ಕನ್ನಡಪ್ರಭ ವಾರ್ತೆ ಪಾಂಡವಪುರ
ಹೆಣ್ಣು ಮಕ್ಕಳು ಸಂಸಾರದ ಜತೆಗೆ ಸಂಘ- ಸಂಸ್ಥೆಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯವಾಗಿದೆ ಎಂದು ಹಿರಿಯ ನ್ಯಾಯಾಧೀಶ ಎಂ.ಆನಂದ್ ತಿಳಿಸಿದರು.ತಾಲೂಕಿನ ಪಿಎಸ್‌ಎಸ್‌ಕೆ ಪ್ರೌಢಶಾಲೆಯಲ್ಲಿ ಲಯನ್ಸ್ ಕ್ಲಬ್ ಆಫ್ ಮೈಸೂರು ಗಂಗೋತ್ರಿ ಮತ್ತು ವಿವಿಧ ಸಂಘ- ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ತಪಾಸಣೆ ಶಿಬಿರಗಳ ಮೂಲಕ ಗ್ರಾಮೀಣ ಜನರಿಗೆ ಚಿಕಿತ್ಸೆ ನೀಡುವ ಜತೆಗೆ ಹೆಚ್ಚಿನ ಚಿಕಿತ್ಸೆಗಾಗಿ ರೋಗಿಗಳನ್ನು ಮೈಸೂರು ನಗರದ ಆಸ್ಪತ್ರೆಗಳಿಗೆ ರವಾನಿಸುವ ಕೆಲಸ ಮಾಡುತ್ತಿರುವುದು ಉತ್ತಮ ಕೆಲಸ. ಈ ಶಿಬಿರಗಳು ಜನರ ಆರೋಗ್ಯ ಸುಧಾರಣೆಗೆ ಸಹಕಾರಿಯಾಗುತ್ತಿವೆ ಎಂದು ಬಣ್ಣಿಸಿದರು.ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿ, ಮಹಿಳೆಯರು ಮನಸ್ಸು ಮಾಡಿದರೆ ಕುಟುಂಬದ ಜತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡಬಲ್ಲರು ಎಂಬುದನ್ನು ಸಾಧನೆ ಮಾಡಿ ತೋರಿಸಿದ್ದಾರೆ. ಲಯನ್ಸ್ ಕ್ಲಬ್ ಗಂಗೋತ್ರಿ ಮಹಿಳೆಯರು ಆರೋಗ್ಯ ಶಿಬಿರಗಳನ್ನು ಆಯೋಜಿಸಿರುವುದು ಮೆಚ್ಚುವಂತಹ ಕೆಲಸವಾಗಿದೆ ಎಂದರು.
ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಕರೋನಾ ಸಮಯದಲ್ಲಿ ಅನಾರೋಗ್ಯದ ಕುರಿತು ಆದ ಎಡವಟ್ಟುಗಳು ಜನರಿಗೆ ಸಾಕಷ್ಟು ಬುದ್ದಿ ಕಲಿಸಿವೆ. ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಜಾಗೃತರಾಗಬೇಕು ಎಂದು ಹೇಳಿದರು.ಜಿಪಂ ಸಿಇಒ ಶೇಕ್ ತನ್ವೀರ್ ಆಸೀಫ್ ಮಾತನಾಡಿ, ಪ್ರತಿಯೊಬ್ಬರೂ ಆರೋಗ್ಯ ಶಿಬಿರಗಳ ಪ್ರಯೋಜನ ಪಡೆದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್‍ಯಕ್ರಮದಲ್ಲಿ ನ್ಯಾ.ಮೀನಾಕುಮಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ವೇಳೆ ಹಿರಿಯ ನ್ಯಾಯಾಧೀಶ ಎಂ.ಆನಂದ್, ಜಿಲಾಧಿಕಾರಿ ಡಾ.ಕುಮಾರ್, ಜಿಪಂ ಸಿಇಒ ಶೇಕ್ ತನ್ವೀರ್ ಆಸಿಫ್ ಮತ್ತು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿಯವರನ್ನು ಸನ್ಮಾನಿಸಲಾಯಿತು. ಶಿಬಿರದಲ್ಲಿ ಸುಮಾರು 600ಕ್ಕೂ ಹೆಚ್ಚು ಜನರು ಪಾಲ್ಗೊಂಡು ಚಿಕಿತ್ಸೆ ಪಡೆದುಕೊಂಡರು.ಕಾರ್‍ಯಕ್ರಮದಲ್ಲಿ ಲಯನ್ಸ್ ಕ್ಲಬ್‌ನ ಮಾಜಿ ರಾಜ್ಯಪಾಲ ಲಯನ್ ಕೆ.ದೇವೇಗೌಡ, ಮಾಹಿತಿ ಆಯೋಗದ ಮಾಜಿ ಆಯುಕ್ತ ಚಂದ್ರೇಗೌಡ, ತಹಸೀಲ್ದಾರ್ ಎಸ್ ಸಂತೋಷ್, ಪಿಎಸ್‌ಎಸ್‌ಕೆ ಪ್ರೌಢಶಾಲೆ ಕಾರ್‍ಯದರ್ಶಿ ನಂದೀಶ್, ಪತ್ರಕರ್ತ ರೆಹಮತ್ ಸೇರಿದಂತೆ ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು ಭಾಗವಹಿಸಿದ್ದರು.