ಚಾಮರಾಜನಗರ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಭಾಗ ಹಾಗೂ ಕನ್ನಡ ಸಾಹಿತ್ಯ ಅಕಾಡೆಮಿ ಮತ್ತು ಚಕೋರ ಸಾಹಿತ್ಯ ವಿಚಾರ ವೇದಿಕೆ ವತಿಯಿಂದ ಬೂಕರ್ ಪ್ರಶಸ್ತಿ ವಿಜೇತ ಭಾನು ಮುಸ್ತಾಕ್ ಅವರ ಕಥೆಗಳ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಚಾಮರಾಜನಗರ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಭಾಗ ಹಾಗೂ ಕನ್ನಡ ಸಾಹಿತ್ಯ ಅಕಾಡೆಮಿ ಮತ್ತು ಚಕೋರ ಸಾಹಿತ್ಯ ವಿಚಾರ ವೇದಿಕೆ ವತಿಯಿಂದ ಬೂಕರ್ ಪ್ರಶಸ್ತಿ ವಿಜೇತ ಭಾನು ಮುಸ್ತಾಕ್ ಅವರ ಕಥೆಗಳ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಪ್ರೊ. ಕೃಷ್ಣಮೂರ್ತಿ ಹನೂರು ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಅದರಲ್ಲೂ ಮುಸ್ಲಿಂ ಸಂವೇದನೆಯ ಕತೆಗಾರ್ತಿ ಭಾನು ಮುಸ್ತಾಕ್ ಹಾಗೂ ಅನುವಾದಕಿ ದೀಪ ಭಾಸ್ತಿ ಅವರಿಗೆ ಬೂಕರ್ ಪ್ರಶಸ್ತಿ ಬಂದಿರುವುದು ಹೆಮ್ಮೆಯ ಸಂಗತಿ. ಸಾಹಿತ್ಯದಲ್ಲಿ ಬೇರೆ ಬೇರೆ ಆಯಾಮಗಳನ್ನು ಹುಡುಕುವುದು ತರವಲ್ಲ, ಪ್ರತಿ ಸಾಹಿತ್ಯ ಮಾನವ ಸಂವೇದನೆಯನ್ನು ಒಳಗೊಂಡಿರುವ ಸಾಹಿತ್ಯವಾಗಿರುತ್ತದೆ ಎಂದರು.ಬೂಕರ್ ಪ್ರಶಸ್ತಿ ಜಗತ್ತಿನ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾಗಿದ್ದು, ಸಾಹಿತ್ಯ ಕೃತಿಗೆ ನೀಡುವ ಪ್ರಶಸ್ತಿಯಾಗಿದೆ. ಕನ್ನಡದ ಸಂಸ್ಕೃತಿ ಪರಂಪರೆ ಹಾಗೂ ಈ ನೆಲದ ಭಾಷೆಯನ್ನ ಆಂಗ್ಲ ಭಾಷೆಗೆ ಅನುವಾದ ಮಾಡುವುದು ಸವಾಲಿನ ಕೆಲಸವಾಗಿದೆ. ಇಷ್ಟಾಗಿಯೂ ದೀಪಾ ಬಾಸ್ತಿ ಅವರು ಭಾನು ಮುಸ್ತಾಕ್ ಅವರ ಕಥೆಗಳನ್ನು ಎದೆಯ ಹಣತೆ ಎಂದು ಅನುವಾದ ಮಾಡಿ ಕನ್ನಡಕ್ಕೆ ಭೂಕರ್ ಪ್ರಶಸ್ತಿ ಬರಲು ಕಾರಣರಾಗಿದ್ದಾರೆ. ಅವರ ಈ ಕಾರ್ಯ ಮೆಚ್ಚುವಂತಹದ್ದು ಎಂದು ತಿಳಿಸಿದರು.ವಿಶೇಷ ಉಪನ್ಯಾಸ ನೀಡಿದ ಡಾ. ತ್ರಿವೇಣಿ ಅವರು ಪುರುಷನಿಷ್ಠ ಪರಂಪರೆ ಹಾಗೂ ಸಂಸ್ಕೃತಿಯ ಹಿನ್ನೆಲೆ ಇರುವ ಭಾರತದಲ್ಲಿ ಹೆಣ್ಣಿನ ಸಂವೇದನೆಯನ್ನು ಸೂಕ್ಷ್ಮವಾಗಿ ಗ್ರಹಿಸಿ ಅದನ್ನು ತನ್ನದೇ ಅನುಭವವೆಂದು ಪರಿಗಣಿಸಿ ಈ ನೆಲದಲ್ಲಿ ಮಹಿಳೆಯರ ಮೇಲೆ ಆಗುವ ಶೋಷಣೆ ಹಾಗೂ ಲಿಂಗ ಅಸಮಾನತೆಯಂತಹ ಅನ್ಯಾಯಗಳನ್ನ ತಮ್ಮದೇ ಆದ ಸೃಜನಶೀಲ ಹಾಗೂ ಕಲಾತ್ಮಕತೆ ಮೂಲಕ ಅಭಿವ್ಯಕ್ತಪಡಿಸಿ ಮಹಿಳೆಯರ ಧ್ವನಿಯಾಗಿ ಭಾನು ಮುಸ್ತಾಕ್ ನಿಲ್ಲುತ್ತಾರೆ. ಅವರ ಕಥೆಗಳು ಕೇವಲ ಈ ನೆಲದ ವೇದನೆಯಷ್ಟೇ ಆಗಿರದೆ ಇಡೀ ಜಗತ್ತಿನ ಮಹಿಳೆಯರ ರೋಧನೆಯು ಆಗಿದೆ. ಈ ಮಹಿಳಾ ಸಂವೇದನೆಯೂ ಜಾಗತಿಕ ಸಮಸ್ಯೆ ಆಗಿರುವುದರಿಂದ ಜಗತ್ತಿನ ಓದುಗರನ್ನ ಅದು ತಲುಪಿದಂತಿದೆ. ಅವರ ಕಥೆಗಳು ಬೂಕರ್ ಪ್ರಶಸ್ತಿಗೆ ಅರ್ಹವಾಗಿದ್ದು, ಸಾಹಿತ್ಯಕ್ಕೆ ಪ್ರಮುಖವಾಗಿ ಅದರಲ್ಲೂ ಮಹಿಳೆಯರ ಸಾಹಿತ್ಯಕ್ಕೆ ಗೌರವ ಸಿಕ್ಕಂತಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲ ಸಚಿವರಾದ ಲೋಕನಾಥ್ ಅವರು ಸಾಹಿತ್ಯ ಮಾನವೀಯತೆ ಮತ್ತು ಸಮತೆಯನ್ನು ಬಯಸುವ ಅಸ್ತ್ರವಾಗಿದ್ದು, ಸ್ತ್ರೀ ಪುರುಷ ಭೇದವಿಲ್ಲದೆ ಎಲ್ಲರನ್ನೂ ಒಂದಾಗಿಸುವ ಪ್ರಯತ್ನವಾಗಬೇಕು. ಮಹಿಳೆಯರಿಗೆ ಮಾನ್ಯತೆಗಳು ಕಡಿಮೆ ಇರುವ ಸಂದರ್ಭದಲ್ಲಿ ಭಾನು ಮುಸ್ತಾಕ್ ಅವರಂತಹ ಕತೆಗಾರ್ತಿಗೆ ಭೂಕರ್ ಪ್ರಶಸ್ತಿ ದಕ್ಕಿರುವುದು ಜಗತ್ತು ಮಹಿಳೆಯರನ್ನ ಗೌರವಿಸಿದಂತೆ ಆಗಿದೆ ಹಾಗೂ ಭಾರತೀಯ ಪ್ರತಿ ಮಹಿಳಾ ಬರಹಗಾರ್ತಿಯರಿಗೆ ಪ್ರೋತ್ಸಾಹ ನೀಡಿದಂತೆ ಆಗಿದೆ ಎಂದರು.ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಪ್ರಕಾಶ್ ರಾಜ್ ಮೇಹು, ಚಕೋರ ಜಿಲ್ಲಾ ಸದಸ್ಯ ಸಂಚಾಲಕರಾದ ವೆಂಕಟರಾಜು, ಶಿವಸ್ವಾಮಿ, ಸುರೇಶ್, ಕನ್ನಡ ವಿಭಾಗದ ಮುಖ್ಯಸ್ಥರಾದ ಮಹೇಶ್ ಬಾಬು, ಉಪನ್ಯಾಸಕರಾದ ಬಸವಣ್ಣ ಮೂಕಹಳ್ಳಿ, ಗುರುರಾಜು, ರಾಣಿ, ಮಾದೇವಮೂರ್ತಿ, ಜಗದೀಶ್, ಶಿವರಾಜು, ಮಹೇಶ್, ಇತರರು ಕಾರ್ಯಕ್ರಮದಲ್ಲಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.