ಜಾತಿ ಜನಗಣತಿ ಅವೈಜ್ಞಾನಿಕ ಎಂಬುದು ಸಮಾಜದ್ರೋಹಿ ಮಾತು: ಯತೀಂದ್ರ ಸಿದ್ದರಾಮಯ್ಯ

KannadaprabhaNewsNetwork |  
Published : Oct 05, 2025, 01:01 AM IST
ಪೋಟೊ-೪ ಎಸ್.ಎಚ್.ಟಿ. ೧ಕೆ-ವಿಧಾನ ಪರಿಷತ್ತ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟನೆ ಮಾಡಿದರು. | Kannada Prabha

ಸಾರಾಂಶ

ಜಾತಿ ಸಮೀಕ್ಷೆ ಬಗ್ಗೆ ಸಾಕಷ್ಟು ಅಪಪ್ರಚಾರ ನಡೆಯುತ್ತಿದೆ. ಜಾತಿ ಸಮೀಕ್ಷೆ ಮಾಡುವುದರಿಂದ ಸಮಾಜ ಒಡೆಯುತ್ತಿದ್ದಾರೆ ಎಂದೆಲ್ಲ ಅಪಪ್ರಚಾರ ಮಾಡುತ್ತಿರುವುದು ಖಂಡಿತ ಸುಳ್ಳು ಎಂದು ವಿಧಾನಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಶಿರಹಟ್ಟಿ: ಜಾತಿ ಜನಗಣತಿ ಅವೈಜ್ಞಾನಿಕ ಎಂದು ಕೆಲವರು ವಿರೋಧಿಸುವುದಲ್ಲದೇ ಸಮಾಜವನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇವೆಲ್ಲ ಸಮಾಜದ್ರೋಹಿ ಮಾತುಗಳು. ಇದರಲ್ಲಿ ರಾಜಕಾರಣ ಮಾಡಬಾರದು ಎಂದು ವಿಧಾನಪರಿಷತ್‌ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ಕಡಕೋಳ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜಾತಿ ಸಮೀಕ್ಷೆ ಮಾಡುವುದರಿಂದ ಸಮಾಜ ಒಡೆಯುತ್ತಿದ್ದಾರೆ ಎಂದೆಲ್ಲ ಅಪಪ್ರಚಾರ ಮಾಡುತ್ತಿರುವುದು ಖಂಡಿತ ಸುಳ್ಳು. ಜಾತಿ ಒಡೆಯುವ ಕೆಲಸ ಮಾಡುತ್ತಿಲ್ಲ. ಬದಲಾಗಿ ಜಾತಿ ಸಮೀಕ್ಷೆ ಮೂಲಕ ಯಾವ ಯಾವ ಜಾತಿಗಳು ಎಷ್ಟು ಹಿಂದುಳಿದಿವೆ. ಅವುಗಳ ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಹಾಗೂ ಸಾಮಾಜಿಕ ಸ್ಥಿತಿಯ ಮಾಹಿತಿ ಸಂಗ್ರಹಿಸಿಕೊಂಡು ತಿಳಿದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳು ಕಳೆದರೂ ಸೌಲಭ್ಯ ವಂಚಿತ ಸಮುದಾಯಗಳಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಇತಿಹಾಸದುದ್ದಕ್ಕೂ ಶೋಷಣೆಗೊಳಗಾದ ಜಾತಿ ವ್ಯವಸ್ಥೆಯಲ್ಲಿ ಬಹುಸಂಖ್ಯಾತ ಹಿಂದುಳಿದ ವರ್ಗದವರನ್ನು ಶೂದ್ರರೆಂದು ವರ್ಗೀಕರಣ ಮಾಡಲಾಗಿದೆ. ಇದರಿಂದ ಕೆಲವು ವರ್ಗದವರು ಮಾತ್ರ ಅಧಿಕಾರ ಮತ್ತು ಅಂತಸ್ತು ಅನುಭವಿಸುತ್ತಿದ್ದಾರೆ. ಈ ವ್ಯವಸ್ಥೆ ಬದಲಿಸಲು ಜಾತಿ ಜನಗಣತಿ ಸಮೀಕ್ಷೆಯಿಂದ ಸಾಧ್ಯ ಎಂದರು.

ಸಿದ್ದರಾಮಯ್ಯ ಅವರು ಮೊದಲನೇ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಭಾಗ್ಯಗಳ ಸರಮಾಲೆ ಕೊಟ್ಟಿದ್ದಾರೆ. ಎರಡನೇ ಬಾರಿ ಅಧಿಕಾರಕ್ಕೆ ಬರುವ ಮೊದಲು ಚುನಾವಣೆಯಲ್ಲಿ ಕೊಟ್ಟ ಭರವಸೆಯಂತೆ ೫ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ನುಡಿದಂತೆ ನಡೆಯುವ ಸರ್ಕಾರ ಎಂದು ಸಾಬೀತು ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಸಮಾಜದಲ್ಲಿ ಬಹಳಷ್ಟು ಬದಲಾವಣೆ ಆಗುತ್ತಿದೆ. ಬಡವರ ಜೀವನ ಸುಧಾರಣೆಯಾಗುತ್ತಿದೆ ಎಂದರು.

ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆ ಟೀಕಿಸುವ ಕೆಲಸ ಮಾಡುತ್ತಿದ್ದಾರೆ. ಬಿಟ್ಟಿ ಭಾಗ್ಯಕೊಟ್ಟು ಜನರನ್ನು ಸೋಮಾರಿ ಮಾಡುತ್ತಿದ್ದಾರೆ. ಸರ್ಕಾರದ ಹಣ ವ್ಯರ್ಥ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಆದರೆ ಈಗ ಅದರ ಯಶಸ್ಸನ್ನು ಕಂಡು ಬೇರೆ ರಾಜ್ಯದ ಚುನಾವಣೆಗಳಲ್ಲಿ ಘೋಷಣೆ ಮಾಡುತ್ತಿದ್ದಾರೆ ಎಂದರು.

ಕಡಕೋಳ ಗ್ರಾಮದಲ್ಲಿ ಬೀರೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ ಸಿಎಂ ಅವರ ವಿವೇಚನಾ ನಿಧಿಯಿಂದ ₹ ೫೧ ಲಕ್ಷ ಅನುದಾನ ಕೊಡಿಸುವ ಭರವಸೆ ನೀಡಿದರು. ಕುಸ್ಲಾಪುರ ಗ್ರಾಮದಲ್ಲಿಯೂ ಸಮುದಾಯ ಭವನ ನಿರ್ಮಾಣಕ್ಕೆ ₹೨೫ ಲಕ್ಷ ಕೊಡಿಸುವ ಭರವಸೆ ನೀಡಿದರು.

ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಶ್ರೀಗಳು ಮಾತನಾಡಿ, ಎಲ್ಲ ವರ್ಗದವರು ಮೊದಲು ಶೈಕ್ಷಣಿಕವಾಗಿ ಸುಧಾರಣೆ ಕಾಣಬೇಕು. ಗ್ರಾಮದಲ್ಲಿ ಸಾರಾಯಿ ಅಂಗಡಿ ಬಂದ ಮಾಡಿಸಿ ಗ್ರಂಥಾಲಯ ತೆರೆಯಬೇಕು. ಶಿಕ್ಷಣ ಒಂದೇ ಸುಧಾರಣೆ, ಸಾಧನೆಗೆ ಅಸ್ತ್ರ. ಎಲ್ಲರೂ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಸುಜಾತಾ ದೊಡ್ಡಮನಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಹೇಮಾ ಶರಣಪ್ಪ ಹರ್ಲಾಪುರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ರಾಮಣ್ಣ ಲಮಾಣಿ, ವಿ.ವಿ. ಕಪ್ಪತ್ತನವರ, ರುದ್ರಣ್ಣ ಗುಳಗುಳಿ, ಪ್ರಕಾಶ ಕರಿ, ರಾಮಕೃಷ್ಣ ರೊಳ್ಳಿ, ಎಂ.ಎಸ್. ದೊಡ್ಡಗೌಡ್ರ, ತಿಪ್ಪಣ್ಣ ಕೊಂಚಿಗೇರಿ, ಫಕ್ಕೀರಪ್ಪ ಹೆಬಸೂರ, ಮುತ್ತು ಜಡಿ, ಮಂಜುನಾಥ ಜಡಿ, ಭಾಗ್ಯಶ್ರೀ ಬಾಬಣ್ಣ, ಡಿ.ಕೆ. ಹೊನ್ನಪ್ಪನವರ, ಗಿರಿಜವ್ವ ಮುತ್ತಪ್ಪ ಲಮಾಣಿ, ರಾಮಣ್ಣ ಹರ್ಲಾಪುರ, ರುದ್ರಗೌಡ ಪಾಟೀಲ, ಬಸಮ್ಮ ಮಾದರ, ಬಸವರಾಜ ಪೂಜಾರ, ನಿರ್ಮಲಾ ಅಡವಿ, ಶರಣಪ್ಪ ಹರ್ಲಾಪುರ, ಶಿವಪ್ಪ ಕದಂ ಇದ್ದರು.

PREV

Recommended Stories

ಚಲನಚಿತ್ರ ಪ್ರಶಸ್ತಿ ಪಡೆದ ನಟ, ನಟಿ, ನಿರ್ದೇಶಕರ ಅಭಿಮತ
‘ಅಗತ್ಯ ಬಂದಾಗ ಸೂಕ್ತ ನಿರ್ಧಾರ ಕೈಗೊಳ್ಳೋ ಸಾಮರ್ಥ್ಯ ಪಕ್ಷಕ್ಕಿದೆ’