ನರಗುಂದ: ವೈಯಕ್ತಿಕ ಜೀವನಕ್ಕೆ ಕಟ್ಟುಬಿದ್ದು, ಸ್ವಾರ್ಥದ ಬಯಕೆಗಳ ಈಡೇರಿಕೆಗಾಗಿ ಜನರು ಸಂಸ್ಕೃತಿ, ಸಂಪ್ರದಾಯ ಮತ್ತು ರಾಷ್ಟ್ರಾಭಿಮಾನ ಮರೆಯುತ್ತಿದ್ದಾರೆ ಎಂದು ಅಧ್ಯಾತ್ಮ ಚಿಂತಕ ಮಂಜಣ್ಣ ಬೆಳಗಾವಿ ಹೇಳಿದರು.
ಪಟ್ಟಣದ ಸೋಮಾಪುರ ಬಡಾವಣೆಯ ಶ್ರೀ ದ್ಯಾಮಮ್ಮ ದೇವಿ ಹಾಗೂ ದುರ್ಗಾದೇವಿ ಮಂದಿರದ ಆವರಣದಲ್ಲಿ ಶ್ರೀ ದುರ್ಗಾಶಕ್ತಿ ಸಪ್ತಶತಿ ಋಷಿಪ್ರಜ್ಞಾ ಆಂದೋಲನದಿಂದ 9 ದಿನಗಳ ಕಾಲ ಬೆಳಗಿನ ಜಾವ ನಡೆದ ಸಾಮೂಹಿಕ ದೇವಿ ಪಾರಾಯಣದ ನವಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆಧುನಿಕ ಶೈಲಿಯಲ್ಲಿ ಸಮಾಜ ಸಾಗುತ್ತಿರುವ ಮಾರ್ಗ ಅಪಾಯಕಾರಿಯಾಗಿದೆ. ರಾಷ್ಟ್ರ ಹಾಗೂ ಸಮಾಜದ ಚಿಂತನೆಯಿಲ್ಲ. ದೇಶ ಮತ್ತು ನೆಲದ ಸಂಸ್ಕೃತಿ ರಕ್ಷಣೆಗಾಗಿ ದುಷ್ಟರ ಸಂಹಾರಕಿ ಜಗನ್ಮಾತೆ ಮತ್ತೆ ಅವತರಿಸಿ ಬರಲು ಜಪ, ತಪ, ಪಾರಾಯಣವನ್ನು ಪ್ರತಿಯೊಬ್ಬರೂ ಮಾಡಲೇಬೇಕಾಗಿದೆ ಎಂದು ಹೇಳಿದರು.ಸಾಮೂಹಿಕ ಆರಾಧನೆಯಲ್ಲಿ ಶಕ್ತಿಯ ಪರಾಕಾಷ್ಠೆ ಉಜ್ವಲವಾಗಿರುತ್ತದೆ. ನಿತ್ಯವೂ ದೇವಿಯನ್ನು ಶ್ರದ್ಧಾಭಕ್ತಿಯಿಂದ ಆರಾಧಿಸಬೇಕು. ಧ್ಯಾನ ಮಾಡಬೇಕು. ಆಗ ರಾಕ್ಷಸರ ಸಂಹಾರಕಿ ಜಗನ್ಮಾತೆ ಮತ್ತೆ ಅವತರಿಸಿ ಬಂದು ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ. ನಮ್ಮ ಭಕ್ತಿ ಹೇಗಿರಬೇಕೆಂದರೆ, ದೇವರೆ ಬಂದು ನಮ್ಮ ಇಷ್ಟಾರ್ಥಗಳನ್ನು ಮತ್ತು ಸಮಾಜವನ್ನು ರಕ್ಷಿಸುವಂತಿರಬೇಕು ಎಂದರು.
ಭಾವನಾ ಮೋಟೆ ಮಾತನಾಡಿ, ಹಲವಾರು ದೇವರನ್ನು ಹುಡುಕಿಕೊಂಡು ಹೋಗುವ ಬದಲು ದೇವರೆ ನಮ್ಮನ್ನು ಹುಡುಕಿಕೊಂಡು ಬಂದರೆ ಹೇಗಿರುತ್ತದೆ? ಹಾಗಾಗಬೇಕಾದರೆ ದೇವಿ ಕುರಿತು ನಿತ್ಯ ಜಪ, ತಪ, ಪಾರಾಯಣ ಮಾಡಬೇಕು ಎಂದರು.ಬಸವರಾಜ ವಿಠೋಜಿ, ಶರಣು ಘಾಟಗೆ, ಉಮೇಶ ಕಳಸಾ, ಶಿವು ನಾಯ್ಕರ, ಗಿರೀಶ ಯಾದವ, ನೇತ್ರಕ್ಕ ಬುಳಗಣ್ಣವರ, ಅಶ್ವಿನಿ ತಿಪ್ಪನಗೌಡ್ರ, ಲಕ್ಷ್ಮೀ ಬೂಸಪ್ಪನವರ, ಭಾರತಿ ಭೋಸಲೆ, ದೀಪಿಕಾ ಸುಬೇದಾರ, ಗೀತಾ ಗುಡಿಸಾಗರ, ಉಮಾ ನಾಗನೂರ, ಸುಷ್ಮಾ ಪಾಟೀಲ, ಗಿರಿಜಕ್ಕ ಹಂಪಣ್ಣವರ, ಸಾವಿತ್ರಿ ಮೋಟೆ, ಶೋಭಕ್ಕ ಬಂಡಗಾರ, ಅಶ್ವಿನಿ ಪೂಜಾರ, ರಾಜೇಶ್ವರಿ ಬೇವಿನಕಟ್ಟಿ, ಜಯಶ್ರೀ ಬೆಳದಡಿ, ಗೀತಾ ಹೇಮಣ್ಣವರ, ಉಮಾ ತಿಪ್ಪನಗೌಡ್ರ, ಮಂಜುಳಾ ಮಹಾಲಿನಮನಿ, ಗೀತಾ ಈಟಿ, ವಿದ್ಯಾ ನಂದಿ, ವಿಜಯಲಕ್ಷ್ಮಿ ಪೂಜಾರ, ಶೈಲಶ್ರೀ ಹುಂಬಿ ಇದ್ದರು.