‌.ಎಸ್‌. ಕೇರ್ ಟ್ರಸ್ಟ್‌ನಿಂದ ಉಚಿತ ಡಯಾಲಿಸಿಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಬಾಪೂಜಿ ವಿದ್ಯಾಸಂಸ್ಥೆ ಹಾಗೂ ಸರ್ಕಾರ ಜಂಟಿಯಾಗಿ ಆಸ್ಪತ್ರೆ ಆರಂಭಿಸಿ, ಆರ್ಥಿಕವಾಗಿ ಶಕ್ತರಿಲ್ಲದವರಿಗೆ ಉಚಿತ ಚಿಕಿತ್ಸೆ ನೀಡುವ ಕಾರ್ಯವನ್ನೂ ಕೈಗೊಳ್ಳುತ್ತೇವೆ ಎಂದು ಘೋಷಿಸಿದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ನನಗೆ ಎಸ್‌.ಎಸ್‌. ಮಲ್ಲಿಕಾರ್ಜುನ ಅವರೇ ಪ್ರೇರಣೆ. ಇದೇ ಕಾರಣಕ್ಕೆ ನಾನಿಂದು ಸಂಸದೆಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಅಧಿಕಾರ ಇರಲಿ, ಇಲ್ಲದಿರಲಿ ಎಸ್‌ಎಸ್ಎಸ್‌ ಅವರದು ಎಂದೆಂದಿಗೂ ಜನಾನುರಾಗಿ ವ್ಯಕ್ತಿತ್ವ. ಅವರಲ್ಲೊಬ್ಬ ಕಾಯಕ ಯೋಗಿ, ಬದ್ಧತೆ ಇರುವ ಗುಣವಿದೆ. ಕೋವಿಡ್ ಸಂಕಷ್ಟ ವೇಳೆ ಲಸಿಕೆ ತರಿಸಿ, ಸಾವಿರಾರು ಜನರ ಜೀವ ಕಾಪಾಡಿದರು. ಜಿಲ್ಲಾ ಕೇಂದ್ರದಲ್ಲಿ ನೀರಿಗೆ ಸಮಸ್ಯೆ ಆಗದಂತೆ ದೂರದೃಷ್ಟಿಯಿಂದ ಕೈಗೊಂಡ ಕುಂದುವಾಡ ಕೆರೆಗೆ ಕಾಯಕಲ್ಪ ನೀಡಿದ್ದು ಸಾಕ್ಷಿಯಾಗಿವೆ ಎಂದರು.

ಬಸವಣ್ಣನವರ ಸಮಸಮಾಜದ ಕನಸಿಗೆ ಒತ್ತು ನೀಡಿ, ಎಲ್ಲರನ್ನೂ ಸಮಾನವಾಗಿ ಕಾಣುವಂಥವರು ಮಲ್ಲಿಕಾರ್ಜುನ. ನಮ್ಮ ಜಿಲ್ಲೆಯ ಯುವಜನರ ನಿರೀಕ್ಷೆಯಂತೆ ಐಟಿ, ಬಿಟಿಯನ್ನು ತಂದೇ ತರುತ್ತೇವೆ. ಕೇಂದ್ರದ ಎಸ್‌ಟಿಪಿಆರ್‌ಐ ಜೊತೆಗೆ ಚರ್ಚೆ ನಡೆದಿದೆ. ಶೀಘ್ರದಲ್ಲೇ ಐಟಿ, ಬಿಟಿ ಕಂಪನಿಯನ್ನು ದಾವಣಗೆರೆಯಲ್ಲಿ ಕಾರ್ಯಾರಂಭ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಶಾಸಕರಾದ ಬಿ.ದೇವೇಂದ್ರಪ್ಪ, ಲತಾ ಮಲ್ಲಿಕಾರ್ಜುನ, ಮಾಜಿ ಶಾಸಕ ಎಸ್.ರಾಮಪ್ಪ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಗ್ಯಾರಂಟಿ ಯೋಜನೆ ಜಿಲ್ಲಾ ಅನುಷ್ಟಾನ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ, ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಬಕ್ಕಪ್ಪ, ಉಪಾಧ್ಯಕ್ಷ ಕುಮಾರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ, ಮಾಜಿ ಮೇಯರ್‌ಗಳಾದ ಕೆ.ಚಮನ್‌ ಸಾಬ್, ಅನಿತಾಬಾಯಿ ಮಾಲತೇಶ, ಬಳಗದ ಮುದೇಗೌಡ್ರ ಗಿರೀಶ, ಬಿ.ಕೆ.ಪರಶುರಾಮ ಮಾಗಾನಹಳ್ಳಿ, ಜಿ.ಎಸ್.ಮಂಜುನಾಥ ಗಡಿಗುಡಾಳ, ಎಸ್.ಮಲ್ಲಿಕಾರ್ಜುನ, ಎ.ನಾಗರಾಜ, ಡಿ.ವಿ.ಮಲ್ಲಿಕಾರ್ಜುನ ಸ್ವಾಮಿ, ನಂದಿಗಾವಿ ಶ್ರೀನಿವಾಸ ಇತರರು ಇದ್ದರು.

‘ಜೈ ಜೈ ಮಲ್ಲಣ್ಣ’ ಹಾಡಿಗೆ ಸಿದ್ದಗಂಗಾ ಶಾಲೆ ಮಕ್ಕಳು ಆಕರ್ಷಕ ನೃತ್ಯ ಪ್ರದರ್ಶಿಸಿದರು. ಅನಂತರ ಮಕ್ಕಳಿಗೆ ಎಸ್‌.ಎಸ್‌. ಮಲ್ಲಿಕಾರ್ಜುನ, ಡಾ.ಪ್ರಭಾ ದಂಪತಿ ನೆನಪಿನ ಕಾಣಿಕೆ ನೀಡಿದರು. ಹಾಡು-ನೃತ್ಯಕ್ಕೆ ಅನುಗುಣವಾಗಿ ವೇದಿಕೆಯಲ್ಲಿ ಮೂವರು ವಿದ್ಯಾರ್ಥಿಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು (ಮೈಂಡ್‌ಫುಲ್‌ ಡ್ರಾಯಿಂಗ್) ಎಸ್.ಎಸ್. ಮಲ್ಲಿಕಾರ್ಜುನ ಅವರ ಚಿತ್ರ ಬಿಡಿಸಿದರು. ಇದಕ್ಕೆ ಮನಸೋತ ಸಚಿವರ ಅಭಿಮಾನಿಗಳು ವೇದಿಕೆ ಮುಂಭಾಗಕ್ಕೆ ಧಾವಿಸಿ ಹೆಜ್ಜೆ ಹಾಕಿದರು. ಸಂಜೆ ರಸಮಂಜರಿ ಕಾರ್ಯಕ್ರಮ ನಡೆಯಿತು.

- - -

ಮಾಜಿ ಸಂಸದರಿಗೆ ಕಾಮನ್‌ಸೆನ್ಸೇ ಇಲ್ಲ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕೆಂದರೆ ಮೊದಲು ಇಚ್ಛಾಶಕ್ತಿ ಬೇಕು. ಆದರೆ, ಮಾಜಿ ಸಂಸದರಿಗೆ ಪ್ರಜ್ಞೆ ಇರಲಿಲ್ಲ ಎಂಬುದಕ್ಕೆ ಡಿಸಿಎಂ ಮೇಲ್ಸೇತುವೆಯೇ ಸಾಕ್ಷಿ. ತಾನು ಎಂಜಿನಿಯರ್ ಅಲ್ಲ ಎನ್ನುತ್ತಾರೆ. ಅದಕ್ಕೆ, ಎಂಜಿನಿಯರೇ ಆಗಬೇಕಿಲ್ಲ ಕಾಮನ್ ಸೆನ್ಸ್ ಇದ್ದರೆ ಸಾಕು. ಕುಳಿತು ಮಾತನಾಡಿ ಪ್ಲಾನ್ ಮಾಡಿದರೆ ಎಲ್ಲವೂ ಸರಿಯಾಗುತ್ತದೆ. ಆಗ ಹಿಂದಿನ ಸಂಸದರಿಗೆ ಸಮಯವೇ ಇರಲಿಲ್ಲ ಎನಿಸುತ್ತದೆ. ಇಂತಹ ಸಂಸದನ ಚೇಲಾಗಳು ನಮಗೆ ಮಾತಾಡುತ್ತಾರೆ. ಅಂತಹದ್ದಕ್ಕೆಲ್ಲಾ ನಾವು ಪ್ರತಿಕ್ರಿಯಿಸಲು ಹೋಗಲ್ಲ ಎಂದು ಸಚಿವ ಎಸ್‌.ಎಸ್‌.ಎಂ. ತಮ್ಮ ಬದ್ಧ ಎದುರಾಳಿ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಮತ್ತು ಟೀಂಗೆ ಮಾತಿನಲ್ಲೇ ಕುಟುಕಿದರು.

- - -

(ಕೋಟ್‌) ಜಿಲ್ಲೆಯ ಎಲ್ಲ ಜಾತಿ, ಧರ್ಮ, ಬಡವ-ಬಲ್ಲಿದರೂ ನನಗೆ ಆಶೀರ್ವದಿಸಿದ್ದರಿಂದಲೇ ದಾವಣಗೆರೆ ಉತ್ತರ ಕ್ಷೇತ್ರದಿಂದ ಗೆದ್ದು, ಸಚಿವನಾಗಿ ನಿಮ್ಮ ಮುಂದಿದ್ದೇನೆ. ಸುಮಾರು 15 ಸಾವಿರ ಆಶ್ರಯ ಮನೆಗಳನ್ನು ಹಿಂದೆ ಕಟ್ಟಿದ್ದು, ಈಗ ಅವುಗಳ ಬೆಲೆ ಸುಮಾರು ₹20 ಲಕ್ಷಗಳನ್ನೂ ಮೀರಿದೆ. ಅಂತಹ ಮನೆಗಳನ್ನು ಮಾರಿಕೊಂಡು ಅನೇಕ ಬಡವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದು, ಮದುವೆ ಮಾಡುವುದನ್ನೆಲ್ಲಾ ಮಾಡಿದ್ದಾರೆ. ಇದಕ್ಕಿಂತ ಇನ್ನೇನು ಬೇಕು? ನಿಮ್ಮ ಬೆಂಬಲ ಇರುವುದರಿಂದಲೇ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಮುಂದೆಯೂ ನಿಮ್ಮೆಲ್ಲರ ಪ್ರೀತಿ, ಸಹಕಾರ ಸಿಗುತ್ತದೆಂದು ನಂಬಿದ್ದೇನೆ.

- ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲಾ ಸಚಿವ.

- - -

(ಟಾಪ್‌ ಕೋಟ್‌) ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಮಳೆ ಕೊರತೆಯಾಗುತ್ತದೆ, ರೈತರಿಗೆ ತೊಂದರೆ ಆಗುತ್ತದೆಂದು ವಿಪಕ್ಷ ಬಿಜೆಪಿಯವರು ಆಪಾದಿಸುತ್ತಾರೆ. ಆದರೆ, ಮಲ್ಲಿಕಾರ್ಜುನ ಅವರು ಹಿಂದೆ ಅನಾವೃಷ್ಟಿ ಆಗಿದ್ದಾಗ ಮೋಡ ಬಿತ್ತನೆ ಮಾಡಿ, ಮಳೆ ಬರಿಸಲು ಕ್ರಮ ವಹಿಸಿದ್ದರು. ಕಾಂಗ್ರೆಸ್ ಆಳ್ವಿಕೆಯಲ್ಲೇ ಈ ವರ್ಷ ಯಥೇಚ್ಛ ಮಳೆಯಾಗಿದ್ದು, ರೈತರಿಗೆ ನಿರೀಕ್ಷೆಗಿಂತ ಹೆಚ್ಚಿನ ಫಸಲು ಕೈಸೇರಿ ಸಂತಸವಾಗಿದ್ದಾರೆ. - ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ.

- - -

-(ಫೋಟೋ ಬರಲಿವೆ).

PREV

Recommended Stories

ರಾಜ್ಯದ ಎಲ್ಲ ಹನುಮಂತ ದೇವಸ್ಥಾನಗಳಲ್ಲಿ ಹನುಮಾನ ಚಾಲೀಸಾ ಪಠಣ: ದತ್ತಾವಧೂತ ಗುರು
ಪತ್ರಕರ್ತರ ಸಂಘದ ಚುನಾವಣೆ: 25 ಸ್ಥಾನಗಳಿಗೆ ಆಯ್ಕೆ