ಪ್ರತಿ 3 ವರ್ಷಕ್ಕೊಮ್ಮೆ ರೈತರು ಮಣ್ಣು ಪರೀಕ್ಷೆ ಮಾಡಿಸುವುದು ಉತ್ತಮ

KannadaprabhaNewsNetwork | Published : Sep 3, 2024 1:45 AM

ನರಸಿಂಹರಾಜಪುರ, ರೈತರು ಪ್ರತಿ ಮೂರು ವರ್ಷಕ್ಕೊಮ್ಮೆ ತಮ್ಮ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಿದರೆ ಮಣ್ಣಿನಲ್ಲಿ ಯಾವ ಪೋಷಕಾಂಶಗಳ ಕೊರತೆಯಿದೆ ಎಂಬುದನ್ನು ತಿಳಿದು ಅದರ ಆಧಾರದ ಮೇಲೆ ಬೆಳೆಗೆ ಪೋಷಕಾಂಶ ನೀಡಬೇಕು ಎಂದು ಸಹಾಯಕ ತೋಟಗಾರಿಕಾ ನಿರ್ದೇಶಕ ಪುನೀತ್‌ ರೈತರಿಗೆ ಸಲಹೆ ನೀಡಿದರು.

ರೋಟರಿ ಕ್ಲಬ್‌ ಆಶ್ರಯದಲ್ಲಿ ವಾರದ ಸಭೆಯಲ್ಲಿ ತೋಟಗಾರಿಕಾ ನಿರ್ದೇಶಕ ಪುನೀತ್‌ ಸಲಹೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ರೈತರು ಪ್ರತಿ ಮೂರು ವರ್ಷಕ್ಕೊಮ್ಮೆ ತಮ್ಮ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಿದರೆ ಮಣ್ಣಿನಲ್ಲಿ ಯಾವ ಪೋಷಕಾಂಶಗಳ ಕೊರತೆಯಿದೆ ಎಂಬುದನ್ನು ತಿಳಿದು ಅದರ ಆಧಾರದ ಮೇಲೆ ಬೆಳೆಗೆ ಪೋಷಕಾಂಶ ನೀಡಬೇಕು ಎಂದು ಸಹಾಯಕ ತೋಟಗಾರಿಕಾ ನಿರ್ದೇಶಕ ಪುನೀತ್‌ ರೈತರಿಗೆ ಸಲಹೆ ನೀಡಿದರು.

ರೋಟರಿ ಭವನದಲ್ಲಿ ಶನಿವಾರ ರೋಟರಿ ಕ್ಲಬ್ ಮತ್ತು ಇನ್ನರ್ ವ್ಹೀಲ್ ಕ್ಲಬ್ ಆಶ್ರಯದಲ್ಲಿ ನಡೆದ ವಾರದ ಸಭೆಯಲ್ಲಿ ಅಡಕೆ ಬೆಳೆ ಮತ್ತು ತೋಟಗಾರಿಕಾ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು. ಗಿಡಗಳಿಗೆ ಎನ್ ಪಿಕೆ ಜತೆಗೆ ಮೈಕ್ರೋ ನ್ಯೂಟ್ರೆಟ್ಸ್ ನೀಡುವುದು ಉತ್ತಮ. ಮಳೆಗಾಲ ಆರಂಭಕ್ಕೂ ಮುನ್ನಾ ಬ್ರೋಡೊ ದ್ರಾವಣ ಸಿಂಪಡಣೆ ಯಿಂದ ಅಡಕೆಗೆ ತಗಲುವ ಕೊಳೆ ರೋಗ ನಿಯಂತ್ರಿಸಬಹುದು. ಭತ್ತ ಬೆಳೆಯುವ ಗದ್ದೆಗಳಲ್ಲಿ ಅಡಕೆ ತೋಟ ಮಾಡಿದ್ದರೆ ಅಲ್ಲಿ ಬೇರು ಹುಳದ ಬಾಧೆ ಹೆಚ್ಚಾಗಿ ಕಂಡು ಬರುತ್ತದೆ. ಇದರ ನಿಯಂತ್ರಣಕ್ಕೆ ಬೇವಿನ ಹಿಂಡಿ ಎರಡರಿಂದ ಮೂರು ವರ್ಷ ಸತತವಾಗಿ ಗಿಡಕ್ಕೆ ಹಾಕಿಬೇಕು. ಅಡಕೆಗೆ ತಗಲುವ ಹಳದಿ ಎಲೆ ರೋಗ ನಿಯಂತ್ರಣಕ್ಕೆ ಯಾವುದೇ ಪರಿಣಾಮಕಾರಿ ಔಷಧಿ ಇದುವರೆಗೆ ಸಂಶೋಧನೆ ಯಾಗಿಲ್ಲ. ಅಡಕೆ ಸಸಿಗಳನ್ನು ಮಾಡುವಾಗ ಹಳದಿ ಎಲೆ ರೋಗ ಬಾಧಿತ ತೋಟದ ಅಡಕೆ ಕಾಯಿ ಸಸಿಗಳನ್ನು ಮಾಡ ಬಾರದು. ರೋಗವಿಲ್ಲದ ಅಡಕೆ ತೋಟದ ಸಸಿ ಮಾಡಿ ಅದನ್ನು ಹೊಸ ತೋಟಗಳಲ್ಲಿ ನೆಡುವುದು ಉತ್ತಮ. ಅಡಕೆ ಹಳದಿ ಎಲೆ ಬಾಧಿತ ತೋಟಗಳಲ್ಲಿ ಪರ್ಯಾಯವಾಗಿ ಬೆಣ್ಣೆಹಣ್ಣು, ಜಾಯಿಕಾಯಿ, ಲವಂಗ, ಏಲಕ್ಕಿ, ಕಾಫಿ ಬೆಳೆ ಬೆಳೆಯ ಬಹುದು. ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ಎಲ್ಲಾ ರೀತಿ ಹಣ್ಣುಗಳು, ತರಕಾರಿ, ಸಾಂಬಾರು ಪದಾರ್ಥಗಳು, ಔಷಧಿ ಬೆಳೆಗಳು ಮುಖ್ಯವಾಗಿ ಬಹುವಾರ್ಷಿಕ ಬೆಳೆಗಳು ಬರುತ್ತವೆ. ಆದರೆ, ವಾರ್ಷಿಕ ಬೆಳೆಗಳು ಕೃಷಿ ಇಲಾಖೆ ವ್ಯಾಪ್ತಿಗೆ ಬರುತ್ತವೆ ಎಂದರು.

ತಾಲೂಕು ವ್ಯಾಪ್ತಿಯಲ್ಲಿ ಹಿಂದೆ ಅತಿಹೆಚ್ಚು ಬತ್ತ ಬೆಳೆಯುತ್ತಿದ್ದುದರಿಂದ ಬತ್ತದ ಕಣಜ ಎಂದು ಕರೆಯುತ್ತಿದ್ದರು. ಪ್ರಸ್ತುತ ಬತ್ತ ಬೆಳೆಯುವ ಪ್ರದೇಶ ಕ್ಷೀಣಿಸಿದ್ದು ಈಗ 7, 200 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಅಡಕೆಗೆ ಉತ್ತಮ ಧಾರಣೆಯಿದೆ. ಭವಿಷ್ಯದಲ್ಲಿ ಇದರ ಬೆಲೆ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ಬೆಳೆ ವಿಮೆಯನ್ನು ಆಗಸ್ಟ್ 1 ರಿಂದ ಬರುವ ವರ್ಷದ ಜುಲೈ ವರೆಗೆ ಮಳೆಯನ್ನಾಧರಿಸಿ ಪರಿಹಾರ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.ಪ್ರಗತಿಪರ ಕೃಷಿಕ ಲೋಕೇಶ್ ಮಾತನಾಡಿ, ರೈತರು ಇದುವರೆಗೆ ಬೆಳೆ ಬೆಳೆಯಲು ತಾವು ಅನುಸರಿಸಿದ ಪದ್ಧತಿ ಮುಂದುವರೆಸಬೇಕು. ಬೇರೆ ರೈತರು ಮಾಡಿದ ವಿಧಾನ ಅಳವಡಿಸಲು ಹೋದರೆ ಕೆಲವು ಬಾರಿ ಬೆಳೆ ವಿಫಲವಾಗುವ ಸಾಧ್ಯತೆಯಿದೆ ಎಂದರು.

ಸಭೆ ಅಧ್ಯಕ್ಷ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ದಿವಾಕರ್‌ ಮಾತನಾಡಿ, ರೋಟರಿಯಿಂದ ಪ್ರತಿ ಶನಿವಾರ ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಯನ್ನು ಕರೆಸಿ ಸದಸ್ಯರಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು. ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಬಿಂದು ವಿಜಯ್ ಮಾತನಾಡಿ, ಸೆ. 11ರಂದು ಇನ್ನರ್ ವ್ಹೀಲ್ ಕ್ಲಬ್ ನ ರಾಜ್ಯಪಾಲರು ತಾಲೂಕು ಕೇಂದ್ರಕ್ಕೆ ಭೇಟಿ ನೀಡಲಿದ್ದು ಅಂದು ಸಂಜೆ ನಡೆಯುವ ಕಾರ್ಯಕ್ರಮಕ್ಕೆ ಎಲ್ಲಾ ಸದಸ್ಯರು ಭಾಗವಹಿಸ ಬೇಕೆಂದರು. ರೋಟರಿ ಕ್ಲಬ್‌ ಕಾರ್ಯದರ್ಶಿ ಮಧು ವೆಂಕಟೇಶ್‌ ಉಪಸ್ಥಿತರಿದ್ದರು. ರೋಟರಿ ಸಂಸ್ಥೆ, ಇನ್ನರ್ ವ್ಹೀಲ್ ಕ್ಲಬ್ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.