ಈ ವರ್ಷವೂ ಕಾಲುವೆಗಳಲ್ಲಿ ಭದ್ರೆ ಹರಿಯೋದು ಡೌಟು

KannadaprabhaNewsNetwork |  
Published : Jun 18, 2026, 01:15 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್ | Kannada Prabha

ಸಾರಾಂಶ

ಮಳೆ ಬಂದು ಭದ್ರಾ ಡ್ಯಾಂಗೆ ನೀರು ಬಂದರೆ ಮಾತ್ರ ಚಿತ್ರದುರ್ಗ ಶಾಖಾ ಕಾಲುವೆಗೆ ಪುಳಕ । 136 ಅಡಿಗೆ ಇಳಿದ ಜಲಾಶಯ ನೀರಿನ ಮಟ್ಟ

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಇನ್ನೇನು ವಾರದೊಳಗೆ ಭದ್ರೆ ಗೋನೂರು ಕೆರೆಗೆ ಬರ್ತಾಳೆ, ಹೊಳಲ್ಕೆರೆ ತಾಲೂಕಿನ ಎಲ್ಲ ಕೆರೆಗಳ ತುಂಬಿಸುತ್ತಾಳೆ ಎಂಬಿತ್ಯಾದಿ ಆಸೆ ಕಣ್ಗಳ ನೋಟ ಈ ವರ್ಷವೂ ಮಸುಕಾಗಿದೆ. ಭದ್ರಾ ಜಲಾಶಯದಲ್ಲಿನ ನೀರಿನ ಮಟ್ಟ ಗಣನೀಯವಾಗಿ ಇಳಿಕೆ ಕಂಡಿರುವುದು ನೀರು ಹರಿದು ಬರುವ ಸಾಧ್ಯತೆಗಳ ಕ್ಷೀಣಿಸಿದೆ. ಮಳೆ ಬಂದು ಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾದರೆ ಮಾತ್ರ ಎರಡು ಕಡೆ ಲಿಫ್ಟ್ ಮಾಡಿ ಚಿತ್ರದುರ್ಗ ಕಾಲುವೆಗೆ ನೀರು ಹಾಯಿಸಬಹುದು. ಮುಂಗಾರು ಕೈ ಕೊಟ್ಟರೆ ಪರಿಸ್ಥಿತಿ ಗಂಭೀರವಾಗುತ್ತದೆ.

ಭದ್ರಾ ಜಲಾಶಯದ ಒಟ್ಟಾರೆ ನೀರಿನ ಸಂಗ್ರಹ 71 ಟಿಎಂಸಿ ಜಲಾಶಯದ ಗರಿಷ್ಟ ನೀರಿನ ಸಂಗ್ರಹ 186 ಅಡಿ ಭದ್ರಾ ಮೇಲ್ದಂಡೆಗಾಗಿ ಸುಮಾರು 12.50 ಟಿಎಂಸಿ ನೀರನ್ನು ಜಲಾಶಯದಿಂದ ಹಂಚಿಕೆ ಮಾಡಲಾಗಿದೆ. ಹಾಲಿ (ಬುಧವಾರ) ಜಲಾಶಯದಲ್ಲಿ 24.6 ಟಿಎಂಸಿಯಷ್ಟು ಮಾತ್ರ ನೀರಿದೆ. ಹಾಗೆಂದ ಮಾತ್ರಕ್ಕೆ ಈ ನೀರನ್ನು ಚಿತ್ರದುರ್ಗ ಕಾಲುವೆಗೆ ಹಾಯಿಸಿಕೊಳ್ಳಲು ಬರುವುದಿಲ್ಲ. ಕನಿಷ್ಟ 144 ಅಡಿಯಷ್ಟು ನೀರು ಸಂಗ್ರಹವಾಗಿರಬೇಕು.

ಭದ್ರಾ ಜಲಾಶಯದ ನೀರಿನ ಗರಿಷ್ಠಮಟ್ಟ 186 ಅಡಿಗಳಷ್ಟಿದ್ದರೆ ಭದ್ರಾ ಮೇಲ್ದಂಡೆ ಯೋಜನೆಗಾಗಿ ನೀರನ್ನು ಡ್ರಾ ಮಾಡುವ ಪಾಯಿಂಟನ್ನು 144 ಅಡಿಗೆ ಸೀಮಿತಗೊಳಿಸಲಾಗಿದೆ. ಅಂದರೆ ಭದ್ರಾ ಜಲಾಶಯದಲ್ಲಿ 144 ಅಡಿಗಳಿಗೆ ಮೇಲ್ಪಟ್ಟು ನೀರಿದ್ದರೆ ಮಾತ್ರ ಭದ್ರಾ ಮೇಲ್ಡಂಡೆಗೆ ಪಡೆಯುವ ಸಾಧ್ಯತೆಗಳಿವೆ. ಈ ನೆಲೆಯಲ್ಲಿಯ ಡಿಸೈನ್ ಮಾಡಿ ನೀರನ್ನು ಡ್ರಾ ಮಾಡಲಾಗುತ್ತದೆ.

ಶಾಂತಿಪುರದ ಬಳಿ ಇರುವ ಮೊದಲ ಲಿಫ್ಟ್‌ನ ಪಂಪ್ ಹೌಸ್ ಬೆಡ್ ಲೆವೆಲ್ 130 ಅಡಿಗೆ ನಿಗಧಿ ಮಾಡಲಾಗಿದೆ. ಜಲಾಶಯದಿಂದ ಗ್ರಾವಿಟಿ ಲೆವೆಲ್‌ನಲ್ಲಿ ನೀರು ಸರಾಗವಾಗಿ ಹರಿದು ಸೇರಬೇಕಾದರೆ ಇದರ ಮೇಲೆ 14 ಅಡಿಗಳಷ್ಟು ಹೆಚ್ಚುವರಿ ನೀರಿರಬೇಕು.

ಆಗ ಮಾತ್ರ ಪಂಪು ಮೋಟರ್ ಚಾಲನೆ ಮಾಡಲಾಗುತ್ತದೆ. ಸ್ವಲ್ವವೇ ಕಡಿಮೆ ಇದ್ದರೂ ಚಾಲನೆ ಮಾಡುವ ರಿಸ್ಕ್ ತೆಗೆದುಕೊಳ್ಳುವುದಿಲ್ಲ.

ಜೂ.17ರಂದು ಭದ್ರಾ ಜಲಾಶಯದಲ್ಲಿ 136.07 ಅಡಿಗಳಷ್ಟು ನೀರಿತ್ತು. ಭದ್ರಾ ಮೇಲ್ದಂಡೆಗೆ ನೀರು ಡ್ರಾ ಮಾಡಬೇಕಾದರೆ ಕನಿಷ್ಠ 142 ರಿಂದ 144 ಅಡಿಗಳಷ್ಟು ನೀರಿರಬೇಕು. ನೀರು ಡ್ರಾ ಮಾಡುವ ಲೆವೆಲ್‌ನಿಂದ ಎಂಟು ಅಡಿಗಳಷ್ಟು ನೀರು ಕೆಳಗಿಳಿದಿದೆ. ವಾಸ್ತವಾಂಶ ಹೀಗಿರುವಾಗ ಚಿತ್ರದುರ್ಗ ಶಾಖಾ ಕಾಲುವೆಗೆ ನೀರು ನಾಳೆ ಬರುತ್ತೆ, ನಾಡಿದ್ದು ಬರುತ್ತೆ, ಹೊಳಲ್ಕೆರೆ ತಾಲೂಕಿನ ಕೆರೆಗಳು ತುಂಬುತ್ತವೆ ಎಂದು ಭಾವಿಸುವುದು ಭ್ರಮೆಯಾಗುತ್ತದೆ. ಮಳೆ ಬಂದು ಜಲಾಶಯಕ್ಕೆ ಒಳ ಹರಿವು ಹೆಚ್ಚಾದರೆ ಮಾತ್ರ ಸಾಧ್ಯತೆಗಳು ಗರಿಗೆದರುತ್ತವೆ.

ಏತನ್ಮಧ್ಯೆ ಕಾಲುವೆ ನಿರ್ಮಾಣದ ಕಾಮಗಾರಿ ಕೂಡಾ ಪೂರ್ಣಗೊಂಡಿಲ್ಲ. ಅಜ್ಜಂಪುರ ಸಮೀಪದ ಯಗಟಿ ಹಳ್ಳದ ಬಳಿ 60 ಮೀಟರ್ ಕಾಲುವೆ ನಿರ್ಮಾಣದ ಕೆಲಸ ಬಾಕಿ ಉಳಿದಿದೆ. ಕಾಲುವೆಯನ್ನು 4 ಮೀಟರ್ ಆಳ ತೋಡಬೇಕಾಗಿದ್ದು ಹಾರ್ಡ್ ರಾಕ್ ಸಿಕ್ಕಿರುವುದರಿಂದ ಗುತ್ತಿಗೆದಾರರಿಗೆ ಕಷ್ಟವಾಗಿದೆ. ಬ್ಲಾಸ್ಟ್ ಮಾಡಿದ್ರೆ ರೈತರು ಹಾಗೂ ಸಮೀಪದ ಗ್ರಾಮಸ್ಥರು ವಿರೋಧ ಮಾಡುತ್ತಿದ್ದಾರೆ. ಹಾಗಾಗಿ ನಿಧಾನಗತಿಯಲ್ಲಿ ಕಾಮಗಾರಿ ನಡೆದಿದೆ.

ಚಿತ್ರದುರ್ಗ ಶಾಖಾ ಕಾಲುವೆಯ 28 ಕಿಮೀ ನಲ್ಲಿ ಕವಲು ಹೊಡೆದು ಹೊಳಲ್ಕೆರೆ ಕೆರೆಗಳಿಗೆ ನೀರು ಹಾಯಿಸಲಾಗುತ್ತದೆ. 13 ರಿಂದ 14 ಕಿಮೀ ನಡುವೆ ಕೆಲಸ ಮುಗಿಯಬೇಕಿದೆ. ಹಾಗಾಗಿ ಸದ್ಯಕ್ಕೆ ಚಿತ್ರದುರ್ಗ ಶಾಖಾ ಕಾಲುವೆಗಳಲ್ಲಿ ಭದ್ರೆ ಹರಿಯೋದ ಡೌಟು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾಧಿಕಾರಿಗಳಿಂದ ರೈತರಿಂದ ಅರ್ಜಿಗಳ ಸ್ವೀಕಾರ
ಕಾಮಗಾರಿಗೆ ಶಾಸಕ ಸುರೇಶ್‌ಗೌಡ ಚಾಲನೆ