ವಿವಿಧ ಸಂಘಗಳ ವತಿಯಿಂದ ಮೂರ್ನಾಡು ಪಟ್ಟಣದ ವಿವಿಧ ಕಡೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ-ಗಣೇಶ ಉತ್ಸವ ಮೂರ್ತಿಗಳನ್ನು ಭಾನುವಾರ ರಾತ್ರಿ ವಿಜೃಂಭಣೆಯ ಶೋಭಾಯಾತ್ರೆಯೊಂದಿಗೆ ಬಲಮುರಿಯ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.
ಮಡಿಕೇರಿ: ವಿವಿಧ ಸಂಘಗಳ ವತಿಯಿಂದ ಮೂರ್ನಾಡು ಪಟ್ಟಣದ ವಿವಿಧ ಕಡೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ-ಗಣೇಶ ಉತ್ಸವ ಮೂರ್ತಿಗಳನ್ನು ಭಾನುವಾರ ರಾತ್ರಿ ವಿಜೃಂಭಣೆಯ ಶೋಭಾಯಾತ್ರೆಯೊಂದಿಗೆ ಬಲಮುರಿಯ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಲಾಗಿದ್ದ ಮೂರ್ತಿಗಳಿಗೆ 7 ದಿನಗಳ ಕಾಲ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗಿತ್ತು. ಭಾನುವಾರ ಸಂಜೆ ಎಲ್ಲಾ 6 ಮಂಡಳಿಗಳ ಉತ್ಸವ ಮೂರ್ತಿಗಳನ್ನು ಒಟ್ಟಿಗೆ ಮೆರವಣಿಗೆ ಮಾಡಲಾಯಿತು.6 ಮಂಡಳಿಗಳಿಂದ ಸಂಭ್ರಮ: ವೆಂಕಟೇಶ್ವರ ಕಾಲೋನಿಯ ವಿನಾಯಕ ಯುವಕ ಮಂಡಳಿ (35ನೇ ವರ್ಷ), ಗಾಂಧಿನಗರದ ಶ್ರೀರಾಮ ಮಂದಿರ ಸೇವಾ ಸಮಿತಿ (34ನೇ ವರ್ಷ), ಟಿ-ಜಂಕ್ಷನ್‌ನ ವಿಘ್ನೇಶ್ವರ ಸೇವಾ ಸಮಿತಿ (32ನೇ ವರ್ಷ), ಗಜೇಂದ್ರ ಯುವ ಶಕ್ತಿ ಸಂಘ (7ನೇ ವರ್ಷ), ಅಯ್ಯಪ್ಪ ಗೆಳೆಯರ ಬಳಗ ಎಂ-ಟೌನ್ (3ನೇ ವರ್ಷ) ಹಾಗೂ ಕೋಡಂಬೂರಿನ ವಿಘ್ನೇಶ್ವರ ಗೆಳೆಯರ ಬಳಗ (18ನೇ ವರ್ಷ)ದ ಗಣೇಶ ಮೂರ್ತಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಮಂಟಪಗಳಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಯಿತು.
ಡಿಜೆ ಸೌಂಡ್ಸ್ ಅಬ್ಬರದೊಂದಿಗೆ ನಡೆದ ಶೋಭಾಯಾತ್ರೆಯು ಮೂರ್ನಾಡಿನ ಮುಖ್ಯ ರಸ್ತೆಗಳಲ್ಲಿ ಸಾಗಿತು. ಸಾವಿರಾರು ಭಕ್ತರು, ಮಹಿಳೆಯರು, ಮಕ್ಕಳು ಹೆಜ್ಜೆ ಹಾಕಿ ಸಂಭ್ರಮಿಸಿದರು.ಬಿಗಿ ಬಂದೋಬಸ್ತ್: ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ನೇತೃತ್ವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಅಂತಿಮವಾಗಿ ಬಲಮುರಿಯ ಕಾವೇರಿ ನದಿಯಲ್ಲಿ ಶಾಸ್ತ್ರೋಕ್ತವಾಗಿ ಎಲ್ಲಾ ಮೂರ್ತಿಗಳನ್ನು ವಿಸರ್ಜಿಸಲಾಯಿತು.