ಗುತ್ತಲ:ಗಂಗಾಮತ ಸಮಾಜದ ಏಕೈಕ ಶಾಸಕರಾಗಿದ್ದ ಮಂಕಾಳ ವೈದ್ಯರಿಗೆ ಸಚಿವ ಸ್ಥಾನ ನೀಡುವುದಾಗಿ ತಿಳಿಸಿ ಕೊನೆ ಗಳಿಗೆಯಲ್ಲಿ ಅವರನ್ನು ಸಚಿವರನ್ನಾಗಿ ಮಾಡದೇ ಹಿಂದುಳಿದ ಗಂಗಾಮತ ಸಮಾಜಕ್ಕೆ ಅನ್ಯಾಯ ಹಾಗೂ ಅಗೌರವ ಮಾಡಲಾಗಿದೆ ಎಂದು ಅಂಬಿಗರ ಚೌಡಯ್ಯ ಪೀಠದ ಶ್ರೀಶಾಂತಭೀಷ್ಮ ಚೌಡಯ್ಯ ಸ್ವಾಮಿಜಿ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿ, ಗಂಗಾಮತ, ಮೊಗವೀರ, ಕಬ್ಬಲಿ, ಕೋಲಿ, ಬಾರ್ಕಿ, ಕೋಳಿ, ಅಂಬಿಗರ ಸೇರಿದಂತೆ ೪೭ ಕ್ಕೂ ಅಧಿಕ ಹೆಸರಗಳಿಂದ ಕರೆಯಲಾಗುವ ಗಂಗಾಮತ ಸಮಾಜಕ್ಕೆ ರಾಜ್ಯ ಸರ್ಕಾರದಲ್ಲಿ ಮಂತ್ರಿ ಸ್ಥಾನ ಸಿಗದೇ ಇರುವುದು ನಮ್ಮ ಸಮಾಜಕ್ಕೆ ಆದ ಅನ್ಯಾಯವಾಗಿದೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ಹೈಕಮಾಂಡನ ಪಟ್ಟಿಯಲ್ಲಿ ಮಂಕಾಳು ವೈದ್ಯರ ಹೆಸರಿತ್ತು. ಆದರೆ ಕೊನೆ ಗಳಿಗೆಯಲ್ಲಿ ಅದನ್ನು ಕೈಬಿಟ್ಟು ಸಮಾಜಕ್ಕೆ ಅಗೌರವ ನೀಡಲಾಗಿದೆ. ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಮಂಕಾಳು ವೈದ್ಯರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಈ ಬಾರಿ ಅವರಿಗೆ ಸಿಗುವ ಭರವಸೆ ನಮಗೆಲ್ಲ ಇತ್ತು. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ. ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಅನುಭವಿಸಬಾರದೆಂದರೆ ಸಮಾಜಕ್ಕೆ ಆದ ಅನ್ಯಾಯವನ್ನು ಸರಿಪಡಿಸಬೇಕು. ಮಂಕಾಳು ವೈದ್ಯರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಅವರು ಆಗ್ರಹಿಸಿದ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯ ಮಂತ್ರಿ ಡಿಕೆ ಶಿವಕುಮಾರ ಹಾಗೂ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಈ ಬಗ್ಗೆ ಗಂಭೀರವಾಗಿ ಚರ್ಚಿಸಿ ನಮ್ಮ ಸಮಾಜದ ಶಾಸಕರಾದ ಮಂಕಾಳು ವೈದ್ಯರಿಗೆ ಸಚಿವ ಸ್ಥಾನವನ್ನು ನೀಡಬೇಕೆಂದರು.