ರೈತರು ವ್ಯವಸಾಯಕ್ಕೆ ಹನಿ ನೀರಾವರಿ ಬಳಸಿಕೊಳ್ಳುವುದು ಉತ್ತಮ: ಸುಂದರ್ ರಾಜ್

KannadaprabhaNewsNetwork |  
Published : Aug 05, 2026, 01:45 AM IST
4ಕೆಎಂಎನ್ ಡಿ16 | Kannada Prabha

ಸಾರಾಂಶ

ರೈತರು ಎದುರಿಸುತ್ತಿರುವ ಸಮಸ್ಯೆಗಳು, ಸರ್ಕಾರ ಇಲಾಖೆಗಳಿಂದ ಸಿಗುವ ಪರಿಹಾರ, ಅನುದಾನಗಳನ್ನು ಸಮಯಕ್ಕೆ ಸರಿಯಾಗಿ ಪಡೆದರೆ ನಷ್ಟ ತಂಪ್ಪಿಸಬಹುದು. ಕೃಷಿಯಲ್ಲಿ ಇತ್ತೀಚಿನ ತಂತ್ರಜ್ಞಾನ ಬಳಸಿಕೊಂಡಲ್ಲಿ ರೈತರ ಹಲವು ತೊಂದರೆಗಳಿಗೆ ಪರಿಹಾರ ಸಿಗಲಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಮಳೆ ಕೊರತೆಯಿಂದಾಗಿ ವ್ಯವಸಾಯಕ್ಕೆ ಕಷ್ಟವಾಗಿರುವುದರಿಂದ ರೈತರು ಹನಿ ನೀರಾವರಿ ಮೂಲಕ ಜಮೀನುಗಳಲ್ಲಿ ಬೆಳೆ ಬೆಳೆಯಲು ಮುಂದಾಗಬೇಕು ಎಂದು ಜಿಪಂ ರೇಷ್ಮೆ ಉಪ ನಿರ್ದೇಶಕ ಡಾ.ಸುಂದರ್ ರಾಜ್ ಸಲಹೆ ನೀಡಿದರು. ತಾಂತ್ರಿಕ ಸೇವಾ ಕೇಂದ್ರ ಡಿ.ಹಲಸಹಳ್ಳಿ ವ್ಯಾಪ್ತಿಯ ಕೋಡಿಪುರ ಗ್ರಾಮದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಸಹಯೋಗದೊಂದಿಗೆ ಮೇರಾ ರೇಷಮ್ ಮೇರಾ ಅಭಿಯಾನ ಮತ್ತು ವಿಶೇಷ ಜಾಗೃತಿ ಅಭಿಯಾನ ಹಾಗೂ ಪ್ರಾತ್ಯಕ್ಷತೆಯಲ್ಲಿ ಮಾತನಾಡಿದರು.

ರೈತರು ಎದುರಿಸುತ್ತಿರುವ ಸಮಸ್ಯೆಗಳು, ಸರ್ಕಾರ ಇಲಾಖೆಗಳಿಂದ ಸಿಗುವ ಪರಿಹಾರ, ಅನುದಾನಗಳನ್ನು ಸಮಯಕ್ಕೆ ಸರಿಯಾಗಿ ಪಡೆದರೆ ನಷ್ಟ ತಂಪ್ಪಿಸಬಹುದು. ಕೃಷಿಯಲ್ಲಿ ಇತ್ತೀಚಿನ ತಂತ್ರಜ್ಞಾನ ಬಳಸಿಕೊಂಡಲ್ಲಿ ರೈತರ ಹಲವು ತೊಂದರೆಗಳಿಗೆ ಪರಿಹಾರ ಸಿಗಲಿದೆ ಎಂದರು.

ಕೇಂದ್ರ ರೇಷ್ಮೆ ಮಂಡಳಿ ಹಾಗೂ ರೇಷ್ಮೆ ವಿಸ್ತರಣಾ ಉಪ ವಿಭಾಗ ಮದ್ದೂರಿನ ವಿಜ್ಞಾನಿ ಡಾ.ಶಿವಕುಮಾರ್ ಅವರು, ರೈತರು ಬಳಸುತ್ತಿರುವ ರಾಸಾಯನಿಕ ಔಷಧಿಗಳ ಬಳಕೆ, ಔಷಧಿ ಸಿಂಪಡಣೆಗಳ ವಿವರಿಸಿ ದ್ವಿತಳಿ ರೇಷ್ಮೆ ಬೆಳೆಯಿಂದ ಆರ್ಥಿಕ ಲಾಭ ಹೆಚ್ಚುವ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ರೇಷ್ಮೆಯನ್ನು ನಿಲ್ಲಿಸಿ, ನಮ್ಮಲ್ಲೇ ಬೆಳೆದ ದ್ವಿತಳಿ ರೇಷ್ಮೆ ಬೆಳೆಗೆ ಅತ್ಯುನ್ನತ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗುತ್ತದೆ ಎಂದರು.

ಹೊಸ ಹೊಸ ತಾಂತ್ರಿಕತೆಗಳಲ್ಲಿ ಟ್ರೆಂಚಿಂಗ್, ಮಲ್ಚಿಂಗ್ ಮಾಡುವುದು ಹಾಗೂ ಹಿಪ್ಪು ನೇರಳೆ ತೋಟದಲ್ಲಿ ಹನಿ ನೀರಾವರಿ ಅಳವಡಿಸಿಕೊಳ್ಳುವುದು ಹಾಗೂ ವೈಜ್ಞಾನಿಕವಾಗಿ ಹೊಸ ತಾಂತ್ರಿಕತೆಗೆ ಬದಲಾಗುವುದು ತುಂಬಾ ಮುಖ್ಯವಾಗಿದೆ ಎಂದರು.

ಕೆ.ಆರ್.ಪೇಟೆ ರೇಷ್ಮೆ ತರಬೇತಿ ಸಂಸ್ಥೆ ಪ್ರಾಚಾರ್ಯ ಡಿ.ಸೋಮಣ್ಣ ಮಾತನಾಡಿ, ರಾಸಾಯನಿಕ ಗೊಬ್ಬರಗಳಮಿತ ಬಳಕೆ, ಸಾವಯವ ಗೊಬ್ಬರಗಳ ನಿಯಮಿತ ಬಳಕೆ ಜೊತೆಗೆ, ಹಿಪ್ಪು ನೇರಳೆ ತೋಟದಲ್ಲಿ ಸರಿಯಾದ ರೀತಿಯ ಗಾಳಿ ಸಂಚಾರ ಹಾಗೂ ಬೆಳಕು ಇರುವಂತೆ ಮಾಡಬೇಕು ಎಂದರು.

ರೇಷ್ಮೆ ಹುಳು ಸಾಕಾಣಿಕೆ ಮನೆಯಲ್ಲಿ ಶೇಖರಣೆಯಾಗುವ ಹಾಸಿಗೆ ಕಸದಿಂದ ಉತ್ಕೃಷ್ಟ ಗೊಬ್ಬರವನ್ನು ತಯಾರಿಸಿ ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ರೇಷ್ಮೆ ಗೂಡಿನ ಇಳುವರಿ ಹೆಚ್ಚಿ ರೈತರಿಗೆ ಆರ್ಥಿಕವಾಗಿ ಲಾಭವನ್ನು ನೀಡುತ್ತದೆ ಎಂದರು.

ಮಣ್ಣಿನ ಫಲವತ್ತತೆ ಕಾಪಾಡಿ ಮುಂದಿನ ಪೀಳಿಗೆಗೆ ಮಣ್ಣನ್ನು ವರದಾನವಾಗಿ ನಾವುಗಳು ನೀಡಬೇಕಾಗಿದೆ. ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆಯಿಂದಾಗಿ ಹಲವು ರೀತಿಯ ರೋಗಗಳು ಬರುತ್ತಿವೆ. ಹಿಪ್ಪು ನೇರಳೆ ಸೊಪ್ಪಿನ ಇಳುವರಿ ಕೂಡ ಕಡಿಮೆಯಾಗಿ ಕೀಟ ಬಾಧೆಗೆ ತುತ್ತಾಗುತ್ತಿದೆ ಎಂದು ರೇಷ್ಮೆ ಬೆಳೆಗಾರರಿಗೆ ಮನದಟ್ಟು ಮಾಡಿದರು.

ಕಾರ್ಯಕ್ರಮದಲ್ಲಿ ಮಳವಳ್ಳಿ ರೇಷ್ಮೆ ಸಹಾಯಕ ನಿರ್ದೇಶಕ ಎ.ಬಿ.ರವಿ, ರೇಷ್ಮೆ ವಿಸ್ತರಣಾಧಿಕಾರಿ ಎಸ್.ವಿ. ನರಸಿಂಹಮೂರ್ತಿ, ಆಶಾ, ಎಚ್.ಜಿ,ಕುಮಾರಿ, ಟಿ.ಆರ್.ಪೂಜಾ, ರೇಷ್ಮೆ ನಿರೀಕ್ಷಕ ಬಿ.ಆರ್.ಕಿರಣ್, ಎಂ.ನವೀನ್, ಉದಯಶಂಕರ್ ಹಾಗೂ ಕೋಡಿಪುರ ಗ್ರಾಮದ ಎಲ್ಲಾ ರೇಷ್ಮೆ ಬೆಳೆಗಾರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಉಚಿತ ಕಾರ್ಯಾಗಾರ
ಹುಟ್ಟುಹಬ್ಬದ ನಿಮಿತ್ತ ರಕ್ತದಾನ, ಗಿಡಗಳ ವಿತರಣೆ, ಸಾಧಕರಿಗೆ ಸನ್ಮಾನ