ಮಕ್ಕಳ ರಕ್ಷಣೆಗೆ ಸೂಕ್ತ ಕಾನೂನು ಅರಿವು ನೀಡುವುದು ಅತ್ಯಗತ್ಯ: ಹುಲಗಪ್ಪ ಡಿ.

KannadaprabhaNewsNetwork |  
Published : Jul 31, 2026, 02:15 AM IST
ನರೇಗಲ್ಲದ ಶ್ರೀ ಕೃಷ್ಣಾಜಿ ರಂಗರಾವ್‌ ಕುಲಕರ್ಣಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ರೋಣದ ಪ್ರಧಾನ ದಿವಾಣಿ ನ್ಯಾಯಾಧೀಶ ಹುಲಗಪ್ಪ ಡಿ. ಉದ್ಘಾಟಿಸಿದರು. | Kannada Prabha

ಸಾರಾಂಶ

ನರೇಗಲ್ಲ ಶ್ರೀ ಕೃಷ್ಣಾಜಿ ರಂಗರಾವ್‌ ಕುಲಕರ್ಣಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪೋಕ್ಸೋ ಹಾಗೂ ಬಾಲ್ಯ ವಿವಾಹ ಜಾಗೃತಿ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಿತು.

ನರೇಗಲ್ಲ: ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟಲು ಹಾಗೂ ಮಕ್ಕಳ ರಕ್ಷಣೆಗೆ ಸೂಕ್ತ ಕಾನೂನು ಅರಿವು ನೀಡುವುದು ಅತ್ಯಗತ್ಯವಾಗಿದೆ ಎಂದು ರೋಣದ ಪ್ರಧಾನ ದಿವಾಣಿ ನ್ಯಾಯಾಧೀಶ ಹುಲಗಪ್ಪ ಡಿ. ಹೇಳಿದರು.

ಸ್ಥಳೀಯ ಶ್ರೀ ಕೃಷ್ಣಾಜಿ ರಂಗರಾವ್‌ ಕುಲಕರ್ಣಿ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ರೋಣ, ಶಿಕ್ಷಣ ಇಲಾಖೆ, ಪೊಲೀಸ್‌ ಇಲಾಖೆ, ತಾಪಂ, ರೋಣ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಪೋಕ್ಸೋ ಹಾಗೂ ಬಾಲ್ಯ ವಿವಾಹ ಜಾಗೃತಿ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 18 ವರ್ಷಕ್ಕಿಂತ ಮುಂಚೆ ಮದುವೆ ಮಾಡುವುದು, ಶಿಸ್ತು ಕ್ರಮ ಉಲ್ಲಂಘಿಸಿದರೆ ಅಪರಾಧವಾಗುತ್ತದೆ. ಸುತ್ತಮುತ್ತ ಎಲ್ಲೇ ಬಾಲ್ಯ ವಿವಾಹ ನಡೆಯುತ್ತಿರುವುದು ಕಂಡು ಬಂದರೂ ತಕ್ಷಣವೇ ಜಾಗ್ರತರಾಗಿ ಅದನ್ನು ತಡೆಯಲು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದರು.

ತುರ್ತು ಸಹಾಯಕ್ಕಾಗಿ ಪೊಲೀಸ್ ಸಹಾಯವಾಣಿ 112 ಹಾಗೂ ಮಕ್ಕಳ ಸಹಾಯವಾಣಿ 1098ಗೆ ಕರೆಮಾಡಿ, ಬಾಲ್ಯ ವಿವಾಹ ಅಥವಾ ದೌರ್ಜನ್ಯದ ಸುಳಿವು ಸಿಕ್ಕರೆ ತಕ್ಷಣ ಈ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ತಿಳಿಸಿದರು

ವಕೀಲ ಪಿ.ಕೆ. ಉಡುಪಿ ಮಾತನಾಡಿ, ಹೆಣ್ಣುಮಕ್ಕಳ ಮೇಲಿನ ಲೈಂಗಿಕ, ಮಾನಸಿಕ ದೌರ್ಜನ್ಯಗಳನ್ನು ತಡೆಗಟ್ಟಲು ಸರ್ಕಾರ ಹಾಗೂ ಕಾನೂನು ಇಲಾಖೆ ಹಲವು ಬಿಗಿಯಾದ ಕ್ರಮಗಳನ್ನು ಕೈಗೊಂಡಿದೆ. ಶಾಲಾ-ಕಾಲೇಜು ಮಟ್ಟದಲ್ಲಿ ದೂರುಪೆಟ್ಟಿಗೆ ಸ್ಥಾಪನೆ ಮತ್ತು ಲೈಂಗಿಕ ಕಿರುಕುಳ ತಡೆ ಸಮಿತಿಗಳ ರಚನೆ, ಸ್ವಯಂರಕ್ಷಣೆ ಕೌಶಲ್ಯಗಳ ತರಬೇತಿ ಮತ್ತು ಜಾಗೃತಿ ಅಭಿಯಾನಗಳು. ಸಂಕಷ್ಟದಲ್ಲಿರುವ ಮಕ್ಕಳಿಗೆ ತಕ್ಷಣ ಉಚಿತ ಕಾನೂನು ನೆರವು ಒದಗಿಸುವುದು. ಹೀಗೆ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಇದರ ಸದುಪಯೋಗವನ್ನು ಮಕ್ಕಳು ಪಡೆದು ಯಾವುದೇ ಭಯವಿಲ್ಲದೇ ತಮ್ಮ ಸುತ್ತ ಮುತ್ತಲು ಜರುಗುವ ಬಾಲ್ಯವಿವಾಹ ಹಾಗೂ ಹೆಣ್ಣುಮಕ್ಕಳ ಮೇಲೆ ಜರುಗುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಬಹುದಾಗಿದೆ ಎಂದರು.

ನರೇಗಲ್ಲ ಠಾಣಾ ಪಿಎಸ್‌ಐ ಐಶ್ವರ್ಯಾ ನಾಗರಾಳ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಹೆಣ್ಣು ಮಕ್ಕಳ ಸುರಕ್ಷತೆ ಸಮಾಜದ ಪ್ರತಿಯೊಬ್ಬರ ಹೊಣೆ. ಶೋಷಣೆ ಹಾಗೂ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವುದೇ ಸುರಕ್ಷಿತ ಸಮಾಜ ನಿರ್ಮಾಣಕ್ಕೆ ಮೊದಲ ಹೆಜ್ಜೆ ಎಂದರು.

ಈ ವೇಳೆ ಗಜೇಂದ್ರಗಡ ತಾಪಂ ಸಹಾಯಕ ನಿರ್ದೇಶಕ ಎಸ್‌.ಬಿ. ನಿಡಗುಂದಿ, ಹಿರಿಯ ವಕೀಲ ವಿ.ಎಸ್‌. ಬಂಗಾರಿ ಮಾತನಾಡಿದರು. ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಆರ್‌.ಎಸ್‌. ನರೇಗಲ್ಲ, ಎಸ್‌ಡಿಎಂಸಿ ಅಧ್ಯಕ್ಷ ಆನಂದರಾವ್‌ ಕುಲಕರ್ಣಿ, ಪ್ರಾಚಾರ್ಯ ಸಂಗಪ್ಪ ಗುಳಗಣ್ಣವರ, ಶಿಕ್ಷಕ ಎಸ್‌.ಬಿ. ನಿಡಗುಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಬಾರದು: ಜಾನಕಿ ಕೆ.ಎಂ.
ಅತ್ಯಾಚಾರಕ್ಕೊಳಗಾದ ಬುದ್ಧಿಮಾಂದ್ಯೆಗೆ ಸಿಗದ ಪರಿಹಾರ