ವಿರಾಜಪೇಟೆ: ಕಾರ್ಗಿಲ್ ಯುದ್ಧದಲ್ಲಿ ದೇಶದ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರ ತ್ಯಾಗ ಮತ್ತು ಶೌರ್ಯವನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ವಿರಾಜಪೇಟೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಹೇಳಿದರು.
ಕಾರ್ಗಿಲ್‌ನ ಹಿಮಾವೃತ ಪರ್ವತ ಪ್ರದೇಶದಲ್ಲಿ ತೀವ್ರ ಚಳಿ ಮತ್ತು ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಭಾರತೀಯ ಯೋಧರು ದೇಶ ಸೇವೆಯನ್ನು ತಮ್ಮ ಪರಮ ಕರ್ತವ್ಯ ಎಂದು ಭಾವಿಸಿ ಶೌರ್ಯದಿಂದ ಹೋರಾಡಿದರು. ಪಾಕಿಸ್ತಾನದ ಕುತಂತ್ರವನ್ನು ವಿಫಲಗೊಳಿಸಿ, ಅಕ್ರಮವಾಗಿ ವಶಪಡಿಸಿಕೊಂಡಿದ್ದ ಭಾರತದ ಭೂ ಭಾಗವನ್ನು ಮರಳಿ ಪಡೆದು ದೇಶಕ್ಕೆ ವಿಜಯ ತಂದು ಕೊಟ್ಟ ದಿನವನ್ನು ನಾವು ಹೆಮ್ಮೆಯಿಂದ ಸ್ಮರಿಸುತ್ತಿದ್ದೇವೆ ಎಂದರು.ಕ್ಯಾಪ್ಟನ್ ವಿಕ್ರಂ ಬಾತ್ರ ಸೇರಿದಂತೆ ಅನೇಕ ವೀರ ಯೋಧರ ಸಾಹಸ, ತ್ಯಾಗ ಮತ್ತು ದೇಶಭಕ್ತಿಗೆ ಸದಾ ಋಣಿಯಾಗಿದ್ದು, ಅವರ ಶೌರ್ಯಗಾಥೆ ಯುವ ಪೀಳಿಗೆಗೆ ಸ್ಫೂರ್ತಿಯಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿರಾಜಪೇಟೆ ತಹಸೀಲ್ದಾರ್ ಪ್ರವೀಣ್ ಅವರು ಯೋಧರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ಗೌರವ ನಮನ ಸಲ್ಲಿಸಿದರು.ಇದೇ ಸಂದರ್ಭ ವಿರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್, ಹೆಗ್ಗಡೆ ಸಮಾಜದ ಹಿರಿಯರಾದ ಪಡಿಞರಂಡ ಅಯ್ಯಪ್ಪ, ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಪೌಲ್ ಕ್ಷೇವಿಯರ್, ಪ್ರಸನ್ನ ಹಾಗೂ ಪುಟ್ಟಿಚಂಡ ನರೇಶ್, ಹಿಂದೂ ಜಾಗರಣ ವೇದಿಕೆ ತಾಲೂಕು ಘಟಕದ ಪ್ರಮುಖರು, ಜೈ ಭಾರತ್ ಅಕಾಡೆಮಿ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ, ವಿರಾಜಪೇಟೆ ಆಟೋ ಚಾಲಕರ ಸಂಘ, ಪುರಸಭೆ ಮುಖ್ಯಾಧಿಕಾರಿ ನಾಚಪ್ಪ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು.