ಕಾರವಾರ: ಜಾತ್ರೆ ಎಂದರೆ ಪಲ್ಲಕ್ಕಿ ಉತ್ಸವ, ರಥ ಎಳೆಯುವುದು ಇತ್ಯಾದಿ ಕಾರ್ಯಕ್ರಮಗಳು ಸಾಮಾನ್ಯವಾಗಿರುತ್ತದೆ. ಆದರೆ ಇಲ್ಲಿ ಜಾತ್ರೆ ಎಂದರೆ ಬಿಸಿಗಾಳಿ ತುಂಬಿದ ಬಲೂನ್ ಹಾರಿಬಿಡುವುದು ವಿಶೇಷವಾಗಿದೆ.ಸೋಮವಾರ ನಡೆದ ತಾಲೂಕಿನ ಮಾಜಾಳಿಯ ಸಾತೇರಿ ದೇವಿ, ರಾಮನಾಥ ದೇವರ ಜಾತ್ರಾ ಮಹೋತ್ಸವದಲ್ಲಿ ಬಿಸಿಗಾಳಿ ತುಂಬಿದ ಬಲೂನ್‌ನ್ನು ಹಾರಿಬಿಡಲಾಯಿತು.
ಪ್ರತಿವರ್ಷ ಮಾಘ ಕಾರ್ತಿಕ ಮಾಸದಲ್ಲಿ ಈ ಜಾತ್ರೆ ನಡೆಯುತ್ತದೆ. ಜಾತ್ರೆಯ ವಿಶೇಷ ಆಕರ್ಷಣೆ ಎಂದರೆ ಕೊನೆಯ ದಿನ ಸ್ಥಳದಲ್ಲಿಯೇ ಕಾಗದದಿಂದ ಮಾಡಿದ ಬೃಹತ್ ಗಾತ್ರದ ಬಲೂನನ್ನು ಬಾನಿಗೆ ಹಾರಿ ಬಿಡುವುದಾಗಿದೆ.ಗ್ರಾಮಕ್ಕೆ ಏನೇ ತೊಂದರೆಗಳಿದ್ದರೂ ಅದೆಲ್ಲವೂ ಗ್ರಾಮದಿಂದ ದೂರಾಗಿ ಗ್ರಾಮಕ್ಕೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಬೇಡಿಕೊಂಡು ದೇವಸ್ಥಾನದ ಸಮೀಪ ಇರುವ ಮೈದಾನದಲ್ಲಿ ಈ ಬೃಹತ್ ಬಿಸಿ ಗಾಳಿ ತುಂಬಿದ ಬಲೂನನ್ನು ಹಾರಿ ಬಿಡಲಾಗುತ್ತದೆ. ಗ್ರಾಮಸ್ಥರಿಗೆ ಏನೇ ನೋವು, ಕಷ್ಟ- ನಷ್ಟಗಳಿದ್ದರೂ ಇದರಿಂದ ದೂರಾಗಿ ಗ್ರಾಮಕ್ಕೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ಇದು ಬಲೂನ್ ಜಾತ್ರೆಯೆಂದೇ ಪ್ರಸಿದ್ಧಿ ಪಡೆದಿದ್ದು, ಅಕ್ಕಪಕ್ಕದ ಗ್ರಾಮಗಳಷ್ಟೇ ಅಲ್ಲದೇ ಗೋವಾ, ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು. ಎರಡು ದಿನಗಳ ಕಾಲ ಊರಿನ ಜನರು ಶ್ರದ್ಧಾ ಭಕ್ತಿಯಿಂದ ದೇವರ ಉತ್ಸವವನ್ನು ಆಚರಿಸಿದರು.
ಮನೆ- ಮನೆಗಳನ್ನು ತಳಿರು- ತೋರಣಗಳಿಂದ ಶೃಂಗರಿಸಿ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಜಾತ್ರೆಯ ಮೊದಲ ದಿನ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ವಿವಿಧ ಹರಕೆ ಸೇವೆಗಳನ್ನು ದೇವರಿಗೆ ಅರ್ಪಿಸುವ ಗ್ರಾಮಸ್ಥರು ಎರಡನೇ ದಿನ ಬೆಳಗ್ಗೆ ಹಾಗೂ ಸಂಜೆಯ ವೇಳೆ ಅಂದಾಜು ೧೨ ಅಡಿ ಎತ್ತರದ ಬಿಸಿಗಾಳಿ ತುಂಬಿದ ಬಲೂನನ್ನು ಆಕಾಶದತ್ತ ಹಾರಿ ಬಿಟ್ಟರು. ಇದನ್ನು ನೋಡಲೆಂದೇ ನೂರಾರು ಭಕ್ತರು ದೇವಸ್ಥಾನದ ಬಳಿ ಸೇರಿದ್ದರು. ಬಲೂನಿಗೆ ಗಾಳಿ ತುಂಬುವ ಸಂದರ್ಭದಲ್ಲಿ ಹರ ಹರ ಮಹಾದೇವ್ ಎಂದು ಜೈಕಾರ ಹಾಕಲಾಯಿತು.